ಗುರುವಾರ , ಜೂನ್ 17, 2021
29 °C
ತವರು ತಲುಪಿದ ಮುಂಬೈ ಇಂಡಿಯನ್ಸ್‌ ವಿದೇಶಿ ಆಟಗಾರರು, ನ್ಯೂಜಿಲೆಂಡ್ ಕ್ರಿಕೆಟಿಗರು

ಮನೆ ಸೇರಿದ ಪಂಜಾಬ್‌ ಕಿಂಗ್ಸ್ ಸದಸ್ಯರು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ ಆಕ್ಲೆಂಡ್: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದ ಪಂಜಾಬ್‌ ಕಿಂಗ್ಸ್ ತಂಡದ ಭಾರತೀಯ ಆಟಗಾರರೆಲ್ಲರೂ ಅವರ ಮನೆ ತಲುಪಿದ್ದಾರೆ ಎಂದು ಫ್ರಾಂಚೈಸ್‌ ಭಾನುವಾರ ತಿಳಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ವಿದೇಶಿ ಆಟಗಾರರು ಮತ್ತು ವಿವಿಧ ತಂಡಗಳಲ್ಲಿ ಆಡಿದ್ದ ನ್ಯೂಜಿಲೆಂಡ್ ಆಟಗಾರರು ತವರು ತಲುಪಿದ್ದಾರೆ ಎಂದು ತಿಳಿಸಲಾಗಿದೆ. 

‘ಟೂರ್ನಿಯನ್ನು ಮುಂದೂಡಿದ ಹಿನ್ನೆಲೆಯಲ್ಲಿ ಕಿಂಗ್ಸ್ ಆಟಗಾರರನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ. ವಿದೇಶದ ಆಟಗಾರರ ಪೈಕಿ ಕೆಲವರು ಭಾರತದ ಹೊರಗೆ ಕ್ವಾರಂಟೈನ್‌ನಲ್ಲಿದ್ದಾರೆ. ಅದು ಮುಗಿದ ನಂತರ ಅವರು ತಮ್ಮ ದೇಶಗಳಿಗೆ ಪಯಣಿಸಲಿದ್ದಾರೆ. ಬಿಸಿಸಿಐ, ವಿವಿಧ ಫ್ರಾಂಚೈಸ್‌ಗಳು ಮತ್ತು ವಿಮಾನಯಾನ ಪಾಲುದಾರ ಕಂಪನಿ ಗೋ ಏರ್‌ಗೆ ಅಭಾರಿಯಾಗಿದ್ದೇವೆ’ ಎಂದು ಪಂಜಾಬ್ ಕಿಂಗ್ಸ್ ಟ್ವೀಟ್ ಮಾಡಿದೆ. 

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ತಂಡದ ಅಭಿಮಾನಿಗಳನ್ನು ಕೋರಿರುವ ಫ್ರಾಂಚೈಸ್ ಮಾಸ್ಕ್ ಧರಿಸುವಂತೆಯೂ ಅಂತರ ಕಾಯ್ದುಕೊಳ್ಳುವಂತೆಯೂ ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುವಂತೆಯೂ ಸೂಚಿಸಿದ್ದು ಎಲ್ಲರೂ ಒಟ್ಟಾಗಿ, ಸುರಕ್ಷಿತವಾಗಿ ಇರೋಣ ಎಂದಿದೆ. 

ನ್ಯೂಜಿಲೆಂಡ್‌ನ ಆಟಗಾರರೆಲ್ಲರೂ ಎರಡು ವಿಮಾನಗಳಲ್ಲಿ ಸುರಕ್ಷಿತವಾಗಿ ದೇಶಕ್ಕೆ ವಾಪಸಾಗಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ (ಎನ್‌ಝೆಡ್‌ಸಿ) ತಿಳಿಸಿದೆ. ಟ್ರೆಂಟ್ ಬೌಲ್ಟ್‌, ಫಿನ್ ಅಲೆನ್‌, ಜಿಮ್ಮಿ ನೀಶಮ್‌, ಆ್ಯಡಂ ಮಿಲ್ನೆ, ಸ್ಕಾಟ್ ಕುಗೆಲಿನ್, ಸಿಬ್ಬಂದಿ ಜೇಮ್ಸ್‌ ಪಮೆಂಟ್‌ ಮತ್ತು ಶೇನ್ ಬಾಂಡ್‌, ಆರ್‌ಸಿಬಿ ನಿರ್ದೇಶಕ ಮೈಕ್‌ ಹೇಸನ್‌ ಅವರು ಟೋಕಿಯೊ ಮೂಲಕ ಖಾಸಗಿ ಜೆಟ್‌ನಲ್ಲಿ ಮೊದಲ ತಂಡದಲ್ಲಿ ತೆರಳಿದ್ದರು. 

ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕರಾದ ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆಂಡನ್‌ ಮೆಕ್ಲಂ, ಐಪಿಎಲ್‌ನಲ್ಲಿ  ಕೋಚ್‌ ಆಗಿದ್ದ ಕೈಲ್ ಮಿಲ್ಸ್‌, ವೇಗಿ ಲಾಕಿ ಫರ್ಗ್ಯುಸನ್, ಕಮೆಂಟೇಟರ್‌ಗಳಾದ ಸೈಮನ್ ಡಲ್‌, ಸ್ಕಾಟ್ ಸ್ಟೈರಿಸ್, ಅಂಪೈರ್‌ ಕ್ರಿಸ್ ಗಫಾನಿ ಮುಂತಾದವರು ಭಾನುವಾರ ಎರಡನೇ ತಂಡದಲ್ಲಿ ತಲುಪಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಡಲಿರುವ ಆಟಗಾರರು ಮಾಲ್ಡಿವ್ಸ್‌ಗೆ ತೆರಳಿದ್ದಾರೆ. ಅಲ್ಲಿ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ಅವರು ಇಂಗ್ಲೆಂಡ್‌ಗೆ ತೆರಳುವರು.

ಮುಂಬೈ ಇಂಡಿಯನ್ಸ್ ಜೊತೆ ಇದ್ದ ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಒಳಗೊಂಡ 14 ಮಂದಿ ಭಾನುವಾರ ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಫ್ರಾಂಚೈಸ್ ಭಾನುವಾರ ತಿಳಿಸಿದೆ. ತಂಡದಲ್ಲಿ ಒಟ್ಟು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರನ್ನು ಕೋರಿದೆ.

ಕೀರನ್ ಪೊಲಾರ್ಡ್‌ ಅವರು ಟ್ರಿನಿಡಾಡ್‌ಗೆ, ಕ್ವಿಂಟನ್ ಡಿಕಾಕ್ ಮತ್ತು ಮಾರ್ಕೊ ಜಾನ್ಸೆನ್ ಅವರು ಜೊಹಾನ್ಸ್‌ಬರ್ಗ್‌ಗೆ ತಲುಪಿದ್ದು ಆಸ್ಟ್ರೇಲಿಯಾ ಆಟಗಾರರು ಮತ್ತು ಕೋಚ್ ಮಹೇಲ ಜಯವರ್ಧನೆ ಮಾಲ್ಡಿವ್ಸ್ ತಲುಪಿದ್ದು 14 ದಿನಗಳ ಕ್ವಾರಂಟೈನ್ ನಂತರ ವಾಪಸಾಗಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು