ಭಾನುವಾರ, ಮಾರ್ಚ್ 7, 2021
28 °C

ಬಾರ್ಡರ್‌–ಗಾವಸ್ಕರ್ ಟ್ರೋಫಿ: ಭಾರತಕ್ಕೆ ಇನಿಂಗ್ಸ್ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್: ವಿರಾಟ್‌ ಕೊಹ್ಲಿ ಬಳಗದ ಸಂಘಟಿತ ಹೋರಾಟದ ಎದುರು ಸಮರ್ಥ ಆಟವಾಡುವಲ್ಲಿ ವಿಫಲವಾದ ಆಸ್ಟ್ರೇಲಿಯಾ ತಂಡ 235ರನ್‌ಗಳಿಗೆ ಆಲೌಟ್‌ ಆಯಿತು. ಇದರೊಂದಿಗೆ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಹಿನ್ನಡೆ ಅನುಭವಿಸಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್‌ ಕಳೆದುಕೊಂಡು 191 ರನ್‌ಗಳಿಸಿದ್ದ ಆಸ್ಟ್ರೇಲಿಯಾ, ಮೂರನೇ ದಿನ ತನ್ನ ಖಾತೆಗೆ 44 ರನ್‌ ಸೇರಿಸುವಷ್ಟರಲ್ಲಿ ಉಳಿದ ಮೂರು ವಿಕೆಟ್‌ಗಳನ್ನೂ ಕಳೆದುಕೊಂಡಿತು. ಹೀಗಾಗಿ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡದೆದುರು 15 ರನ್‌ಗಳ ಹಿನ್ನಡೆ ಅನುಭವಿಸಬೇಕಾಯಿತು.

ಟಿಮ್‌ ಪೇನೆ ಬಳಗದ ಬ್ಯಾಟ್ಸ್‌ಮನ್‌ಗಳಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. ಆದರೆ ತಮ್ಮ ತಂಡವನ್ನು ಇನಿಂಗ್ಸ್‌ ಹಿನ್ನಡೆಯಿಂದ ಪಾರು ಮಾಡಲು ಶ್ರಮಿಸಿದ ಟ್ರಾವಿಸ್‌ ಹೆಡ್‌(72) ಮಾತ್ರ ಭಾರತದ ಬೌಲರ್‌ಗಳನ್ನು ಕಾಡಿದರು.

ಭಾರತ ಪರ ಉತ್ತಮವಾಗಿ ದಾಳಿ ಸಂಘಟಿಸಿದ ಜಸ್‌ಪ್ರೀತ್‌ ಬೂಮ್ರಾ ಹಾಗೂ ರವಿಚಂದ್ರನ್‌ ಅಶ್ವಿನ್‌ ತಲಾ ಮೂರು ವಿಕೆಟ್‌ ಕಬಳಿಸಿದರೆ, ಇಶಾಂತ ಶರ್ಮಾ, ಮೊಹಮದ್‌ ಶಮಿ ತಲಾ ಎರಡು ವಿಕೆಟ್‌ ಉರುಳಿಸಿದರು.

ಎರಡನೇ ಇನಿಂಗ್ಸ್‌ ಆರಂಭಿಸಿರುವ ಭಾರತ ತಂಡ 116ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಕಳಪೆ ಫಾರ್ಮ್‌ನಿಂದ ತಂಡದಿಂದ ಹೊರ ಬೀಳುವ ಭೀತಿ ಎದುರಿಸುತ್ತಿರುವ ಕನ್ನಡಿಗ ಕೆ.ಎಲ್‌. ರಾಹುಲ್‌, ಮುರುಳಿ ವಿಜಯ್‌(18) ಜೊತೆ ಮೊದಲ ವಿಕೆಟ್‌ಗೆ 63 ರನ್‌ ಸೇರಿಸಿದರು. 67 ಎಸೆತಗಳನ್ನು ಎದುರಿಸಿದ ಅವರು 3 ಬೌಂಡರಿ 1 ಸಿಕ್ಸರ್‌ ಸಹಿತ 44 ರನ್‌ ಬಾರಿಸಿ ಜೋಶ್‌ ಹ್ಯಾಜಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದರು. 

ಮೊದಲ ಇನಿಂಗ್ಸ್‌ನ ಶತಕವೀರ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್‌ ಕೊಹ್ಲಿ ಕ್ರೀಸ್‌ನಲ್ಲಿದ್ದು, ಕ್ರಮವಾಗಿ 16 ಮತ್ತು 12 ರನ್‌ಗಳಿಸಿ ಆಡುತ್ತಿದ್ದಾರೆ.

ಸ್ಕೋರ್‌ ವಿವರ

ಭಾರತ ಮೊದಲ ಇನಿಂಗ್ಸ್‌: 88 ಓವರ್‌ಗಳಲ್ಲಿ 250 ರನ್‌ಗಳಿಗೆ ಆಲೌಟ್‌

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌: 98.4 ಓವರ್‌ಗಳಲ್ಲಿ 235 ರನ್‌ಗಳಿಗೆ ಆಲೌಟ್‌

ಟ್ರಾವಿಸ್‌ ಹೆಡ್‌ 72 ರನ್‌, ಜಸ್‌ಪ್ರೀತ್‌ ಬೂಮ್ರಾ 47ಕ್ಕೆ 3 ವಿಕೆಟ್‌, ರವಿಚಂದ್ರನ್‌ ಅಶ್ವಿನ್‌ 57ಕ್ಕೆ 3 ವಿಕೆಟ್‌, ಇಶಾಂತ ಶರ್ಮಾ 47ಕ್ಕೆ 2 ವಿಕೆಟ್‌, ಮೊಹಮದ್‌ ಶಮಿ 58ಕ್ಕೆ 2ವಿಕೆಟ್‌

ಭಾರತ ಎರಡನೇ ಇನಿಂಗ್ಸ್‌: 37 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 101 ರನ್‌

ಕೆ.ಎಲ್‌ ರಾಹುಲ್‌ 44 ರನ್‌, ಮುರುಳಿ ವಿಜಯ್‌ 18, ಚೇತೇಶ್ವರ ಪೂಜಾರ ಅಜೇಯ 16ರನ್‌, ವಿರಾಟ್‌ ಕೊಹ್ಲಿ ಅಜೇಯ 12ರನ್‌

ಮಿಷೇಲ್‌ ಸ್ಟಾರ್ಕ್‌ 11ಕ್ಕೆ1 ವಿಕೆಟ್‌, ಜೋಶ್‌ ಹ್ಯಾಜಲ್‌ವುಡ್‌ 23ಕ್ಕೆ1 ವಿಕೆಟ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು