ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಮಾದರಿಗೆ 4ಜಿ ಸ್ಪರ್ಶ

Last Updated 28 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಇಡೀ ಜಗತ್ತನ್ನು ಅಂಗೈನಲ್ಲಿಯೇ ತೋರಿಸುವ ಹಾಗೂ ಅದರೊಂದಿಗೆ ಸಂಪರ್ಕ ಸಾಧಿಸುವ ಮೊಬೈಲ್‌ ಫೋನ್‌ಗಳ ಮೇಳ ಬಾರ್ಸಿಲೋನಾದಲ್ಲಿ ನಡೆಯುತ್ತಿದೆ. ಪೈಪೋಟಿಯುತ ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಕೆಲ ವರ್ಷಗಳಿಂದ ಹಿಂದೆ ಉಳಿದಿದ್ದ ‘ನೋಕಿಯಾ’ ಹೊಸ ಮಾದರಿಯ ಮೊಬೈಲ್‌ಗಳನ್ನು ವಿಶ್ವ ಮೊಬೈಲ್‌ ಸಮ್ಮೇಳನ (ಎಂಡಬ್ಲ್ಯೂಸಿ) 2018ರಲ್ಲಿ ಅನಾವರಣ ಮಾಡಿದ್ದು, ಮತ್ತೆ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿದೆ.

ಬಿಡುಗಡೆಯಾಗಿರುವ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌9 ಮತ್ತು ಎಸ್‌9 ಫ್ಲಸ್‌ ಮಾದರಿಗಳು ಐಫೋನ್‌ ಎಕ್ಸ್‌ಗೆ ಸವಾಲೊಡ್ಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೆಚ್ಚು ಜನಸಂಖ್ಯೆ ಹಾಗೂ ಮೊಬೈಲ್‌ ಮಾರುಕಟ್ಟೆ ವಿಸ್ತರಣೆ ಸಾಧ್ಯತೆ ಹೊಂದಿರುವ ಭಾರತದಂತಹ ರಾಷ್ಟ್ರಗಳನ್ನು ಗಮನದಲ್ಲಿಟ್ಟೇ ನೋಕಿಯಾ ಹೊಸ ಮಾದರಿ ಫೋನ್‌ಗಳನ್ನು ಬಿಡುಗಡೆ ಮಾಡಿದಂತಿದೆ. ಕೀಪ್ಯಾಡ್‌ಗೆ ಸ್ಲೈಡಿಂಗ್‌ ಕವಚ ಹೊಂದಿರುವ ‘ನೋಕಿಯಾ 8110’ ಅನ್ನು 4ಜಿ ವ್ಯವಸ್ಥೆ ಯೊಂದಿಗೆ ಮತ್ತೆ ಪರಿಚಯಿಸಿದೆ. 1996ರಲ್ಲೇ ಈ ಮಾದರಿಯ ಫೋನ್‌ ಬಿಡುಗಡೆಯಾಗಿತ್ತು. ಮೇ ತಿಂಗಳಲ್ಲಿ ಲಭ್ಯವಿರುವ ಈ ಮೊಬೈಲ್‌ ಬೆಲೆ ಅಂದಾಜು ₹6,300(79 ಯೂರೋ).

ಬಾಳೆ ಹಣ್ಣಿನ ವಿನ್ಯಾಸ
ಕೀಪ್ಯಾಡ್‌ಗೆ ಕವಚದಂತಿರುವ ಸ್ಲೈಡರ್‌ ಮೂಲಕವೇ ಕರೆ ಸ್ವೀಕರಿಸುವುದು ಅಥವಾ ರದ್ದುಪಡಿಸುವುದು ಈ ಮೊಬೈಲ್‌ನಲ್ಲಿ ಸಾಧ್ಯ. ಹಳದಿ ಬಣ್ಣದಲ್ಲಿ ಲಭ್ಯವಿರುವ ಈ ಮೊಬೈಲ್‌ ವಿನ್ಯಾಸ ಬಾಳೆ ಹಣ್ಣಿನಂತೆ ಬಾಗಿದೆ. ಮೊಬೈಲ್‌ ಇಟ್ಟಲ್ಲಿಯೇ ಬೇಕಾದಂತೆ ತಿರುಗಿಸಬಹುದು. ಕಪ್ಪು ಬಣ್ಣದಲ್ಲಿಯೂ ಲಭ್ಯವಿರುವ ಮೊಬೈಲ್‌ನಲ್ಲಿ ‘ನೋಕಿಯಾ 3310’ದಲ್ಲಿ ಇರುವಂತೆ ಹಾವಿನ ಆಟ (ಸ್ನೇಕ್‌ ಗೇಮ್‌) ಇದೆ. 4ಜಿ ವ್ಯವಸ್ಥೆ ಬಳಕೆಗೆ ಅನುಕೂಲವಾಗುವಂತೆ ರೂಪಿಸಲಾಗಿದ್ದು, ಗೂಗಲ್‌ ಸರ್ಚ್‌, ಗೂಗಲ್‌ ಅಸಿಸ್ಟಂಟ್‌, ಗೂಗಲ್‌ ಮ್ಯಾಪ್‌, ಫೇಸ್‌ಬುಕ್‌ ಹಾಗೂ ಟ್ವಿಟರ್‌ ಸೇರಿ ಅನೇಕ ಆ್ಯಪ್‌ಗಳನ್ನು ಬಳಸಲು ಸಾಧ್ಯವಿದೆ.

ಇಷ್ಟೆಲ್ಲ ಇದೆ: ಬಾಗಿರುವ 2.4 ಇಂಚು ಪರದೆ, ಪಾಲಿಕಾರ್ಬೊನೇಟ್‌ ಮೇಲ್ಪದರ, ಹಾಟ್‌ಸ್ಪಾಟ್‌ ವ್ಯವಸ್ಥೆ, ಕ್ವಾಲ್‌ಕಾಮ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌–1.1 ಗಿಗಾಹರ್ಟ್ಸ್‌, 512 ಎಂಬಿ ರ್‍ಯಾಮ್‌, 4ಜಿಬಿ ಸಂಗ್ರಹಣ ಸಾಮರ್ಥ್ಯ, 2 ಎಂಪಿ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲಾಷ್‌, KaiOS, 2 ಸಿಮ್‌ ಸ್ಲಾಟ್‌(ಮೈಕ್ರೋ/ನ್ಯಾನೊ) ಹಾಗೂ ಒಮ್ಮೆ ಚಾರ್ಜ್‌ ಮಾಡಿದರೆ 25 ದಿನಗಳ ವರೆಗೂ ಉಳಿಯುವ ಬ್ಯಾಟರಿ(ಸ್ಟ್ಯಾಂಡ್‌ಬೈ) 1500 ಎಂಎಎಚ್‌ ಇದೆ.

ನೋಕಿಯಾದ 5 ಮಾದರಿಗಳು

ಅಂತರರಾಷ್ಟ್ರೀಯ ಮೊಬೈಲ್‌ ಮೇಳದಲ್ಲಿ ನೋಕಿಯಾ 8110 4ಜಿ ಜತೆಗೆ ನೋಕಿಯಾ 8 ಸಿರೊಕೊ (Sirocco), ನೋಕಿಯಾ 7ಪ್ಲಸ್, ನೋಕಿಯಾ 6 ಹಾಗೂ ನೋಕಿಯಾ 1 ಅನಾವರಣಗೊಂಡಿವೆ.

* ‘ನೋಕಿಯಾ 1’ ಆ್ಯಂಡ್ರಾಯ್ಡ್‌ ಒರಿಯೊ(ಗೊ ಎಡಿಷನ್‌) ಸಾಫ್ಟ್‌ವೇರ್‌ ಅಳವಡಿಸಿಕೊಂಡಿದೆ. ಹಗುರವಾದ ಗೂಗಲ್‌ ಆ್ಯಪ್‌ಗಳನ್ನು ಹೊಂದಿರುವ ಈ ಮೊಬೈಲ್‌ನಲ್ಲಿ ಇತರೆ ಮೊಬೈಲ್‌ಗಿಂತ ಶೇ 60 ಡಾಟಾ ಬಳಕೆ ಉಳಿತಾಯವಾಗಲಿದೆ ಹಾಗೂ ಹೆಚ್ಚು ಸಂಗ್ರಹಣ ಸಾಮರ್ಥ್ಯ ಲಭ್ಯವಾಗುತ್ತದೆ. 5 ಎಂಪಿ ಹಿಂಬದಿ ಕ್ಯಾಮೆರಾ ಮತ್ತು ಮುಂದೆ 2 ಎಂಪಿ ಕ್ಯಾಮೆರಾ, 4.5 ಇಂಚು ಪರದೆ, ಕ್ವಾಡ್‌ ಕೋರ್‌ 1.1 ಗಿಗಾ ಹರ್ಟ್ಸ್‌ ಪ್ರೊಸೆಸರ್‌, 1 ಜಿಬಿ ರ್‍ಯಾಮ್‌ ಹಾಗೂ 8 ಜಿ.ಬಿ ಸಂಗ್ರಹಣ ಸಾಮರ್ಥ್ಯ ಹೊಂದಿದೆ. ಎರಡು ಸಿಮ್‌ಗಳಿಗೆ ಅವಕಾಶವಿರುವ 4ಜಿ ಫೋನ್‌ ಇದಾಗಿದೆ. ಇದರ ಬೆಲೆ ಅಂದಾಜು ₹5,500 (85 ಡಾಲರ್‌).

* ಅತ್ಯುತ್ತಮ ಫೋಟೊ ಚಿತ್ರೀಕರಣಕ್ಕೆ ಪೂರಕವಾದ ಲೆನ್ಸ್‌, ಆಯ್ಕೆಗಳು ಹಾಗೂ 5.5 ಇಂಚು 2ಕೆ ಪರದೆ ಹೊಂದಿರುವ ನೋಕಿಯಾ 8ಸಿರೊಕೊ ಅಧಿಕ ಸಾಮರ್ಥ್ಯದ ಮೊಬೈಲ್‌ಗಳ ಸಾಲಿಗೆ ಸೇರಿದೆ. ಆಕ್ಟಾಕೋರ್‌ ಪ್ರೊಸೆಸರ್‌, ವೈರ್‌ಲೆಸ್‌ ಚಾರ್ಜಿಂಗ್‌, ಬ್ಯೂಟೂತ್‌ ಇಯರ್‌ಫೋನ್‌ ಹಾಗೂ 128 ಜಿಬಿ ಸಂಗ್ರಹ ಸಾಮರ್ಥ್ಯವಿರುವ ಇದರ ಅಂದಾಜು ಬೆಲೆ ₹60 ಸಾವಿರ(920 ಡಾಲರ್‌).

* ಸೂಕ್ಷ್ಮ ಸಾಮರ್ಥ್ಯವಿರುವ ಮೈಕ್ರೋಫೋನ್‌, 6 ಇಂಚು ಪರದೆ, ಅಲ್ಯುಮಿನಿಯಂನಿಂದ ರೂಪುಗೊಂಡ ಮೊಬೈಲ್‌ ಭಾಗ, ಉತ್ತಮ ಕ್ಯಾಮೆರಾ ಇರುವ ‘ನೋಕಿಯಾ 7 ಪ್ಲಸ್’ ಬೆಲೆ ಅಂದಾಜು ₹32 ಸಾವಿರ(490 ಡಾಲರ್‌). 16 ಎಂಪಿ ಕ್ಯಾಮೆರಾ ಹೊಂದಿರುವ ‘ನೋಕಿಯಾ 6’ ಬೆಲೆ ಅಂದಾಜು ₹22 ಸಾವಿರ(343 ಡಾಲರ್‌).

ಬಹುನಿರೀಕ್ಷಿತ ಗ್ಯಾಲಕ್ಸಿ ಎಸ್ 9
ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಐಫೋನ್‌ನೊಂದಿಗೆ ಪೈಪೋಟಿಯಲ್ಲಿರುವ ಸ್ಯಾಮ್‌ಸಂಗ್‌ ಬಹುನಿರೀಕ್ಷಿತ ಗ್ಯಾಲಕ್ಸಿ ಎಸ್‌9 ಮತ್ತು ಎಸ್‌9ಪ್ಲಸ್‌ ಬಿಡುಗಡೆಯಾಗಿದೆ. ಐಫೋನ್‌ ಎಕ್ಸ್‌ನಲ್ಲಿರುವ ಅನಿಮೋಜಿ ಆಯ್ಕೆಗೆ ಉತ್ತರವಾಗಿ ಎಆರ್‌ ಇಮೋಜಿ ಪರಿಚಯಿಸಿದೆ. ಸೆರೆ ಹಿಡಿದ ಫೋಟೊ ಈ ಆಯ್ಕೆಯ ಮೂಲಕ ಕಾರ್ಟೂನ್‌ ಪಾತ್ರದಂತೆ ಪರಿವರ್ತನೆಯಾಗುತ್ತದೆ. ವಾಟ್ಸ್‌ಆ್ಯಪ್‌ ಸಂದೇಶದಲ್ಲಿಯೂ ಇದನ್ನೇ ಇಮೋಜಿ ಆಗಿ ಬಳಸಬಹುದು.

ಕಡಿಮೆ ಬೆಳಕಿನಲ್ಲಿ ಉತ್ತಮ ಚಿತ್ರ, ಒಂದೇ ಕ್ಲಿಕ್ಕಿಗೆ 12 ಫೋಟೊಗಳನ್ನು ಸೆರೆಹಿಡಿದು ಒಂದುಗೂಡಿಸಿ ಉತ್ತಮ ಫೋಟೊ, ಪ್ರತಿ ಸೆಕೆಂಡ್‌ಗೆ 960 ಫ್ರೇಮ್ಸ್‌ ಸ್ಲೋ–ಮೋಷನ್‌ ವಿಡಿಯೊ, ಬಿಕ್ಸ್‌ವೈ ಧ್ವನಿ ಸಹಾಯಕ, 4ಕೆ ವಿಡಿಯೊ, ಡಾಲ್ಬಿ ಆಟಮ್ಸ್‌ ಸೌಂಡ್, ವೈರ್‌ಲೆಸ್‌ ಚಾರ್ಜರ್‌... ಇನ್ನೂ ಹಲವು ವಿಶೇಷಗಳನ್ನು ಒಳಗೊಂಡಿದೆ.
ಕಣ್ಣು, ಮುಖ ಹಾಗೂ ಬೆರಳಿನ ಗುರುತಿನಿಂದ ಮೊಬೈಲ್‌ ಸುರಕ್ಷತಾ ಲಾಕ್‌ ಸೃಷ್ಟಿಸಬಹುದು.

ಎಸ್‌9– 5.8 ಇಂಚು ಪರದೆ, 12ಎಂಪಿ(ಹಿಂಬದಿ) ಮತ್ತು 8 ಎಂಪಿ ಕ್ಯಾಮೆರಾ, 4 ಜಿಬಿ ರ್‍ಯಾಮ್‌, 64 ಜಿಬಿ ಫೋನ್‌ ಮೆಮೊರಿ(400 ಜಿಬಿ ವರೆಗೂ ಕಾರ್ಡ್‌ ಬಳಕೆ), 3000ಎಂಎಎಚ್‌ ಬ್ಯಾಟರಿ, 163 ಗ್ರಾಂ ತೂಕ. ಬೆಲೆ ಅಂದಾಜು: ₹47 ಸಾವಿರ(720 ಡಾಲರ್‌)

ಎಸ್‌9 ಪ್ಲಸ್‌– 6.2 ಇಂಚು ಪರದೆ, 12ಎಂಪಿ(ಹಿಂಬದಿ) ಮತ್ತು 8 ಎಂಪಿ ಕ್ಯಾಮೆರಾ, 6 ಜಿಬಿ ರ್‍ಯಾಮ್, 128 ಜಿಬಿ ಫೋನ್‌ ಮೆಮೊರಿ(400 ಜಿಬಿ ವರೆಗೂ ಕಾರ್ಡ್‌ ಬಳಕೆ), 3500 ಎಂಎಎಚ್‌ ಬ್ಯಾಟರಿ, 189 ಗ್ರಾಂ ತೂಕ. ಬೆಲೆ ಅಂದಾಜು: ₹53 ಸಾವಿರ(820 ಡಾಲರ್‌)

ಮೊಬೈಲ್‌ಗಳಿಗೆ 5ಜಿ ಚಿಪ್‌ 
ಮೊಬೈಲ್‌ನಲ್ಲಿ ಪ್ರತಿ ಸೆಕೆಂಡ್‌ಗೆ 2.3 ಜಿಬಿ ವೇಗದಲ್ಲಿ ಮಾಹಿತಿ ಡೌನ್‌ಲೋಡ್‌ ಮಾಡಿಕೊಳ್ಳಲು 5ಜಿ ನೆಟ್‌ವರ್ಕ್ ಬಳಕೆಯಿಂದ ಸಾಧ್ಯವಾಗಲಿದೆ. ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆಗೆ ‍ಪೂರಕವಾದ ‘5ಜಿ01 ಚಿಪ್‌’ ಅನ್ನು ಹುವೈ ಸಂಸ್ಥೆ ಸಿದ್ಧಪಡಿಸಿದೆ. ಮೊಬೈಲ್‌ ಹಾಗೂ ಸಂಪರ್ಕ ಸಾಧನಗಳಲ್ಲಿ 5ಜಿಗೆ ಅಗತ್ಯವಿರುವ ವ್ಯವಸ್ಥೆ ಕಲ್ಪಿಸುವುದಾಗಿ ಸಂಸ್ಥೆ ಘೋಷಿಸಿಕೊಂಡಿದೆ. 2020ರ ವೇಳೆಗೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ 5ಜಿ ಸಂಪರ್ಕ ಪೂರೈಕೆ ಪ್ರಾರಂಭವಾಗಲಿದೆ. ಇಂಟೆಲ್‌, ಕ್ವಾಲ್‌ಕಾಮ್‌ ಹಾಗೂ ಹುವೈ ನಡುವೆ 5ಜಿ ಚಿಪ್‌ ತಯಾರಿಕೆಯಲ್ಲಿ ಪೈಪೋಟಿ ಸೃಷ್ಟಿಯಾಗಿದೆ.

ಕೃತಕ ಬುದ್ಧಿಮತ್ತೆ(ಎಐ) ಒಳಗೊಂಡ ಸ್ಮಾರ್ಟ್‌ಫೋನ್‌ ಹಾಗೂ ಸ್ಪೀಕರ್‌ ಅಭಿವೃದ್ಧಿಗೆ ಜಿಯೋಮಿ ಮತ್ತು ಮೈಕ್ರೋಸಾಫ್ಟ್‌ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಚೀನಾದ ಶಿಯೋಮಿ ಎಐ ಸ್ಮಾರ್ಟ್‌ ಉತ್ಪನ್ನಗಳ ತಯಾರಿಕೆಗೆ ಮೈಕ್ರೋಸಾಫ್ಟ್‌ನ ಅಝ್ಯುರ್‌ ವ್ಯವಸ್ಥೆ ಬಳಸಿಕೊಳ್ಳಲಿದೆ. ಕ್ಯಾಮೆರಾ ಆಯ್ಕೆಯಲ್ಲಿ ಎಐ ಬಳಕೆಯಿಂದ ವಸ್ತುಗಳನ್ನು ಗುರುತಿಸಿ ಫೋಟೊ ಚಿತ್ರಿಸುವ ವ್ಯವಸ್ಥೆಯನ್ನು ಎಲ್‌ಜಿಯ ‘ವಿ30ಎಸ್‌ ಥಿಂಕ್‌ಕ್ಯೂ’ ಹೊಂದಿದೆ. ಹೀಗೆ ಸೋನಿ, ಗೂಗಲ್‌ ಸೇರಿ ಇನ್ನೂ ಅನೇಕ ಸಂಸ್ಥೆಗಳ ಅನಾವರಣಗೊಳ್ಳುತ್ತಿರುವ ಉತ್ಪನ್ನಗಳು ಬಹಳಷ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT