ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ನೊಗಕ್ಕೆ ಭುಜ ಕೊಟ್ಟ ಖೇಹರ್‌

ವ್ಯಕ್ತಿ
Last Updated 7 ಜನವರಿ 2017, 19:52 IST
ಅಕ್ಷರ ಗಾತ್ರ

* ಪ್ರಭುಲಿಂಗ ಕೆ. ನಾವದಗಿ

ಆಕರ್ಷಕ ಕಂಗಳು, ನೋಡುಗರನ್ನು ಸೆಳೆಯುವ ಚೂಪು ಮೂಗು, ತಲೆಗೆ ಸುತ್ತಿದ ಸಿಖ್ಖರ ಸಾಂಪ್ರದಾಯಿಕ ರುಮಾಲಿನ ಒಳಗೆ ಕತ್ತರಿ ಸೋಕದ ಬಿಳಿಯ ಕೇಶರಾಶಿ, ಗರಿಕೆಯಂತಹ ಮುಪ್ಪುರಿಗೊಂಡ ಗಡ್ಡ, ಮೀಸೆ! ಐದು ಫೂಟು ಎಂಟಿಂಚು ಎತ್ತರ ಹಾಗೂ 40 ಇಂಚು ಅಗಲ ಎದೆಯ ಆಜಾನುಬಾಹು ಜಗದೀಶ್‌ ಸಿಂಗ್ ಖೇಹರ್‌ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರವಷ್ಟೇ (ಜ. 4) ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸಿರುವ ಸಿಖ್‌ ಸಮುದಾಯದ ಅಗ್ರಜ ಎನಿಸಿದ್ದಾರೆ.


ಇದೇ ವರ್ಷದ ಆಗಸ್ಟ್‌ 27ರವರೆಗೆ ತಮ್ಮ ಅಧಿಕಾರಾವಧಿ ಹೊಂದಿರುವ 64ರ ಹರೆಯದ ಖೇಹರ್‌ ಅವರಲ್ಲಿ ಅದಮ್ಯ ಚೈತನ್ಯವಿದೆ, ಕಸುವಿದೆ. ದಡ್ಡತನಕ್ಕೆ ಅವಕಾಶ ನೀಡದ ಅತ್ಯಂತ ವಸ್ತುನಿಷ್ಠ ಮನೋಭಾವದ ಮುತ್ಸದ್ದಿ ಎಂಬ ಮೆಚ್ಚುಗೆ ಇವರ ಬೆನ್ನಿಗಿದೆ.   ತಮ್ಮ ಕಾರ್ಯ ವಿಧಾನದಲ್ಲಿ ಅಪ್ರಾಸಂಗಿಕ ನಿಲುವುಗಳಿಗೆ ಎಂದೂ ಅವಕಾಶ ನೀಡದ ಸ್ವಭಾವ ಇವರದ್ದು. ರಕ್ತದಾನ ಎಂದರೆ ಎಲ್ಲಿಲ್ಲದ ಉತ್ಸಾಹ. ನಾಲ್ಕು ದಶಕಗಳಿಂದಲೂ ರಕ್ತದಾನವನ್ನು ಒಂದು ತಪಸ್ಸು ಎಂಬಂತೆ ಮುಂದುವರಿಸಿಕೊಂಡು ಬಂದಿರುವ ಗಟ್ಟಿಗ. ಇದು ಅವರ ದೈಹಿಕ ಆರೋಗ್ಯದ ಸದೃಢತೆಗೂ ಕೈಗನ್ನಡಿ.

ಕಲಿಗಳ ನಾಡು ಪಂಜಾಬ್‌ನಲ್ಲಿ 1952ರ ಆಗಸ್ಟ್‌ 28ರಂದು ಜನನ.  ತಂದೆ ಕೀನ್ಯಾ ವಲಸಿಗ. ಚಂಡೀಗಡದ ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಖೇಹರ್, 1974ರಲ್ಲಿ ಪಂಜಾಬ್‌ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದರು. 1977ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿಯನ್ನು ಬಂಗಾರದ ಪದಕದೊಂದಿಗೆ ಮುಡಿಗೇರಿಸಿಕೊಂಡರು.

1979ರಲ್ಲಿ ವಕೀಲರಾಗಿ ಸನ್ನದು ಪಡೆದು ವಕೀಲಿಕೆ ಆರಂಭ. ಪಂಜಾಬ್‌–ಹರಿಯಾಣ, ಹಿಮಾಚಲ ಪ್ರದೇಶ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ವೃತ್ತಿ ಅನುಭವದ ವ್ಯಾಪ್ತಿ ವಿಸ್ತರಣೆ. 1992ರಲ್ಲಿ ಪಂಜಾಬ್‌  ಹೈಕೋರ್ಟ್‌ನ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ನೇಮಕ. 1995ರಲ್ಲಿ  ಹಿರಿಯ ವಕೀಲನೆಂಬ ಅಭಿದಾನಕ್ಕೆ ಪಾತ್ರ. 1999ರ ಫೆಬ್ರುವರಿ 8ರಂದು ಪಂಜಾಬ್‌– ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ.

2008ರ ಆಗಸ್ಟ್‌ 2ರಲ್ಲಿ ಇದೇ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ. ತರುವಾಯ 2009ರ ನವೆಂಬರ್ 29ರಂದು ಉತ್ತರಾಖಂಡದ ಮುಖ್ಯ ನ್ಯಾಯಮೂರ್ತಿ. 2010ರ ಆಗಸ್ಟ್‌ 8ರಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆ. 2011ರ ಸೆಪ್ಟೆಂಬರ್‌ 13ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ. ಇವೆಲ್ಲಾ ಖೇಹರ್‌ ಅವರು ನ್ಯಾಯಮೂರ್ತಿಯಾಗಿ ಏಳಿಗೆ ಸಾಧಿಸಿದ ಮಜಲುಗಳು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ವಿ.ರಾಮಸ್ವಾಮಿ 1993ರಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಂಸತ್ತಿನ ವಾಗ್ದಂಡನೆಗೆ ಗುರಿಯಾಗಿದ್ದರು. ಈ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರು ರಾಮಸ್ವಾಮಿ ಪರ ವಕಾಲತ್ತು ವಹಿಸಿದ್ದರು. ಕಪಿಲ್ ಸಿಬಲ್‌  ಪಾಳಯದಲ್ಲಿ  ಖೇಹರ್‌ ಕೂಡ ಒಬ್ಬರಾಗಿದ್ದರು. ಸ್ವಾತಂತ್ರ್ಯೋತ್ತರ ಭಾರತದ ನ್ಯಾಯಾಂಗ ಇತಿಹಾಸದಲ್ಲಿ ನ್ಯಾಯಮೂರ್ತಿಯೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ವಾಗ್ದಂಡನೆಗೆ ಗುರಿಯಾದ ಮೊದಲ ಪ್ರಕರಣವಿದು.

2010ರಲ್ಲಿ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ.ದಿನಕರನ್‌ ಅವರ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನೇಮಿಸಿದ್ದ ಮೂವರು ನ್ಯಾಯಮೂರ್ತಿಗಳ ಸಮಿತಿಯಲ್ಲೂ ಖೇಹರ್‌ ಇದ್ದರು. ಈ ಸಮಿತಿ ವಿಚಾರಣೆ ನಡೆಸುವ ಮುನ್ನವೇ ದಿನಕರನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೂಡಿಕೆದಾರರನ್ನು ವಂಚಿಸಿದ ಪ್ರಕರಣದಲ್ಲಿ ಜೈಲು ಸೇರಿದ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೊ ರಾಯ್‌ ಪ್ರಕರಣದ ವಿಚಾರಣಾ ನ್ಯಾಯಪೀಠದಲ್ಲೂ ಖೇಹರ್‌    ಇದ್ದರು. ಆದರೆ ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದರು.

ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ಪದ್ಧತಿ ಬದಲಾಯಿಸುವ ದಿಸೆಯಲ್ಲಿನ  ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ರಚನೆ ಜಾರಿಯ ಅರ್ಜಿಯನ್ನು 2015ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ಖೇಹರ್‌ ಅವರೂ ಇದ್ದರು.

ಪಂಜಾಬ್‌– ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೇಳೆ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ಅವರು, ‘ಧರ್ಮದ ಮೂಲ ಆಶಯಗಳಿಗೆ ತಕ್ಕಂತೆ ನಾವು ನಡೆಯಬೇಕು. ನಮ್ಮಿಚ್ಛೆ ಬಂದಂತೆ ಧರ್ಮದ ನಿಯಮಗಳನ್ನು ತಿರುಚುವುದು ಸಾಧ್ಯವಿಲ್ಲ.  ಒಂದು ಧರ್ಮವನ್ನು ಒಪ್ಪಿಕೊಂಡ ಮೇಲೆ ಅದರ ಅನುಯಾಯಿಗಳು ಆ ಧರ್ಮದ ನಂಬಿಕೆಗಳನ್ನು ಅನುಸರಿಸಬೇಕು. ಇಂತಹ ಸಂಗತಿಗಳನ್ನು ವಿಜ್ಞಾನ ಮತ್ತು ತರ್ಕದ ಆಧಾರದಲ್ಲಿ ವಿಶ್ಲೇಷಿಸಿದರೆ ತೀವ್ರ ಪ್ರಾಯಶ್ಚಿತ್ತಕ್ಕೆ ಒಳಗಾಗಬೇಕಾಗುತ್ತದೆ’ ಎಂಬ ಅಭಿಪ್ರಾಯವನ್ನು ದಾಖಲಿಸಿದ್ದರು.

‘ಈಕೆ ತನ್ನ ಹುಬ್ಬುಗಳನ್ನು ಕಿತ್ತುಕೊಂಡಿದ್ದಾಳೆ. ಒಪ್ಪ ಮಾಡಿಕೊಂಡಿದ್ದಾಳೆ. ಇದು ಸಿಖ್‌ ಗುರುದ್ವಾರ ಕಾಯ್ದೆ– 1925ಕ್ಕೆ ವಿರುದ್ಧ’ ಎಂಬ ಕಾರಣಕ್ಕೆ ಗುರುಲೀನ್ ಕೌರ್‌ ಎಂಬಾಕೆಗೆ, ಸಂತ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ವತಿಯಿಂದ ನಡೆಸಲಾಗುವ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಲಾಗಿತ್ತು.  ಇದನ್ನು ಗುರುಲೀನ್‌ ಕೌರ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಳು.  

ಆದರೆ ಖೇಹರ್‌ 2009ರ ಮೇ 30ರಂದು ಈ ರಿಟ್‌ ಅರ್ಜಿಯನ್ನು ತಿರಸ್ಕರಿಸಿದ್ದರು. ‘ಕೂದಲನ್ನು ಕತ್ತರಿಸದೆ, ಅಗೌರವ ತೋರದೆ ಹಾಗೆಯೇ ಉಳಿಸಿಕೊಳ್ಳುವುದು ಸಿಖ್‌ ಧರ್ಮದ ಮೂಲ ತತ್ವ. ಸಿಖ್ಖರು ತಮ್ಮ ಕೂದಲನ್ನು ಕತ್ತರಿಸುವುದಾಗಲೀ, ಹುಬ್ಬುಗಳನ್ನು ಕಿತ್ತು ಒಪ್ಪ ಮಾಡಿಕೊಳ್ಳುವುದಾಗಲೀ ಸಿಖ್‌ ಧರ್ಮಕ್ಕೆ ವಿರುದ್ಧವಾದದ್ದು’ ಎಂಬ ಆದೇಶ ನೀಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಯುವಾಗ ಖೇಹರ್‌ ಅವರಿಗೆ ಜಗತ್ತಿನ  ವಿವಿಧೆಡೆಯಿಂದ ಬೆದರಿಕೆ ಪತ್ರಗಳು ಬಂದಿದ್ದವು. ‘ಸಿಖ್ಖರ ನಂಬಿಕೆಗಳನ್ನು ಅಲುಗಾಡಿಸುವ ವಿಷಯದಲ್ಲಿ ಕೋರ್ಟ್‌ ಮತ್ತು ಮಾನವ ಸಂಸ್ಥೆಗಳು  ಮಧ್ಯಪ್ರವೇಶಿಸಬಾರದು’ ಎಂದು ಈ ಪತ್ರಗಳಲ್ಲಿ ಎಚ್ಚರಿಸಲಾಗಿತ್ತು.

ನ್ಯಾಯಪೀಠದಲ್ಲಿ ಕುಳಿತು ಇಂತಹ ಅನೇಕ ಪ್ರಕರಣಗಳನ್ನು ಬಗೆಹರಿಸಿರುವ ಖೇಹರ್‌ ಮುಂದೆ ಈಗ ಸವಾಲುಗಳ ಕಂತೆಯೇ ಇದೆ. ಭಾರತೀಯ ನ್ಯಾಯಾಂಗ ಮಗ್ಗುಲು ಬದಲಿಸುತ್ತಿರುವ ದಿನಗಳಲ್ಲಿ  ಅವರು  ಸುಪ್ರೀಂ ಕೋರ್ಟ್‌ನ 44ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಅದರಲ್ಲೂ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿ ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗುತ್ತಿರುವವರ ಪಟ್ಟಿಯಲ್ಲಿ ಖೇಹರ್‌ ಸತತ ಮೂರನೇ ವ್ಯಕ್ತಿ  ಎನಿಸಿದ್ದಾರೆ.

ದೇಶದಾದ್ಯಂತದ ಕೋರ್ಟ್‌ಗಳಲ್ಲಿ 3 ಕೋಟಿ ಪ್ರಕರಣಗಳು ವಿಚಾರಣೆಗಾಗಿ ಕಾತರಿಸಿ ಕುಳಿತಿವೆ. ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ 8 ನ್ಯಾಯಮೂರ್ತಿಗಳ ಸ್ಥಾನ ಭರ್ತಿಯಾಗಬೇಕಿದೆ. ದೇಶದ  24 ಹೈಕೋರ್ಟ್‌ಗಳಲ್ಲಿ  400 ನ್ಯಾಯಮೂರ್ತಿಗಳ ನೇಮಕ ನಡೆಯಬೇಕಿದೆ. ಸಾರ್ವಜನಿಕರ ನಿರೀಕ್ಷೆ ಬೆಟ್ಟದಷ್ಟಿರುವ ಗಳಿಗೆಯಲ್ಲಿ ಖೇಹರ್‌ ಭುಜದ ಮೇಲಿರುವ ನ್ಯಾಯಾಂಗದ ರಥಕ್ಕೆ ಅಂದುಕೊಂಡ ಗುರಿ ಮುಟ್ಟುವುದು ಕಷ್ಟವಾಗಲಿಕ್ಕಿಲ್ಲ.
(ಲೇಖಕ ಹೈಕೋರ್ಟ್‌ನ ಹಿರಿಯ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT