ಸೋಮವಾರ, ಮೇ 23, 2022
30 °C

ಟೆಸ್ಟ್: ಕುಸಿದ ಪಾಕ್‌ಗೆ ಬಲ ತುಂಬಿದ ಬಾಬರ್, ಫವಾದ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ರಾವಲ್ಪಿಂಡಿ: ನಾಯಕ ಬಾಬರ್ ಆಜಂ ಅವರು ಅಮೋಘ ಅರ್ಧಶತಕ ಗಳಿಸಿ ಮಿಂಚಿದರು. ಫವಾದ್ ಆಲಂ ಕ್ರೀಸ್‌ನಲ್ಲಿ ತಳವೂರಿ ಬಾಬರ್‌ಗೆ ಉತ್ತಮ ಬೆಂಬಲ ನೀಡಿದರು. ಇವರಿಬ್ಬರ ಜೊತೆಯಾಟವು ಕುಸಿತದ ಹಾದಿಯಲ್ಲಿ ಸಾಗುತ್ತಿದ್ದ ಪಾಕಿಸ್ತಾನ ತಂಡಕ್ಕೆ ಆಸರೆಯಾಯಿತು.

ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್‌ ಪಂದ್ಯದ ಮೊದಲ ದಿನ ಮಳೆಯಿಂದಾಗಿ ಆಟ ನಿಂತಾಗ ಪಾಕಿಸ್ತಾನ 58 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 145 ರನ್ ಗಳಿಸಿದೆ. ನಾಲ್ಕನೇ ವಿಕೆಟ್‌ಗೆ 123 ರನ್‌ಗಳ ಜೊತೆಯಾಟ ಆಡಿದ ಆಜಂ (77; 125 ಎಸೆತಕ, 12 ಬೌಂಡರಿ) ಮತ್ತು ಫವಾದ್ (42; 138 ಎ, 5 ಬೌಂ) ಕ್ರೀಸ್‌ನಲ್ಲಿದ್ದಾರೆ.    

ಸ್ಪಿನ್ನರ್ ಕೇಶವ್ ಮಹಾರಾಜ್ ಮತ್ತು ಆ್ಯನ್ರಿಕ್ ನೊರ್ಕಯೆ ಅವರ ದಾಳಿಗೆ ನಲುಗಿದ ಪಾಕಿಸ್ತಾನ 22 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಜಂ ಮತ್ತು ಫವಾದ್ ಜೊತೆಗೂಡಿದರು. ಚಹಾ ವಿರಾಮಕ್ಕೆ ಮೊದಲು ಮೋಡ ದಟ್ಟೈಸಿ ಮಳೆ ಸುರಿಯಲು ಆರಂಭವಾಯಿತು. ವಿರಾಮದ ವೇಳೆ ಮಳೆ ಜೋರಾದ ಕಾರಣ ದಿನದಾಟವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು.

ಟಾಸ್ ಗೆದ್ದ ಆತಿಥೇಯರು ಬ್ಯಾಟಿಂಗ್ ಆಯ್ದುಕೊಂಡರು. ಸ್ಪಿನ್ನರ್‌ಗಳಿಗೆ ನೆರವಾದ ಪಿಚ್‌ನಲ್ಲಿ ಕೇಶವ್‌ ಮಹಾರಾಜ್ ಮಿಂಚಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಇಮ್ರಾನ್ ಬಟ್ ಮತ್ತು ಅಬಿದ್ ಅಲಿ ಜಾಗರೂಕತೆಯಿಂದ ಆಡಿ 21 ರನ್ ಸೇರಿಸಿದರು. ಈ ಸಂದರ್ಭದಲ್ಲಿ, ಒಂಬತ್ತನೇ ಓವರ್‌ನಲ್ಲೇ ಮಹಾರಾಜ್ ಕೈಗೆ ಚೆಂಡು ನೀಡಿದ್ದು ಫಲ ಕೊಟ್ಟಿತು. ಇಮ್ರಾನ್ ಬಟ್ ಅವರನ್ನು ಮಹಾರಾಜ್ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಕೈಗಳಲ್ಲಿ ಬಂಧಿಯಾಗಿಸಿದರು. ಅಬಿದ್ ಅಲಿ ಅವರು ನೊರ್ಕಯೆಗೆ ಬಲಿಯಾದರು. ಅಜರ್‌ ಅಲಿಯನ್ನು ಮಹಾರಾಜ್ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿದರು. 23 ಎಸೆತಗಳ ಅಂತರದಲ್ಲಿ ಒಂದು ರನ್ ಮಾತ್ರ ಗಳಿಸಿದ ‍ಪಾಕಿಸ್ತಾನ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಮೊದಲ ಟೆಸ್ಟ್‌ನಲ್ಲಿ ಕ್ರಮವಾಗಿ ಏಳು ಮತ್ತು 30 ರನ್‌ ಗಳಿಸಿದ ಆಜಂ ಇಲ್ಲಿ ಮನಮೋಹಕ ಬ್ಯಾಟಿಂಗ್ ಮಾಡಿದರು. ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಆಲಂ ಅದೇ ಲಯದಲ್ಲಿ ಬ್ಯಾಟಿಂಗ್ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು