ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಟೂರ್ನಿಯಲ್ಲಿ ಇಬ್ಬನಿ ಮುಕ್ತ ಪಂದ್ಯಗಳಿರಲಿ: ಅಶ್ವಿನ್

Last Updated 21 ಜನವರಿ 2023, 13:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ‘ಇಬ್ಬನಿ ಮುಕ್ತ’ಗೊಳಿಸಬೇಕು. ಇದರಿಂದ ಬೌಲರ್‌ಗಳಿಗೂ ಸಮಾನ ಅವಕಾಶ ಸಿಗುವಂತಾಗುತ್ತದೆ ಎಂದು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

‘ಹವಾಮಾನವನ್ನು ನಿಯಂತ್ರಣ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ಇಲ್ಲಿರುವ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ಮುಖ್ಯ. ಭಾರತ ತಂಡಕ್ಕೆ ಇದು ಹೆಚ್ಚು ಕಠಿಣವಲ್ಲ. ಆದರೆ ಕೌಶಲ ಮತ್ತು ಸ್ಪರ್ಧಾತ್ಮಕತೆಯಿಂದ ಟೂರ್ನಿ ನಡೆಯಬೇಕು. ಆದ್ದರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಸಂಜೆಯ ಇಬ್ಬನಿಯು ಪಂದ್ಯದ ಫಲಿತಾಂಶ ಮೇಲೆ ಪರಿಣಾಮ ಬೀರುವುದರಿಂದ ವೇಳಾಪಟ್ಟಿಯಲ್ಲಿ ಅದಕ್ಕೆ ತಕ್ಕ ಹಾಗೆ ರೂಪಿಸುವುದು ಒಳಿತು’ ಎಂದರು.

‘ಪಂದ್ಯಗಳನ್ನು ಬೆಳಿಗ್ಗೆ 11.30ಕ್ಕೆ ಆರಂಭಿಸಬೇಕು’ ಎಂದು ಅಶ್ವಿನ್ ಕಳೆದ ವಾರ ತಮ್ಮ ಯೂಟ್ಯೂಬ್‌ ವಾಹಿನಿಯಲ್ಲಿ ಹೇಳಿದ್ದರು.

ಶನಿವಾರವೂ ಇದೇ ವಾಹಿನಿಯ ಮೂಲಕ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಭಾರತದ ಆತಿಥ್ಯದಲ್ಲಿ ನಡೆದ ಶ್ರೀಲಂಕಾ ಎದುರಿನ ಏಕದಿನ ಸರಣೀಯ ಮೊದಲ ಪಂದ್ಯದ ಉದಾಹರಣೆಯನ್ನೂ ಅಶ್ವಿನ್ ಉಲ್ಲೇಖಿಸಿದ್ದಾರೆ. ಆ ಪಂದ್ಯದಲ್ಲಿ ಭಾರತವು 374 ರನ್‌ಗಳ ದೊಡ್ಡ ಗುರಿಯೊಡ್ಡಿತ್ತು. ಶ್ರೀಲಂಕಾ ತಂಡವು 206 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿತ್ತು. ಆದರೆ ಈ ಹಂತದಲ್ಲಿಯೇ ಭಾರತದ ಬೌಲರ್‌ಗಳು ದಂಡನೆಗೊಳಗಾದರು. ಲಂಕಾ ತಂಡವು 306 ರನ್‌ಗಳವರೆಗೆ ಮೊತ್ತವನ್ನು ಬೆಳೆಸಿತು.

‘ಹೈದರಾಬಾದ್‌ ಕ್ರೀಡಾಂಗಣ ದೊಡ್ಡದು. ಆದರೆ ದೇಶದ ಉಳಿದ ಬಹುತೇಕ ಕ್ರೀಡಾಂಗಣಗಳು ಟಿ20 ಕ್ರಿಕೆಟ್ ಗಾಗಿ ನಿರ್ಮಾಣವಾಗಿಲ್ಲ. ಅವೆಲ್ಲವೂ ಹಳೆಯದು. ಈಗ ಆದರೆ ಪ್ರಾಯೋಜಕತ್ವದ ಎಲ್‌ಇಡಿ ಫಲಕಗಳನ್ನು ಹಾಕಲು ದೇಶದ ಎಲ್ಲ ಕ್ರೀಡಾಂಗಣಗಳಲ್ಲಿಯೂ 10–12 ಮೀಟರ್‌ನಷ್ಟು ಬೌಂಡರಿಲೈನ್ ಸುತ್ತಳತೆಯು ಕಡಿತಗೊಂಡಿದೆ. ಹೈದರಾಬಾದ್‌ನಲ್ಲಿಯೇ 70 ಮೀಟರ್ ಬೌಂಡರಿಲೈನ್ ಅಂತರವು 58 ಮೀಟರ್‌ಗೆ ಇಳಿದಿದೆ’ ಎಂದರು.

‘ಸ್ಪಿನ್ ಬೌಲಿಂಗ್‌ ಭಾರತದ ಪ್ರಮುಖ ಶಕ್ತಿಯಾಗಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಸ್ಪಿನ್ ಎಸೆತಗಳನ್ನು ಬ್ಯಾಟರ್‌ಗಳು ಆಡುತ್ತಿರುವ ಶೈಲಿಯಿಂದಾಗಿ ನಮ್ಮ ಶಕ್ತಿ ಕಳೆದುಹೋಗುವ ಸಾಧ್ಯತೆ ಇದೆ’ ಎಂದರು.

‘2011ರಲ್ಲಿ ಧೋನಿ ಬಳಗ ವಿಶ್ವಕಪ್ ಗೆದ್ದ ನಂತರ ಕ್ರಿಕೆಟ್‌ನಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಐಪಿಎಲ್ ಮತ್ತು ದ್ವಿಪಕ್ಷೀಯ ಸರಣಿಗಳಿಂದಾಗಿ ವಿದೇಶಗಳ ಆಟಗಾರರು ಭಾರತದಲ್ಲಿ ಆಡಿ ಉತ್ತಮ ಅನುಭವ ಗಳಿಸಿದ್ದಾರೆ. ಇಲ್ಲಿಯ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದಾಗಿ ತವರಿನಲ್ಲಿಯೇ ಭಾರತ ತಂಡವು ಕಠಿಣ ಸವಾಲು ಎದುರಿಸುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT