ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಪೋಸು

Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಕಳೆದ ವಾರ ಹಾವೇರಿ ಜಿಲ್ಲೆ ರಟ್ಟೀಹಳ್ಳಿಯ ಮಹಾಲಕ್ಷ್ಮಿ ವೃತ್ತದಲ್ಲಿ ನೂತನವಾಗಿ ಪ್ರಾರಂಭಿಸಲಾದ ಫೋಟೊ ಸ್ಟುಡಿಯೊ ಒಂದರಲ್ಲಿ ಜನಜಾತ್ರೆ. ಅವರೆಲ್ಲ ಅಲ್ಲಿ ಬಂದದ್ದು ಫೋಟೊ ತೆಗೆಸಿಕೊಳ್ಳಲು ಅಲ್ಲ, ಬದಲಿಗೆ ಫೋಟೊ ತೆಗೆಸಿಕೊಳ್ಳಲು ಬಂದ ವಿಶೇಷ ಅತಿಥಿಯನ್ನು ನೋಡಲು!

ಅಂದ ಹಾಗೆ ಆ ವಿಶೇಷ ಅತಿಥಿಯಾಗಿದ್ದುದು ಕೋಣ.ಇದು ಅಂತಿಂಥ ಕೋಣವಲ್ಲ, ಬದಲಿಗೆ ಮೂರ್ನಾಲ್ಕು ವರ್ಷಗಳ ಹಿಂದೆ ಗ್ರಾಮದ ದೇವತೆಗಳಿಗೆಂದೇ ಬಿಡಲಾದ ಕೋಣ.ಸ್ಟುಡಿಯೊಕ್ಕೆ ಬಂದ ಈ ಕೋಣ ಯಾರಿಗೂ ತೊಂದರೆ ನೀಡದೇ, ಸ್ಟುಡಿಯೊದಲ್ಲಿದ್ದ ಉಪಕರಣಗಳಿಗೂ ಹಾನಿ ಮಾಡದೇ ಅಂಗಡಿ ಮಾಲೀಕ ಸಿದ್ದು ಮಠದ ಅವರಿಗೆ ಫೋಟೊಗೆ ಪೋಸ್‌ ನೀಡಿ ಫೋಟೊ ಹೊಡೆಸಿಕೊಂಡು ಹೊರಟುಹೋಯಿತು!

ಈ ಕೋಣದ ಕಥೆ ಅಲ್ಲಿಗೇ ಮುಗಿಯುವುದಿಲ್ಲ. ಈ ಕೋಣನ ಹಿಂದೆ ವಿಶೇಷತೆಗಳ ಸರಮಾಲೆಯೇ ಇವೆ. ಇದನ್ನು ಯಾರೂ ಬೈಯುವಂತಿಲ್ಲ. ಮನೆಯ ಹತ್ತಿರ ಬಂದರೆ ಇತರ ದನಗಳನ್ನು ಓಡಿಸುವಂತೆ ಇದನ್ನು ಓಡಿಸುವಂತಿಲ್ಲ. ಒಂದು ವೇಳೆ  ಹೀಗೆ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಂತೆ! ಹೀಗೆ ಈ ಕೋಣಕ್ಕೆ ಬೈಯ್ದು ಸಿಕ್ಕಾಪಟ್ಟೆ ತೊಂದರೆ ಅನುಭವಿಸಿರುವವರು ಆ ಗ್ರಾಮದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ಅದಕ್ಕಾಗಿಯೇ ಸಿದ್ದು ಅವರು ಈ ಕೋಣಕ್ಕೆ ಮೆಕ್ಕೆಜೋಳವನ್ನು ತಿನ್ನಲು ನೀಡಿ ಬೀಳ್ಕೊಟ್ಟಿದ್ದಾರೆ.

‘ಕೆಲ ದಿನಗಳ ಹಿಂದೆ ಗ್ರಾಮದ ಕೃಷ್ಣ ಎನ್ನುವವರು ತಮ್ಮ ಮನೆ ಬಳಿಗೆ ಬಂದ ಈ ಕೋಣವನ್ನು ಬೈಯ್ದು ಓಡಿಸಿದ್ದರು. ಹಾಗೆ ಮಾಡಿದ ಮಾರನೇ ದಿನವೇ ಇವರ ಮನೆಯ ಒಳಗೆ ನುಗ್ಗಿ ಕುಳಿತ ಈ ಕೋಣ ಜಪ್ಪಯ್ಯ ಎಂದರೂ ನಸುಕಾಡಲಿಲ್ಲ. ಇದನ್ನು ಹೊರಕ್ಕೆ ಓಡಿಸಲು ಸುಮಾರು ನಾಲ್ಕು ಗಂಟೆ ಪಟ್ಟ ಶ್ರಮವೆಲ್ಲ ವ್ಯರ್ಥವಾಯಿತು.ಆ ನಂತರ ಕೃಷ್ಣನವರು ಹರಕೆ ಹೊತ್ತುಕೊಂಡ ಕೆಲವೇ ಕ್ಷಣಗಳಲ್ಲಿ ಮನೆ ಬಿಟ್ಟು ಹೋಗಿದೆ’ ಎನ್ನುತ್ತಾರೆ ಗ್ರಾಮಸ್ಥರು.ಅಷ್ಟೇ ಅಲ್ಲ. ರಾಘವೇಂದ್ರ ಎಂಬುವವರಿಗೂ ಹೀಗೆ ಆಗಿದೆಯಂತೆ.

‘‌ಈ ಕೋಣ ಅವರ ಮನೆಯ ಹತ್ತಿರ ಬಂದಾಗ ಅವರೂ ಓಡಿಸಲು ಪ್ರಯತ್ನಿಸಿದ್ದರು. ಆಗ ಕೋಣ ಸಿಟ್ಟಿನಿಂದ ಸಮೀಪದಲ್ಲಿದ್ದ ದೇವಸ್ಥಾನದ ಬಳಿ ಮರಳು ತುಂಬಿದ ಚೀಲಗಳನ್ನು ತನ್ನ ಕೊಂಬಿನಲ್ಲಿ ಸಿಕ್ಕಿಸಿಕೊಂಡು ಅದನ್ನೆಲ್ಲ ರಸ್ತೆಗೆ ಸುರಿವಿದೆ. ರಾಘವೇಂದ್ರ ಅವರು ತಪ್ಪಿಗೆ ಕ್ಷಮೆಯಾಚಿಸಿದಾಗ ಕೋಣ ಅಲ್ಲಿಂದ ಕಾಲ್ತೆಗೆದಿದೆ’ ಎಂದು ಅಂದು ನಡೆದ ಕಥೆಯನ್ನು ವಿವರಿಸುತ್ತಾರೆ ಸ್ಥಳೀಯರು.

ಹೀಗೆ ಪಟ್ಟಣದಲ್ಲಿ ಅನೇಕರಿಗೆ ಅನೇಕ ವಿಧದ ಅನುಭವಗಳಾಗಿವೆ. ತುಂಟಾಟ ಹೆಚ್ಚಾಗಬಾರದು ಎಂಬ ಕಾರಣಕ್ಕೆ ಕೋಣನ ಕಾಲಿಗೆ ಕೋಳ ಹಾಕಲಾಗಿದೆ. ಈ ವಿಶೇಷ ಕೋಣ ಮಹಾಲಕ್ಷ್ಮಿ ವೃತ್ತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಾಹನ ಸವಾರರು ಸ್ವತಃ ದಾರಿ ಬಿಟ್ಟು ಮುಂದೆ ಸಾಗುತ್ತಾರೆ. ಇಲ್ಲಿನ ಒಕ್ಕಲಗೇರಿಯಲ್ಲಿರುವ ಮಾರಿಕಾಂಬಾ ದೇವಸ್ಥಾನದ ಗರ್ಭ ಗುಡಿಯ ಎದುರಿಗೆ ಸಾಮಾನ್ಯವಾಗಿ ರಾತ್ರಿ ವೇಳೆ ವಿರಮಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT