ಗುರುವಾರ , ಫೆಬ್ರವರಿ 27, 2020
19 °C
ಟಿ20 ಕ್ರಿಕೆಟ್

ತ್ರಿಕೋನ ಸರಣಿ ಫೈನಲ್ | ಮಂದಾನ ಅರ್ಧಶತಕ ವ್ಯರ್ಥ: ಆಸಿಸ್ ಎದುರು ಭಾರತಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ತ್ರಿಕೋನ ಟಿ20 ಸರಣಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಬಿರುಸಿನ ಅರ್ಧಶತಕದ ಗಳಿಸಿದರೂ ಉಳಿದ ಆಟಗಾರ್ತಿಯರ ವೈಫಲ್ಯದಿಂದಾಗಿ ಭಾರತಕ್ಕೆ ಜಯ ಸಿಗಲಿಲ್ಲ.

ಆಸ್ಟ್ರೇಲಿಯಾ, ಭಾರತ ಮತ್ತು ಇಂಗ್ಲೆಂಡ್‌ ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯ ಫೈನಲ್‌ ಇಂದು ನಡೆಯಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಬೆತ್‌ ಮೂನಿ ಅವರ ಭರ್ಜರಿ ಅರ್ಧಶತಕದ ನೆರವಿನಿಂದ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 155 ರನ್ ಗಳಿಸಿತು. 54 ಎಸೆತಗಳನ್ನು ಎದುರಿಸಿದ ಮೂನಿ, 9 ಬೌಂಡರಿ ಸಹಿತ 71 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಈ ಮೊತ್ತದೆದುರು ಬ್ಯಾಟಿಂಗ್ ಆರಂಭಿಸಿದ ಭಾರತ ಪರ, ಮಂದಾನ ಹೊರತುಪಡಿಸಿ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಕೇವಲ 37 ಎಸೆತಗಳಲ್ಲಿ 12 ಬೌಂಡರಿ ಸಿಡಿಸಿದ ಮಂದಾನ 178ರ ಸ್ಟ್ರೈಕ್‌ರೇಟ್‌ನಲ್ಲಿ 66 ರನ್‌ ಗಳಿಸಿದರು.

ನಾಲ್ಕನೇ ವಿಕೆಟ್‌ ರೂಪದಲ್ಲಿ ಮಂದಾನ ಔಟಾದಾಗ ತಂಡದ ಮೊತ್ತ 14.2 ಓವರ್‌ಗಳಲ್ಲಿ 115 ರನ್‌ ಆಗಿತ್ತು. ಉಳಿದಿದ್ದ 34 ಎಸೆತಗಳಲ್ಲಿ ತಂಡಕ್ಕೆ ಬೇಕಿದ್ದುದು 41 ರನ್‌ ಮಾತ್ರ. ಆದರೆ ಉಳಿದ ಆರು ವಿಕೆಟ್‌ಗಳು 29 ರನ್‌ ಗಳಿಸುವಷ್ಟರಲ್ಲೇ ಉರುಳಿದವು. ಹೀಗಾಗಿ ಆಸ್ಟ್ರೇಲಿಯಾ ಮಹಿಳೆಯರು 11 ರನ್‌ ಗೆಲುವು ಸಾಧಿಸಿ ತ್ರಿಕೋನ ಸರಣಿಯ ಚಾಂಪಿಯನ್ಸ್‌ ಎನಿಸಿಕೊಂಡರು.

ಈ ಪಂದ್ಯದ ಮೂಲಕ 16 ವರ್ಷದ ರಿಚಾ ಘೋಷ್‌ ಭಾರತ ಪರ ಪದಾರ್ಪಣೆ ಪಂದ್ಯವಾಡಿದರು.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 155

ಬೆತ್‌ ಮೂನಿ ಅಜೇಯ 71 ರನ್‌

ಭಾರತ: 20 ಓವರ್‌ಗಳಲ್ಲಿ 144ಕ್ಕೆ ಆಲೌಟ್‌
ಸ್ಮೃತಿ ಮಂದಾನ 66, ಜೆಸ್‌ ಜಾನ್‌ಸೆನ್‌ 12 ರನ್‌ಗೆ 5 ವಿಕೆಟ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು