ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಹೃದಯದ ಸಿಟಿ ಎಸ್‌ಯುವಿ

ಎಕೊಸ್ಪೋರ್ಟ್
Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ಹೊಸದೊಂದು ಕಾರ್ ಅಥವಾ ಎಸ್‌ಯುವಿಯನ್ನು ಚಾಲನೆ ಮಾಡಬೇಕಾದರೆ ಕಿರಿದಾದ, ತೀವ್ರಗಾಳಿಯ ಗುಡ್ಡಗಾಡಿನ ರಸ್ತೆ, ರನ್‌ವೇ ಅನ್ನು ಹೋಲುವ ಮೈದಾನ ಇದ್ದರೆ ಎಷ್ಟು ಚೆನ್ನ ಅಲ್ಲವೇ. ಎಸ್‌ಯುವಿಗಳಿಗಂತೂ ರಸ್ತೆಗಳಲ್ಲಿ ಗುಂಡಿ ಗೊರಕಲುಗಳು ಇದರಷ್ಟೇ ಅದರ ಸಾಮರ್ಥ್ಯದ ಪರೀಕ್ಷೆಯಾಗುತ್ತದೆ!

ಇಂಥದ್ದೊಂದು ಅನುಭವ ಇತ್ತೀಚೆಗಷ್ಟೇ ಗೋವಾದಿಂದ ಬೆಂಗಳೂರಿಗೆ ಹುಬ್ಬಳ್ಳಿ ಮಾರ್ಗವಾಗಿ ಹೊಸ ಎಸ್‌ಯುವಿಯೊಂದನ್ನು ಓಡಿಸುವಾಗ ದೊರೆಯಿತು. ಫೋರ್ಡ್ ಇಂಡಿಯಾ ನಮಗಾಗಿ ತನ್ನ ಹೊಸ ಎಕೊಸ್ಪೋರ್ಟ್ ಎಸ್‌ಯುವಿಯನ್ನು ಚಾಲನೆ ಮಾಡಲು ನೀಡಿತ್ತು. ಬೆಟ್ಟಗುಡ್ಡ, ಹೇರ್‌ಪಿನ್ ಕರ್ವ್‌ಗಳ ರಸ್ತೆಯಲ್ಲಿ ಗೋವಾದಿಂದ ಬೆಂಗಳೂರಿಗೆ ಬರುವ ಅನುಭವವೇ ಬೇರೆ. ಗೋವಾದಿಂದ ಹುಬ್ಬಳಿಯವರೆಗಿನ 186 ಕಿಲೋಮೀಟರ್‌ಗಳಷ್ಟು ಭಯಂಕರ ಸ್ಥಿತಿಯ ರಸ್ತೆಯಿದೆ. ಅಲ್ಲಿಂದ ಬೆಂಗಳೂರಿನ ತನಕದ 410 ಕಿಲೋಮೀಟರ್ ನಯವಾದ ರಾಜಮಾರ್ಗ.

ಎಕೊಸ್ಪೋರ್ಟ್ 3 ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.5 ಲೀಟರ್ ಡೀಸೆಲ್ ಎಂಜಿನ್, 1.5 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1 ಲೀಟರ್ ಎಕೊಬೂಸ್ಟ್ ಪೆಟ್ರೋಲ್ ಎಂಜಿನ್. ನಾವು ಚಾಲನೆ ಮಾಡಿದ್ದು, 1 ಲೀಟರ್ ಎಕೊಬೂಸ್ಟ್ ಎಂಜಿನ್ ಇದ್ದ ಎಕೊಸ್ಪೋರ್ಟ್ ಅನ್ನು. ಸಣ್ಣ ಎಂಜಿನ್, ಆದರೆ ತಂತ್ರಜ್ಞಾನದಲ್ಲಿ ಉತ್ಕೃಷ್ಟವಾಗಿದ್ದ ಈ ಕಾರ್ ಚಾಲನೆ ಮಾಡಿದ್ದು ಒಂದು ಒಳ್ಳೆಯ ಅನುಭವ.

ಎಕೊಸ್ಪೋರ್ಟ್‌ನೊಂದಿಗೆ ಫೋರ್ಡ್ ತನ್ನ ಜಾಗತಿಕ ಪ್ರಸಿದ್ಧಿಯ ಎಕೊಬೂಸ್ಟ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದೆ. 3 ಸಿಲಿಂಡರ್‌ಗಳ, 1 ಲೀಟರ್ ಸಾಮರ್ಥ್ಯದ ಈ ಸಣ್ಣ ಎಂಜಿನ್ ಯಾವುದೇ ದೊಡ್ಡ ಎಂಜಿನ್‌ಗಳಿಗೆ ಸರಿಸಾಟಿಯಿಲ್ಲದ ಕಾರ್ಯಕ್ಷಮತೆ ನೀಡುತ್ತದೆ. ಈ ಹೊಸ ಎಂಜಿನ್ ನಯವಾದ ಚಾಲನೆಯೊಂದಿಗೆ ಶ್ರೇಷ್ಠ ಶಕ್ತಿ ನೀಡುತ್ತದೆ. ಸಾಂಪ್ರದಾಯಿಕ ಎಂಜಿನ್‌ಗಿಂತಲೂ ಶೇ 20 ರಷ್ಟು ಹೆಚ್ಚು ಮೈಲೇಜ್ ಅನ್ನು ಈ 1 ಲೀಟರ್‌ನ ಎಕೊಬೂಸ್ಟ್ ಎಂಜಿನ್ ನೀಡುತ್ತದೆ. 125 ಪಿಎಸ್ ಟಾರ್ಕ್ (1400 ಆರ್‌ಪಿಎಂ), ಹಾಗೂ 170 ಎನ್‌ಎಂ ಬಿಎಚ್‌ಪಿಯ ಶಕ್ತಿ (4500 ಆರ್‌ಪಿಎಂ) ಹೊಂದಿದ್ದು, ಎಂತಹ ಕೆಟ್ಟ ರಸ್ತೆಗಳಲ್ಲೂ ರಾಜನಂತೆ ಮುನ್ನುಗ್ಗುತ್ತದೆ.

ಎಕೊಸ್ಪೋರ್ಟ್ ಲೀಟರ್ ಪೆಟ್ರೋಲ್‌ಗೆ 18.9 ಕಿಲೋಮೀಟರ್ ಮೈಲೇಜ್ ನೀಡಿ ಅಚ್ಚರಿ ಮೂಡಿಸುತ್ತದೆ. ಆದರೆ ಉತ್ತಮ ರಸ್ತೆ ಸ್ಥಿತಿಗತಿಗಳಲ್ಲಿ ಮಾತ್ರ. ಗೋವಾದಿಂದ ಬೆಂಗಳೂರಿಗೆ ಬಂದ ನಮಗೆ ಲೀಟರ್‌ಗೆ 16 ಕಿಲೋಮೀಟರ್ ಮೈಲೇಜ್ ನೀಡಿತು. ಮೈಲೇಜ್ ನಮಗೆ ಕಡಿಮೆ ಬರಲು ಕಾರಣವಿದೆ. ಸುಮಾರು 200 ಕಿಲೋಮೀಟರ್‌ಗೆ ಹೆಚ್ಚು ದೂರವನ್ನು ಗುಡ್ಡ ರಸ್ತೆಗಳಲ್ಲಿ, ಅತಿ ವೇಗದಲ್ಲಿ ಚಾಲನೆ ಮಾಡಲಾಯಿತು. ಈ ರೀತಿಯ ಚಾಲನೆಯಲ್ಲಿ ಎಂತಹ ಉತ್ತಮ ಮೈಲೇಜ್ ನೀಡುವ ವಾಹನ ಸಹ ಕಡಿಮೆ ಮೈಲೇಜ್ ಅನ್ನೇ ನೀಡುತ್ತದೆ.

ಎಂಜಿನ್ ತಂತ್ರಜ್ಞಾನ

ತಾಂತ್ರಿಕ ಮಾಹಿತಿ
ಉದ್ದ: 3999 ಎಂಎಂ
ಅಗಲ: 1765 ಎಂಎಂ
ಎತ್ತರ: 1708 ಎಂಎಂ
ವ್ಹೀಲ್‌ಬೇಸ್: 2520 ಎಂಎಂ
ಗ್ರೌಂಡ್ ಕ್ಲಿಯರೆನ್ಸ್: 200 ಎಂಎಂ
ತಿರುಗುವ ವ್ಯಾಸ: 5.3 ಮೀಟರ್
ಇಂಧನ ಶೇಖರಣೆ:  52 ಲೀಟರ್
ಎಂಜಿನ್ (1.5 ಲೀಟರ್ ಡೀಸೆಲ್): 91 ಪಿಎಸ್ ಶಕ್ತಿ, 204 ಎನ್‌ಎಂ ಟಾರ್ಕ್
ಎಂಜಿನ್ (1.5 ಲೀಟರ್ ಪೆಟ್ರೋಲ್): 125 ಪಿಎಸ್ ಶಕ್ತಿ, 170 ಎನ್‌ಎಂ ಟಾರ್ಕ್
ಎಂಜಿನ್ (1.0 ಲೀಟರ್ ಡೀಸೆಲ್): 91 ಪಿಎಸ್ ಶಕ್ತಿ, 204 ಎನ್‌ಎಂ ಟಾರ್ಕ್

ಅತ್ಯಂತ ಸಣ್ಣ ಎಂಜಿನ್ ಹೊಂದಿರುವುದೇ ಈ ಹೊಸ ಎಕೊಬೂಸ್ಟ್ ಎಂಜಿನ್‌ನ ವಿಶೇಷತೆ. ಮಾರುತಿ ಸುಜುಕಿ ಆಲ್ಟೊ (ಕೆ10 ಎಂಜಿನ್ ಉಳ್ಳ ಅವತರಣಿಕೆ) ಅಷ್ಟೇ ಚಿಕ್ಕ ಎಂಜಿನ್ ಇದೆ. ಅಗಾಧ ಶಕ್ತಿ. ಡೈರೆಕ್ಟ್ ಇಂಜೆಕ್ಷನ್ ಇಂಧನ ತಂತ್ರಜ್ಞಾನವಿದ್ದು, ಟರ್ಬೋಚಾರ್ಜರ್ ಅಳವಡಿಸಲಾಗಿದೆ. ಹಾಗಾಗಿ ಅತಿ ಕ್ಷಿಪ್ರವಾದ ಶಕ್ತಿ ವಾಹನಕ್ಕೆ ಸಿಗುತ್ತದೆ. ಅತಿ ಕಡಿಮೆ ಎಂಜಿನ್ ವೇಗದಲ್ಲೂ ಅತಿ ಹೆಚ್ಚು ಶಕ್ತಿ ವಾಹನಕ್ಕೆ ಸಿಗುತ್ತದೆ.

ಇದರಲ್ಲಿ ಅತಿ ಕಡಿಮೆ ಆರ್‌ಪಿಎಂನಲ್ಲೂ ಟರ್ಬೋಚಾರ್ಜರ್ ಚಾಲೂ ಇರುತ್ತದೆ. ಈ ಎಂಜಿನ್‌ನ ಗರಿಷ್ಠ ಟಾರ್ಕ್ 170 ಎನ್‌ಎಂ ಇದ್ದರೂ, 1400 ಆರ್‌ಪಿಎಂನಿಂದ 4500 ಆರ್‌ಪಿಎಂ ಎಂಜಿನ್ ವೇಗ ಇರುವುದರಿಂದ ಎಂತಹ ಓವರ್‌ಟೇಕ್‌ಗಳನ್ನೂ ಅತ್ಯುತ್ತಮವಾಗಿ ನಿಭಾಯಿಸಬಲ್ಲ ಸಾಮರ್ಥ್ಯ ಈ ಎಂಜಿನ್‌ಗಿದೆ.

ತಂತ್ರಜ್ಞಾನ ಶ್ರೇಷ್ಠವಾಗಿರುವ ಕಾರಣ ಉತ್ತಮ ಶಕ್ತಿಯೂ ಇದೆ. ವೇಗವರ್ಧನೆಯ ಗತಿಯೂ ಉತ್ತಮವಾಗೇ ಆಗುತ್ತದೆ. ಹಾಗೆಂದು ಇದನ್ನು ಸ್ಪೋರ್ಟ್ಸ್ ಕಾರ್‌ನ ಕಾರ್ಯಕ್ಷಮತೆಯ ಜತೆ ಹೋಲಿಸಿಕೊಳ್ಳಲು ಆಗದು. ಈ ಎಂಜಿನ್‌ಗೆ ಅಲ್ಯೂಮಿನಿಯಂ ದೇಹದ ಬದಲು, ಕಾಸ್ಟ್ ಐರನ್ ದೇಹವನ್ನೇ ಬಳಸಲಾಗಿದೆ. ಇದು ಕ್ಷಿಪ್ರವಾಗಿ ಬಿಸಿಯಾಗಿ ಉತ್ತಮ ಶಕ್ತಿ ಹಾಗೂ ಉತ್ತಮ ಮೈಲೇಜ್ ನೀಡಲು ಸಹಕರಿಸುತ್ತದೆ.

ಸ್ಪರ್ಧೆ ಯಾರೊಂದಿಗೆ?
ಎಕೊಸ್ಪೋರ್ಟ್ ಎಕೊಬೂಸ್ಟ್‌ನ ಬೆಲೆ 7.90 ಲಕ್ಷ ರೂಪಾಯಿಗಳು (ಎಕ್ಸ್ ಶೋರೂಂ ಬೆಲೆ, ನವದೆಹಲಿ). ಹಾಗಾಗಿ ಇದು ಕಡಿಮೆ ಬೆಲೆಯ ಕಾರ್ ಅಲ್ಲ. ಫೋರ್ಡ್ ಇದನ್ನು ನಗರ ಎಸ್‌ಯುವಿ ಎಂಬ ವಿಭಾಗದಲ್ಲಿ ಇರಿಸಿದೆ. ಒಟ್ಟು 5 ಮಂದಿ ಆರಾಮಾಗಿ ಕೂರಬಲ್ಲ ಸಾಮರ್ಥ್ಯ ಕಾರಿಗಿದೆ. ರೆನೊ ಡಸ್ಟರ್‌ಗೆ ಇದು ಪ್ರತಿಸ್ಪರ್ಧಿ. ಗಡಸುತನ, ಉತ್ತಮ ನಿರ್ವಹಣಾ ವೆಚ್ಚ, ಅತ್ಯಧಿಕ ಮೈಲೇಜ್, ಕಾರ್ಯಕ್ಷಮತೆಗಳ ಹದವಾದ ಮಿಶ್ರಣ ಉಳ್ಳ ಎಸ್‌ಯುವಿ ಇದಾಗಿದೆ.

ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗಿರುವ ಈ ಎಸ್‌ಯುವಿ ನಗರಕ್ಕೂ ಸೈ, ಕಚ್ಚಾ ರಸ್ತೆಗಳಿಗೂ ಸೈ. ಎಂತಹ ಕೆಸರು, ಕಲ್ಲುಮಣ್ಣುಗಳ ರಸ್ತೆಯಲ್ಲೂ ಇದು ಸಾಗಿ ಬಿಡುತ್ತದೆ. ಸ್ಪೋರ್ಟಿ ಲುಕ್ ಹೊಂದಿರುವುದರಿಂದ ನಗರ ಗ್ರಾಹಕರನ್ನು ಸುಲಭವಾಗಿ ಸೆಳೆದುಕೊಳ್ಳುವುದು ಫೋರ್ಡ್‌ನ ನಿರೀಕ್ಷೆ.

ಕೇವಲ 4 ಮೀಟರ್ ಉದ್ದದ ಈ ಕಾರ್ ನಗರ ಚಾಲನೆಗೆ ಹೇಳಿ ಮಾಡಿಸಿದಂತಿದೆ. ಕೇವಲ 5.2 ಮೀಟರ್‌ನಲ್ಲಿ ಸಂಪೂರ್ಣ ವಾಹನವನ್ನು ತಿರುಗಿಸಿಬಿಡಬಹುದು. ಗಡಸುತನ ಇರುವುದರಿಂದ ಕೆಟ್ಟ ರಸ್ತೆಗಳಿಗೂ ಹೊಂದಿಕೊಳ್ಳುತ್ತದೆ. ಅಗಲವಾದ ಚಕ್ರ ಹಾಗೂ ಟಯರ್ ಇದಕ್ಕೆ ಸಹಾಯ ಮಾಡುತ್ತವೆ. ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ನಯವಾದ ಚಾಲನೆ ನೀಡುತ್ತದೆ. ಹೆದ್ದಾರಿ ಪ್ರಯಾಣದಲ್ಲಂತೂ ಎಕೊಸ್ಪೋರ್ಟ್ ಚಾಲನೆ ಮುದ ನೀಡುತ್ತದೆ. ಆದರೆ ಇದರ ಸಸ್ಪೆನ್ಷನ್ ಕೊಂಚ ಗಡುಸಾಗಿವೆ.

ಹಾಗಾಗಿ ಹೇರ್‌ಪಿನ್ ಕರ್ವ್, ತಿರುವು ಇರುವ ರಸ್ತೆಗಳಲ್ಲಿ ವೇಗದಿಂದ ಚಾಲನೆ ಮಾಡುವುದು ಅಪಾಯಕಾರಿ ಎಂಬ ಅನುಭವ ನಮಗಾಯಿತು. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವ ಕಾರಣ, ಎಂತಹ ರಸ್ತೆ ಡುಬ್ಬವೂ ಕಾರ್‌ನ ದೇಹಕ್ಕೆ ತಾಗುವುದಿಲ್ಲ. ನೀರಿನೊಳಗೆ 550 ಎಂಎಂ ಆಳದವರೆಗೂ ಚಾಲನೆ ಮಾಡಬಲ್ಲ ಸಾಮರ್ಥ್ಯ ಎಕೊಸ್ಪೋರ್ಟ್‌ಗಿದೆ ಎಂದು ಫೋರ್ಡ್ ಹೇಳಿಕೊಳ್ಳುತ್ತದೆ. ಹಾಗಾಗಿ ಮಳೆಗಾಲದಲ್ಲಿ ನೀರು ತುಂಬಿದ ರಸ್ತೆಗಳಲ್ಲೂ ಧೈರ್ಯವಾಗಿ ಚಾಲನೆ ಮಾಡಬಹುದು.

ಇತರೆ ಆಯ್ಕೆಗಳು
ಇದೇ ವಾಹನ 1.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ (ಪ್ರಾರಂಭಿಕ ಬೆಲೆ 5.69 ಲಕ್ಷ ರೂಪಾಯಿ, ಎಕ್ಸ್ ಶೋರೂಂ, ನವದೆಹಲಿ) ನಲ್ಲೂ ಲಭ್ಯವಿದೆ. ಇದು 112 ಪಿಎಸ್ ಗರಿಷ್ಠ ಟಾರ್ಕ್ (6300 ಆರ್‌ಪಿಎಂ) ಹಾಗೂ 140 ಎನ್‌ಎಂ ಗರಿಷ್ಠ ಬಿಎಚ್‌ಪಿ (4400 ಆರ್‌ಪಿಎಂ) ಹೊಂದಿದೆ. ಈ ಎಸ್‌ಯುವಿ ಲೀಟರ್ ಪೆಟ್ರೋಲ್‌ಗೆ 15.8 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಳ್ಳುತ್ತದೆ. ವಾಸ್ತವವಾಗಿ 11 ಕಿಲೋಮೀಟರ್ ಮೈಲೇಜ್ ನೀಡಬಹುದು. ಡೀಸೆಲ್ ಎಂಜಿನ್ ಬಯಸುವವರಿಗಾಗಿ ಫೋರ್ಡ್ 1.5 ಲೀಟರ್ ಟಿಡಿಸಿಐ ಇಂಟರ್‌ಕೂಲ್ಡ್, ಟರ್ಬೋಚಾರ್ಜರ್ ಯುಕ್ತ ಎಕೊಸ್ಪೋರ್ಟ್ ಆಯ್ಕೆ ನೀಡಿದೆ. (ಪ್ರಾರಂಭಿಕ ಬೆಲೆ 6.69 ಲಕ್ಷ ರೂಪಾಯಿಗಳು).

91 ಪಿಎಸ್ ಗರಿಷ್ಠ ಟಾರ್ಕ್ (2000 ಆರ್‌ಪಿಎಂ) ಹಾಗೂ 204 ಎನ್‌ಎಂ ಬಿಎಚ್‌ಪಿ (2750 ಆರ್‌ಪಿಎಂ) ಶಕ್ತಿಯನ್ನು ಹೊಂದಿದೆ. ಇದರ ಫಲವಾಗಿ ನಿಂತ ಜಾಗದಿಂದ ಗರಿಷ್ಠ ವೇಗವರ್ದನೆ ಸಿಗುತ್ತದೆ. ಆಗಾಗ ಗಿಯರ್ ಬದಲಿಸಬೇಕಾದ ಅನಿವಾರ್ಯತೆಯೂ ಇರುವುದಿಲ್ಲ. ಆದರೆ ಟಬೋಚಾರ್ಜರ್ ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಬಹುದಿತ್ತು. ಫೋರ್ಡ್ ಡೀಸೆಲ್ ಅವತರಣಿಕೆ 22.7 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ. 20 ಕಿಲೋಮೀಟರ್ ಮೈಲೇಜ್ ನೀಡಿದರೂ ಅದು ಶ್ರೇಷ್ಠವೇ. ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಆಟೊಮ್ಯಾಟಿಕ್ ಗಿಯರ್ ಟ್ರಾನ್ಸ್‌ಮಿಷನ್ ಸೌಲಭ್ಯವನ್ನು ನೀಡಲಾಗಿದೆ.

ಶ್ರೇಷ್ಠ ಗುಣಲಕ್ಷಣಗಳು
ಇದು ಚಾಲಕ ಸ್ನೇಹಿ ಸೌಲಭ್ಯವನ್ನು ಒಳಗೊಂಡಿದೆ. ಕಾರ್‌ನ ಡ್ಯಾಷ್ ಬೋರ್ಡ್‌ನ ನೀಲಿ ಎಲ್‌ಇಡಿ ಪರದೆಯಲ್ಲಿ ಕಾರ್‌ನ ಸಕಲ ಮಾಹಿತಿ ಸಿಗುತ್ತದೆ. ಕಾರ್ ನೀಡುತ್ತಿರುವ ಮೈಲೇಜ್, ತಲುಪಲು ಬೇಕಿರುವ ಇಂಧನ, ಇತ್ಯಾದಿ ಮಾಹಿತಿಗಳು ಸುಲಭವಾಗಿ ಚಾಲಕನಿಗೆ ಗೋಚರಿಸುತ್ತವೆ. ಜತೆಗೆ ಇದರಲ್ಲಿ ಇಡೀ ಪ್ರಯಾಣದ ಸಾಧಾರಣ ವೇಗ, ವಾಹನ ನೀಡಿದ ಒಟ್ಟು ಮೈಲೇಜ್, ಇಂಧನ ಮುಗಿದು ಹೋಗುವ ದೂರಗಳನ್ನೂ ನೀಡಿ ಸೈ ಅನ್ನಿಸಿಕೊಳ್ಳುತ್ತದೆ.

ಮೈಕ್ರೋಸಾಫ್ಟ್ ತಂತ್ರಜ್ಞಾನದೊಂದಿದೆ ಧ್ವನಿ ಆಧರಿತ ಸೇವೆಗಳನ್ನು ವಾಹನದ ಒಳಗೆ ನೀಡಲಾಗಿದೆ. ಇದರ ಮೂಲಕ ಬೇಕಾದ ಹಾಡುಗಳನ್ನು ಹಾಕುವುದು, ಶಬ್ದ ನಿಯಂತ್ರಣ, ದೂರವಾಣಿ ಕರೆ ಸೌಲಭ್ಯಗಳನ್ನು ಮಾತಿನ ಮೂಲಕವೇ ನಿಯಂತ್ರಿಸಬಹುದು. ವಾಹನದಲ್ಲಿ 346 ಲೀಟರ್ ಲಗ್ಗೇಜ್ ಬೂಟ್ ಸೌಲಭ್ಯವಿದೆ. ಹಿಂದಿನ ಸೀಟ್‌ಗಳನ್ನು ಮಡಚಬಹುದಾದ್ದರಿಂದ ಹೆಚ್ಚುವರಿಯಾಗಿ ಒಟ್ಟು 704 ಲೀಟರ್ ಲಗ್ಗೇಜ್ ಇಟ್ಟುಕೊಳ್ಳಬಹುದು. ಹಿಂದಿನ ಸೀಟ್‌ಗಳನ್ನು 60:40 ಅನುಪಾತದಲ್ಲಿ ಮಡಚಬಹುದಾಗಿದ್ದು, ಪ್ರಯಾಣಿಕರಿಗೂ ತೊಂದರೆ ಆಗದಂತೆ, ಲಗ್ಗೇಜ್ ಇಟ್ಟುಕೊಳ್ಳಬಹುದು. ಕಾರ್‌ನಲ್ಲಿ ಕೀಲೆಸ್ ಎಂಟ್ರಿ ಸೌಲಭ್ಯ ಇದೆ. ಕೀ ಇಲ್ಲದೇ ಕಾರ್ ಅನ್ನು ಸ್ಟಾರ್ಟ್ ಮಾಡಬಹುದಾದ ಅನುಕೂಲ ಚಾಲಕನಿಗೆ ಲಭ್ಯವಾಗುತ್ತದೆ.

ಸುರಕ್ಷೆ, ಅನುಕೂಲ
ಈ ಎಸ್‌ಯುವಿಯಲ್ಲಿ ಅತ್ಯುತ್ತಮ ಸುರಕ್ಷಾ ಸೌಲಭ್ಯ ನೀಡಲಾಗಿದೆ. ಗಡುಸಾದ ದೇಹವಿದ್ದು, ಅಪಘಾತಗಳನ್ನು ತಡೆದುಕೊಳ್ಳುತ್ತದೆ. ಎಲ್ಲ ಪ್ರಯಾಣಿಕರಿಗೆ ಏರ್‌ಬ್ಯಾಗ್ ಸೌಲಭ್ಯ ನೀಡಲಾಗಿದೆ. ಚಾಲಕನಿಗೆ ಅನುಕೂಲ ಆಗುವಂತೆ ಹಿಲ್ ಲಾಂಚ್ ಅಸಿಸ್ಟೆಂಟ್ (ಇಳಿಜಾರು ರಸ್ತೆಗಳಲ್ಲಿ ಕಾರ್ ಹಿಂದಕ್ಕೆ ಹೋಗದಂತೆ ನೋಡಿಕೊಳ್ಳುವ ತಂತ್ರಜ್ಞಾನ), ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ)ಗಳನ್ನು ಟಾಪ್ ಎಂಡ್ ಅವತರಣಿಕೆಗಳಲ್ಲಿ ನೀಡಲಾಗಿದೆ.

(ಲೇಖಕರು ಹಿರಿಯ ಪತ್ರಕರ್ತ. ಆಟೊಮೊಬೈಲ್ ವಿಮರ್ಶೆಗಳನ್ನು ನಿಯತವಾಗಿ ಬರೆಯುತ್ತಾರೆ).
ಕನ್ನಡಕ್ಕೆ: ನೇಸರ ಕಾಡನಕುಪ್ಪೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT