ಬುಧವಾರ, ಮೇ 12, 2021
20 °C
ಮುಷ್ಫಿಕುರ್ ರಹೀಮ್, ಲಿಟನ್ ದಾಸ್ ಅರ್ಧಶತಕ; ದಾಖಲೆ ಮೊತ್ತ ಕಲೆ ಹಾಕಿದ ಬಾಂಗ್ಲಾದೇಶ

SL vs BAN: ತಿರುಗೇಟು ನೀಡುವ ಹಾದಿಯಲ್ಲಿ ಶ್ರೀಲಂಕಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪಲ್ಲೆಕೆಲೆ, ಶ್ರೀಲಂಕಾ: ಮೊದಲ ಎರಡು ದಿನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಭರ್ಜರಿ ಆಟದ ಮೂಲಕ ಸಂಭ್ರಮಿಸಿದ ಬಾಂಗ್ಲಾದೇಶ ತಂಡ ಮಧ್ಯಮ ಕ್ರಮಾಂಕದ ಆಟಗಾರರ ಅರ್ಧಶತಕಗಳ ಮೂಲಕ ಸಂಭ್ರಮಿಸಿತು. ಮುಷ್ಫಿಕುರ್ ರಹೀಮ್ (ಔಟಾಗದೆ 68; 156 ಎಸೆತ, 6 ಬೌಂಡರಿ) ಮತ್ತು ಲಿಟನ್ ದಾಸ್‌ (50; 67 ಎ, 5 ಬೌಂ, 1 ಸಿ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ತಂಡ ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕಿತು.

ಆತಿಥೇಯ ಶ್ರೀಲಂಕಾ ಕೂಡ ತಿರುಗೇಟು ನೀಡಿದ್ದು ಮೂರನೇ ದಿನದಾಟದ ಮುಕ್ತಾಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಕಳೆದುಕೊಂಡು 229 ರನ್ ಕಲೆ ಹಾಕಿದೆ. ಬಾಂಗ್ಲಾದೇಶ ಏಳು ವಿಕೆಟ್‌ಗಳಿಗೆ 541 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಶ್ರೀಲಂಕಾದ ದಿಮುತ್ ಕರುಣರತ್ನೆ (ಔಟಾಗದೆ 85; 211 ಎ, 8 ಬೌಂ) ಮತ್ತು ಲಾಹಿರು ತಿರಿಮನೆ (58; 125 ಎ, 8 ಬೌಂ) ಮೊದಲ ವಿಕೆಟ್‌ಗೆ 114 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 

39ನೇ ಓವರ್‌ನಲ್ಲಿ ಲಾಹಿರು ವಿಕೆಟ್ ಕಳೆದುಕೊಂಡರು. ಆದರೆ ದಿಮುತ್ ಗಟ್ಟಿಯಾಗಿ ತಳವೂರಿದರು. ಒಶಾಡ ಫೆರ್ನಾಂಡೊ ಮತ್ತು ಏಂಜಲೊ ಮ್ಯಾಥ್ಯೂಸ್ ನೆರವಿನೊಂದಿಗೆ ಅವರು ತಂಡದ ಮೊತ್ತವನ್ನು ಇನ್ನೂರರ ಸನಿಹ ತಲುಪಿಸಿದರು. ಮ್ಯಾಥ್ಯೂಸ್ ಔಟಾದ ನಂತರ ದಿಮುತ್ ಜೊತೆಗೂಡಿದ ಧನಂಜಯ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 39 ರನ್ ಸೇರಿಸಿದರು. 

ಭಾರತದ ದಾಖಲೆ ಹಿಂದಿಕ್ಕಿದ ಬಾಂಗ್ಲಾ
ಎರಡನೇ ದಿನ 43 ರನ್‌ ಗಳಿಸಿದ್ದ ಮುಷ್ಫಿಕುರ್ ಶುಕ್ರವಾರ ಅರ್ಧಶತಕ ಪೂರೈಸಿದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ 23ನೇ ಅರ್ಧಶತಕವಾಗಿದೆ. ಗುರುವಾರ ಅಜೇಯರಾಗಿದ್ದ ಲಿಟನ್ ದಾಸ್ ಕೂಡ ಅರ್ಧಶತಕ ಗಳಿಸಿದರು. 7ಕ್ಕೆ 541 ರನ್ ಗಳಿಸಿದ ಬಾಂಗ್ಲಾದೇಶ ಈ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ದಾಖಲೆ ಬರೆಯಿತು. 2017ರಲ್ಲಿ ಭಾರತ ಗಳಿಸಿದ್ದ 487 ರನ್ ಈ ವರೆಗಿನ ಗರಿಷ್ಠ ಮೊತ್ತವಾಗಿತ್ತು.

ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ, ಮೊದಲ ಇನಿಂಗ್ಸ್‌
(ಗುರುವಾರ 4ಕ್ಕೆ 474): 173 ಓವರ್‌ಗಳಲ್ಲಿ 7ಕ್ಕೆ 541 (ಮುಷ್ಫಿಕುರ್ ರಹೀಮ್ ಔಟಾಗದೆ 68, ಲಿಟನ್ ದಾಸ್‌ 50; ಸುರಂಗ ಲಕ್ಮಲ್ 81ಕ್ಕೆ1, ವಿಶ್ವ ಫೆರ್ನಾಂಡೊ 96ಕ್ಕೆ4, ಲಾಹಿರು ಕುಮಾರ 88ಕ್ಕೆ1, ಧನಂಜಯ ಡಿ ಸಿಲ್ವಾ 130ಕ್ಕೆ1)
ಶ್ರೀಲಂಕಾ, ಮೊದಲ ಇನಿಂಗ್ಸ್‌: 73 ಓವರ್‌ಗಳಲ್ಲಿ 3ಕ್ಕೆ 229 (ದಿಮುತ್ ಕರುಣರತ್ನೆ ಔಟಾಗದೆ 85, ಲಾಹಿರು ತಿರಿಮನೆ 58, ಒಷಾಡ ಫೆರ್ನಾಂಡೊ 20, ಏಂಜೆಲೊ ಮ್ಯಾಥ್ಯೂಸ್‌ 25, ಧನಂಜಯ ಡಿ ಸಿಲ್ವಾ ಔಟಾಗದೆ 26; ತಸ್ಕಿನ್ ಅಹಮ್ಮದ್ 35ಕ್ಕೆ1, ಹಸನ್‌ 60ಕ್ಕೆ1, ಇಸ್ಲಾಂ 56ಕ್ಕೆ1).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು