ಭಾನುವಾರ, ಆಗಸ್ಟ್ 1, 2021
20 °C

ಐಪಿಎಲ್–ಸಿಪಿಎಲ್ ವೇಳಾಪಟ್ಟಿ ಹೊಂದಾಣಿಕೆ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಸೆಪ್ಟೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಗೆ ಅಡೆತಡೆಯಾಗದಂತೆ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ವೇಳಾಪಟ್ಟಿ ರೂಪಿಸಲು ಕೋರಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೆಸ್ಟ್ ಇಂಡೀಸ್ ಮಂಡಳಿಯೊಂದಿಗೆ ಮಾತುಕತೆ ನಡೆಸಿದೆ.

ಈಚೆಗೆ ನಡೆದಿದ್ದ ಐಪಿಎಲ್ 14ನೇ ಆವೃತ್ತಿಯ ಟೂರ್ನಿಯನ್ನು ಕೆಲವು ಆಟಗಾರರಿಗೆ ಕೋವಿಡ್ ಸೋಂಕು ತಗುಲಿದ್ದ ಕಾರಣಕ್ಕಾಗಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇನ್ನುಳಿದಿರುವ 31 ಪಂದ್ಯಗಳನ್ನು ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. 

ಸಿಪಿಎಲ್ ಆಗಸ್ಟ್‌ 28ರಿಂದ ಸೆಪ್ಟೆಂಬರ್ 19ರವರೆಗೆ ಆಯೋಜನೆಗೊಳ್ಳಲಿದೆ. ಅದರೆ ಐಪಿಎಲ್ ಟೂರ್ನಿಯನ್ನು ಸೆ. 18ರಿಂದ ಅ.10ರವರೆಗೆ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಸಿಪಿಎಲ್‌ನಲ್ಲಿ ಆಡುವ ವಿಂಡೀಸ್ ಮತ್ತಿತರ ದೇಶಗಳ ಆಟಗಾರರು ಐಪಿಎಲ್‌ನಲ್ಲಿಯೂ ಭಾಗವಹಿಸಲು ಅನುವಾಗುವಂತೆ ವೇಳಾಪಟ್ಟಿಯನ್ನು ಮರುರಚಿಸಲು ಬಿಸಿಸಿಐ, ವಿಂಡೀಸ್ ಮಂಡಳಿಯನ್ನು ಕೋರಿದೆ.

ಆದರೆ ಈ ವಿಷಯದಲ್ಲಿ ಒಮ್ಮತಕ್ಕೆ ಬರುವಲ್ಲಿ ಉಭಯ ಮಂಡಳಿಗಳಿಗೆ ಸಾಧ್ಯವಾಗಿಲ್ಲವೆನ್ನಲಾಗಿದೆ.

‘ಸಿಪಿಎಲ್ ವೇಳಾಪಟ್ಟಿಯನ್ನು ಬದಲಾಯಿಸಿ, ಐಪಿಎಲ್‌ ಆರಂಭಕ್ಕೂ 10ದಿನಗಳ ಮುನ್ನ ಮುಗಿಯುವಂತೆ ರೂಪಿಸಿದರೆ ಅನುಕೂಲವಾಗುತ್ತದೆ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವಿಂಡೀಸ್‌ನ ಕೀರನ್ ಪೊಲಾರ್ಡ್, ಕ್ರಿಸ್ ಗೇಲ್, ನಿಕೊಲಸ್ ಪೂರನ್, ಜೇಸನ್ ಹೋಲ್ಡರ್, ಡ್ವೇನ್ ಬ್ರಾವೊ, ಶಿಮ್ರೊನ್ ಹೆಟ್ಮೆಯರ್, ಫ್ಯಾಬಿಯನ್ ಅಲನ್, ಕೀಮೊ ಪಾಲ್, ಸುನಿಲ್ ನಾರಾಯಣ ಮತ್ತು ಆ್ಯಂಡ್ರೆ ರಸೆಲ್ ಐಪಿಎಲ್‌ನ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ. ಟ್ರಿನಿಡಾಡ್ ಮತ್ತು ಟೊಬಾಗೊ ತಂಡದ ಕೋಚ್ ಬ್ರೆಂಡನ್ ಮೆಕ್ಲಮ್ ಕೂಡ  ಐಪಿಎಲ್‌ನ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು