ಪಲೇಕೆಲೆ: ಮಳೆ ಬರುವ ಸಾಧ್ಯತೆಗಳು ಇರುವುದರಿಂದ ಕೊಲಂಬೊದಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಗಳನ್ನು ಬೇರೆ ಸ್ಥಳಿಗಳಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಸೂಪರ್ ಫೋರ್ ಹಂತದ ಐದು ಪಂದ್ಯಗಳು ಮತ್ತು ಫೈನಲ್ ಪಂದ್ಯವು ಕೊಲಂಬೊದಲ್ಲಿ ಆಯೋಜನೆಗೊಂಡಿವೆ. ಮಳೆ ಬರುವ ಸಾಧ್ಯತೆಗಳು ಇರುವುದರಿಂದ ಪಂದ್ಯಗಳನ್ನು ಪಲೆಕೆಲೆ, ದಂಬುಲಾ ಮತ್ತು ಹಂಬನಟೊಟಾಗಳಿಗೆ ಸ್ಥಳಾಂತರಿಸುವ ನಿರೀಕ್ಷೆ ಇದೆ.
ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ), ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಹಾಗೂ ಆತಿಥ್ಯ ವಹಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಬಗ್ಗೆ ಚರ್ಚೆ ನಡೆಸುತ್ತಿವೆ. ಈ ಬದಲಾವಣೆಯ ಸಾಧ್ಯತೆಗಳ ಕುರಿತು ಟೂರ್ನಿಯಲ್ಲಿ ಆಡುತ್ತಿರುವ ಆರು ತಂಡಗಳಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸೇಥಿ ಅಸಮಾಧಾನ
‘ಯನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಏಷ್ಯಾ ಕಪ್ ಆಯೋಜಿಸಬೇಕೆಂದು ಮೊದಲೇ ಹೇಳಿದ್ದೆವು. ಆದರೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಶ್ರೀಲಂಕಾದಲ್ಲಿ ಆಯೋಜಿಸಿದೆ. ಹವಾಮಾನ ಮಾಹಿತಿ ಮೊದಲೇ ಗೊತ್ತಿದ್ದರೂ ಈ ರೀತಿ ಮಾಡಲಾಗಿದೆ‘ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ನಜಾಂ ಸೇಥಿ ಕಿಡಿ ಕಾರಿದ್ದಾರೆ.
ಪಲೇಕೆಲೆಯಲ್ಲಿ ಶನಿವಾರ ಮಳೆಯಿಂದಾಗಿ ಭಾರತ ಮತ್ತು ಪಾಕ್ ಪಂದ್ಯದ ಫಲಿತಾಂಶ ಹೊರಹೊಮ್ಮಲಿಲ್ಲ. ಇದರಿಂದಾಗಿ ಸೇಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ದುಬೈನಲ್ಲಿ ವಿಪರೀತ ಬಿಸಿಲಿದೆ ಎಂದು ಆಗ ಎಸಿಸಿ ಹೇಳಿತ್ತು. ಆದರೆ 2022ರಲ್ಲಿ ಏಷ್ಯಾ ಕಪ್ ದುಬೈನಲ್ಲಿ ನಡೆದಾಗ ಇದ್ದಷ್ಟೇ ತಾಪಮಾನ ಈಗಲೂ ಇದೆ. 2014 ಹಾಗೂ 2020ರಲ್ಲಿ ಐಪಿಎಲ್ ಆಯೋಜನೆಗೊಂಡಾಗ ಯುಎಇಯಲ್ಲಿ ಇದ್ದಷ್ಟೇ ತಾಪಮಾನ ಈಗಲೂ ಇದೆ. ಕ್ರೀಡೆಯಲ್ಲಿ ರಾಜಕೀಯ, ಅಕ್ಷಮ್ಯ‘ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.