ಶನಿವಾರ, ಸೆಪ್ಟೆಂಬರ್ 25, 2021
30 °C

ಹೊರಬಿದ್ದ ಭಾರತ; ಕಾಂಬ್ಳಿ ಕಣ್ಣೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1996ರಲ್ಲಿ ಕೋಲ್ಕತ್ತದ ಈಡನ್‌ ಗಾ‌ರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯ ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಭಾರತದ ಪಾಲಿಗೆ ಇಂದಿಗೂ ‘ಕಪ್ಪು ಚುಕ್ಕೆ’ಯಾಗಿ ಉಳಿದುಕೊಂಡಿದೆ. ಭಾರತ ತಂಡ ಸೋಲಿನತ್ತ ಮುಖಮಾಡಿದ್ದಾಗ ಪ್ರೇಕ್ಷಕರು ರೊಚ್ಚಿಗೆದ್ದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಶ್ರೀಲಂಕಾ ತಂಡವನ್ನು ವಿಜಯಿ ಎಂದು ಪ್ರಕಟಿಸಲಾಯಿತು. ಎರಡನೇ ವಿಶ್ವಕಪ್‌ ಗೆಲ್ಲುವ ಭಾರತದ ಕನಸು ನುಚ್ಚುನೂರಾಯಿತು.

* ಕ್ವಾರ್ಟರ್‌ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ್ದ ಭಾರತ ತಂಡ ‘ಫೇವರಿಟ್‌’ ಎಂಬ ಹಣೆಪಟ್ಟಿಯೊಂದಿಗೆ ಲಂಕಾ ತಂಡವನ್ನು ಎದುರಿಸಿತು.

* ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ಭಾರತದ ‘ಅದೃಷ್ಟ’ದ ತಾಣವೂ ಆಗಿತ್ತು.

* ಜಾವಗಲ್‌ ಶ್ರೀನಾಥ್‌ ಆತಿಥೇಯರಿಗೆ ಕನಸಿನ ಆರಂಭ ಒದಗಿಸಿದರು. ಲಂಕಾ ತಂಡದ ಅಗ್ರ ಕ್ರಮಾಂಕದ ಆಟಗಾರರಾದ ಸನತ್‌ ಜಯಸೂರ್ಯ (1), ರೊಮೇಶ್‌ ಕಲುವಿತರಣ (0) ಮತ್ತು ಅಸಂಕಾ ಗುರುಸಿಂಘ (1) ಅವರನ್ನು ಬೇಗನೇ ಪೆವಿಲಿಯನ್‌ಗಟ್ಟಿದರು.

* ಅನುಭವಿ ಆಟಗಾರರಾದ ಅರವಿಂದ ಡಿಸಿಲ್ವ (66) ಮತ್ತು ರೋಶನ್‌ ಮಹಾನಾಮ (58) ತಂಡಕ್ಕೆ ಆಸರೆಯಾದರು. ಶ್ರೀಲಂಕಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 251 ರನ್‌ ಕಲೆಹಾಕಿತು.

* ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿದ್ದ ಭಾರತ ಆತ್ಮವಿಶ್ವಾಸದೊಂದಿಗೆಯೇ ಬ್ಯಾಟಿಂಗ್‌ಗೆ ಇಳಿಯಿತು. ಪಾಕ್‌ ವಿರುದ್ಧ ಮಿಂಚಿದ್ದ ನವಜೋತ್‌ ಸಿಂಗ್‌ ಸಿಧು (3) ಬೇಗನೇ ಔಟಾದರು.

* ಸಚಿನ್‌ ತೆಂಡೂಲ್ಕರ್‌ ಮತ್ತು ಸಂಜಯ್‌ ಮಾಂಜ್ರೇಕರ್‌ ಎರಡನೇ ವಿಕೆಟ್‌ಗೆ 90 ರನ್‌ ಸೇರಿಸಿದರು. 20 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 98 ರನ್‌ ಗಳಿಸಿದ್ದ ಭಾರತ ಗೆಲುವಿನತ್ತ ದಿಟ್ಟಹೆಜ್ಜೆಯಿಟ್ಟಿತ್ತು. ಆ ಬಳಿಕ ಪಂದ್ಯಕ್ಕೆ ನಾಟಕೀಯ ತಿರುವು ಲಭಿಸಿತು. 65 ರನ್‌ ಗಳಿಸಿದ್ದ ತೆಂಡೂಲ್ಕರ್‌ ಅವರ ವಿಕೆಟ್ ಪತನ ಪಂದ್ಯದ ದಿಕ್ಕನ್ನೇ ಬದಲಿಸಿತು.

* ಸಚಿನ್‌, ಮಾಂಜ್ರೇಕರ್‌ (25) ಮತ್ತು ಅಜರುದ್ದೀನ್‌ (0) ಮೂರು ರನ್‌ಗಳ ಅಂತರದಲ್ಲಿ ಔಟಾದರು. ಅಜಯ್‌ ಜಡೇಜ (0), ನಯನ್‌ ಮೊಂಗಿಯಾ (1) ಕೂಡಾ ವಿಫಲ ರಾದರು. ಒಂದು ವಿಕೆಟ್‌ಗೆ 98 ರನ್‌ ಗಳಿಸಿದ್ದ ತಂಡ 120 ರನ್‌ಗಳಿಸುಷ್ಟರಲ್ಲಿ 8 ವಿಕೆಟ್‌ ಕಳೆದು ಕೊಂಡಿತು.

* ಪ್ರತಿ ವಿಕೆಟ್‌ ಉರುಳುತ್ತಿದ್ದಂತೆ ಪ್ರೇಕ್ಷಕರ ಆಕ್ರೋಶ ಹೆಚ್ಚುತ್ತಿತ್ತು. ಎಂಟನೇ ವಿಕೆಟ್‌ ಬೀಳುತ್ತಿದ್ದಂತೆಯೇ ಆಕ್ರೋಶ ಕಟ್ಟೆಯೊಡೆಯಿತು. ಬಾಟಲ್‌ಗಳು, ಪ್ಲಾಸ್ಟಿಕ್‌ ಚೀಲ, ನೀರಿನ ಕ್ಯಾನ್‌ ಒಳಗೊಂಡಂತೆ ಕೈಗೆ ಸಿಕ್ಕ ವಸ್ತುಗಳನ್ನು ಮೈದಾನಕ್ಕೆ ಎಸೆದರು. ಗ್ಯಾಲರಿ ಯಲ್ಲಿ ಬೆಂಕಿ ಹಚ್ಚಿದರು. ಇದರಿಂದ ಆಟ ನಿಂತಿತು.

* ಆಟ ಮುಂದುವರೆಸುವುದು ಅಸಾಧ್ಯವೆಂದು ಮನಗಂಡ ಮ್ಯಾಚ್‌ ರೆಫರಿ ಕ್ಲೈವ್‌ ಲಾಯ್ಡ್‌ ಅವರು ಲಂಕಾ ತಂಡವನ್ನು ವಿಜೇತ ಎಂದು ಪ್ರಕಟಿಸಿದರು. ಅನಿಲ್‌ ಕುಂಬ್ಳೆ ಮತ್ತು ಕಾಂಬ್ಳಿ ಕ್ರೀಸ್‌ನಲ್ಲಿದ್ದರು. ಕಾಂಬ್ಳಿ ಕಣ್ಣೀರು ಸುರಿಸುತ್ತಾ ಅಂಗಳ ತೊರೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು