ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿ ಕ್ಯಾವನಾಗ್‌ಗೆ ಮೂರು ಪ್ರಶ್ನೆಗಳು

ಲೋಕಕಾರಣ
ಅಕ್ಷರ ಗಾತ್ರ

1) ಸುಳ್ಳು ಸಣ್ಣದಾದರೂ ಸುಳ್ಳೇ ಅಲ್ಲವೇ?

ನ್ಯಾಯಮೂರ್ತಿ ಕ್ಯಾವನಾಗ್‌, 1982ರಲ್ಲಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಆದರೆ, ಕಳೆದ ವಾರ ನೀವು
ಪ್ರಾಮಾಣಿಕತೆಯನ್ನು ಪ್ರದರ್ಶಿಸಲಿಲ್ಲ ಎಂದು ನನಗೆ ಅನಿಸಿದೆ. ಇದು ನನ್ನ ಮನಸ್ಸನ್ನು ಕಲಕಿದೆ. ಪ್ರೌಢಶಾಲೆಯ ವಾರ್ಷಿಕ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ‘have you boofed’ ಎಂಬ ಪ್ರಶ್ನೆಯು ಹೂಸು ಬಿಡುವುದಕ್ಕೆ ಸಂಬಂಧಿಸಿದ್ದು, ‘ಡೆವಿಲ್ಸ್‌ ಟ್ರಯಾಂಗಲ್‌’ ಎಂಬುದು ಮದ್ಯಸೇವನೆಯ ಒಂದು ಆಟ, ‘ರಿನೇಟ್ ಆಲಮ್ನಿಯಸ್’ ಎನ್ನುವ ಉಲ್ಲೇಖ ರಿನೇಟ್‌ ಎನ್ನುವ ವ್ಯಕ್ತಿಯ ಸ್ನೇಹಿತರ ಹೆಸರು, ಅಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಪ್ರಸ್ತಾಪ ಇಲ್ಲ, 18 ವರ್ಷ ವಯಸ್ಸಾದವರು ಮದ್ಯ ಸೇವನೆ ಮಾಡಬಹುದಿತ್ತು ಎಂದು ನೀವು ಅಮೆರಿಕದ ಸೆನೆಟ್‌ನ ನ್ಯಾಯಾಂಗ ಸಮಿತಿಯ ಎದುರು ಪ್ರಮಾಣ ಮಾಡಿ ಹೇಳಿದಿರಿ.

ಇವೆಲ್ಲ ನಿಜವೇ? ಜೇಮ್ಸ್‌ ಕೊಮಿ ಅವರು ಟ್ವೀಟ್‌ ಮಾಡಿರುವಂತೆ- ‘ವಾರ್ಷಿಕ ಪುಸ್ತಕದ ಕುರಿತು ಹೇಳುವ ಸಣ್ಣ ಸಣ್ಣ ಸುಳ್ಳುಗಳು ಕೂಡ ಮಹತ್ವ ಪಡೆಯುತ್ತವೆ’. ನೀವು ಹದಿಹರೆಯದಲ್ಲಿ ಮದ್ಯಪಾನ ಮಾಡಿದ್ದಿರಿ ಎಂಬ ಆರೋಪವನ್ನು ಯಾವುದೇ ವಿವೇಕಿ ನಿಮ್ಮ ವಿರುದ್ಧ ಮಾಡುವುದಿಲ್ಲ. ಆದರೆ, ನೀವು ಸೆನೆಟ್‌ ಸದಸ್ಯರನ್ನು ಮತ್ತು ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆದಾಗ ನಮಗೆ ಕಳವಳ ಉಂಟಾಗುತ್ತದೆ. ನೀವು 1983ರಲ್ಲಿ ಬರೆದಿರುವಂತೆ, ‘ನಾವು ಹೇಸಿಕೆ ಹುಟ್ಟಿಸುವ ಕುಡುಕರಾಗಿದ್ದೆವು’ ಎಂಬ ಸ್ಪಷ್ಟ ಮಾತುಗಳನ್ನು ನಿರಾಕರಿಸಲು ಯತ್ನಿಸಿದಾಗ ಕಳವಳ ಉಂಟಾಗುತ್ತದೆ.

ಚಿಕ್ಕವರಾಗಿದ್ದಾಗ ಮಾಡಿದ್ದ ತಮಾಷೆಗಳ ಬಗ್ಗೆ ವಿವರಣೆ ನೀಡಬೇಕು ಎಂದು ಒತ್ತಾಯಿಸಿದಾಗ ಮುಜುಗರ ಆಗುತ್ತದೆ ಎಂಬುದು ನನಗೆ ಗೊತ್ತು. ಆದರೆ, ‘boofing’ (ಬೂಫಿಂಗ್‌) ಅಂದರೆ ಗುದಸಂಭೋಗ ಅಥವಾ ಗುದದ್ವಾರದ ಮೂಲಕ ಮದ್ಯ ಅಥವಾ ಮಾದಕ ವಸ್ತುಗಳನ್ನು ತುರುಕುವುದು, ‘ಡೆವಿಲ್ಸ್‌ ಟ್ರಯಾಂಗಲ್‌’ ಎಂಬುದು ಇಬ್ಬರು ಪುರುಷರು ಮತ್ತು ಒಬ್ಬಳು ಮಹಿಳೆಯ ನಡುವಣ ಲೈಂಗಿಕ ಕ್ರಿಯೆ, ಮೇರಿಲ್ಯಾಂಡ್‌ನಲ್ಲಿ ಮದ್ಯ ಸೇವಸಿಲು 21 ವರ್ಷ ವಯಸ್ಸಾಗಿರಬೇಕು ಎಂಬ ನಿಯಮ ನೀವು 17ನೆಯ ವಯಸ್ಸಿನಲ್ಲಿ ಇದ್ದಾಗಲೇ ತಂದಾಗಿತ್ತು ಎಂಬುದೆಲ್ಲ ಇಂಟರ್ನೆಟ್‌ನಲ್ಲಿ ತುಸು ಹುಡುಕಾಡಿದರೆ ಗೊತ್ತಾಗುತ್ತವೆ.

ಇವನ್ನೆಲ್ಲ ನಾವು ಸುಳ್ಳು ಎನ್ನದೆ ಇನ್ನೇನೆಂದು ಕರೆಯಬೇಕು? ಬುಷ್ ಅವಧಿಯಲ್ಲಿ ನೀವು ಶ್ವೇತಭವನದಲ್ಲಿ ಇದ್ದಾಗ, ನ್ಯಾಯಾಂಗಕ್ಕೆ ಸಂಬಂಧಿಸಿದ ನಾಮನಿರ್ದೇಶನಗಳಲ್ಲಿ ನೀವು ಭಾಗಿಯಾಗುತ್ತಿದ್ದ ಅವಧಿಯಲ್ಲಿ ದಾಖಲೆಗಳು ಕಳುವಾಗಿದ್ದುದರ ವಿಚಾರವಾಗಿ ಹೊರಬರುತ್ತಿರುವ, ದಿಕ್ಕುತಪ್ಪಿಸುವಂತಹ ಸಾಕ್ಷ್ಯಗಳ ಜೊತೆಯಲ್ಲಿ ಈ ವಿಚಾರಗಳೂ ಹೊರಗೆ ಬರುತ್ತಿವೆ.

ಬಿಲ್‌ ಕ್ಲಿಂಟನ್ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಸಂದರ್ಭದಲ್ಲಿ ರಿಪಬ್ಲಿಕನ್ನರು ಹೇಳಿದ್ದಂತೆ, ‘ಪ್ರಮಾಣ ಮಾಡಿ ಸುಳ್ಳು ಹೇಳುವುದು– ಅದು ಲೈಂಗಿಕತೆ ಅಥವಾ ಅಶ್ಲೀಲ ವಿಚಾರದ ಬಗ್ಗೆ ಆಗಿದ್ದರೂ– ಸುಳ್ಳು ಸಾಕ್ಷ್ಯಕ್ಕೆ ಸಮ’. ಹಾಗಾಗಿ, ನೀವು 36 ವರ್ಷಗಳ ಹಿಂದೆ ಯಾವುದಾದರೂ ಕಾನೂನನ್ನು ಉಲ್ಲಂಘಿಸಿದ್ದಿರೋ ಇಲ್ಲವೋ, ಆದರೆ ಕಳೆದ ವಾರ ನೀವು ಕಾನೂನು ಉಲ್ಲಂಘಿಸಿದಿರಿ ಎಂದು ನನಗೆ ಅನಿಸುತ್ತಿದೆ.

2) ನಿಮ್ಮಷ್ಟು ಅದೃಷ್ಟವಂತರಲ್ಲದವರ ಬಗ್ಗೆ ನಿಮಗೆ ಅನುಕಂಪ ಇದೆಯೇ?

ನೀವು ಜಾಣ ವ್ಯಕ್ತಿ, ಕಷ್ಟಪಟ್ಟು ಕೆಲಸ ಮಾಡುವವರು, ಅದ್ವಿತೀಯ ಸಾರ್ವಜನಿಕ ಸೇವಕ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅಧ್ಯಕ್ಷೀಯ ಚುನಾವಣೆಗಳು ತಮ್ಮದೇ ಆದಪರಿಣಾಮ ಹೊಂದಿರುತ್ತವೆ. ಅನುಕಂಪ ಇಲ್ಲದಿರುವಿಕೆಯು ಅನರ್ಹತೆಗೆ ಕಾರಣವಾಗಬೇಕೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ನನ್ನಲ್ಲಿ ಇದು ಕಳವಳ ಮೂಡಿಸಲು ಕೆಲವು ಕಾರಣಗಳಿವೆ.

ಸುಪ್ರೀಂ ಕೋರ್ಟ್‌ ಅತ್ಯಂತಕೆಟ್ಟ ತಪ್ಪುಗಳನ್ನು ಮಾಡಿದಾಗ, ಸಮಸ್ಯೆಯ ಮೂಲ ಸಾಮಾನ್ಯವಾಗಿ ಇದ್ದಿದ್ದು ಬುದ್ಧಿವಂತಿಕೆಯ ಕೊರತೆಯಿಂದ ಅಲ್ಲ. ಬದಲಿಗೆ, ಅನುಕಂಪ ಇಲ್ಲದಿದ್ದ ಕಾರಣದಿಂದಾಗಿ. ಡ್ರೆಡ್ ಸ್ಕಾಟ್‌ ಮತ್ತು ಪ್ಲೆಸ್ಸಿ ಪ್ರಕರಣಗಳಲ್ಲಿ ಅಮೆರಿಕದಲ್ಲಿ ಕೃಷ್ಣವರ್ಣೀಯನ ಸ್ಥಿತಿ ಏನು ಎಂಬುದನ್ನು ನ್ಯಾಯಮೂರ್ತಿಗಳು ಅರ್ಥ ಮಾಡಿಕೊಳ್ಳಲಿಲ್ಲ, ಅಮೆರಿಕದಲ್ಲಿ ರಾಜಕೀಯ ಕೈದಿಯಾಗಿರುವ ಜಪಾನಿ– ಅಮೆರಿಕನ್ನನ ಸ್ಥಿತಿ ಏನು ಎಂಬುದನ್ನು ಕೊರೆಮತ್ಸು ಪ್ರಕರಣದಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ, ಸಮಾಜದ ಅಂಚಿಗೆ ತಳ್ಳಲ್ಪಟ್ಟ ಮಹಿಳೆಯ ಸ್ಥಿತಿ ಏನು ಎಂಬುದನ್ನು ಬಕ್ ಮತ್ತು ಬೆಲ್‌ ನಡುವಣ ಪ್ರಕರಣದಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ, ಕಾರ್ಮಿಕ ಆಗಿರುವುದು ಅಂದರೆ ಏನೆಂಬುದನ್ನು ಲಾಕ್ನರ್ ಪ್ರಕರಣದಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ, ಸಲಿಂಗಿಯ ಸ್ಥಿತಿ ಏನು ಎಂಬುದನ್ನು ಬೊವರ್ಸ್‌ ಮತ್ತು ಹಾರ್ಡ್‌
ವಿಕ್‌ ನಡುವಣ ಪ್ರಕರಣದಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ.

ನ್ಯಾಯಮೂರ್ತಿ ಕ್ಯಾವನಾಗ್‌ ಅವರೇ, ಮಹಿಳೆಯೊಬ್ಬಳಿಗೆ, ಆಕೆ ಹೆಣ್ಣು ಎಂಬ ಕಾರಣಕ್ಕಾಗಿ ವಕೀಲ ವೃತ್ತಿಯಲ್ಲಿ ತೊಡಗುವುದನ್ನು ನಿರಾಕರಿಸುವ ಇಲಿನಾಯ್ಸ್‌ ರಾಜ್ಯದ ತೀರ್ಮಾನವನ್ನು ಪುರಸ್ಕರಿಸಿದ, 1873ರ ಬ್ರಾಡ್‌ವೆಲ್‌ ಮತ್ತು ಇಲಿನಾಯ್ಸ್‌ ನಡುವಣ ಪ್ರಕರಣದ ವೇಳೆ ನ್ಯಾಯಾಲಯದಲ್ಲಿ ಇದ್ದಿದ್ದರೆ, ನಿಮ್ಮ ಅಭಿಪ್ರಾಯಕ್ಕೆ ಕಾರಣಗಳು ಇವೆ ಎಂಬುದರಲ್ಲಿ ಅನುಮಾನ ಇರುತ್ತಿರಲಿಲ್ಲ. ಆದರೆ, ಆ ಅಭಿಪ್ರಾಯ ನ್ಯಾಯಸಮ್ಮತ ಆಗಿರುತ್ತಿತ್ತೇ?

3) ನಿಮ್ಮ ಕೋಪ ಹಾಗೂ ಪಕ್ಷಪಾತಿತನವನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು?

ಸೆನೆಟ್‌ನ ಡೆಮಾಕ್ರಟಿಕ್‌ ಸದಸ್ಯರಿಂದ ನೀವು ದಾಳಿಗೆ ಒಳಗಾದಂತೆ ನಿಮಗೆ ಅನಿಸಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಕ್ರಿಸ್ಟೀನ್‌ ಬ್ಲೇಸಿ ಫೋರ್ಡ್ ಅವರು ಮಾಡಿರುವ ಆರೋಪಗಳ ಬಗ್ಗೆ ಡೆಮಾಕ್ರಟಿಕ್ ಪಕ್ಷದವರು ಮೊದಲೇ ಮಾತನಾಡಬೇಕಿತ್ತು ಎಂದು ನೀವು ಹೇಳಿರುವುದರಲ್ಲಿ ಹುರುಳಿದೆ.

ಆದರೆ, ನಿಮ್ಮನ್ನು ಪ್ರಶ್ನೆ ಮಾಡಿದ ಡೆಮಾಕ್ರಟಿಕ್ ಸದಸ್ಯರ ಮೇಲೆ ನೀವು ತೋರಿಸಿದ ಕೋಪವು, ನಿಮ್ಮನ್ನು ನ್ಯಾಯಮೂರ್ತಿಯ ಬದಲು ಒಬ್ಬ ರಾಜಕೀಯ ಕಾರ್ಯಕರ್ತನಂತೆ ತೋರಿಸಿತು. ನಿಮ್ಮ ಬಗ್ಗೆ ವ್ಯಕ್ತವಾಗಿರುವ ವಿರೋಧವು ‘ಕ್ಲಿಂಟನ್ನರ ಪರವಾಗಿ ಹಗೆ ತೀರಿಸಿಕೊಳ್ಳಲು’ ಎಂದು ನೀವು ಹೇಳಿದಾಗ, ನೀವು ಪಕ್ಷಪಾತಿಯಂತೆ ಕಾಣಿಸಿದಿರಿ. ಪ್ರಾಮಾಣಿಕವಾಗಿ ಹೇಳುವುದಾದರೆ, ಕ್ರಿಸ್ಟೀನ್ ಅವರು ನಿಮಗಿಂತ ಹೆಚ್ಚಿನ ಮಟ್ಟದಲ್ಲಿ ‘ನ್ಯಾಯದ ಮನಸ್ಥಿತಿ’ ಯನ್ನು ಪ್ರದರ್ಶಿಸಿದರು. ‘ನ್ಯಾಯಾಂಗದ ಸ್ವಾತಂತ್ರ್ಯ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತದ ಬಗ್ಗೆ ಜನರ ವಿಶ್ವಾಸ ಹೆಚ್ಚುವಂತೆ ನ್ಯಾಯಮೂರ್ತಿ ಎಲ್ಲ ಸಂದರ್ಭಗಳಲ್ಲೂ ವರ್ತಿಸಬೇಕು’ ಎಂದು ಅಮೆರಿಕದ ವಕೀಲರ ಸಂಘದ ಮಾದರಿ ನೀತಿ ಸಂಹಿತೆ ಹೇಳುತ್ತದೆ. ಪ್ರಚೋದನೆಗೆ ಒಳಗಾದಾಗ ಸಹ ಸೆನೆಟರ್‌ಗಳನ್ನು ಉದ್ದೇಶಿಸಿ ಅವಹೇಳನ ಮಾಡುವುದು ಆ ನೀತಿ ಸಂಹಿತೆಗೆ ಪೂರಕವಾಗಿ ಇಲ್ಲ.

ನ್ಯಾಯಮೂರ್ತಿ ಕ್ಯಾವನಾಗ್‌, ಸಾಕ್ಷ್ಯ ಹೇಳುವವರು ಆಶ್ಚರ್ಯಕರ ರೀತಿಯಲ್ಲಿ ಮತ್ತೆ ಮತ್ತೆ ತಪ್ಪು ಮಾಡುತ್ತಾರೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನೀವು ಒಳ್ಳೆಯ ನ್ಯಾಯಮೂರ್ತಿ ಎಂಬ ಹೆಸರು ಸಂಪಾದಿಸಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ತೀವ್ರ ಧಕ್ಕೆ ತಂದಿದ್ದು ದಶಕಗಳ ಹಿಂದೆ ನಡೆದಿರುವ, ಸಾಬೀತಾಗಿರದ ಆರೋಪಗಳಲ್ಲ. ಬದಲಿಗೆ, ನೀವೇ ಆಡಿದ ಸುಳ್ಳುಗಳು ಹಾಗೂ ತೋರಿಸಿದ ಪಕ್ಷಪಾತಿತನ ನಿಮ್ಮ ವ್ಯಕ್ತಿತ್ವಕ್ಕೆ ಬಹುಶಃ ಧಕ್ಕೆ ತಂದವು. ಇದು ನೀವೇ ಆಯ್ಕೆ ಮಾಡಿಕೊಂಡ ಹಾದಿ ಆಗಿದ್ದಲ್ಲಿ, ನೀವು ಸುಪ್ರೀಂ ಕೋರ್ಟ್‌ನಲ್ಲಿ ಇರಬಾರದು.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT