ಭಾನುವಾರ, ಸೆಪ್ಟೆಂಬರ್ 15, 2019
30 °C

ಆ್ಯಷಸ್‌ ಟೆಸ್ಟ್‌: ಇಂಗ್ಲೆಂಡ್‌ಗೆ ಸ್ಟೋಕ್ಸ್‌ ಆಸರೆ

Published:
Updated:
Prajavani

ಲಂಡನ್‌: ಅಂತಿಮ ದಿನದಾಟದ ಕೊನೆಯ ಅವಧಿಯಲ್ಲಿ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ಆ್ಯಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯ ಡ್ರಾ ಆಯಿತು.

ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್‌ (ಔಟಾಗದೆ 115; 165ಎ, 11ಬೌಂ, 3ಸಿ) ಶತಕ ಸಿಡಿಸಿ ಸಂಭ್ರಮಿಸಿದರು. ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದಾಗಿ ಆತಿಥೇಯರು ಎರಡನೇ ಇನಿಂಗ್ಸ್‌ನಲ್ಲಿ 71 ಓವರ್‌ಗಳಲ್ಲಿ 5 ವಿಕೆಟ್‌ಗೆ 258ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡರು.

ಗೆಲುವಿಗೆ 267ರನ್‌ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾ 47.3 ಓವರ್‌ಗಳಲ್ಲಿ 6 ವಿಕೆಟ್‌ಗೆ 154ರನ್‌ ಕಲೆಹಾಕಿ ಡ್ರಾಗೆ ತೃಪ್ತಿಪಟ್ಟಿತು.

ಗುರಿ ಬೆನ್ನಟ್ಟಿದ ಟಿಮ್‌ ಪೇನ್‌ ಪಡೆ 47ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಈ ಹಂತದಲ್ಲಿ ಮಾರ್ನಸ್‌ ಲಾಬುಚಾನ್‌ (59; 100ಎ, 8ಬೌಂ) ಮತ್ತು ಟ್ರಾವಿಸ್‌ ಹೆಡ್‌ (ಔಟಾಗದೆ 42; 90ಎ, 9ಬೌಂ) ಎಚ್ಚರಿಕೆಯ ಆಟ ಆಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 85ರನ್ ಸೇರಿಸಿತು.

ಶನಿವಾರ ಜೋಫ್ರಾ ಆರ್ಚರ್‌ ಅವರ ಬೌನ್ಸರ್‌ ಎಸೆತವು ಹೆಲ್ಮೆಟ್‌ಗೆ ಬಡಿದು ಗಾಯಗೊಂಡಿದ್ದ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌, ಭಾನುವಾರ ಕಣಕ್ಕಿಳಿಯಲಿಲ್ಲ.

ಸ್ಮಿತ್‌ ಬದಲು ಸ್ಥಾನ ಪಡೆದಿದ್ದ ಲಾಬುಚಾನ್‌ ಅರ್ಧಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ನೂತನ ನಿಯಮದ ಪ್ರಕಾರ ಲಾಬುಚಾನ್‌ಗೆ ಫೀಲ್ಡಿಂಗ್‌, ಬೌಲಿಂಗ್ ಮತ್ತು ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿತ್ತು. ಈ ಹಿಂದೆ ಬದಲಿ ಆಟಗಾರರಿಗೆ ಫೀಲ್ಡಿಂಗ್‌ ಮಾಡಲು ಮಾತ್ರ ಅವಕಾಶ ನೀಡಲಾಗುತ್ತಿತ್ತು. 

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: ಮೊದಲ ಇನಿಂಗ್ಸ್‌; 77.1 ಓವರ್‌ಗಳಲ್ಲಿ 258 ಮತ್ತು 71 ಓವರ್‌ಗಳಲ್ಲಿ 5 ವಿಕೆಟ್‌ಗೆ 258 ಡಿಕ್ಲೇರ್ಡ್‌ (ಬೆನ್‌ ಸ್ಟೋಕ್ಸ್‌ ಔಟಾಗದೆ 115, ಜೋಸ್‌ ಬಟ್ಲರ್‌ 31, ಜಾನಿ ಬೇಸ್ಟೊ ಔಟಾಗದೆ 30; ಪ್ಯಾಟ್‌ ಕಮಿನ್ಸ್‌ 35ಕ್ಕೆ3, ಪೀಟರ್‌ ಸಿಡ್ಲ್‌ 54ಕ್ಕೆ2). ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌: 94.3 ಓವರ್‌ಗಳಲ್ಲಿ 250 ಮತ್ತು 47.3 ಓವರ್‌ಗಳಲ್ಲಿ 6 ವಿಕೆಟ್‌ಗೆ 154 (ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ 16, ಮಾರ್ನಸ್‌ ಲಾಬುಚಾನ್‌ 59, ಟ್ರಾವಿಸ್‌ ಹೆಡ್‌ ಔಟಾಗದೆ 42; ಜೋಫ್ರಾ ಆರ್ಚರ್‌ 32ಕ್ಕೆ3, ಜ್ಯಾಕ್‌ ಲೀಚ್‌ 37ಕ್ಕೆ3).

ಫಲಿತಾಂಶ: ಡ್ರಾ. ಪಂದ್ಯಶ್ರೇಷ್ಠ: ಬೆನ್‌ ಸ್ಟೋಕ್ಸ್‌ .

Post Comments (+)