ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್‌: ರೋಹಿತ್‌ ಬಳಗಕ್ಕೆ ಬಾಂಗ್ಲಾ ‘ಹುಲಿಗಳ‘ ಸವಾಲು

ಆತಿಥೇಯರಿಗೆ ಅಜೇಯ ದಾಖಲೆ ಮುಂದುವರಿಸುವ ತವಕ: ಪದಾರ್ಪಣೆಯ ಕನಸಿನಲ್ಲಿ ಶಿವಂ ದುಬೆ
Last Updated 3 ನವೆಂಬರ್ 2019, 2:28 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯ ಮೇಲೆ ಈಗ ಮಾಲಿನ್ಯದ ಮೋಡ ಕವಿದಿದೆ. ‘ರ‍್ಯಾಲಿಗಳ ನಗರಿ’ಯಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ. ಹೀಗಾಗಿ ಆರೋಗ್ಯ ತುರ್ತು ಸ್ಥಿತಿ ಘೋಷಿಸಲಾಗಿದೆ.

ಇಂತಹ ಪರಿಸ್ಥಿತಿಯಲ್ಲೇ ಫಿರೋಜ್‌ ಷಾ ಕೋಟ್ಲಾದ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಕಲರವ ಶುರುವಾಗಿದೆ. ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಪೈಪೋಟಿ ನಡೆಸಲು ಸಜ್ಜಾಗಿವೆ.

ಬಾಂಗ್ಲಾ ವಿರುದ್ಧ ಇದುವರೆಗೆ ಆಡಿರುವ ಎಂಟು ಪಂದ್ಯಗಳನ್ನೂ ಜಯಿಸಿರುವ ಭಾರತ, ಅಜೇಯ ಗೆಲುವಿನ ದಾಖಲೆ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ.

ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆ ಹೊತ್ತಿರುವ ರೋಹಿತ್‌ ಶರ್ಮಾ ‘ಬಾಂಗ್ಲಾ ಹುಲಿಗಳ’ನ್ನು ಸುಲಭವಾಗಿ ಬೇಟೆಯಾಡುವ ವಿಶ್ವಾಸದಲ್ಲಿದ್ದಾರೆ. ತಂಡದಲ್ಲಿರುವವರೆಲ್ಲಾ ಉತ್ತಮ ಲಯದಲ್ಲಿರುವ ಕಾರಣ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವುದು ರೋಹಿತ್‌ಗೆ ತುಸು ಕಷ್ಟವಾಗಬಹುದು.

ಗಾಯದಿಂದ ಚೇತರಿಸಿಕೊಂಡಿರುವ ಶಿಖರ್‌ ಧವನ್‌, ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿದ್ದರೂ ಅವರಿಗೆ ಮತ್ತೊಂದು ಅವಕಾಶ ನೀಡುವ ನಿರೀಕ್ಷೆ ಇದೆ. ಒಂದೊಮ್ಮೆ ಅವಕಾಶ ಲಭಿಸಿದರೆ ಅವರು ರೋಹಿತ್‌ ಜೊತೆ ಇನಿಂಗ್ಸ್‌ ಆರಂಭಿಸುವುದು ಖಚಿತ. ಆಗ ಕರ್ನಾಟಕದ ಕೆ.ಎಲ್‌.ರಾಹುಲ್‌ ಮೂರನೇ ಕ್ರಮಾಂಕದಲ್ಲಿ ಆಡಬೇಕಾಗಬಹುದು.

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ರನ್‌ ಮಳೆ ಸುರಿಸಿದ್ದ ರೋಹಿತ್‌, ಕೋಟ್ಲಾದಲ್ಲೂ ರನ್‌ ಗೋಪುರ ಕಟ್ಟುವ ತವಕದಲ್ಲಿದ್ದಾರೆ. ವಿಜಯ್‌ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದ ರಾಹುಲ್‌ ಕೂಡ ಬಾಂಗ್ಲಾ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಶ್ರೇಯಸ್‌ ಅಯ್ಯರ್‌, ಕೃಣಾಲ್‌ ಪಾಂಡ್ಯ ಮತ್ತು ಸ್ಥಳೀಯ ಆಟಗಾರ ರಿಷಭ್‌ ಪಂತ್‌ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ.

ಮುಂಬೈನ 26 ವರ್ಷದ ಆಲ್‌ರೌಂಡರ್‌ ಶಿವಂ ದುಬೆ ಅವರು ಚುಟುಕು ಮಾದರಿಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ದೇಶಿ ಕ್ರಿಕೆಟ್‌ನಲ್ಲಿ ಸ್ಫೋಟಕ ಆಟ ಆಡಿ ಆಯ್ಕೆಗಾರರ ಗಮನ ಸೆಳೆದಿರುವ ಅವರು ಟ್ವೆಂಟಿ–20ಯಲ್ಲಿ 142.35 ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಒಂದೊಮ್ಮೆ ದುಬೆಗೆ ಅವಕಾಶ ಸಿಕ್ಕರೆ, ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಕೇರಳದ ಸಂಜು ಸ್ಯಾಮ್ಸನ್‌ ‘ಬೆಂಚ್‌’ ಕಾಯಬೇಕಾಗುತ್ತದೆ.

ಪ್ರಮುಖ ವೇಗದ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರು ಈ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಶಾರ್ದೂಲ್‌ ಠಾಕೂರ್‌, ಖಲೀಲ್‌ ಅಹಮದ್‌ ಮತ್ತು ದೀಪಕ್‌ ಚಾಹರ್‌ ಅವರಿಗೆ ಸಾಮರ್ಥ್ಯ ಸಾಬೀತುಪಡಿಸಲು ಈ ಸರಣಿ ಉತ್ತಮ ವೇದಿಕೆಯಾಗಿದೆ. ಈ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಸದ್ಯದ ಕುತೂಹಲ. ದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿರುವ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಮತ್ತು ಯುವ ಸ್ಪಿನ್ನರ್‌ ರಾಹುಲ್‌ ಚಾಹರ್‌ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ.

ಗಾಯಗೊಂಡಿರುವ ‘ಹುಲಿ’: ಬಾಂಗ್ಲಾ ತಂಡವು ಸದ್ಯ ಗಾಯಗೊಂಡ ಹುಲಿಯಂತಾಗಿದೆ. ಪ್ರಮುಖ ಆಟಗಾರರಾದ ಶಕೀಬ್‌ ಅಲ್‌ ಹಸನ್‌, ತಮೀಮ್‌ ಇಕ್ಬಾಲ್‌, ಮಷ್ರಫೆ ಮೊರ್ತಜಾ ಮತ್ತು ಮೊಹಮ್ಮದ್‌ ಸೈಫುದ್ದೀನ್‌ ಅವರ ಅನುಪಸ್ಥಿತಿ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಪ್ರವಾಸಿ ಪಡೆಯು ನಾಯಕ ಮಹಮದುಲ್ಲಾ, ಅನುಭವಿ ವಿಕೆಟ್‌ ಕೀಪರ್‌ ಮುಷ್ಫಿಕರ್‌ ರಹೀಮ್‌ ಮತ್ತು ಎಡಗೈ ವೇಗದ ಬೌಲರ್‌ ಮುಸ್ತಾಫಿಜುರ್‌ ರೆಹಮಾನ್‌ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌ ಮತ್ತು ಮೊಹಮ್ಮದ್‌ ಮಿಥುನ್‌ ಅವರಂತಹ ಪ್ರತಿಭಾ‌ನ್ವಿತರೂ ತಂಡದಲ್ಲಿದ್ದಾರೆ. ಇವರು ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರೆ ಪ್ರವಾಸಿ ಪಡೆಯ ಮೊದಲ ಜಯದ ಕನಸು ನನಸಾಗಬಹುದು.

**
ತಂಡದಲ್ಲಿ ಸಾಕಷ್ಟು ಮಂದಿ ಯುವ ಆಟಗಾರರು ಇದ್ದಾರೆ. ಮುಂದಿನ ವರ್ಷ ವಿಶ್ವ ಟ್ವೆಂಟಿ–20 ಟೂರ್ನಿ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯುವಕರಿಗೆ ಹೆಚ್ಚಿನ ಅವಕಾಶ ನೀಡಬೇಕಿದೆ.
–ರೋಹಿತ್ ಶರ್ಮಾ, ಭಾರತ ತಂಡದ ನಾಯಕ

**
ವಾಯುಮಾಲಿನ್ಯದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಭಾನುವಾರದ ಪೈಪೋಟಿಯಲ್ಲಿ ಭಾರತವನ್ನು ಮಣಿಸುವುದು ನಮ್ಮ ಗುರಿ. ಇದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇವೆ.
–ಮಹಮದುಲ್ಲಾ, ಬಾಂಗ್ಲಾದೇಶ ತಂಡದ ನಾಯಕ

ತಂಡಗಳು ಇಂತಿವೆ
ಭಾರತ:
ರೋಹಿತ್‌ ಶರ್ಮಾ (ನಾಯಕ), ಖಲೀಲ್‌ ಅಹಮದ್‌, ಯಜುವೇಂದ್ರ ಚಾಹಲ್‌, ದೀಪಕ್‌ ಚಾಹರ್‌, ರಾಹುಲ್‌ ಚಾಹರ್‌, ಶಿಖರ್‌ ಧವನ್‌, ಶಿವಂ ದುಬೆ, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ಕೃಣಾಲ್‌ ಪಾಂಡ್ಯ, ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಶಾರ್ದೂಲ್‌ ಠಾಕೂರ್‌.

ಬಾಂಗ್ಲಾದೇಶ: ಮಹಮದುಲ್ಲಾ (ನಾಯಕ), ತೈಜುಲ್‌ ಇಸ್ಲಾಂ, ಮೊಹಮ್ಮದ್‌ ಮಿಥುನ್‌, ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌, ನಯೀಮ್‌ ಶೇಖ್‌, ಮುಷ್ಫಿಕರ್‌ ರಹೀಮ್‌, ಅಫೀಫ್‌ ಹೊಸೈನ್‌, ಮೊಸಾದೆಕ್‌ ಹೊಸೈನ್‌, ಅಮಿನುಲ್‌ ಇಸ್ಲಾಂ, ಅರಾಫತ್‌ ಸನ್ನಿ, ಅಬು ಹೈದರ್‌, ಅಲ್‌ ಅಮಿನ್‌ ಹೊಸೈನ್‌, ಮುಸ್ತಾಫಿಜುರ್‌ ರೆಹಮಾನ್‌ ಮತ್ತು ಶಫಿವುಲ್ಲಾ ಇಸ್ಲಾಂ.

ಆರಂಭ: ರಾತ್ರಿ 7 (ಭಾರತೀಯ ಕಾಲಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT