ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೋಟಾ ಇಟಿಯೋಸ್‌ಗೆ ಫೇಸ್‌ಲಿಫ್ಟ್

ಅಕ್ಷರ ಗಾತ್ರ

ಭಾರತದಲ್ಲಿ ಸರಿ ಸುಮಾರು 10 ವರ್ಷಗಳ ಹಿಂದೆ ತನ್ನ ಕಾರ್‌ಗಳನ್ನು ಪರಿಚಯಿಸಿದ ಟೊಯೋಟಾ 2010ರಲ್ಲಿ ಇಟಿಯೋಸ್ ಹಾಗೂ ಲಿವಾ ಕಾರ್‌ಗಳನ್ನು ಪರಿಚಯಿಸಿತ್ತು. ಇವೆರಡೂ ಸಣ್ಣ ಕಾರ್‌ಗಳೆನ್ನುವುದು ವಿಶೇಷ.

ಸಣ್ಣ ಸೆಡಾನ್ ಇಟಿಯೋಸ್ ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಅವತರಣಿಕೆಯಲ್ಲಿ ಲಭ್ಯವಿದ್ದು ಜನಪ್ರಿಯತೆ ಹೊಂದಿದ್ದರೂ (ಟ್ಯಾಕ್ಸಿಯಾಗಿ ಹೆಚ್ಚು ಪ್ರಸಿದ್ಧ), ಎಲ್ಲ ವರ್ಗದ ಜನರಿಗೂ ಈ ಕಾರ್ ಇಷ್ಟವಾಗಿತ್ತು ಎಂದು ಹೇಳಲಾಗುತ್ತಿರಲಿಲ್ಲ. ಕಾರ್‌ಗೆ 9 ಲಕ್ಷ ರೂಪಾಯಿ ಕೊಟ್ಟರೂ, ಅದರ ಒಳಾಂಗಣ ಹಾಗೂ ಇನ್ನಿತರ ಸೌಲಭ್ಯಗಳು ಅತ್ಯುತ್ತಮ ಎನ್ನುವ ಮಟ್ಟದಲ್ಲಿ ಇದ್ದದ್ದು ಕೆಲವು ಗ್ರಾಹಕರಿಗೆ ಅಸಮಾಧಾನ ತಂದಿತ್ತು.

ಈ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಟೊಯೋಟಾ ಇಟಿಯೋಸ್ ಕಾರನ್ನು ಮರುವಿನ್ಯಾಸಗೊಳಿಸಿ ಮಾರಕಟ್ಟೆಗೆ ಬಿಟ್ಟಿದೆ. ಲಿವಾ ಹಾಗೂ ಇಟಿಯೋಸ್ ಎರಡೂ ಕಾರ್‌ಗಳ ಒಳಾಂಗಣ ಹಾಗೂ ಇತರ ಸೌಲಭ್ಯಗಳು ಈಗ ಮತ್ತಷ್ಟು ಉತ್ತಮಗೊಂಡಿವೆ. ಇಟಿಯೋಸ್ ಕಾರನ್ನು ಪರೀಕ್ಷಿಸಲು ಬೆಂಗಳೂರು- ಕೋಲಾರ ನಡುವೆ ಸುಮಾರು 6 ಗಂಟೆಗಳ ಕಾಲ ಕಾರ್‌ನ ಟೆಸ್ಟ್‌ಡ್ರೈವ್ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ನಾನು ಆಯ್ಕೆ ಮಾಡಿಕೊಂಡಿದ್ದು ಡೀಸೆಲ್ ಇಟಿಯೋಸ್.

ಎಂಜಿನ್ ಕಾರ್ಯಕ್ಷಮತೆ
ಎಂಜಿನ್‌ನಲ್ಲಿ ಯಾವುದೇ ಬದಲಾವಣೆಯನ್ನು ಟೊಯೋಟಾ ಮಾಡಿಲ್ಲ. ಡಿ-ಡಿ4 (ಟೊಯೋಟಾ ತಂತ್ರಜ್ಞಾನ) 1364 ಸಿಸಿ, 1.36 ಲೀಟರ್ ಡೀಸೆಲ್ ಎಂಜಿನ್ ಇಟಿಯೋಸ್‌ನಲ್ಲಿದೆ. ಸಿಆರ್‌ಡಿಐ (ಕಾಮನ್ ರೇಲ್ ಡೀಸೆಲ್ ಇಂಜೆಕ್ಷನ್) ಇಂಧನ ಬಳಕೆ ತಂತ್ರಜ್ಞಾನವಿದೆ. ಕರೋಲಾ ಆಲ್ಟಿಸ್‌ನಲ್ಲಿ ಸಹ ಇದೇ ತಂತ್ರಜ್ಞಾನ ಬಳಕೆಯಾಗಿದೆ. ಸಿಆರ್‌ಡಿಐನ ವಿಶೇಷವೆಂದರೆ ಇಲ್ಲಿ ಎಂಜಿನ್‌ನ ಒಳಕ್ಕೆ ಡೀಸೆಲ್ ಅತಿ ಒತ್ತಡದಿಂದ ಪ್ರವೇಶಿಸುತ್ತದೆ. ಆಗ ಎಂಜಿನ್‌ಗೆ ಸಿಗುವ ಶಕ್ತಿ ಅಗಾಧವಾದದ್ದು. ಜತೆಗೆ ಕಡಿಮೆ ಮಾಲಿನ್ಯವನ್ನೂ ಇದು ಉಂಟು ಮಾಡುತ್ತದೆ.

ಕಂಪೆನಿ ಹೇಳುವಂತೆ ಇದು ಕೇವಲ 68 ಪಿಎಸ್ (3800 ಆರ್‌ಪಿಎಂ) ಶಕ್ತಿ ಹೊಂದಿದೆ. ಆದರೆ ಈ ಕಾರ್ ಅನ್ನು ರಸ್ತೆಯಲ್ಲಿ ಓಡಿಸುವ ಮಜವೇ ಬೇರೆ. ಕಾರ್‌ಗೆ ಅತ್ಯುತ್ತಮ ಶಕ್ತಿ ಇದೆ. ಆರಂಭಿಕ ಗಿಯರ್‌ನಲ್ಲಿ ಕಾರ್‌ನ ಪಿಕಪ್ ಅದ್ಭುತವಾಗಿದೆ.

ಆದರೆ 4 ಮತ್ತು 5ನೇ ಗಿಯರ್‌ಗೆ ಹೋಗುತ್ತಿದ್ದಂತೆ ಶಕ್ತಿ ಇಳಿಮುಖವಾದಂತೆ ಭಾಸವಾಗುತ್ತದೆ. ಡೀಸೆಲ್ ಎಂಜಿನ್ ಆದ ಕಾರಣ ಟರ್ಬೊ ಚಾರ್ಜರ್ ಬಳಸಲಾಗಿದೆ. ಹಾಗಾಗಿ ನಯವಾದ ಚಾಲನೆ ಇಲ್ಲಿ ಕಾರ್‌ಗೆ ಸಿಕ್ಕಿದೆ. ಅತ್ಯುತ್ತಮ 170 ಎನ್‌ಎಂ (1800 ರಿಂದ 2400 ಆರ್‌ಪಿಎಂ) ಟಾರ್ಕ್ ಇರುವುದರಿಂದ ಕಾರ್‌ಗೆ ನಿಯಮಿತವಾದ ಶಕ್ತಿ ಇರುವುದು ಗಮನಕ್ಕೆ ಬರುತ್ತದೆ.

ಟೊಯೋಟಾ ಗಮನದಲ್ಲಿಟ್ಟುಕೊಂಡಿರುವ ಗ್ರಾಹಕರ ದೃಷ್ಟಿಯಿಂದ ನೋಡಿದರೆ ಈ ಕಾರ್‌ಗೆ ಉತ್ತಮ ಶಕ್ತಿ ನೀಡಲಾಗಿದೆ. ಆದರೆ ಇದು ಎಂಟ್ರಿ ಲೆವೆಲ್ ಸೆಡಾನ್ ಆಗಿರುವ ಕಾರಣ ಅತಿ ಶ್ರೇಷ್ಠ ಶಕ್ತಿ, ಸಾಮರ್ಥ್ಯಗಳನ್ನು ನಿರೀಕ್ಷಿಸಲು ಸಾಧ್ಯವಾಗದು. ಸಣ್ಣ ಹ್ಯಾಚ್‌ಬ್ಯಾಕ್ ಕಾರ್‌ನಿಂದ ಸಣ್ಣ ಸೆಡಾನ್ ಕೊಳ್ಳಲು ಬಯಸುವ ಗ್ರಾಹಕ ಶಕ್ತಿಗಿಂತಲೂ ಹೆಚ್ಚಾಗಿ ಮೈಲೇಜ್ ಅನ್ನು ಬಯಸುತ್ತಾನೆ.

ಕಂಪೆನಿ ಅದಕ್ಕಾಗೇ ಇಟಿಯೋಸ್ ಲೀಟರ್ ಡೀಸೆಲ್‌ಗೆ 23.9 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ. ಕಾರ್ ಉತ್ತಮ ನಿಯಂತ್ರಣ ಹೊಂದಿದೆ. ನಗರ ಚಾಲನೆಗೆ ಹೇಳಿ ಮಾಡಿಸಿದಂತಿದೆ. 174 ಎಂಎಂ ಗ್ರೌಂಡ್ ಕ್ಲಿಯರೆನ್ಸ್ (ನೆಲದಿಂದ ಕಾರ್‌ನ ದೇಹದ ಎತ್ತರ) ಹೊಂದಿದ್ದು, ರಸ್ತೆ ಡುಬ್ಬಗಳು, ಹಳ್ಳಗಳಲ್ಲಿ ಆರಾಮದ ಸವಾರಿ ನೀಡುತ್ತದೆ. ಉತ್ತಮ ಸಸ್ಪೆನ್ಷನ್ ಕಾರ್‌ಗೆ ಇದೆ.

ನಗರದಲ್ಲಿನ ಟ್ರಾಫಿಕ್ ಹಾಗೂ ಸಿಗ್ನಲ್‌ಗಳಲ್ಲಿ ತಕ್ಷಣದ ವೇಗವರ್ಧನೆಗೆ ಕಾರ್‌ಗೆ ಇರುವ ಕಡಿಮೆ ಟಾರ್ಕ್ ಸಹಾಯಕ್ಕೆ ಬರುತ್ತದೆ. ಇದರಿಂದ ವಾಹನದಟ್ಟಣೆಯಲ್ಲಿ ಆಗಾಗ ಗಿಯರ್ ಬದಲಾಯಿಸದೇ ವಾಹನ ಚಾಲನೆ ಮಾಡಲು ಸಹಾಯವಾಗುತ್ತದೆ. ಇದರಿಂದ ಮೈಲೇಜ್ ಸಹ ಹೆಚ್ಚುತ್ತದೆ. ನಗರ ರಸ್ತೆಗಳು ಮಾತ್ರವೇ ಅಲ್ಲದೇ, ಹೆದ್ದಾರಿಗಳಲ್ಲಿ ಇಟಿಯೋಸ್ ಚಾಲನೆ ಮಾಡುವುದೂ ಮಜ ನೀಡುತ್ತದೆ. ಹೆದ್ದಾರಿಯಲ್ಲಿ 50 ರಿಂದ 120 ಕಿಲೋಮೀಟರ್‌ನ ನಡುವಣ ವೇಗದಲ್ಲಿ ಟಾಪ್ ಗಿಯರ್‌ನಲ್ಲೇ ವಾಹನ ಚಾಲನೆ ಮಾಡುವ ಅವಕಾಶ ಇರುವುದು ವಿಶೇಷ.

ಆದರೆ ಹೆದ್ದಾರಿಯಲ್ಲಿ ಇತರ ಕಾರ್‌ಗಳನ್ನು ಹಿಂದಿಕ್ಕುವಾಗ ಮಾತ್ರ ಲೋವರ್ ಗಿಯರ್‌ಗೆ ಬದಲಿಸಿಕೊಳ್ಳಬೇಕು. ಇದರಿಂದ ಓವರ್‌ಟೇಕ್ ಮಾಡಲು ಬೇಕಾದ ಹೆಚ್ಚುವರಿ ಶಕ್ತಿ ಹಾಗೂ ವೇಗ ಸಿಗುತ್ತದೆ. ಆದರೂ ಇಟಿಯೋಸ್‌ನ ಗಿಯರ್ ಶಿಫ್ಟರ್ ಹಾಗೂ ಗಿಯರ್ ಪೆಡಲ್‌ಗಳು ಕೊಂಚ ಒರಟಾಗಿವೆ. ಕಾರ್ 5000 ಕಿಲೋಮೀಟರ್ ಓಡಿದ ನಂತರ ಅವು ಸಡಿಲಗೊಳ್ಳುತ್ತವೆ ಎಂದು ಕಂಪೆನಿ ಹೇಳುತ್ತದೆ. ಉತ್ತಮ ಪವರ್ ಸ್ಟೀರಿಂಗ್ ಇದ್ದು ನಗರ ಹಾಗೂ ಹೆದ್ದಾರಿಯಲ್ಲಿ ಉತ್ತಮ ಚಾಲನೆ ನೀಡುತ್ತದೆ.

ಸಾಕಷ್ಟು ಸ್ಥಳಾವಕಾಶ
ಇಟಿಯೋಸ್ ಅನ್ನು ಉತ್ತಮ ಫ್ಯಾಮಿಲಿ ಕಾರ್ ಎನ್ನಬಹುದು. ವಿಶಾಲವಾದ ಕ್ಯಾಬಿನ್ ಇದೆ. ಟೊಯೋಟಾ ಕ್ಯಾಮ್ರಿಯಷ್ಟೇ ವಿಶಾಲವಾದ ಕಾರ್ ಇದಾದ ಕಾರಣ, ಹಿಂದಿನ ಸೀಟ್‌ನಲ್ಲಿ 3 ಮಂದಿ ಆರಾಮಾಗಿ ಕೂರಬಹುದು. ಕಾಲಿಟ್ಟುಕೊಳ್ಳಲೂ ಉತ್ತಮ ಸ್ಥಳ ಇದೆ. ಕಾರ್‌ನಲ್ಲಿ ಅತ್ಯುತ್ತಮ ಎನ್ನಬಹುದಾದ 595 ಲೀಟರ್‌ನ ಲಗ್ಗೇಜ್ ಜಾಗವಿದ್ದು (ಬೂಟ್), ಪ್ರವಾಸಕ್ಕೆ ಹೋಗುವವರಿಗೆ ಹೆಚ್ಚು ಸಹಾಯಕ್ಕೆ ಬರುತ್ತದೆ. ಕಾರ್‌ನಲ್ಲಿನ ಹವಾನಿಯಂತ್ರಣ ವ್ಯವಸ್ಥೆ ಉತ್ತಮವಾಗಿದ್ದು, ಕಾರ್‌ನ ಎಲ್ಲ ಭಾಗಗಳನ್ನೂ ಬಹುಬೇಗ ತಂಪಾಗಿಸುತ್ತದೆ. ಮುಂಭಾಗದ ಹಾಗೂ ಹಿಂಬದಿಯ ಪ್ರಯಾಣಿಕರಿಬ್ಬರಿಗೂ ತಂಗಾಳಿ ಪಸರಿಸುತ್ತದೆ.

ಕಾರ್‌ಗೆ ಐಷಾರಾಮಿ ನೋಟವನ್ನು ನೀಡುವ ಸಲುವಾಗಿ ಒಳಾಂಗಣವನ್ನು ಅತ್ಯುತ್ತಮವಾಗಿ ಮರು ವಿನ್ಯಾಸಗೊಳಿಸಲಾಗಿದೆ. ಎರಡು ಬಣ್ಣದ ಸೀಟ್‌ಗಳು ಇವೆ. ಡ್ಯಾಷ್‌ಬೋರ್ಡ್‌ಗೆ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯಾಗಿದೆ. ಟಾಪ್ ಎಂಡ್ ಅವತರಣಿಕೆಯಲ್ಲಿ ಇಟಿಯೋಸ್‌ನಲ್ಲಿ 2ಡಿನ್ ಸಂಗೀತ ಸೌಲಭ್ಯವಿದೆ. ಅದಕ್ಕೆ ಬ್ಲೂಟೂತ್‌ನ ಸಾಥ್ ಇದೆ. ಜತೆಗೆ ಯುಎಸ್‌ಬಿ, ಆಕ್ಸ್ ಇನ್ ಹಾಗೂ ರಿಮೋಟ್ ಕಂಟ್ರೋಲರ್ ಇದೆ. ಡ್ಯಾಷ್‌ಬೋರ್ಡ್‌ನ ನಡುವಲ್ಲಿ ಸ್ಪೀಡೋಮೀಟರ್ ಹಾಗೂ ಆರ್‌ಪಿಎಂ ಮೀಟರ್ ಇದೆ.

ಸ್ಟೀರಿಂಗ್ ಎದುರು ಈ ಮೀಟರ್‌ಗಳನ್ನು ನೋಡಿ ಅಭ್ಯಾಸ ಆದವರಿಗೆ ಆರಂಭದಲ್ಲಿ ಕೊಂಚ ಗಲಿಬಿಲಿ ಆಗಬಹುದು. ಆದರೆ ಕೆಲವೇ ಸಮಯದಲ್ಲಿ ಸರಿಹೋಗುತ್ತದೆ. ಅತ್ಯುತ್ತಮ ಹೊಸ ಸೌಲಭ್ಯವೆಂದರೆ ಚಾಲಕನ ಸೀಟ್‌ನ ಎತ್ತರ ಹೊಂದಿಸಿಕೊಳ್ಳಬಲ್ಲ ಅವಕಾಶ ನೀಡಿರುವುದು. ಕುಳ್ಳಗಿನ, ಎತ್ತರದ ಚಾಲಕರಿಗೂ ಇದು ಸಹಾಯಕ್ಕೆ ಬರುತ್ತದೆ. ಇದರಿಂದ ಚಾಲಕನಿಗೆ ಕಾರ್ ಚಾಲನೆಯಲ್ಲಿ ಉತ್ತಮ ವಿಶ್ವಾಸ ಮೂಡಲು ಸಹಾಯವಾಗುತ್ತದೆ. ಗ್ಲೋವ್ ಬಾಕ್ಸ್‌ನಲ್ಲೂ ಹವಾನಿಯಂತ್ರಣ ಸೌಲಭ್ಯ ನೀಡಲಾಗಿದ್ದು, ನೀರು, ಮತ್ತಿತರ ಪಾನೀಯಗಳು ತಣ್ಣಗಿರಲು ಸಾಧ್ಯವಾಗುತ್ತದೆ.

ಹೊರಾಂಗಣ ವಿನ್ಯಾಸ
ಕಾರ್‌ನ ಹೊರಾಂಗಣ ಸಹ ಸಾಕಷ್ಟು ಹೊಸತನಗಳಿಂದ ಕೂಡಿದೆ. ಹೊಸ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಾರ್‌ನ ಎದುರಿನ ಗ್ರಿಲ್ ಅನ್ನು ಬದಲಿಸಿ ಕ್ರೋಮ್ ಫಿನಿಷ್ ಇರುವ ಗ್ರಿಲ್ ಅನ್ನು ಅಳವಡಿಸಲಾಗಿದೆ. ಇದರಿಂದ ಕಾರ್‌ಗೆ ದುಬಾರಿ ಕಾರ್‌ನ ನೋಟ ಸಿಕ್ಕಿದೆ. ಹಿಂಭಾಗದ ದೀಪಗಳನ್ನು ತೆಳ್ಳಗೆ ರಚಿಸಲಾಗಿದ್ದು, ಕಾರ್‌ಗೆ ವಿಶೇಷ ನೋಟ ಸಿಕ್ಕಿದೆ. ಮಿರರ್‌ಗಳಲ್ಲಿ ಇಂಡಿಕೇಟರ್ ಸಹ ಜೋಡಿತಗೊಂಡಿರುವುದು ಇದು ಐಷಾರಾಮಿ ಕಾರ್ ಎನ್ನುವುದನ್ನು ಸಾಬೀತುಗೊಳಿಸುತ್ತದೆ.

ಪೆಟ್ರೋಲ್ ಅವತರಣಿಕೆ
ಇಟಿಯೋಸ್ ಪೆಟ್ರೋಲ್ ಅವತರಣಿಕೆಯಲ್ಲೂ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, 90 ಪಿಎಸ್ ಶಕ್ತಿ (5600 ಆರ್‌ಪಿಎಂ) ಹಾಗೂ 132 ಎನ್‌ಎಂ ಟಾರ್ಕ್ (3000 ಆರ್‌ಪಿಎಂ) ಇದೆ. ಹಾಗಾಗಿ ಅತ್ಯುತ್ತಮ ವೇಗ, ಗಿಯರ್ ಬದಲಿಸಬೇಕಾದ ಅನಿವಾರ್ಯತೆ ಇಲ್ಲದೆ ಉತ್ತಮ ಚಾಲನಾ ಅನುಭವ ಸಿಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಅವತರಣಿಕೆಗಳೆರಡಲ್ಲೂ ಏರ್‌ಬ್ಯಾಗ್ ನೀಡಲಾಗಿದ್ದು, ಇಟಿಯೋಸ್ ಸುರಕ್ಷೆಯ ದೃಷ್ಟಿಯಿಂದಲೂ ಉತ್ತಮವಾಗಿದೆ ಎನ್ನುವುದಕ್ಕೆ ಸಾಕ್ಷಿ.

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಗ್ರಾಹಕ ಸುಮಾರು 50000 ರೂಪಾಯಿಯಷ್ಟು ಹೆಚ್ಚಿನ ಹಣ ನೀಡಬೇಕಾಗುತ್ತದೆ.  ಇಟಿಯೋಸ್ ಪೆಟ್ರೋಲ್ ಅವತರಣಿಕೆಗೆ 5.45 ರಿಂದ 7.09 ಲಕ್ಷ ರೂಪಾಯಿ ಹಾಗೂ ಡೀಸೆಲ್ ಅವತರಣಿಕೆಗೆ 6.71 ರಿಂದ 8.16 ಲಕ್ಷ ರೂಪಾಯಿ (ಎಕ್ಸ್‌ಶೋರೂಂ) ಬೆಲೆ ಇದೆ.
(ಲೇಖಕರು ವಾಣಿಜ್ಯ ಪತ್ರಕರ್ತರು. ಕಳೆದ 10 ವರ್ಷಗಳಿಂದ ಕಾರ್ ಟೆಸ್ಟ್‌ಡ್ರೈವ್ ವರದಿ ಬರೆಯುತ್ತಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT