ಜಾಗತಿಕವಾಗಿ ಇಪ್ಪತ್ತನೇ ಶತಮಾನದಿಂದೀಚೆಗಿನ ವಾಸ್ತುಶಿಲ್ಪದ (ಆರ್ಕಿಟೆಕ್ಚರ್) ಕುರಿತು ಅಧ್ಯಯನ ನಡೆಸಿದರೆ, ಭಾರತಕ್ಕೆ ಸಂಬಂಧಿಸಿದ ಹಾಗೆ, ಇಬ್ಬರು ಮಹನೀಯರನ್ನು ಗಣಿಸದಿರಲು ಸಾಧ್ಯವಿಲ್ಲ. ಇವರಿಬ್ಬರ ಗಣನೆಯ ಮುಖೇನ ದೇಶದ ಗಣನೆಯೂ ಆಗುವುದೆನ್ನುವುದರಲ್ಲಿ ಇಬ್ಬರ ಗರಿಮೆಯಿದೆ.

ಭಾರತದ ಸ್ವಾತಂತ್ರ್ಯೋತ್ತರ ಕಾಲದ ವಾಸ್ತುಶಿಲ್ಪದ ದಿಕ್ಕುದೆಸೆಯನ್ನು ನಿರ್ವಹಿಸಿದ ಹೊಣೆಗಾರಿಕೆ ಇವರಿಬ್ಬರದಾಗಿದೆ. ಇದು ದೇಶದ ‘ಎಣೆ’ಗಾರಿಕೆ ಕೂಡ ಹೌದು. ಮೂರು ವರ್ಷಗಳ ಹಿಂದೆ, ತಮ್ಮ ಎಂಬತ್ತೈದನೇ ವಯಸ್ಸಿನಲ್ಲಿ ತೀರಿಕೊಂಡ ಚಾರ್ಲ್ಸ್ ಕೊರಿಯಾ (1930-2015) ಎಂಬ ಗೋವಾದ ವಾಸ್ತುಶಿಲ್ಪಿ ಈ ಇಬ್ಬರಲ್ಲೊಬ್ಬರಾದರೆ, ಕೊರಿಯಾ ಅವರಿಗಿಂತ ಮೂರು ವರ್ಷ ಹಿರಿಯರಾದ, ಬಾಲಕೃಷ್ಣ ವಿಠಲದಾಸ ದೋಷಿ (1927) ಎಂಬ ಗುಜರಾತಿ ಮನೆಮಾತಿನ ವಾಸ್ತುಶಿಲ್ಪಿ ಇನ್ನೊಬ್ಬರು. ಇಬ್ಬರೂ ದೇಶದಾದ್ಯಂತ ಇರುವ ಎಲ್ಲಾ ವಾಸ್ತುಶಿಲ್ಪಿಗಳಿಗೆ ಮತ್ತು ಇಡೀ ದೇಶದ ‘ವಾಸ್ತುಶಿಲ್ಪ’ಕ್ಕೆ ಕಲಶಪ್ರಾಯರು.

ಬಿ.ವಿ. ದೋಷಿ ಎಂದು ‘ಹ್ರಸ್ವ’ಸ್ಥವಾಗಿ, ‘ದೋಷಿ’ ಎಂದು ಮತ್ತೂ ಮೊಟಕಾಗಿ, ವಾಸ್ತುಶಿಲ್ಪಿಗಳ ಮಾತಿನಲ್ಲೂ ಮನಸ್ಸಿನಲ್ಲೂ ನೆಲೆಸಿರುವ ಬಾಲಕೃಷ್ಣ ವಿಠಲದಾಸರಿಗೆ ಮೊನ್ನೆ ಬುಧವಾರ, ವಾಸ್ತುಶಿಲ್ಪದ ‘ನೊಬೆಲ್’ ಎಂದೇ ಹೆಸರಾಗಿರುವ ‘ಪ್ರಿಟ್ಸ್ಕರ್ ಪ್ರಶಸ್ತಿ’ (Pritzker Prize) ಲಭಿಸಿದೆ. ಇದು ನಮ್ಮ ದೇಶಕ್ಕೆ, ಜಗತ್ತಿನ ವಾಸ್ತುಶಿಲ್ಪದ ಮುಖೇನ ಸಂದ ಮೊಟ್ಟ ಮೊದಲ ಪ್ರತಿಷ್ಠಿತ ಪುರಸ್ಕಾರ.

‘ಪ್ರಿಟ್ಸ್ಕರ್ ಅನ್ನು ದಕ್ಕಿಸಿಕೊಂಡ ಮೊದಲ ಭಾರತೀಯ’ ಎಂಬ ಕೀರ್ತಿ ದೋಷಿಯವರ ಹೆಸರಿನ ಮುಂದೆ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಲಿದೆ.

ಹಾಗೆ ನೋಡಿದರೆ, ಖುದ್ದು ದೋಷಿಯವರೇ ಒಂದು ಚರಿತ್ರೆ. ಅವರ ಬದುಕು ಕೂಡ ಚಾರಿತ್ರಿಕವೇ. 1927ರ ಆಗಸ್ಟ್‌ನಲ್ಲಿ ಪುಣೆಯಲ್ಲಿ ನೆಲೆಸಿದ್ದ ಸಂಪ್ರದಾಯಸ್ಥ ಗುಜರಾತಿ ಕುಟುಂಬವೊಂದರಲ್ಲಿ ಜನಿಸಿದ ದೋಷಿ, ‘ಬ್ರಿಟಿಷ್ ಇಂಡಿಯಾ’ವು ಕಟ್ಟಿದ ಮೊದಮೊದಲ ವಾಸ್ತುಶಿಲ್ಪ ಶಾಲೆಗಳಲ್ಲೊಂದಾದ ಮುಂಬೈಯ ಜೆ.ಜೆ. ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಓದಿ, ಇಪ್ಪತ್ತನೇ ವಯಸ್ಸಿಗೆ ಪದವಿಯನ್ನು ಪಡೆದು, ಒಟ್ಟು ಎಪ್ಪತ್ತು ವರ್ಷಗಳ ಕಾಲ ಸುದೀರ್ಘವೂ, ಫಲಪ್ರದವೂ ಆದ ‘ವಾಸ್ತುಶಿಲ್ಪಕಾರಿಕೆ’ ನಡೆಸಿದ್ದಾರೆ.

1951ರಿಂದ 1954ರವರೆಗೆ ‘ಲಿ ಕಾರ್ಬುಸಿಎರ್’ (ಜರ್ಮನ್ ಮೂಲದ ಅಮೆರಿಕನ್) ಎಂಬೊಬ್ಬ ಉದ್ದಾಮ ವಾಸ್ತುಶಿಲ್ಪಿಯ ಕೈಕೆಳಗೆ ದೋಷಿ ಕೆಲಸ ಮಾಡಿದರು. ಸ್ವತಂತ್ರ ಭಾರತದ ಮೊಟ್ಟ ಮೊದಲ ‘ಆಧುನಿಕ’ ಶಹರವೆಂದು ಹೆಸರು ಮಾಡಿರುವ ಚಂಡೀಗಡದ ವಿನ್ಯಾಸದಲ್ಲಿ ಕಾರ್ಬುಸಿಎರ್ ತೊಡಗುವಾಗ, ಅದರ ಕಟ್ಟಡದ ಉಸ್ತುವಾರಿಗೆಂದು ದೋಷಿ ಭಾರತಕ್ಕೆ ಹಿಂತಿರುಗುತ್ತಾರೆ. ಬಳಿಕ ಅಹ್ಮದಾಬಾದ್‌ನಲ್ಲಿ ತಮ್ಮದೇ ‘ವಾಸ್ತುಶಿಲ್ಪ ಫೌಂಡೇಶನ್’ ಎಂಬ ಸಂಸ್ಥೆ ಹುಟ್ಟು ಹಾಕಿ, ಆರ್ಕಿಟೆಕ್ಚರಿನ ಸ್ವಂತ ಅಭ್ಯಾಸ (ಪ್ರ್ಯಾಕ್ಟೀಸ್) ಆರಂಭಿಸುತ್ತಾರೆ.

ಇದೇ ಸಮಯದಲ್ಲಿ ಲೂಈ ಕಾನ್ ಎಂಬ ಇನ್ನೊಬ್ಬ ಅಮೆರಿಕನ್ ವಾಸ್ತುಶಿಲ್ಪಿ ಭಾರತದ ಮೊಟ್ಟ ಮೊದಲ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್’ನ (ಅಹ್ಮದಾಬಾದ್) ವಿನ್ಯಾಸ ಮತ್ತು ಉಸ್ತುವಾರಿಗೆಂದು ಭಾರತಕ್ಕೆ ಬರುತ್ತಾರೆ. ದೋಷಿ, ಆತನ ನಿಕಟ ಸಂಪರ್ಕ ಪಡೆದು ಆತನ ಪ್ರಭಾವಕ್ಕೆ ಒಳಗಾಗುತ್ತಾರೆ. ಒಂದರ್ಥದಲ್ಲಿ ಕಾರ್ಬುಸಿಎರ್ ಮತ್ತು ಕಾನ್– ಇವರಿಬ್ಬರೂ ದೋಷಿ ಮತ್ತು ಕೊರಿಯಾ ಅವರ ಬದುಕಿನ ನಿಟ್ಟುಗಳನ್ನೇ ಬದಲಿಸಿಬಿಡುತ್ತಾರೆ.

ಕಾರ್ಬುಸಿಎರ್ ಮತ್ತು ಕಾನ್‍ರ ಪರಿಣಾಮವು ದೋಷಿ-ಕೊರಿಯಾರನ್ನು ಎಷ್ಟರ ಮಟ್ಟಿಗೆ ಉದ್ದೀಪನಗೊಳಿಸುತ್ತದೆಂದರೆ, ಈ ಇಬ್ಬರೂ ಭಾರತೀಯರು ಆ ‘ಮಹಾ ಪರಿಣಾಮ’ದ ದೀಪ್ತಿಯಲ್ಲಿ, ಇಡೀ ದೇಶದ ವಾಸ್ತುಶಿಲ್ಪವನ್ನೇ ಉದ್ದೀಪಿಸುತ್ತಾರೆ. ಹಾಗಂತ, ಇದು ದೂರ ಪಶ್ಚಿಮದ ಪೂರಾ ಪರಿಣಾಮವೇನಲ್ಲ. ಕಾಂಕ್ರೀಟು- ಸ್ಟೀಲುಗಳ ಹೊಸ ಕಾಲದ ವಾಸ್ತುಶಿಲ್ಪವನ್ನು, ಇವರಿಬ್ಬರೂ ತಂತಮ್ಮದೇ ರೀತಿಯಲ್ಲಿ ‘ಭಾರತೀಯ’ಗೊಳಿಸಿ ಮರು ನಿರೂಪಿಸುತ್ತಾರೆ.

ಇನ್ನು, ದೋಷಿಯವರೆಡೆಗೆ ನಿಖರವಾಗಿ ವಾಪಸಾಗುವುದಾದರೆ, ಅವರು ವಾಸ್ತುಶಿಲ್ಪದ ಅಭ್ಯಾಸವನ್ನಷ್ಟೇ ಅಲ್ಲದೆ, ಅದರ ಬೋಧನೆಯಲ್ಲೂ ಸರಿಸಮವಾಗಿ ತೊಡಗುತ್ತಾರೆ. ಅಹ್ಮದಾಬಾದ್‌ನಲ್ಲಿ ಸಮಮನಸ್ಕರ ಒಡಗೂಡಿ, ಇಂದಿಗೂ ದೇಶದ ಪ್ರತಿಷ್ಠಿತ ಶಾಲೆಗಳಲ್ಲೊಂದು ಎನಿಸಿರುವ ‘ಸ್ಕೂಲ್ ಆಫ್ ಪ್ಲ್ಯಾನಿಂಗ್’ ಅನ್ನು ಕಟ್ಟಿ, ಅದರ ಮೊದಲ ನಿರ್ದೇಶಕರಾಗಿ ಏಳು ವರ್ಷಗಳ ಕಾಲ (1972–79) ಸೇವೆ ಸಲ್ಲಿಸುತ್ತಾರೆ.

ಇದೇ ಶಾಲೆಯ ಇನ್ನೊಂದು ಕುಡಿಯಾದ ‘ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಪ್ಲ್ಯಾನಿಂಗ್ ಅಂಡ್ ಟೆಕ್ನಾಲಜಿ’ (ಸೆಪ್ಟ್)ಅನ್ನೂ ಆರಂಭಿಸಿ, ಅದರಲ್ಲೂ ಒಂಬತ್ತು ವರ್ಷಗಳ ಕಾಲ (1972–81) ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಾರೆ.

ಸ್ಕೂಲ್ ಆಫ್ ಪ್ಲ್ಯಾನಿಂಗ್ ಮತ್ತು ಸೆಪ್ಟ್– ಇವೆರಡೂ ಇಡೀ ದೇಶದಲ್ಲಿ ವಾಸ್ತುಶಿಲ್ಪದ ಬೋಧನೆ ಮತ್ತು ಕಲಿಕೆಗೆ ಮಾದರಿಯಾಗುತ್ತವೆ. ಅಥವಾ, ವಾಸ್ತುಶಿಲ್ಪದ ಗೊತ್ತುಗುರಿಯನ್ನೇ ಬದಲಿಸಿಬಿಡುತ್ತವೆ. ಸಾವಿರಾರು ವರ್ಷಗಳ ಕಟ್ಟು ಪರಂಪರೆಯಿರುವ ಭಾರತದ ಕಟ್ಟಡೇತಿಹಾಸವನ್ನು ಆಧರಿಸಿಕೊಂಡು, ಅದರ ಮುಂದುವರಿಕೆಯಾಗಿ ಇವೊತ್ತು ಏನು ಮಾಡಬಹುದೆಂಬುದನ್ನು ಸಮರ್ಥವಾಗಿ ಪ್ರತಿಪಾದಿಸುತ್ತವೆ.

ಇಂದು ಇಡೀ ಭಾರತದಲ್ಲಿನ ವಾಸ್ತುಶಿಲ್ಪ ಬೋಧನೆಯ ಸಿಲಬಸ್ ಒಂದರ್ಥದಲ್ಲಿ ಇವೆರಡೂ ಶಾಲೆಗಳಲ್ಲಿನ ನಕಲೇ ಆಗಿದೆ! ಈ ದೇಶದಲ್ಲಿ ಹುಟ್ಟಿದ (ಕಳೆದ ಶತಮಾನದ) ಎಪ್ಪತ್ತನೇ ದಶಕಾನಂತರದ ಯಾವುದೇ ವಾಸ್ತುಶಿಲ್ಪಿ ಈ ಶಾಲೆಗಳನ್ನು ನೋಡದೆಯೇ, ಗಮನಿಸದೆಯೇ ಆಗಿಲ್ಲವೇನೋ... ಅನ್ನುವಷ್ಟು ರೀತಿಯಲ್ಲಿ, ದೋಷಿಯವರು ಹುಟ್ಟಿಸಿದ ಕಲಿಕಾ-ಪದ್ಧತಿಯ ಪ್ರಭಾವವುಂಟಾಗಿದೆ!

ಅಹ್ಮದಾಬಾದ್‌ನ ಈ ಪ್ರತಿಷ್ಠಿತ ಶಾಲೆಗಳ ವಿನ್ಯಾಸವೂ ದೋಷಿಯವರದ್ದೇ ಆಗಿದೆ. ಗೋಡೆಗಳಿಗೆ ಗಿಲಾವು ಮಾಡದೆ, ಇಟ್ಟಿಗೆಯನ್ನು ಇಟ್ಟಿಗೆಯಾಗಿಯೇ ತೋರ್ಪಡಿಸುವ ‘ವಸ್ತು’ನಿಷ್ಠ ವಿನ್ಯಾಸ ಈ ಶಾಲೆಗಳಿಗಿದೆ. ಕಾಂಕ್ರೀಟೆಂಬ ಕಾಂಕ್ರೀಟನ್ನೂ ‘ಕಾಂಕ್ರೀಟಾಗಿಯೇ’, ಮೇಲೆ ಇನ್ನಾವುದೇ ಗಿಲೀಟಿನ ಹೊದಿಕೆಯಿಲ್ಲದೆ ದುಡಿಸಿರುವ ಚಾಕಚಕ್ಯತೆ ಈ ಕಟ್ಟಡಗಳಲ್ಲಿದೆ.

ಇಟ್ಟಿಗೆಯನ್ನು ಇಟ್ಟಿಗೆಯಾಗಿಯೇ, ಕಾಂಕ್ರೀಟನ್ನು ಕಾಂಕ್ರೀಟಾಗಿಯೇ ಹೊಂದಿ–ಹೊಂದಿಸಿ ಕಟ್ಟುವ ಇರಾದೆ ಜಗತ್ತಿನ ಎಲ್ಲ ಸೃಜನಶೀಲ ಆರ್ಕಿಟೆಕ್ಟುಗಳ ಕನಸೇ ಆಗಿದೆ. ಇಂತಹದೊಂದು ಕನಸಿನ ಭಾರತೀಯ ಮಾದರಿಯನ್ನು ದೋಷಿಯವರು (ಕೊರಿಯಾರೂ) ಹಾಕಿಕೊಟ್ಟು ಮೇಲ್ಪಂಕ್ತಿಯಲ್ಲಿದ್ದಾರೆ.

ಅಹ್ಮದಾಬಾದ್‌ನಲ್ಲಿರುವ, ಅಷ್ಟೇ ಗುಜರಾತಿನಲ್ಲಿರುವ ಎಷ್ಟೆಷ್ಟೋ ಹೆಸರುವಾಸಿ ಕಟ್ಟಡಗಳ ಮೇಲೆ ‘ದೋಷಿ’ತನದ ಛಾಪಿದೆ. ಅಲ್ಲಿನ ಹಲಕೆಲ ಪ್ರತಿಷ್ಠಿತ ಕಟ್ಟಡಗಳನ್ನು ದೋಷಿಯವರು ವಿನ್ಯಾಸ ಮಾಡಿದ್ದಾರೆ. ಇಂಡಾಲೊಜಿ ಇನ್‌ಸ್ಟಿಟ್ಯೂಟ್, ಗಾಂಧಿ ಸ್ಮಾರಕ ಸಂಗ್ರಹಾಲಯ, ಪ್ರೇಮಭಾಯಿ ಹಾಲ್... ಇವೆಲ್ಲವೂ ದೋಷಿಯವರು ಅಹ್ಮದಾಬಾದ್‌ನಲ್ಲಿ ನಿರ್ಮಿಸಿರುವ ಪ್ರಸಿದ್ಧ ಕಟ್ಟಡಗಳಾಗಿವೆ.

ನಾವು ವಾಸ್ತುಶಿಲ್ಪಿಗಳಿಗೆ, ಅದರಲ್ಲೂ ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ಅಹ್ಮದಾಬಾದ್, ಕಾಶಿ ಇದ್ದ ಹಾಗೇ. ಕಾಶಿಯಷ್ಟೇ ಪ್ರೇಕ್ಷಣೀಯ; ಅಂಥದೇ ತೀರ್ಥಕ್ಷೇತ್ರ. ಬೆಂಗಳೂರಿನಲ್ಲಿರುವ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ ಕಟ್ಟಡವೂ ದೋಷಿಯವರ ವಿನ್ಯಾಸದ್ದೇ. ‘ಕತ್ತಲಿನಿಂದ ಬೆಳಕಿನೆಡೆಗೆ’ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ನಿರ್ಮಿಸಿದ ಈ ಕಟ್ಟಡವನ್ನು ಹೊಕ್ಕರಂತೂ, ನಿಜಕ್ಕೂ ಬೆಳಕಿನತ್ತ ಯಾನ ಕೈಕೊಂಡಿರುವ ಅನುಭವವಾಗುತ್ತದೆ! ಒಂದು ನಮೂನೆ ಬೆಳಕಿನೊಡನೆಯ ಯಾನವೇ ಇದು. ಅಂತಿಂತಲ್ಲದ ದ್ಯುತಿಯಾನ!

ದೇಶದುದ್ದಗಲಕ್ಕೂ ಎಲ್ಲ ರಾಜಧಾನಿಗಳಲ್ಲಿ, ಎಲ್ಲ ಮುಖ್ಯ ಶಹರಗಳಲ್ಲಿ ದೋಷಿಯವರ ವಿನ್ಯಾಸವಿರುವ ಕಟ್ಟಡಗಳಿವೆ. ಆಯಾ ರಾಜ್ಯಗಳಲ್ಲಿ, ಪ್ರದೇಶಗಳಲ್ಲಿ ಯಥೇಚ್ಛವಾಗಿ ಸಿಗುವ ಪದಾರ್ಥ-ಪರಿಕರಗಳನ್ನೇ ಬಳಸಿಕೊಂಡು ಅವರ ಕಟ್ಟಡಗಳು ಮೈದಳೆಯುತ್ತವೆ. ಕಲ್ಲು ಮಣ್ಣು ಇಟ್ಟಿಗೆ... ಇತ್ಯಾದಿ ಸಾಧಾರಣ ವಸ್ತುಗಳೆಲ್ಲ ದೋಷಿಯವರ ‘ಕೈ’ವಾಡಕ್ಕೀಡಾಗಿ ಹೊಸತೇ ಅನುಭವವನ್ನು ಕಟ್ಟಿಕೊಳ್ಳುತ್ತವೆ. ಸಾಮಾನ್ಯ ಮೋಡಿಗಾರರಲ್ಲ ಇವರು. ಯಾವುದೇ ವಸ್ತು-ವಿಷಯ-ವೈವಿಧ್ಯ-ವೈಖರಿ ಕೊಟ್ಟರೂ ಮೋಡಿ ಮಾಡಬಲ್ಲ ಜಾದೂಗಾರಿಗೆ ಅವರಿಗೆ ಸಿದ್ಧಿಸಿದೆ.

‘ದೋಷಿಯವರ ವಾಸ್ತುಶಿಲ್ಪವು ತನ್ನ ಆಗುಹೋಗಿನ ಉದ್ದಕ್ಕೂ ಗಂಭೀರವಿದ್ದು, ಯಾವೊತ್ತೂ ಥಳುಕು-ಬಳುಕನ್ನು ಹೊಂದದೆ ಅಥವಾ ಪ್ರಚಲಿತವಿರುವ ಜನಪ್ರಿಯ ಶೈಲಿಗಿಂತ ಭಿನ್ನವಾದುದಾಗಿದೆ. ತಾನು ಆಗಿಕೊಂಡಿರುವ ದೇಶದ ನೆಲ ಮತ್ತು ಆಕಾಶಗಳಿಗೆ ತಕ್ಕುದಾದ ಕಟ್ಟಡಗಾರಿಕೆಯನ್ನು ಅವರು ಅತ್ಯದಮ್ಯವಾದ ಹೊಣೆಗಾರಿಕೆಯೊಟ್ಟಿಗೆ ನಿರ್ವಹಿಸಿದ್ದಾರೆ. ಅವರ ವಾಸ್ತುಶಿಲ್ಪಕಾರಿಕೆಯು ಭಾರತೀಯತೆಗೆ ಬದ್ಧವಿರುವ ಅಧಿಕೃತತೆಯನ್ನು ಹೊಂದಿದೆ. ಒಂದರ್ಥದಲ್ಲಿ ಇಡೀ ದೇಶಕ್ಕೆ ತಾನೇ ಒಂದು ಟ್ರೆಂಡ್ ಆಗಿದ್ದಾರೆ...’ -ಇವು 2018ರ ಪ್ರಿಟ್ಸ್ಕರ್ ಪ್ರಶಸ್ತಿಯ ತೀರ್ಪುಗಾರರ ಟಿಪ್ಪಣಿಯಿಂದ ಹೆಕ್ಕಿದ ಕೆಲಸಾಲು.

ಇಂತಹ ಮಹಾನುಭಾವ ನನ್ನಂತಹ ಸಣ್ಣಪುಟ್ಟ ವಾಸ್ತುಶಿಲ್ಪಿಗಳಿಗೆ ಮಾದರಿ– ಗುರು. ಅವರಿಂದ ನೇರ ಕಲಿಯದ ಅಥವಾ ಯಾರಿಂದಲೂ ಕಲಿಯದ ನನ್ನ ಮಾದರಿಯ ಎಷ್ಟೆಷ್ಟೋ ಏಕಲವ್ಯರಿದ್ದಾರೆ. ಅಂತಹ ಎಲ್ಲ ಏಕಲವ್ಯರಿಗೆ ದೋಷಿಯವರೇ ದ್ರೋಣ.
ದ್ರೋಣದೋಷಿಗೆ ನಮಸ್ಕಾರ.

(ಲೇಖಕ: ಕಥೆಗಾರ, ವಾಸ್ತುಶಿಲ್ಪಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.