ಶನಿವಾರ, ಆಗಸ್ಟ್ 13, 2022
27 °C

ನಾನು ಜಸ್‌ಪ್ರೀತ್ ಬೂಮ್ರಾ ಅಭಿಮಾನಿ’ ಆಸ್ಟ್ರೇಲಿಯಾ ದಿಗ್ಗಜ ಅಲನ್ ಬಾರ್ಡರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ದೊಡ್ಡ ಅಭಿಮಾನಿ ತಾವು ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ದಿಗ್ಗಜ ಅಲನ್ ಬಾರ್ಡರ್ ಹೇಳಿದ್ದಾರೆ.

ಇದೇ 17ರಿಂದ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಕುರಿತು ಸೋನಿ ನೆಟ್‌ವರ್ಕ್ ಆಯೋಜಿಸಿದ್ದ ಸುನಿಲ್ ಗಾವಸ್ಕರ್ ಅವರೊಂದಿಗೆ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಬಾರ್ಡರ್ ಮಾತನಾಡಿದರು. 

’ಬೂಮ್ರಾ ತಮ್ಮ ದೈಹಿಕ ಕ್ಷಮತೆಯನ್ನು ನಿರಂತರವಾಗಿ ಕಾಪಾಡಿಕೊಂಡರೆ, ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲರು. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಚೆಂಡು ಬೌನ್ಸ್ ಮತ್ತು ಸೈಡ್‌ವೇಸ್‌ನಲ್ಲಿ ಹೆಚ್ಚು ತಿರುವು ತೆಗೆದುಕೊಳ್ಳುತ್ತದೆ. ಇದರ ಪ್ರಯೋಜನವನ್ನು ಅವರು ಹೇಗೆ ಪಡೆಯುತ್ತಾರೆ ನೋಡಬೇಕು‘ ಎಂದು ಬಾರ್ಡರ್ ಹೇಳಿದರು. 

’ಹೋದ ಸಲದ ರೀತಿಯಲ್ಲಿಯೇ ಈ ಬಾರಿಯೂ ಬೂಮ್ರಾ ತಮ್ಮ ಸಾಮರ್ಥ್ಯವನ್ನು ಮೆರೆದರೆ ಭಾರತದ ಮೇಲುಗೈ ಖಚಿತ. ಆಗ ಅವರು ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಗಳಿಸಿದ್ದರು‘ ಎಂದು ಬಾರ್ಡರ್ ನೆನಪಿಸಿಕೊಂಡರು.

2018–19ರಲ್ಲಿ  ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಯನ್ನು  ಜಯಿಸಿದ ಭಾರತವು ಇತಿಹಾಸ ಬರೆದಿತ್ತು. ಆಗ ಬೂಮ್ರಾ ಒಟ್ಟು 21 ವಿಕೆಟ್‌ಗಳನ್ನು ಗಳಿಸಿದ್ದರು.

’ಯಾವಾಗಲೂ ಬ್ಯಾಟಿಂಗ್ ಲೈನ್ ಅಪ್ ಬಗ್ಗೆ ಯೇ ಹೆಚ್ಚು ಯೋಚಿಸುತ್ತೀರಿ. ಬ್ಯಾಟ್ಸ್‌ಮನ್‌ಗಳು ಬಹಳಷ್ಟು ರನ್‌ ಹೊಡೆದರೆ ಗೆಲುವು ಸುಲಭ ಎಂದು ಭಾವಿಸುತ್ತೀರಿ. ಆದರೆ ಒಂದು ಟೆಸ್ಟ್‌ ಪಂದ್ಯದಲ್ಲಿ ತಂಡವು ಎದುರಾಳಿ ತಂಡದ 20 ವಿಕೆಟ್‌ಗಳನ್ನು ಗಳಿಸಿದರೂ ಜಯ ಸಾಧ್ಯವಾಗುತ್ತದೆ. ಅದಕ್ಕಾಗಿ ಬೌಲರ್‌ಗಳು ಫಿಟ್ ಆಗಿರುವುದು ಮುಖ್ಯ. ಅದರಲ್ಲೂ ಈ ಬಾರಿ ಬೂಮ್ರಾ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ‘ ಎಂದು ಹೇಳಿದರು.

’ಸದಾ ಹಸನ್ಮುಖಿಯಾಗಿ ಕ್ರಿಕೆಟ್ ಆಡುವ ಬೂಮ್ರಾ ಅಮೋಘ ಬೌಲರ್. ಒಮ್ಮೆ ಬೌಲಿಂಗ್ ಲಯ ಕಂಡುಕೊಂಡರೆ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗುತ್ತಾರೆ‘ ಎಂದು ಬಾರ್ಡರ್ ಶ್ಲಾಘಿಸಿದರು.

’ಆಸ್ಟ್ರೇಲಿಯಾ ತಂಡದಲ್ಲಿರುವ ಕ್ಯಾಮರೂನ್ ಗ್ರೀನ್ ಉತ್ತಮ ಆಲ್‌ರೌಂಡರ್ ಆಗಿದ್ದಾರೆ. ಈ ಯುವ ಕ್ರಿಕೆಟಿಗನ ಆಟದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಬ್ಯಾಟಿಂಗ್ ಚೆನ್ನಾಗಿದೆ. ಬೌಲಿಂಗ್‌ನಲ್ಲಿಯೂ ಜೊತೆಯಾಟಗಳಿಗೆ ಕಡಿವಾಣ ಹಾಕುವ ಸಮರ್ಥ. ತಾಂತ್ರಿಕವಾಗಿ ನಿಪುಣರಾಗಿದ್ದಾರೆ‘ ಎಂದರು.

ಮೊದಲ ಟೆಸ್ಟ್ ನಂತರ ವಿರಾಟ್ ಕೊಹ್ಲಿ ಪಿತೃತ್ವ ರಜೆಗೆ ತೆರಳಲಿದ್ದಾರೆ. ಇದರಿಂದ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ಬ್ಯಾಟ್ಸ್‌ಮನ್ ಗಳನ್ನು ನಿಯಂತ್ರಿಸಲು ಉತ್ತಮ ಅವಕಾಶ ಎಂದೂ ಬಾರ್ಡರ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದ ಸುನಿಲ್ ಗಾವಸ್ಕರ್, ’ಬಾರ್ಡರ್ ಮಾತಿಗೆ ಸಹಮವಿದೆ. ಕೊಹ್ಲಿಯ ಅನುಪಸ್ಥಿತಿಯು ಆಸ್ಟ್ರೇಲಿಯಾಕ್ಕೆ ಪ್ಲಸ್ ಪಾಯಿಂಟ್ ಆಗುತ್ತದೆ. ಅಗ್ರಕ್ರಮಾಂಕದ ರನ್‌ ಯಂತ್ರವೇ ಆಗಿರುವ ಕೊಹ್ಲಿ ಇರದಿದ್ದರೆ  ಆಸ್ಟ್ರೇಲಿಯಾ ಬೌಲರ್‌ಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇನ್ನೊಂದೆಡೆ ಭಾರತದ ಉಳಿದ ಆಟಗಾರರಿಗೆ ತಮ್ಮ ಸಾಮರ್ಥ್ಯ ಮೆರೆಯಲು ಉತ್ತಮ ಅವಕಾಶವೂ ಇದಾಗಿದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು