ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ‘ಲಾರ್ಡ್ಸ್‌‘ ಜಯದ ಮೇಲೆ ವಿರಾಟ್–ರೂಟ್ ಕಣ್ಣು

ಭಾರತ–ಇಂಗ್ಲೆಂಡ್ ಎರಡನೇ ಟೆಸ್ಟ್ ಇಂದಿನಿಂದ
Last Updated 11 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಲಾರ್ಡ್ಸ್‌ನಲ್ಲಿ ಗುರುವಾರ ಆರಂಭವಾಗುವ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

ಮಧ್ಯಮವೇಗಿ–ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಸೋಮವಾರ ಅಭ್ಯಾಸ ಮಾಡುವ ಸಂದರ್ಭದಲ್ಲಿ ತೀವ್ರ ಸ್ನಾಯುಸೆಳೆತದಿಂದ ಬಳಲಿದ್ದರು. ಆದ್ದರಿಂದ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಅವರ ಸ್ಥಾನಕ್ಕೆ ಸ್ಪಿನ್–ಆಲ್‌ರೌಂಡರ್ ಅಶ್ವಿನ್ ಆಡಬಹುದು.

ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಮಳೆ ಸುರಿಯದೇ ಹೋಗಿದ್ದರೆ ಭಾರತಕ್ಕೆ ಜಯಿಸುವ ಅವಕಾಶ ಇತ್ತು. ಆದರೆ, ಪಂದ್ಯ ಡ್ರಾ ಆಯಿತು.

ಆ ಪಂದ್ಯದಲ್ಲಿ ವಿರಾಟ್, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ರವೀಂದ್ರ ಜಡೇಜ ಅವರ ಅಮೋಘ ಬ್ಯಾಟಿಂಗ್ ಕಳೆಗಟ್ಟಿತ್ತು. ಜಸ್‌ಪ್ರೀತ್ ಬೂಮ್ರಾ ಎರಡೂ ಇನಿಂಗ್ಸ್‌ಗಳಲ್ಲಿ ತಮ್ಮ ಸ್ವಿಂಗ್ ಮತ್ತು ಯಾರ್ಕರ್‌ಗಳ ಮೂಲಕ ಇಂಗ್ಲೆಂಡ್‌ಗೆ ಸಿಂಹಸ್ವಪ್ನರಾಗಿದ್ದರು.

ಕಳೆದ ಎರಡು ವರ್ಷಗಳಿಂದಲೂ ವಿರಾಟ್ ಮತ್ತು ಪೂಜಾರ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಿಲ್ಲ. ತಮ್ಮ ಅರ್ಧಶತಕಗಳನ್ನು ಮೂರಂಕಿಯಲ್ಲಿ ಪರಿವರ್ತಿಸುವಲ್ಲಿ ಎಡವುತ್ತಿದ್ದಾರೆ. ಉಪನಾಯಕ ರಹಾನೆ ಹೋದ ವರ್ಷ ಮೆಲ್ಬರ್ನ್‌ನಲ್ಲಿ ಶತಕ ದಾಖಲಿಸಿದ್ದು ಬಿಟ್ಟರೆ, ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಸಫಲರಾಗಿಲ್ಲ.

ಲಂಡನ್‌ನಲ್ಲಿ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದೆ. ಈ ಪರಿಸ್ಥಿತಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಹಸಿರು ಗರಿಕೆಗಳ ಪಿಚ್‌ ಉಳಿಸಿಕೊಳ್ಳುವುದೇ ಎಂಬ ಕುತೂಹಲ ಗರಿಗೆದರಿದೆ.

2018ರಲ್ಲಿ ಇಲ್ಲಿ ಸಿದ್ಧಪಡಿಸಲಾಗಿದ್ದ ಹಸಿರು ಪಿಚ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಕ್ರಿಸ್ ವೋಕ್ಸ್‌ ಬೌಲಿಂಗ್ ಮುಂದೆ ಭಾರತ ತಂಡವು ಎರಡೂ ಇನಿಂಗ್ಸ್‌ಗಳಲ್ಲಿ ಕುಸಿದಿತ್ತು.

ಇಂತಹ ಪಿಚ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದು ಕೊಹ್ಲಿ ಬಳಗಕ್ಕೆ ದುಬಾರಿಯಾಗಬಹುದು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿರುವ ಇಂಗ್ಲೆಂಡ್ ನಾಯಕ ಜೋ ರೂಟ್, ಜಾನಿ ಬೆಸ್ಟೊ, ಜೋಸ್ ಬಟ್ಲರ್, ಜ್ಯಾಕ್ ಕ್ರಾಲಿ ಬ್ಯಾಟಿಂಗ್‌ ವಿಭಾಗದ ಪ್ರಮುಖರಾಗಿದ್ದಾರೆ.

ಅನುಭವಿ ಜೇಮ್ಸ್ ಆ್ಯಂಡರ್ಸನ್, ಒಲಿ ರಾಬಿನ್ಸನ್ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಬಳಗದ ಬ್ಯಾಟಿಂಗ್‌ ಪಡೆಗೆ ಪ್ರಬಲ ಸವಾಲೊಡ್ಡಿದ್ದರು. ಕೊಹ್ಲಿ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಅಡಿಪಾಯ ಹಾಕಿದರೆ, ಮಧ್ಯಕ್ರಮಾಂಕದಲ್ಲಿ ರಿಷಭ್ ಪಂತ್, ಜಡೇಜ ಅವರಿಂದ ಬರುವ ರನ್‌ಗಳು ತಂಡದ ಜಯಕ್ಕೆ ಸೋಪಾನವಾಗಬಲ್ಲವು.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಭಾಗವಾಗಿರುವ ಈ ಸರಣಿಯಲ್ಲಿ ಜಯಿಸುವುದು ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಅದಕ್ಕಾಗಿ ನಡೆಯುವ ಹೋರಾಟವು ರೋಚಕತೆಯ ಹಂತ ತಲುಪುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT