ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಜ್ವಾನ್ ಔಟ್ ವಿವಾದ: ICC ಎದುರು ಚರ್ಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀರ್ಮಾನ

Published 30 ಡಿಸೆಂಬರ್ 2023, 5:36 IST
Last Updated 30 ಡಿಸೆಂಬರ್ 2023, 8:56 IST
ಅಕ್ಷರ ಗಾತ್ರ

ಕರಾಚಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್‌ ರಿಜ್ವಾನ್‌ ಅವರು ಔಟಾದ ವಿಚಾರದ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಎದುರು ಚರ್ಚಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತೀರ್ಮಾನಿಸಿದೆ.

ಪಾಕಿಸ್ತಾನ ಹಾಗೂ ಆತಿಥೇಯ ಆಸ್ಟ್ರೇಲಿಯಾ ತಂಡಗಳು ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮುಖಾಮುಖಿಯಾಗಿವೆ. ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ, ಸರಣಿಯಲ್ಲಿ 2–0 ಅಂತರದ ಮುನ್ನಡೆ ಸಾಧಿಸಿದೆ. ಆದರೆ, ಎರಡನೇ ಪಂದ್ಯದಲ್ಲಿ ಮೊಹಮ್ಮದ್‌ ರಿಜ್ವಾನ್‌ ಅವರು ಔಟ್‌ ಎಂದು ಅಂಪೈರ್‌ ನೀಡಿದ್ದ ತೀರ್ಪು ಚರ್ಚೆ ಹುಟ್ಟುಹಾಕಿದೆ.

ಫಲಿತಾಂಶ ಬದಲಿಸಿದ ವಿಕೆಟ್
ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 318 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಪಾಕ್‌, 264 ರನ್‌ ಗಳಿಸಿತ್ತು. 54 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡ 262ರನ್‌ಗಳಿಗೆ ಮುಗ್ಗರಿಸಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಗೆಲ್ಲಲು 317 ರನ್ ಗುರಿ ನಿಗದಿಯಾಯಿತು.

ಗುರಿ ಬೆನ್ನತ್ತಿದ ಪಾಕ್‌ ತಂಡ 60 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 219 ರನ್‌ ಗಳಿಸಿತ್ತು. ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿದ್ದ ರಿಜ್ವಾನ್‌ (58 ಎಸೆತಗಳಲ್ಲಿ 25 ರನ್‌) ಮತ್ತು ಅಘಾ ಸಲ್ಮಾನ್‌ (58 ಎಸೆತಗಳಲ್ಲಿ 25 ರನ್‌) ಜೋಡಿ ಕ್ರೀಸ್‌ನಲ್ಲಿತ್ತು. ಇದರಿಂದಾಗಿ ಪ್ರವಾಸಿ ತಂಡ ಈ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಲಿದೆ ಎನ್ನಲಾಗಿತ್ತು. ಆದರೆ, 61ನೇ ಓವರ್ ಎಸೆದ ಆಸಿಸ್‌ ನಾಯಕ ಪಂದ್ಯಕ್ಕೆ ತಿರುವು ನೀಡಿದರು.

ಓವರ್‌ನ ನಾಲ್ಕನೇ ಎಸೆತ ಪುಟಿದು ಎದೆಯೆತ್ತರಕ್ಕೆ ಬರಲಿದೆ ಎಂದು ಅಂದಾಜಿಸಿದ ರಿಜ್ವಾನ್, ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಅವರು ಅಂದುಕೊಂಡಷ್ಟು ಮೇಲೇಳದ ಚೆಂಡು, ಗ್ಲೌಗೆ ತೀರಾ ಹತ್ತಿರದಲ್ಲೇ ಸಾಗಿ, ವಿಕೆಟ್‌ ಕೀಪರ್‌ ಕೈ ಸೇರಿತು. ಕಮಿನ್ಸ್‌ ಹಾಗೂ ಸಹ ಆಟಗಾರರು ಔಟ್‌ಗಾಗಿ ಮನವಿ ಮಾಡಿದರು. ಅಂಪೈರ್‌ ಔಟ್‌ ನೀಡಲಿಲ್ಲ. ಈ ವೇಳೆ, ಆಸಿಸ್‌ ಡಿಆರ್‌ಎಸ್‌ ಮನವಿ ಮಾಡಿತು.

ಪರಿಶೀಲನೆ ವೇಳೆ ಚೆಂಡು ಗ್ಲೌಗೆ ತಾಗಿದೆ ಎಂದು ಔಟ್‌ ನೀಡಲಾಯಿತು. ಆಗ ರಿಜ್ವಾನ್‌ ಆಕ್ಷೇಪ ವ್ಯಕ್ತಪಡಿಸಿದರಾದರೂ ಪೆವಿಲಿಯನ್‌ಗೆ ಮರಳದೆ ಬೇರೆ ದಾರಿ ಇರಲಿಲ್ಲ.

ರಿಜ್ವಾನ್‌ ಔಟಾದ ಬಳಿಕ ಪಾಕ್‌ ತಂಡದ ಉಳಿದ 4 ವಿಕೆಟ್‌ಗಳು 18 ರನ್‌ ಅಂತರದಲ್ಲಿ ಉರುಳಿದವು. ಹೀಗಾಗಿ 79 ರನ್‌ ಅಂತರದ ಸೋಲು ಅನುಭವಿಸಬೇಕಾಯಿತು. ಇದರಿಂದಾಗಿ ಪಾಕ್ ಪಡೆ ಸರಣಿಯನ್ನೂ ಕಳೆದುಕೊಳ್ಳುವಂತಾಯಿತು.

ಐಸಿಸಿ ಎದುರು ಚರ್ಚೆಗೆ ಪಿಸಿಬಿ ನಿರ್ಧಾರ
ಪಂದ್ಯದ ವೇಳೆ ಅಂಪೈರ್‌ಗಳು ನೀಡಿದ ತೀರ್ಪುಗಳು ಮತ್ತು ತಂತ್ರಜ್ಞಾನ ಬಳಸಿದ ರೀತಿಯ ಬಗ್ಗೆ, ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ತಂಡದ ನಿರ್ದೇಶಕ ಮೊಹಮ್ಮದ್‌ ಹಫೀಜ್‌ ಅವರೊಂದಿಗೆ ಮಾತನಾಡಿದ್ದಾರೆ. ಇದೀಗ ರಿಜ್ವಾನ್‌ ಔಟ್‌ ವಿಚಾರವಾಗಿ ಐಸಿಸಿ ಎದುರು ಚರ್ಚಿಸಲು ಪಿಸಿಬಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಂದ್ಯದ ಬಳಿಕ ಮಾತನಾಡಿದ ಹಫೀಜ್‌, 'ಇಡೀ ಪಂದ್ಯವನ್ನು ಗಮನಿಸಿದರೆ, ಅಂಪೈರ್‌ಗಳು ಅಸಮರ್ಪಕವಾದ ತೀರ್ಪುಗಳನ್ನು ನೀಡಿದ್ದು ತಿಳಿಯುತ್ತದೆ. ನಾವು ಸ್ವಾಭಾವಿಕವಾಗಿ ತುಂಬಾ ಉತ್ತಮವಾಗಿ ಆಡಿದೆವು. ಕ್ರಿಕೆಟ್‌ನ ಮೂಲ ಅಂಶಗಳು ಚೆನ್ನಾಗಿ ಅರಿತಿದ್ದೇವೆ. ಆದಾಗ್ಯೂ, ನಿಜವಾದ ಕ್ರಿಕೆಟ್‌ಗಿಂತ ಹೆಚ್ಚಾಗಿ ತಂತ್ರಜ್ಞಾನದ ಮೇಲೆ ಅವಲಂಬಿತವಾದಂತೆ ಕೆಲವೊಮ್ಮೆ ಭಾಸವಾಗುತ್ತದೆ. ಈ ವಿಚಾರದಲ್ಲಿ ಸುಧಾರಣೆಯಾಗಬೇಕಿದೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ.

ಕ್ರೀಡೆಯಲ್ಲಿ ಸ್ಪಷ್ಟತೆ ಮತ್ತು ನಿಖರತೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಒತ್ತಿ ಹೇಳಿರುವ ಅವರು, 'ಕ್ರೀಡೆಯಲ್ಲಿ ತಂತ್ರಜ್ಞಾನ ಅಳವಡಿಸುವುದನ್ನು ನಾನು ವಿರೋಧಿಸುತ್ತಿಲ್ಲ. ಆದರೆ, ಅನುಮಾನ ಹಾಗೂ ಗೊಂದಲಗಳನ್ನು ಮೂಡಿಸುವಂತಿದ್ದರೆ ಅದನ್ನು (ತಂತ್ರಜ್ಞಾನ) ಒಪ್ಪಲಾಗದು. ಕೆಲವು ನಿರ್ಧಾರಗಳನ್ನು ಅರ್ಥಮಾಡಿಕೊಳ್ಳುವುದೇ ಅಸಾಧ್ಯ. ಚೆಂಡು ಸ್ಟಂಪ್‌ಗೆ ಬಡಿಯುತ್ತಿದೆ ಎಂದರೆ ಅದು ಯಾವಾಗಲೂ ಔಟ್‌ ಆಗಿರುತ್ತದೆ. ಆದರೆ, ಅಂಪೈರ್‌ ಕಾಲ್‌ (ಡಿಆರ್‌ಎಸ್‌ ಬಳಿಕವೂ ಅಂಪೈರ್‌ ತಮ್ಮ ತೀರ್ಪನ್ನು ಹಾಗೇ ಉಳಿಸುವ ಆಯ್ಕೆ) ಏಕಿದೆ ಎಂಬುದು ಅರ್ಥವೇ ಆಗುತ್ತಿಲ್ಲ' ಎಂದು ಅಸಮಾಧಾನ ಹೊರಹಾಕಿದ್ದಾರೆ.

ರಿಜ್ವಾನ್‌ ಅವರೊಂದಿಗೆ ಮಾತನಾಡಿದ್ದೇನೆ. ಅವರು ಚೆಂಡು ತಮ್ಮ ಗ್ಲೌಗೆ ತಾಗಿಲ್ಲ ಎಂದು ಹೇಳಿದ್ದಾರೆ. ಮೈದಾನದಲ್ಲಿನ ಅಂಪೈರ್‌ಗಳು ತಾವು ನೀಡಿದ್ದ ತೀರ್ಪನ್ನು ಬದಲಿಸಿಕೊಳ್ಳಬೇಕಾದರೆ, ನಿರ್ಣಾಯಕ ಪುರಾವೆಗಳು ಇರಬೇಕು ಎಂದು ಹಫೀಜ್‌ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT