ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ನೀಗಿಸುವ ಹುಣಸೆ

Last Updated 17 ಜೂನ್ 2013, 19:59 IST
ಅಕ್ಷರ ಗಾತ್ರ

ಇವರ ಪಾಲಿಗೆ ಹುಣಸೆ ಇದ್ದರೆ ಜೀವನವೆಲ್ಲ ಸಿಹಿ. ಹುಣಸೆ ಹಣ್ಣು ಇವರ ಹಸಿವು ಇಂಗಿಸುತ್ತದೆ. ಇದರಿಂದಲೇ ಇವರ ಬದುಕು. ಇದು ಇರದ ಇವರ ಜೀವನ ನೆನೆಸಿಕೊಳ್ಳಲೂ ಕಷ್ಟಕರ, ದುರಂತಮಯ!

ಇವರೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಗ್ರಾಮಸ್ಥರು. ಹುಣಸೆ ಮಾರಾಟದಿಂದ ಮಾತ್ರ ಇವರ ಜೀವನ ನಡೆಯುತ್ತದೆ. ಬೇಸಿಗೆ ಬಂದರೆ ತಾವರಗೇರಾದ ರಜಪೂತ ಓಣಿಯಲ್ಲಿ  ಎಲ್ಲೆಲ್ಲೂ ಹುಣಸೆ ದೃಶ್ಯಗಳೇ. ಮನೆ ಅಂಗಳದಲ್ಲಿ ಹುಣಸೆ ಹಣ್ಣು ಹಾಕಿಕೊಂಡು ಅದರ ಬೀಜ ತೆಗೆಯುವ ಕೆಲಸದಲ್ಲಿ ನಿರತರಾಗಿರುತ್ತಾರೆ ಮಹಿಳೆಯರು.

ಮರದಿಂದ ತೆಗೆದು ತಂದ ಹಣ್ಣನ್ನು ಬೇರ್ಪಡಿಸುವ ಕೆಲಸ ಮಾಡಬೇಕಾಗುತ್ತದೆ. ಹಣ್ಣಿನಲ್ಲಿರುವ ಬೀಜವನ್ನು ತೆಗೆಯಲು ಸಮಯ ಬೇಕು. ಅದಕ್ಕಾಗಿ ದಿನಕ್ಕೆ 100 ರೂಪಾಯಿ ಕೊಟ್ಟು ಕೂಲಿಕಾರರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಈಚಿನ ದಿನಗಳಲ್ಲಿ ಹುಣಸೆ ಖರೀದಿ ಕಮ್ಮಿಯಾಗಿದೆ. ಆದುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ಕೊರಗು ಇವರದ್ದು.

ಇದರಿಂದ ಹುಣಸೆ ವ್ಯಾಪಾರಕ್ಕಾಗಿ ಪಕ್ಕದ ಕುಷ್ಟಗಿ, ಸಿಂಧನೂರು, ಗಂಗಾವತಿ, ಕೊಪ್ಪಳ ಮಾರುಕಟ್ಟೆಗೆ ಹೋಗುವ ಪರಿಸ್ಥಿತಿ ಉಂಟಾಗಿದೆ. `ಕಿಲೋ ಲೆಕ್ಕದಲ್ಲಿ  ಕೊಟ್ಟರೆ ಲಾಭ ಸಿಗುತ್ತೆ. ಕ್ವಿಂಟಲ್ ಮಾರಿದರೆ 200- 300 ರೂಪಾಯಿಯಷ್ಟೇ ಆದಾಯ ಬರುತ್ತದೆ. ಆದರೂ ಇದು ನಮ್ಮ ಕುಟುಂಬಕ್ಕೆ ಸಾಕು. ಲಾಭ ಇರದಿದ್ದರೂ ಬರಗಾಲದಲ್ಲಿ ಹುಣಸೆ ವ್ಯಾಪಾರವೇ ನಮ್ಮ ಕೈ ಹಿಡಿದಿದೆ' ಎನ್ನುತ್ತಾರೆ ಹನಮಂತಪ್ಪ ಬಳ್ಳಾರಿ.

ಹುಣಸೆ ಸುಗ್ಗಿ
ಗಿಡವೊಂದಕ್ಕೆ 300 ರೂಪಾಯಿಗಳಂತೆ ರೈತರಿಂದ ಗುತ್ತಿಗೆ ಪಡೆದುಕೊಂಡಿರುತ್ತಾರೆ. ಹುಣಸೆ ಮರದಲ್ಲಿ ಕಾಯಿ ಪ್ರಾರಂಭವಾಗುವ ವೇಳೆ ಇವರಿಗೆ ಸುಗ್ಗಿಯ ವೇಳೆ.

ಪಟ್ಟಣಗಳಲ್ಲಿ ಹುಣಸೆಹಣ್ಣಿನ ಜಾಗವನ್ನು ಟೊಮೆಟೊ ಕಬಳಿಸಿದೆ. ಹುಣಸೆ ಬಳಕೆ ತಗ್ಗದೆ, ಇದೇನೇ ಇದ್ದರೂ ಹುಣಸೆ ಹಣ್ಣಿನ ಮಹತ್ವ ಇನ್ನೂ ಜೀವಂತ ಉಳಿಸುವಲ್ಲಿ ಈ ಕುಟುಂಬಗಳು ನಿರತವಾಗಿವೆ. ಸಂಪರ್ಕಕ್ಕೆ : 9741602545.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT