ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಮ್ಮೆಂಬೂರಿ’ನ ತುಂಬಿದ ಕೊಡಗಳು

‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌ನ’ ತುಮಕೂರು ವಿಭಾಗಮಟ್ಟದ ಸ್ಪರ್ಧೆ
Last Updated 24 ಜನವರಿ 2019, 14:29 IST
ಅಕ್ಷರ ಗಾತ್ರ

ಬೆಂಗಳೂರು: ತುಂಬೆ ಹೂವಿನ ಗಿಡಗಳಿದ್ದ ತುಮ್ಮೆಂಬೂರು, ತಮಟೆ ವಾದ್ಯದೊಂದಿಗೆ ಗುರುತಿಸಿಕೊಂಡ ಕರ್ನಾಟಕದ ಪಟ್ಟಣ ಯಾವುದು?

– ಅದು ತುಮಕೂರು...

ಬಹುತೇಕ ಮಕ್ಕಳಿಗೆ ಈ ಪ್ರಶ್ನೆ ತಮ್ಮ ಊರಿಗೇ ಸಂಬಂಧಿಸಿದ್ದು ಅನಿಸಿದರೂ ಯಾವ ಊರು ಎಂದು ಖಚಿತವಾಗಿ ಹೇಳಲು ಹಿಂದೇಟು ಹಾಕಿದರು. ಹಲವರು ಒಂದು ವಿಶ್ವಾಸದಿಂದಲೇ ಉತ್ತರಿಸಿದರು. ಹೀಗೆ ಹಲವು ಪ್ರಶ್ನೆಗಳಿಗೆ ತುಮಕೂರಿನ ‘ಜ್ಞಾನದ ಕೊಡ’ಗಳಿಂದ ಉತ್ತರಗಳು ಧಾರೆಯಾಗಿ ಹರಿದವು.

ಇದು ಪ್ರಜಾವಾಣಿ ವತಿಯಿಂದ ದೀಕ್ಷಾ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್‌ ಸಹ ಯೋಗದಲ್ಲಿ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌ನ’ ತುಮಕೂರು ವಿಭಾಗಮಟ್ಟದ ಸ್ಪರ್ಧೆಯ ಪ್ರಾಥಮಿಕ ಸುತ್ತಿನ ನೋಟ.

[object Object]
ಕ್ವಿಜ್ ಮಾಸ್ಟರ್ ಪ್ರಣವ್‌ ಜೆ. ಪ್ರಶ್ನೆಗಳ ನಿರೀಕ್ಷೆಯಲ್ಲಿ ಮಕ್ಕಳು

ಗೂಗಲ್‌ ನಕಾಶೆಯಲ್ಲಿ ಕಾಣುವ ಪಾವಗಡದ ಸೋಲಾರ್‌ಪಾರ್ಕ್‌, ಗುಬ್ಬಿ ವೀರಣ್ಣ ಅವರ ಪತ್ನಿ ಸುಂದರಮ್ಮ ನಾಟಕದ ವೇದಿಕೆಯಲ್ಲೇ ನಿಧನರಾಗಿದ್ದು ಇತ್ಯಾದಿ ವಿಷಯಗಳು ತುಮಕೂರಿಗೇ ಸಂಬಂಧಪಟ್ಟವುಗಳು. ಇವೂ ಪ್ರಶ್ನೆಗಳಾಗುತ್ತವೆ ಎಂದು ನಾವು ಊಹಿಸಿರಲಿಲ್ಲ ಎಂದರು ವಿದ್ಯಾರ್ಥಿಗಳು. ಇರಲಿ ಬಿಡಿ, ಇದನ್ನು ತಿಳಿದುಕೊಂಡಂತಾಯಿತು ಎಂದು ಖುಷಿಪಟ್ಟರು.

ಕರ್ನಾಟಕದ ಚಿರಾಪುಂಜಿ ಖ್ಯಾತಿಯ ಆಗುಂಬೆ, ಬಜಾಜ್‌ನ ವಿ 15 ಬೈಕ್‌ ಐಎನ್‌ಎಸ್‌ ವಿಕ್ರಾಂತ್‌ ಯುದ್ಧ ಹಡಗಿನ ಲೋಹದಿಂದ ತಯಾರಾದದ್ದು, ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟನ್‌ನ ಹಿಂದಿನ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಜಲಿಯನ್‌ ವಾಲಾಭಾಗ್‌ನಲ್ಲಿ ಕ್ಷಮೆ ಕೇಳಿದ ಘಟನೆ, ಚೆನ್ನೈನಲ್ಲಿ ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರಿಗೆ ಸೇರಿದ ವಸ್ತುಗಳು, ಗೋಕರ್ಣ ಹೆಸರು ಬಂದದ್ದು ಇತ್ಯಾದಿ ವಿಷಯಗಳು ದೃಶ್ಯರೂಪದಲ್ಲಿ ತೆರೆಯಮೇಲೆ ಮೂಡಿಬಂದವು.

[object Object]
ಏನು ಉತ್ತರವಿರಬಹುದು ದೇವರೇ...

ಕೇವಲ ಮಕ್ಕಳಿಗೆ ಪ್ರಶ್ನಿಸುವುದಷ್ಟೇ ಅಲ್ಲ, ಹಲವು ಹೊಸ ವಿಷಯಗಳನ್ನು ಅವರಿಗೆ ತಲುಪಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

ಮೊದಲ ಸುತ್ತಿನ ಉತ್ತರಗಳು ಹಾಳೆಯ ಮೇಲೆ ಮೂಡಿದವು. ಇದರಲ್ಲಿ ಆಯ್ಕೆಯಾದ ಆರು ತಂಡಗಳು ಹೊಸ ಸವಾಲನ್ನು ಎದುರಿಸಲು ಸಜ್ಜಾದವು.

ಆರು ತಂಡಗಳಿಗೆ ಮೊದಲು ಸರಣಿ ರೂಪದಲ್ಲಿ ಪ್ರಶ್ನಿಸಲಾಯಿತು. ಎರಡನೇ ಸುತ್ತಿನಲ್ಲಿ ಉತ್ತರ ಗೊತ್ತಿದ್ದವರು ಬಝರ್‌ ಒತ್ತಿ ಪ್ರತಿಕ್ರಿಯಿಸಬೇಕಿತ್ತು. ಕೆಲವು ಕಠಿಣ ಸವಾಲುಗಳನ್ನು ಪ್ರೇಕ್ಷಕ ವಿದ್ಯಾರ್ಥಿಗಳು ಬಗೆಹರಿಸಿದರು. ಹಾಗೆ ಸರಿ ಉತ್ತರ ಕೊಟ್ಟವರಿಗೆ ಚಾಕಲೇಟ್‌ ಬಹುಮಾನವೂ ಸಿಕ್ಕಿತು.

[object Object]
ಸ್ಪರ್ಧಿಗಳ ಪ್ರತಿಕ್ರಿಯೆಗಳು

ಈ ಸುತ್ತಿನಲ್ಲಿ ಕಲೆ, ವಿಜ್ಞಾನ, ಇತಿಹಾಸ, ಸಿನಿಮಾ, ಕ್ರೀಡಾ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳು ಮಿಳಿತವಾಗಿದ್ದವು. ಜ್ಞಾನಕ್ಕೆ ಆಗಸವೇ ಮಿತಿ ಎಂಬುದು ಮುಂದಿನ ಸುತ್ತಿನ ಸವಾಲುಗಳಲ್ಲಿ ವ್ಯಕ್ತವಾಯಿತು.

ಅಲ್ಪೋನ್ಸೋ ಡಿ ಅಲ್ಪುಕರ್ಕ್‌ನಿಂದಾಗಿ ಮಾವಿನ ತಳಿಗೆ ಅಲ್ಪನ್ಸೋ ಎಂಬ ಹೆಸರು ಬಂದದ್ದು, ಮೂಕಿ ಚಿತ್ರಗಳ ಕಾಲದಲ್ಲಿ ಸಿನಿಮಾ ಮಂದಿರದ ಒಳಗೆ ಪಾಪ್‌ಕಾರ್ನ್‌ ಒಯ್ಯುವುದನ್ನು ನಿಷೇಧಿಸಿದ್ದು, ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಅವರ ಧ್ವನಿಯನ್ನು ಕೃತಕವಾಗಿ ಸೃಷ್ಟಿಸಿದ್ದು, ಪೋಪ್‌ ಅವರ ವಿಶೇಷ ವಾಹನ ಕುರಿತ ಮಾಹಿತಿಯೂ ತೆರೆಯಲ್ಲಿ ಕಾಣಿಸಿದವು.

[object Object]
ಸ್ಪರ್ಧಿಗಳ ವಿವಿಧ ಪ್ರತಿಕ್ರಿಯೆಗಳು

ಸಾಂತಾ ಕ್ಲಾಸ್‌ ಬಣ್ಣ ಬದಲಾಯಿಸಿದ್ದು: ಹಸಿರು ಅಥವಾ ನೀಲಿ ಉಡುಗೆ ಧರಿಸಿದ್ದ ಬಿಳಿ ಗಡ್ಡಧಾರಿ ಸಾಂತಾಕ್ಲಾಸ್‌ನ ಉಡುಪಿನ ಬಣ್ಣ ಬದಲಾದದ್ದು 1931ರ ಬಳಿಕ!. ಹಡ್ಡನ್‌ ಸಂಡ್‌ಬಾಮ್‌ ಎಂಬ ಕಲಾವಿದ ಕೋಕಾಕೋಲಾ ಕಂಪನಿಯ ಜಾಹೀರಾತಿಗಾಗಿ ಹೊಸ ವಿನ್ಯಾಸದ ಸಾಂತಾಕ್ಲಾಸನ್ನು ಸಿದ್ಧ‍ಪಡಿಸಿದ್ದ. ಈ ಅಪರೂಪದ ಪ್ರಶ್ನೆಗೂ ವಿದ್ಯಾರ್ಥಿಗಳು ವಿವರವಾದ ಉತ್ತರ ನೀಡಿದರು.

ಕಠಿಣ ಸವಾಲು ಒಡ್ಡಿದ್ದು ಕನೆಕ್ಟಿಂಗ್‌ ರೌಂಡ್‌. ಪಟಾಕಿ, ಮಳೆ, ಗಾಳಿಪಟದ ಚಿತ್ರಗಳನ್ನಷ್ಟೇ ತೋರಿಸಿ ನಟ ಗಣೇಶ್‌ ಅವರ ಚಿತ್ರಗಳು ಎಂದು ಸೂಚ್ಯವಾಗಿ ತೋರಿಸಲಾಯಿತು. ಯಾರಿಂದಲೂ ಸಮರ್ಪಕ ಉತ್ತರ ಬರಲಿಲ್ಲ. ಹಾಗಾಗಿ ಅಂಕಗಳೂ ಕಡಿತಗೊಳ್ಳಲಿಲ್ಲ.

[object Object]
‘ಪ್ರಜಾವಾಣಿ ಕ್ವಿಜ್’ ಪ್ರೇಕ್ಷಕ ವಿದ್ಯಾರ್ಥಿಗಳ ಹುಮ್ಮಸ್ಸು

ಒರಿಸ್ಸಾವನ್ನು ಬಿಂಬಿಸುವ ಕೊನಾರ್ಕ್‌, ಬಿಜುಪಟ್ನಾಯಕ್‌, ಕೊನಾರ್ಕ್‌ ದೇವಸ್ಥಾನ, ಜನಪದ ನೃತ್ಯದ ಚಿತ್ರ ತೋರಿಸಲಾಯಿತು.

ಮೊದಲ ಸುತ್ತು ಮುಗಿದಾಗ ವಿದ್ಯಾರ್ಥಿಗಳ ತವಕ ಹೆಚ್ಚಾಗುತ್ತಿತ್ತು. ಈ ಸುತ್ತಿನಲ್ಲಿ ಆಯ್ಕೆಯಾದವರನ್ನು ಮನಸಾರೆ ಅಭಿನಂದಿಸಿದರು. ಸ್ಪರ್ಧೆಯ ವೇಳೆ ಹುರಿದುಂಬಿಸಿದರು.

[object Object]
‘ಪ್ರಜಾವಾಣಿ ಕ್ವಿಜ್’ ತುಮಕೂರು ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಮಧುಗಿರಿಯ ಜುಪೀಟರ್‌ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳಾದ ವಿಶಾಲ್‌ ಪಾಟೀಲ್‌ ಹಾಗೂ ಚೇತನ್‌ ಎಂ.
[object Object]
ತುಮಕೂರು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಬದರಿಕಾಶ್ರಮ ವಿದ್ಯಾಶಾಲಾ ವಿದ್ಯಾರ್ಥಿಗಳಾದ ದರ್ಶನ್‌ ಎಸ್‌. ಹಾಗೂ ಪ್ರೀತಂ ಎಸ್‌. ಪ್ರಕಾಶ್‌ ಅವರಿಗೆ ನಟಿ ಹರ್ಷಿಕಾ ಪೂಣಚ್ಚ ಪ್ರಶಸ್ತಿ ವಿತರಿಸಿದರು. ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ್ ಹಾಗೂ ದೀಕ್ಷಾ ಸಂಸ್ಥೆಯ ನಿರ್ದೇಶಕರಾದ ಶ್ರೀಧರ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT