ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹುಜ್ಯಾ

ದುಡಿಮೆಗೆ ಗುರಿ ಇರಲಿ...
Last Updated 28 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಪ್ರತಿಯೊಬ್ಬ ಸಾಧಕರ ಹಿಂದೆ ಗೆಳೆಯರು, ಸಂಬಂಧಿಕರು, ಪೋಷಕರು ಹೀಗೆ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಇನ್ನು ಕೆಲವರಿಗೆ ತಮ್ಮ ಜೀವನದಲ್ಲಿ ನಡೆದ ಅಥವಾ ಕಂಡು ಕೇಳಿದ  ಘಟನಾವಳಿಗಳು, ಓದಿದ ಪುಸ್ತಕಗಳು, ನೋಡಿದ ಸಿನಿಮಾಗಳೇ ಸಾಧನೆಗೆ ಸ್ಫೂರ್ತಿ ನೀಡಿರುತ್ತವೆ! ಇಲ್ಲಿ 22ರ ಹರೆಯದ ಯುವತಿ ಸಹುಜ್ಯಾ, ಹಾಲಿವುಡ್ ಸಿನಿಮಾವೊಂದರಿಂದ  ಪ್ರಭಾವಿತರಾಗಿ ಫ್ಯಾಷನ್ ರೆಂಟಲ್ ಸ್ಟಾರ್ಟ್ಅಪ್ ‘ಲಿಬೆರೆಂಟ್’ ಕಟ್ಟಿದ ಕಥೆ ಇದು.

ಸಹುಜ್ಯಾ ಮೂಲತಃ ಒಡಿಶಾ ರಾಜ್ಯದವರು. ಮೆಟಲಾಜಿಕಲ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಟಾಟಾ ಕಂಪೆನಿಯಿಂದ ಕೆಲಸಕ್ಕೆ ಕರೆ ಬಂದಿತ್ತು. ಆದರೆ ಹೊಸತನ್ನು ಸಾಧಿಸಬೇಕು ಎಂಬ ಉತ್ಕಟ ಆಕಾಂಕ್ಷೆ ಹೊಂದಿದ್ದ ಸಹುಜ್ಯಾ, ಆ ಕೆಲಸವನ್ನು ತಿರಸ್ಕರಿಸಿದರು. ಉಡುಪುಗಳನ್ನು ಬಾಡಿಗೆ ಕೊಟ್ಟು ಯಶಸ್ವಿ ಬದುಕನ್ನು ಕಟ್ಟಿಕೊಂಡಿದ್ದ ಮಹಿಳೆಯೊಬ್ಬರ ನೈಜ ಘಟನೆ ಆಧಾರಿತ ಆ ಹಾಲಿವುಡ್ ಸಿನಿಮಾ ಸಹುಜ್ಯಾ ಮೇಲೆ ತುಂಬಾ ಪ್ರಭಾವ ಬೀರಿತ್ತು. ಅದೇ ಮಾದರಿಯಲ್ಲಿ ಭಾರತದಲ್ಲಿ ಸ್ಟಾರ್ಟ್ಅಪ್‌ ಆರಂಭಿಸುವ ಬಗ್ಗೆ ಚಿಂತನೆ ನಡೆಸಿದರು.

ಚೆನ್ನೈಗೆ ವಲಸೆ ಬಂದು ಆ ಸ್ಟಾರ್ಟ್ಅಪ್ ಪ್ರಾರಂಭ ಮಾಡುವ ಪೂರ್ವಸಿದ್ಧತೆಯಲ್ಲಿ ತೊಡಗಿಕೊಂಡರು. ಕ್ಲೌಡ್‌ಫಂಡಿಂಗ್, ವೆಬ್‌ಸೈಟ್‌ ಮತ್ತು ಆ್ಯಪ್ ವಿನ್ಯಾಸ, ಲಾಂಡ್ರಿ, ಲಾಜಿಸ್ಟಿಕ್ ಹೀಗೆ ಸ್ಟಾರ್ಟ್ಅಪ್‌ಗೆ ಬೇಕಾದ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ವರ್ಷವೊಂದರಲ್ಲಿ ‘ಲಿಬೆರೆಂಟ್’ ಆರಂಭಿಸಿದರು. ಚೆನ್ನೈ, ಹೈದರಾಬಾದ್, ಮುಂಬೈ ಮಹಾನಗರಗಳಲ್ಲಿ ಮಾತ್ರ ಈ ಸ್ಟಾರ್ಟ್‌ಅಪ್‌ ಕಾರ್ಯನಿರ್ವಹಿಸುತ್ತದೆ. ಮಹಿಳೆಯರು ಮತ್ತು ಪುರುಷರ ಎಲ್ಲ ಮಾದರಿಯ  ಉಡುಪುಗಳು ಇಲ್ಲಿ ಲಭ್ಯ. ಮಹಿಳೆಯರಿಗೆ ವಿಶೇಷವಾಗಿ ಆಭರಣಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಲಿಬೆರೆಂಟ್‌ ಕಂಪೆನಿ ಮಾಡುತ್ತಿದೆ. ಉಡುಪುಗಳನ್ನು ಟ್ರಯಲ್ ನೋಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅದಕ್ಕೆ ಯಾವುದೇ ರೀತಿಯ ಶುಲ್ಕ ನೀಡಬೇಕಿಲ್ಲ.

ಸದ್ಯ ಅಂಬೆಗಾಲಿಡುತ್ತಿರುವ ಈ ಕಂಪೆನಿಯನ್ನು ಮುಂದಿನ ಹತ್ತು ವರ್ಷಗಳಲ್ಲಿ ದೇಶದ ಎಲ್ಲ ಮಹಾನಗರಗಳಿಗೂ ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ಸಹುಜ್ಯಾ ಹೇಳುತ್ತಾರೆ. www.liberent.com

ಉತ್ತರಸಂದ ಮಹಿಳೆಯರು

ಸಂಘಟಿತವಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಗುಜರಾತ್ ರಾಜ್ಯದ ಉತ್ತರಸಂದ ಗ್ರಾಮದ ಮಹಿಳೆಯರೇ ಸಾಕ್ಷಿಯಾಗಿದ್ದಾರೆ.
ಕಳೆದೊಂದು ದಶಕದಲ್ಲಿ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಆ ಮಹಿಳೆಯರು, ಇಂದು ವಾರ್ಷಿಕ 70 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ ಉದ್ದಿಮೆಗಳನ್ನು ಆರಂಭಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಹಿಂದಿಯ ರಾಷ್ಟ್ರೀಯ ಸುದ್ದಿವಾಹಿನಿ ಆಜ್‌ತಕ್‌, ಉತ್ತರಸಂದ ಮಹಿಳೆಯರ ಸಾಧನೆಯ ಮಜಲುಗಳನ್ನು ಬಿತ್ತರಿಸಿತ್ತು.

ಉತ್ತರಸಂದ ಎಂಬ ಪುಟ್ಟಹಳ್ಳಿ ಗುಜರಾತ್ ರಾಜಧಾನಿ ಗಾಂಧಿನಗರದಿಂದ 75 ಕಿ.ಮೀ. ದೂರದಲ್ಲಿದೆ. ಇದು ಖೇಡಾ ಎಂಬ ಜಿಲ್ಲೆಗೆ ಸೇರುತ್ತದೆ. ಸುಮಾರು ಹತ್ತು ಸಾವಿರ ಜನರು ಈ ಗ್ರಾಮದಲ್ಲಿ ವಾಸವಾಗಿದ್ದಾರೆ. ಶೇಕಡಾ 90ರಷ್ಟು ಸಾಕ್ಷರತೆ ಹೊಂದಿರುವ ಈ ಗ್ರಾಮ ಗುಜರಾತ್ ರಾಜ್ಯದಲ್ಲೇ ಮಾದರಿ ಗ್ರಾಮ. ಈ ಹಳ್ಳಿಯಲ್ಲಿ ನಿರುದ್ಯೋಗಿಗಳೇ ಇಲ್ಲವಂತೆ!  ಹಾಗೇ ಗುಜರಾತ್‌, ರಾಜಸ್ತಾನ, ಮಧ್ಯಪ್ರದೇಶ ರಾಜ್ಯಗಳಿಂದ ಹಲವಾರು ಮಂದಿ ಕೆಲಸ ಹುಡುಕಿಕೊಂಡು ನಮ್ಮ ಗ್ರಾಮಕ್ಕೆ ವಲಸೆ ಬರುತ್ತಾರೆ ಎಂದು ಸ್ಥಳೀಯ ನಿವಾಸಿ ಮೀನಾ ಕುಮಾರಿ ಹೇಳುತ್ತಾರೆ.

ಈ ಗ್ರಾಮದಲ್ಲಿರುವುದು ಸಂಘಟಿತ ಬೇಕರಿ ತಿನಿಸುಗಳ ಉದ್ದಿಮೆಗಳು. 35ಕ್ಕೂ ಹೆಚ್ಚು ಉದ್ದಿಮೆಗಳಿದ್ದು, ಅವುಗಳ ನೇತಾರರು ಮಹಿಳೆಯರೇ ಎಂಬುದು ವಿಶೇಷ. ಹಬ್ಬಳ, ಮಥಿಯಾ, ಚೊಲಾಪಾಲಿ ಎಂಬ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುವುದು ಇಲ್ಲಿನ ಮಹಿಳೆಯರ ಪ್ರಧಾನ ಉದ್ಯೋಗ. ಹಬ್ಬದ ದಿನಗಳಲ್ಲಿ ಇಲ್ಲಿನ ತಿನಿಸುಗಳಿಗೆ ಎಲ್ಲಿಲ್ಲದ ಬೇಡಿಕೆ. ದೀಪಾವಳಿ ಮತ್ತು ದಸರಾ ಹಬ್ಬಗಳಲ್ಲಿ ಟನ್‌ಗಟ್ಟಲೆ ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ. ಗ್ರಾಮದ ಮಹಿಳೆಯರು ಸಂಘಟಿತರಾಗಿ ಕೆಲಸ ಮಾಡುತ್ತಾರೆ. ಅದರಿಂದ ಬಂದ ಲಾಭವನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ.

ಯುವತಿಯರು ಮತ್ತು ಮಧ್ಯವಯಸ್ಕ ಮಹಿಳೆಯರು ಈ ಉದ್ದಿಮೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಕೆಲಸ ಹುಡುಕಿ ಪಟ್ಟಣಗಳಿಗೆ ವಲಸೆ ಹೋಗುವ ಬದಲು ಸ್ಥಳೀಯವಾಗಿಯೇ ಏನಾದರೂ ಸಾಧಿಸಬಹುದು ಎಂಬುದಕ್ಕೆ ಈ ಗ್ರಾಮದ ಯುವತಿಯರು ಮತ್ತು ಮಹಿಳೆಯರೇ ಸಾಕ್ಷಿಯಾಗಿದ್ದಾರೆ.

ಗರಿಮಾ ವಿಶಾಲ್

ಬಡತನ, ಕಂದಾಚಾರ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವ ಶಕ್ತಿ ಇರುವುದು ಅಕ್ಷರ ಜ್ಞಾನಕ್ಕೆ! ಶಿಕ್ಷಣದಿಂದಲೇ ಬದಲಾವಣೆ ಸಾಧ್ಯ ಎನ್ನುವ ಯುವತಿ ಗರಿಮಾ ವಿಶಾಲ್ ಅವರ ಸಾಧನೆಯ ಕಥೆ ಇದು.

ಗರಿಮಾ ವಿಶಾಲ್ ಮೂಲತಃ ಬಿಹಾರ ರಾಜ್ಯದವರು. ಹುಟ್ಟಿದ್ದು ತೀರಾ ಹಿಂದುಳಿದ ಮುಜ್ಹಾಫರ್ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬಡತನದ ನಡುವೆ ಕಷ್ಟಪಟ್ಟು ಓದಿದರು. ಐಟಿಯಲ್ಲಿ ಪದವಿ ಪಡೆದಿದ್ದ ಗರಿಮಾ ಒಡಿಶಾದ ಭುವನೇಶ್ವರದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ವೃತ್ತಿ ಜೀವನ ಆರಂಭಿಸಿದರು. ತಾನು ಕೆಲಸ ಮಾಡುವ ಕಚೇರಿಯ ಪಕ್ಕದಲ್ಲಿ ಹತ್ತಾರು ಮಕ್ಕಳು ಶಾಲೆಗೆ ಹೋಗದೆ ಆಟವಾಡುತ್ತಿರುವುದನ್ನು ಗರಿಮಾ ಗಮನಿಸಿದ್ದರು.  ಆ ಬಗ್ಗೆ ವಿಚಾರಿಸಿದಾಗ, ಆ ಮಕ್ಕಳ ಪೋಷಕರು ಕೆಲಸಕ್ಕಾಗಿ ಗುಜರಾತಿನಿಂದ ವಲಸೆ ಬಂದವರು, ಅವರಿಗೆ ಒರಿಯಾ ಭಾಷೆ ಬರುತ್ತಿಲ್ಲವಾದ್ದರಿಂದ ಶಾಲೆಗೆ ಹೋಗುತ್ತಿಲ್ಲ ಎಂಬ ವಿಷಯ ತಿಳಿಯಿತು.

ಪೋಷಕರ ಒಪ್ಪಿಗೆ ಮೇರೆಗೆ ಗರಿಮಾ ಸಂಜೆ ವೇಳೆ ಆ ಮಕ್ಕಳಿಗೆ ಪಾಠ ಮಾಡಲು ಮುಂದಾಗುತ್ತಾರೆ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಹೇಳಿಕೊಡುತ್ತಾರೆ! ಹೀಗೆ ಒಂದು ವರ್ಷ ಬೀದಿಮಕ್ಕಳಿಗೆ ಪಾಠ ಮಾಡುತ್ತಾರೆ. ಈ ಹಂತದಲ್ಲಿ ದೇಶದ ಶಿಕ್ಷಣ ಪದ್ಧತಿ ಬದಲಾಗಬೇಕು, ಅಕಾಡೆಮಿಕ್ ಶಿಕ್ಷಣ ವ್ಯವಸ್ಥೆ ತೊಲಗಬೇಕು ಮತ್ತು ಕಲಿತ ವಿದ್ಯೆ ಬದುಕಿಗೆ ದಾರಿಯಾಗುವಂತಿರಬೇಕು ಎಂಬುದನ್ನು ಅರಿಯುತ್ತಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮುಜ್ಹಾಫರ್ ನಗರದಲ್ಲಿ  ‘ದೇಜವು’ ಎಂಬ ಶಾಲೆ ಆರಂಭಿಸುತ್ತಾರೆ.

ಪ್ರಸ್ತುತ ಈ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಕಾಡೆಮಿಕ್ ಪಠ್ಯದ ಜತೆಗೆ ವಿದ್ಯಾರ್ಥಿಗಳ ಗುರಿ ಮತ್ತು ಅಭಿರುಚಿಗೆ ಒತ್ತು ನೀಡುವ ಶಿಕ್ಷಣ ನೀಡಲಾಗುತ್ತಿದೆ. ದೇಶದ ಶೈಕ್ಷಣಿಕ ವ್ಯವಸ್ಥೆ ಪರಿಣಾಮಕಾರಿಯಾಗಿದ್ದರೆ ಬಡತನ ಮತ್ತು ನಿರುದ್ಯೋಗದಂತಹ  ಸಮಸ್ಯೆಗಳು ಇರುವುದಿಲ್ಲ. ಸರ್ಕಾರಗಳು ಈ ಅಂಶವನ್ನು ಅರಿತು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂಬುದು ಗರಿಮಾ ಅವರ ಅಭಿಪ್ರಾಯ.  bit.ly/2hYnRRj

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT