ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ ಎದುರಿನ ಮೂರನೇ ಟೆಸ್ಟ್‌: ಲಾಬುಶೇನ್‌ ಶತಕ

ಬೃಹತ್‌ ಮೊತ್ತದತ್ತ ಆಸ್ಟ್ರೇಲಿಯಾ
Last Updated 3 ಜನವರಿ 2020, 19:30 IST
ಅಕ್ಷರ ಗಾತ್ರ

ಸಿಡ್ನಿ: ಉದಯೋನ್ಮುಖ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ (ಬ್ಯಾಟಿಂಗ್‌ 130; 210 ಎಸೆತ, 12ಬೌಂಡರಿ, 1ಸಿಕ್ಸರ್‌) ಇಲ್ಲಿನ ಸಿಡ್ನಿ ಮೈದಾನದಲ್ಲಿ ಶುಕ್ರವಾರ ಸುಂದರ ಶತಕ ಸಿಡಿಸಿದರು.

ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್‌ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತದತ್ತ ಹೆಜ್ಜೆ ಇಟ್ಟಿದೆ.

ಮೊದಲು ಬ್ಯಾಟ್‌ ಮಾಡಿದ ಟಿಮ್‌ ಪೇನ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್‌ಗೆ 283ರನ್‌ ಕಲೆಹಾಕಿದೆ.

ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡ 15ನೇ ಓವರ್‌ನಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. 39 ಎಸೆತಗಳನ್ನಾಡಿ 18ರನ್‌ ಗಳಿಸಿದ್ದ ಜೋ ಬರ್ನ್ಸ್‌, ಮೊದಲ ಎಸೆತದಲ್ಲಿ ಕಾಲಿನ್‌ ಗ್ರ್ಯಾಂಡ್‌ಹೋಮ್‌ಗೆ ವಿಕೆಟ್‌ ಒಪ್ಪಿಸಿದರು.

ಡೇವಿಡ್‌ ವಾರ್ನರ್‌ (45; 80ಎ, 3ಬೌಂ) ಮತ್ತು ಲಾಬುಶೇನ್‌, ಎರಡನೇ ವಿಕೆಟ್‌ಗೆ 56ರನ್‌ ಸೇರಿಸಿ ತಂಡದ ಮೊತ್ತವನ್ನು ಶತಕದ ಸನಿಹಕ್ಕೆ ತಂದು ನಿಲ್ಲಿಸಿದರು.

28ನೇ ಓವರ್‌ ಬೌಲ್‌ ಮಾಡಿದ ನೀಲ್‌ ವಾಗ್ನರ್‌, ಮೂರನೇ ಎಸೆತದಲ್ಲಿ ವಾರ್ನರ್‌ ವಿಕೆಟ್‌ ಉರುಳಿಸಿದರು. ಹೀಗಾಗಿ ಆಸ್ಟ್ರೇಲಿಯಾ ಆತಂಕಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆಯಾದ ಲಾಬುಶೇನ್‌ ಮತ್ತು ಸ್ಟೀವ್‌ ಸ್ಮಿತ್‌ (63; 182ಎ, 4ಬೌಂ) ಸುಂದರ ಇನಿಂಗ್ಸ್‌ ಕಟ್ಟಿದರು. ನ್ಯೂಜಿಲೆಂಡ್‌ ಬೌಲರ್‌ಗಳನ್ನು ಕಾಡಿದ ಈ ಜೋಡಿ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 156ರನ್‌ ಸೇರಿಸಿತು.

ಟೆಸ್ಟ್‌ನಲ್ಲಿ 28ನೇ ಅರ್ಧಶತಕ ಸಿಡಿಸಿದ ಸ್ಮಿತ್‌, ದಿನದಾಟ ಮುಗಿಯಲು ಏಳು ಓವರ್‌ಗಳು ಇದ್ದಾಗ ಗ್ರ್ಯಾಂಡ್‌ಹೋಮ್‌ಗೆ ವಿಕೆಟ್‌ ನೀಡಿದರು.

ಪಾನೀಯ ವಿರಾಮಕ್ಕೂ ಮುನ್ನ ಶತಕದ ಸಂಭ್ರಮ ಆಚರಿಸಿದ ಲಾಬುಶೇನ್‌, ನಂತರವೂ ಪ್ರವಾಸಿ ಬೌಲರ್‌ಗಳ ತಾಳ್ಮೆಗೆ ಸವಾಲಾದರು.

25 ವರ್ಷ ವಯಸ್ಸಿನ ಈ ಆಟಗಾರ ಟೆಸ್ಟ್‌ನಲ್ಲಿ ನಾಲ್ಕನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಈ ಸರಣಿಯಲ್ಲಿ ಅವರಿಂದ ಮೂಡಿಬಂದ ಎರಡನೇ ಶತಕ ಇದಾಗಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ; ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 3 ವಿಕೆಟ್‌ಗೆ 283 (ಡೇವಿಡ್‌ ವಾರ್ನರ್‌ 45, ಜೋ ಬರ್ನ್ಸ್‌ 18, ಮಾರ್ನಸ್‌ ಲಾಬುಶೇನ್‌ ಬ್ಯಾಟಿಂಗ್‌ 130, ಸ್ಟೀವ್‌ ಸ್ಮಿತ್‌ 63, ಮ್ಯಾಥ್ಯೂ ವೇಡ್‌ ಬ್ಯಾಟಿಂಗ್‌ 22; ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 63ಕ್ಕೆ2, ನೀಲ್‌ ವಾಗ್ನರ್‌ 48ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT