ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಲ್ಲಿ ಪ್ರಪಂಚ ಯಾನ

Last Updated 12 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಈ ಕನ್ನಡಿಗನ ‘ಫ್ರೇಂ’ನಲ್ಲಿ ಪ್ರಪಂಚವೇ ಬಂದಿ! ಈ ಮಾತು ಛಾಯಾಗ್ರಹಣಕ್ಕಾಗಿ ಪ್ರಪಂಚವನ್ನೇ ಸುತ್ತುತ್ತಿರುವ ಬೆಂಗಳೂರಿನ ಡಿ.ಕೆ.ಭಾಸ್ಕರ್‌ ಅವರ ಮಟ್ಟಿಗೆ ಅತಿಶಯೋಕ್ತಿ ಎನಿಸಿದು. ಹೌದು. ಬೆಂಗಳೂರಿನ ಹೆಬ್ಬಾಳ ಕೆರೆಯ ಕೊಕ್ಕರೆಯಿಂದ ಹಿಡಿದು ದಕ್ಷಿಣ ಅಮೆರಿಕದ ಅಮೆಝಾನ್‌ ಮಳೆಕಾಡಿನ ಅನಕೊಂಡದವರೆಗೆ, ಆಫ್ರಿಕಾದ ಆದಿವಾಸಿಗಳ ನಾಡಿನಿಂದ ಹಿಡಿದು ಉತ್ತರ ಗೋಲಾರ್ಧದ ಧ್ರುವಪ್ರದೇಶ ಆರ್ಕ್ಟಿಕ್‌ ತಂಡ್ರದ ಹಿಮ ಕರಡಿಯವರೆಗೆ, ಹಿಮಾಲಯ ತಪ್ಪಲಿನಿಂದ ಹಿಡಿದು ನಾಗರಹೊಳೆಯ ಮಾವುತರ ಗುಡಿಸಲಿನವರೆಗೆ... ಹೀಗೆ ಪ್ರಪಂಚ ಸುತ್ತಿ ಅಲ್ಲಿನ ಜನಜೀವನದ ವಿಶಿಷ್ಟ ಸಂಸ್ಕೃತಿಗಳನ್ನು, ವನ್ಯಜೀವಿಲೋಕದ ನಿಗೂಢ ಕಥಾನಕಗಳನ್ನು ಕ್ಯಾಮೆರಾ ಫ್ರೇಂನಲ್ಲಿ ಸೆರೆ ಹಿಡಿದು, ದಾಖಲಿಸಿ ಉಣ ಬಡಿಸುವುದೇ ಭಾಸ್ಕರ್‌ ವೈಶಿಷ್ಟ್ಯ.

ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದ ಭಾಸ್ಕರ್‌ ಡಿ. ಕೃಷ್ಣಮೂರ್ತಿ ಅವರು ತುಮಕೂರಿನ ಸಿದ್ಧಗಂಗಾ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಬಳಿಕ ಬೆಂಗಳೂರಿನ ಜವಾಹರಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಸೈಂಟಿಫಿಕ್‌ ಅಂಡ್‌ ರಿಸರ್ಚ್‌ ಸಂಸ್ಥೆಯಲ್ಲಿ ಉದ್ಯೋಗ ಮಾಡಿದರು.

ಛಾಯಾಗ್ರಹಣ ಕಲೆಯ ಸಂಪರ್ಕವೇ ಇರದ ಭಾಸ್ಕರ್‌ 2000ರಲ್ಲಿ ಕನ್ನಡ ನಾಡಿನ ಶ್ರೇಷ್ಠ ಛಾಯಾಗ್ರಾಹಕರಾದ ಇ. ಹನುಮಂತ ರಾವ್‌ ಅವರನ್ನು ಆಕಸ್ಮಿಕವಾಗಿ ಭೇಟಿಯಾದರು. ರಾವ್‌ ಅವರ ಛಾಯಾಚಿತ್ರಗಳಿಂದ ಪ್ರಭಾವಿತರಾಗಿ ಅವರಿಂದ ಛಾಯಾಗ್ರಹಣ ಕಲೆಯ ಸೂಕ್ಷ್ಮಗಳನ್ನು ಕಲಿತರು. ಅದೇ ಅವಧಿಯಲ್ಲಿ ಅವರ ಸಹೋದರ ಭಾರ್ಗವ್‌ ಅವರು ಕೊಡುಗೆಯಾಗಿ ನೀಡಿದ ಕ್ಯಾನನ್ ಎಸ್‌ಎಲ್‌ಆರ್‌ ಕ್ಯಾಮೆರಾ ಭಾಸ್ಕರ್‌ ಅವರ ಬದುಕಿನ ಹಾದಿಯನ್ನೇ ಬದಲಿಸಿತು!

ಆರಂಭದಲ್ಲಿ ಬೆಂಗಳೂರಿನ ಹೆಬ್ಬಾಳ ಕೆರೆಯಲ್ಲಿ ಬಾನಾಡಿಗಳ ಚಿತ್ರ ಸೆರೆ ಹಿಡಿಯುವುದರ ಮೂಲಕ ಅವರ ಛಾಯಾಗ್ರಹಣದ ಯಾನ ಶುರುವಾಯಿತು. ಆರಂಭದ ಆ ದಿನಗಳಲ್ಲಿ ಅವರು ಸೆರೆ ಹಿಡಿದ ಚಿತ್ರಗಳು ಸುಧಾ, ಪ್ರಜಾವಾಣಿ, ಡೆಕ್ಕನ್‌ಹೆರಾಲ್ಡ್‌ ಪತ್ರಿಕೆಗಳಲ್ಲಿ ಪ್ರಕಟವಾದಾಗ ಮತ್ತಷ್ಟು ಖುಷಿಯಾದರು. ಕ್ಯಾಮೆರಾ ನಂಟು ಗಟ್ಟಿಯಾಯಿತು. ಉದ್ಯೋಗ ಬದಿಗೆ ಸರಿಯಿತು. ಕ್ಯಾಮೆರಾ ನೇತು ಹಾಕಿಕೊಂಡು ದೇಶ ಸುತ್ತಲು ಶುರುವಿಟ್ಟುಕೊಂಡರು. ಹೀಗೆ ಮೆಕ್ಯಾನಿಕಲ್‌ ಎಂಜಿನಿಯರ್‌ ಪೂರ್ಣ ಪ್ರಮಾಣದ ಛಾಯಾಗ್ರಾಹಕನಾಗಿ ಬದಲಾದರು.

ಭಾಸ್ಕರ್‌ ಅವರ ಈ ಸಾಧನೆಯ ಹಿಂದೆ ಅಡಗಿರುವುದು ಅವರ ಅನ್ವೇಷಣಾ ಗುಣ. ಜತೆಗೆ ಪ್ರಪಂಚ ಸುತ್ತುವ ಹುಚ್ಚು. ಜಗತ್ತಿನಲ್ಲಿ ಅಜ್ಞಾತವಾಗಿರುವ ಭೂದೃಶ್ಯಗಳನ್ನು ದಾಖಲಿಸಿ ಅನಾವರಣಗೊಳಿಸುವ ಸಾಹಸಿ ಪ್ರವೃತ್ತಿ. ವಿಭಿನ್ನ ಜನರ ಸಂಸ್ಕೃತಿ, ಜೀವನಗಳನ್ನು ದಾಖಲಿಸುವ ಉತ್ಸಾಹ, ಛಾಯಾಗ್ರಹಣದಲ್ಲಿ ಅವರ ಹಿಡಿತ ಹೆಚ್ಚಾದಂತೆ ಅವರ ತುಡಿತಗಳೂ ಹೆಚ್ಚಾಯಿತು. ಹಾಗಾಗಿ ಉದ್ಯೋಗಕ್ಕೆ ಸಲಾಂ ಹೊಡೆದು ಕ್ಯಾಮೆರಾ ಕಣ್ಣಿನಿಂದ ಜಗತ್ತು ನೋಡಲು ಹೊರಟರು.

ಆರಂಭದಲ್ಲಿ ದಕ್ಷಿಣ ಭಾರತದಿಂದ ಉತ್ತರ ಹಿಮಾಲಯ ತಪ್ಪಲಿನವರೆಗೆ, ಪಶ್ಚಿಮದಿಂದ ಪೂರ್ವ ಸೇರಿದಂತೆ ಮುಖ್ಯವಾಗಿ ಈಶಾನ್ಯ ಭಾರತದಲ್ಲಿ ಛಾಯಾಗ್ರಹಣದ ಯಾತ್ರೆ ನಡೆಸಿದರು. ಬೆಳಕಿಗೆ ಬಾರದ ಹಾಗೂ ಅವನತಿಗೆ ಸರಿದ ಭೂದೃಶ್ಯಗಳನ್ನು, ಅಲ್ಲಿನ ಜನರ ಸಂಸ್ಕೃತಿಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ದಾಖಲಿಸಿದರು. ಚಿತ್ರಗಳ ಮೂಲಕ ಕಥೆ ಹೇಳುವ ಭಾಸ್ಕರ್‌ ಅವರ ಸೃಜನಶೀಲತೆಯನ್ನು ಜನ ಮೆಚ್ಚಿದರು.

ತನ್ನ ಕ್ಯಾಮೆರಾ ಕಣ್ಣಿನ ತುಡಿತ ದೇಶದ ಗಡಿ ಮೀರಿದ್ದು ಎಂದು ಅನ್ನಿಸಿದ್ದೇ ತಡ ಬೆಂಗಳೂರಿನ ಉದ್ಯೋಗಕ್ಕೆ ರಾಜೀನಾಮೆ ನೀಡಿ 2002 ರಲ್ಲಿ ಇಂಗ್ಲೆಂಡಿನ ವಿಮಾನ ಏರಿದರು. ಅಲ್ಲಿನ ಡರ್‌ಹ್ಯಾಮ್‌ ವಿಶ್ವವಿದ್ಯಾಲಯದ ವೈಲ್ಡ್‌ಲೈಫ್‌ ಟ್ರಸ್ಟ್‌ನಲ್ಲಿ ಎಜುಕೇಷನಲ್‌ ಪ್ರೋಗ್ರಾಮರ್‌ ಆಗಿ ಸೇರಿಕೊಂಡರು. ಭಾಸ್ಕರ್ ಅವರ ಛಾಯಾಗ್ರಹಣ ಕಲೆಗೆ ಅಲ್ಲಿ ಹೊಸ ಲಯ ಸಿಕ್ಕಿತು. ಬಳಿಕ 2004ರಲ್ಲಿ ವಿಜ್ಞಾನಿಯೊಬ್ಬರ ಸಹಾಯದಿಂದ ಬ್ರೆಜಿಲ್‌ ದೇಶದ ಅಮೆಝಾನ್‌ ಮಳೆಕಾಡಿಗೆ ‘ರಿಸರ್ಚ್‌ ಸೈಂಟಿಸ್ಟ್‌’ ಆಗಿ ಹೋಗುವ ಅವಕಾಶ ಒದಗಿತು. ಅಮೆಝಾನ್‌ ಮಳೆಕಾಡು ಅಂದರೆ ಸೌಂದರ್ಯ ಮತ್ತು ಭಯಾನಕತೆಗಳನ್ನು ಗರ್ಭೀಕರಿಸಿಕೊಂಡಿರುವಂಥ ಜಗತ್ತಿನ ಅತ್ಯುನ್ನತ ಗೊಂಡಾರಣ್ಯ.

ಆ ಅವಕಾಶ ಭಾಸ್ಕರ್‌ಗೆ ನಿಜಕ್ಕೂ ಸವಾಲಿನದ್ದಾಗಿತ್ತು. ಅಲ್ಲಿನ ವನ್ಯಲೋಕ, ಅಮೆಝಾನ್‌ ನದಿ ದಂಡೆಯ ಜನಜೀವನ, ಸಂಸ್ಕೃತಿಯನ್ನು ಸೆರೆ ಹಿಡಿದ ಭಾಸ್ಕರ್‌ ಆ ಅನುಭವ ಹಾಗೂ ಚಿತ್ರ ಕಥನಗಳನ್ನು ಒಂದೆಡೆ ಸೇರಿಸಿ ‘ದ ಫ್ರಾಗೈಲ್‌ ಫಾರೆಸ್ಟ್‌; ಇನ್‌ಸೈಡ್‌ ಬ್ರೆಜಿಲಿಯನ್‌ ಅಮೆಝೊನಿಯಾ’ ಎಂಬ ಪುಸ್ತಕವನ್ನು ಅಮೆರಿಕದಲ್ಲಿ ಪ್ರಕಟಿಸಿದರು. ಈಚೆಗೆ ಅದೇ ಪುಸ್ತಕವನ್ನು ಬೆಂಗಳೂರಿನಲ್ಲೂ ಬಿಡುಗಡೆ ಮಾಡಿದರು.

ಇಂದು ಭಾಸ್ಕರ್‌ ಜಾಗತಿಕ ಮಟ್ಟದಲ್ಲಿ ಖ್ಯಾತ ಛಾಯಾಗ್ರಾಹಕರಾಗಿ, ಅನ್ವೇಷಕರಾಗಿ ಗುರುತಿಸಿಕೊಂಡಿದ್ದಾರೆ. ಇದೇ ಉದ್ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಸದ್ಯ ಅಮೆರಿಕದ ಕಾನ್ಸಾಸ್‌ ಸಿಟಿಯಲ್ಲಿ ನೆಲೆಸಿರುವ ಭಾಸ್ಕರ್‌ ಅವರು ಪ್ರಪಂಚದ ಅತ್ಯಪೂರ್ವ ಹಾಗೂ ವಿನಾಶದ ಅಂಚಿನ ಭೂದೃಶ್ಯ (ಲ್ಯಾಂಡ್‌ಸ್ಕೇಪ್‌)ಗಳನ್ನು, ಅಪೂರ್ವ ವನ್ಯಜೀವಿಗಳನ್ನು ದಾಖಲಿಸುತ್ತಿದ್ದಾರೆ. ಅಳಿವಿನಂಚಿಗೆ ಸರಿಯುತ್ತಿರುವ ಜನ ಸಮುದಾಯಗಳ ವಿಶಿಷ್ಟ ಸಂಸ್ಕೃತಿಯನ್ನು  ಚಿತ್ರ ಕಥಾನಕಗಳ ಮೂಲಕ ಜಗತ್ತಿಗೆ ಅನಾವರಣಗೊಳಿಸುತ್ತಿದ್ದಾರೆ. ಇದಕ್ಕಾಗಿ ಸುಮಾರು 60ಕ್ಕೂ ಹೆಚ್ಚಿನ ದೇಶಗಳನ್ನು ಸುತ್ತಿದ್ದಾರೆ!

ಭಾಸ್ಕರ್‌ ಅವರ ಈ ಸಾಹಸ ಯಾತ್ರೆಯಲ್ಲಿ ಬದುಕನ್ನೇ ಬದಲಿಸುವಂತಹ ಹಲವು ಅನುಭವಗಳು ಅವರಿಗಾಗಿದೆ. ಅಸ್ಸಾಂನಲ್ಲಿ ಉಲ್ಫಾ ಉಗ್ರರಿಂದ ಒತ್ತೆಯಾಳಾಗಿದ್ದಾರೆ. ಕಾಝಿರಂಗದಲ್ಲಿ ಖಡ್ಗಮೃಗದ ದಾಳಿಯಿಂದಾದ ರಸ್ತೆ ಅವಘಡದಲ್ಲಿ ಬಚಾವಾಗಿದ್ದಾರೆ. ಆದರೂ ಮನುಷ್ಯ ಜೀವನದ ಉತ್ಸಾಹ, ಅತಿ ವಾಸ್ತವಿಕತೆಯ ಸೊಗಸುಗಳನ್ನು ಅನುಭವಿಸಿದ್ದಾರೆ. ಸಾಂಸ್ಕೃತಿಕ ಮತ್ತು ಪ್ರಾಕೃತಿಕ ವಿಜ್ಞಾನ (ನ್ಯಾಚುರಲ್‌ ಹಿಸ್ಟರಿ) ಪರಿಶೋಧಕನಾಗಿರುವ ಭಾಸ್ಕರ್‌  ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.

ಜತೆಗೆ ಫುಲ್‌ಬ್ರೈಟ್‌ ಸ್ಕಾಲರ್‌. ಇಂಟರ್‌ನ್ಯಾಷನಲ್‌ ಎಕ್ಸ್‌ಪ್ಲೋರರ್‌ ಕ್ಲಬ್‌ (www.explorers.org) ಸದಸ್ಯರಾಗಿದ್ದಾರೆ. ಅಳಿವಿನಂಚಿನ ಸಂಸ್ಕೃತಿ ಹಾಗೂ ವಿನಾಶದಂಚಿನ ಭೂದೃಶ್ಯಗಳ ಕುರಿತಂತೆ ನುಡಿಚಿತ್ರ ಲೇಖನ, ರೂಪಕಗಳನ್ನು ತಯಾರಿಸಲು ನಿರಂತರವಾಗಿ ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿದ್ದಾರೆ. ನ್ಯಾಷನಲ್‌ ಜಿಯಾಗ್ರಫಿಕ್‌ ಟ್ರಾವೆಲರ್‌, ನ್ಯಾಷನಲ್‌ ಜಿಯಾಗ್ರಫಿಕ್‌ ಕಿಡ್ಸ್‌, ಲೋನ್ಲಿ ಪ್ಲಾನೆಟ್‌ ಕಿಡ್ಸ್‌, ಬಿಬಿಸಿ, ಯುನೆಸ್ಕೊ, ಇನ್‌ಸೈಟ್‌, ಡಿಪಾರ್ಚರ್‌, ವಂಡರ್‌ಲಸ್ಟ್‌, ಮಿಂಟ್‌– ವಾಲ್‌ಸ್ಟ್ರೀಟ್‌ ಜರ್ನಲ್‌ ಸೇರಿದಂತೆ ಜಗತ್ತಿನ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

2012 ಮತ್ತು 2014ರಲ್ಲಿ ಎರಡು ಬಾರಿ ‘ಕ್ಯಾನಡಾ’ಸ್‌ ನಾರ್ದರ್ನ್‌ ಲೈಟ್‌್ಸ ಪ್ರಶಸ್ತಿ ಪಡೆದಿದ್ದಾರೆ. ಆಗಸ್ಟ ಫೋಟೊ ಫೆಸ್ಟಿವಲ್‌ ಮತ್ತು ಇಂಟರ್‌ನ್ಯಾಷನಲ್‌ ಫೋಟೋಗ್ರಫಿ ಪಾರ್ಟ್‌ನರ್‌ಶಿಪ್ಸ್‌ (IPP) ಹಾಗೂ ಕ್ಲಿಕ್‌ ಅಬ್ರಾಡ್‌ (www.clicabroad.org) ಎಂಬ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಹಾಗೂ ಅಳಿವಿನಂಚಿನ ಸಮುದಾಯಗಳ ಸಬಲೀಕರಣ ಈ ಸಂಘಟನೆಗಳ ಉದ್ದೇಶ ಎನ್ನುವುದು ವಿಶೇಷ. ಅಲ್ಲದೆ ಸೊಸೈಟಿ ಆಫ್‌ ಅಮೆರಿಕನ್‌ ಟ್ರಾವೆಲ್‌ ರೈಟರ್‌್ಸ (SATW) ನ ಸಕ್ರಿಯ ಸದಸ್ಯರಾಗಿದ್ದಾರೆ.

ಏನಿದು CLIC Abroad?
ಭಾಸ್ಕರ್‌ಗೆ ಆಧುನಿಕತೆಯ ಪ್ರಭಾವಕ್ಕೆ ಸಿಕ್ಕಿ ಮರೆಯಾಗುತ್ತಿರುವ ಭಾರತೀಯ ಗ್ರಾಮೀಣ ಜನರ ಮೂಲ ಸಂಸ್ಕೃತಿ, ಜನಜೀವನ, ಪುರಾತನ ಕಲೆ, ಸಂಪ್ರದಾಯಗಳು, ಭೂ ದೃಶ್ಯಗಳು (ಲ್ಯಾಂಡ್‌ಸ್ಕೇಪ್‌), ಮೂಲ ನಿವಾಸಿಗಳ ಜೀವನ ವೈಶಿಷ್ಟ್ಯಗಳ ಕುರಿತು ವಿಶೇಷ ಆಸಕ್ತಿ. ಹಾಗಾಗಿ ಅವನ್ನೆಲ್ಲ ಕ್ಯಾಮೆರಾ ಮೂಲಕ ದಾಖಲಿಸಿ ಜಗತ್ತಿಗೆ ಪರಿಚಯಿಸುವ ತುಡಿತ. ಜೊತೆಗೆ ಭಾರತೀಯ ಹಳ್ಳಿಗಾಡಿನ ಶಾಲಾ ಮಕ್ಕಳಿಗೆ ಹೊರ ಜಗತ್ತನ್ನು ತೋರುವ ಆಸೆ.

ಆ ಮೂಲಕ ದೇಸಿ– ವಿದೇಶಿ ಮಕ್ಕಳಿಗೆ ಆಯಾಯ ದೇಶಗಳ ಸಂಸ್ಕೃತಿ, ಜನಜೀವನಗಳನ್ನು ಪರಸ್ಪರ ಪರಿಚಯಿಸುವುದು, ಆ ಮೂಲಕ ಮಕ್ಕಳ ಜ್ಞಾನ ದಾಹವನ್ನು ವಿಸ್ತರಿಸುವುದು ಅವರ ಉದ್ದೇಶ. ಇದೇ ಕಾರಣಕ್ಕಾಗಿ 2009ರಲ್ಲಿ ಭಾಸ್ಕರ್‌ CLIC Abroad (Children Learning International Culture Abroad) ಎಂಬ ಸಂಸ್ಥೆ ಹುಟ್ಟು ಹಾಕಿದರು. ಭಾಸ್ಕರ್‌ ಅವರ ಈ ಮಹತ್ವಾಕಾಂಕ್ಷೆಗೆ ‘ನಿಕಾನ್‌’ ಕ್ಯಾಮೆರಾ ಕಂಪೆನಿ ಕೈಜೋಡಿಸಿದೆ. ಪ್ರಾಯೋಜಕತ್ವ ವಹಿಸಿ ಕಾರ್ಯಾಗಾರಗಳಲ್ಲಿ ಮಕ್ಕಳ ಕಲಿಕೆಗಾಗಿ 40 ಕ್ಯಾಮೆರಾಗಳನ್ನು ನೀಡಿದೆ.

‘ಕ್ಲಿಕ್‌ಅಬ್ರಾಡ್‌’ ಸಂಸ್ಥೆ ಅಮೆರಿಕದ ವಿದ್ಯಾರ್ಥಿಗಳ ತಂಡವನ್ನು ಭಾರತಕ್ಕೆ ಕರೆತಂದು ಗ್ರಾಮೀಣ ಭಾರತದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಪರಿಚಯಿಸಿ ಹತ್ತು ದಿನಗಳ ಶೈಕ್ಷಣಿಕ ಕಾರ್ಯಾಗಾರ ನಡೆಸುತ್ತಿದೆ. ಅಲ್ಲಿ ಭಾಸ್ಕರ್‌ ಮತ್ತು ಕ್ಲಿಕ್‌ ಅಬ್ರಾಡ್‌ ತಂಡದ ಸದಸ್ಯರು ಮಕ್ಕಳಿಗೆ ಛಾಯಾಗ್ರಹಣ ಕೌಶಲದ ಪ್ರಾಥಮಿಕ ತಂತ್ರಗಳನ್ನು ಹೇಳಿ ಕೊಡುತ್ತಾರೆ. ಬಳಿಕ ಮಕ್ಕಳ ತಂಡಗಳಿಗೆ ಹಳ್ಳಿಗರ ನಿತ್ಯ ಜೀವನ, ಶಾಲೆ, ಪರಿಸರ, ಧಾರ್ಮಿಕ ಆಚರಣೆ, ಸಂಪ್ರದಾಯ, ಪುರಾತನ ಕಲೆ, ಉಡುಗೆ ತೊಡುಗೆ, ಮನೆ, ಕುಟುಂಬ, ಆರೋಗ್ಯ, ಸ್ವಚ್ಛತೆ, ಅಂಗಡಿ, ಪೇಟೆಗಳ ಕುರಿತು ಕ್ಯಾಮೆರಾಗಳಲ್ಲಿ ದಾಖಲಿಸುವಂತೆ ನಿರ್ದೇಶನ ನೀಡುತ್ತಾರೆ. ಜೊತೆಗೆ ಅವುಗಳ ಮೌಲ್ಯಗಳ ಕುರಿತು ಅರಿವು ಮೂಡಿಸುತ್ತಾರೆ. ಹೀಗೆ ಮಕ್ಕಳು ತೆಗೆದ ಚಿತ್ರಗಳೆಲ್ಲ ಅಪೂರ್ವ ದಾಖಲೆಗಳಾಗುತ್ತಿವೆ.

‘ಕ್ಲಿಕ್‌ ಅಬ್ರಾಡ್‌’ ಈಗಾಗಲೇ ಅಸ್ಸಾಂ, ಒಡಿಶಾ, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದ ಮಾರಲ್ವಾಡಿ ಹಾಗೂ ನಾಗರಹೊಳೆಯ ಆನೆ ಚೌಕೂರುನಲ್ಲಿ ಕಾರ್ಯಾಗಾರ ನಡೆಸಿದೆ. ಮುಖ್ಯವಾಹಿನಿಯಿಂದ ಹೊರಗುಳಿದು ಮೂಲೆಗುಂಪಾದ (ರಿಮೋಟ್‌) ಹಳ್ಳಿಗಳ ಮಕ್ಕಳಿಗಾಗಿ ಕಾರ್ಯಾಗಾರ ನಡೆಸುವುದು ವಿಶೇಷ. ಈ ವರ್ಷ ಮಾರ್ಚ್‌ನಲ್ಲಿ ನಾಗರಹೊಳೆಯ ಆನೆಚೌಕೂರಿನಲ್ಲಿ ಮಾವುತರ ಮಕ್ಕಳಿಗಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಈ ಕಾರ್ಯಾಗಾರದಲ್ಲಿ ಅಮೆರಿಕಾದ ಅಬ್ರಹಾಂ ಬಾಲ್ಡ್‌ವಿನ್‌ ಅಗ್ರಿಕಲ್ಚರಲ್‌ ಕಾಲೇಜಿನ ಆರು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರೊಫೆಸರ್‌ ಡಾ. ಟಾಮ್‌ ಗ್ರಾಂಟ್‌ ಭಾಗವಹಿಸಿದ್ದರು. ‘ಕ್ಲಿಕ್‌ ಅಬ್ರಾಡ್‌’ ಭಾರತದಲ್ಲಿ ಈವರೆಗೆ ಆಯೋಜಿಸಿದ ಕಾರ್ಯಾಗಾರಗಳಲ್ಲಿ ಗ್ರಾಮೀಣ ಭಾರತದ ಸುಮಾರು 400ಕ್ಕೂ ಹೆಚ್ಚಿನ ಶಾಲಾ ಮಕ್ಕಳು ಭಾಗವಹಿಸಿದ್ದಾರೆ.

‘ನಾನು ಕ್ಯಾಮೆರಾ ಬಗ್ಗೆ ಕೇಳಿದ್ದೆ, ಆದರೆ ನೋಡಿರಲಿಲ್ಲ. ಕಾರ್ಯಾಗಾರದಲ್ಲಿ ಮೊದಲ ಬಾರಿಗೆ ಕ್ಯಾಮೆರಾ ಮುಟ್ಟಿದೆ. ಆನ್‌, ಆಫ್‌ ಮಾಡುವುದನ್ನು ಕಲಿತೆ, ಫೋಟೊ ಕ್ಲಿಕ್ಕಿಸಿದೆ ನನಗಂತೂ ತುಂಬಾನೆ ಖುಷಿಯಾಯಿತು’ ಎಂದು ಸಂತಸದಿಂದ ಹೇಳುತ್ತಾಳೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಯಲಚವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರೇಮಾ. ಮಾಹಿತಿಗೆ: bhaskardk@gmail.com, www.clicabroad.org.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT