ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ಗೆ ಹಸಿರು ನಿಶಾನೆ; ಗೊಂದಲದಲ್ಲಿ ರಣಜಿ ಟ್ರೋಫಿ

Last Updated 17 ಜನವರಿ 2021, 18:32 IST
ಅಕ್ಷರ ಗಾತ್ರ

ನವದೆಹಲಿ: ಈ ವರ್ಷದ ಮಾರ್ಚ್ ತಿಂಗಳಲ್ಲಿ ದೇಶಿ ಮಹಿಳಾ ಕ್ರಿಕೆಟ್ ಟೂರ್ನಿಗಳನ್ನು ಪುನರಾರಂಭಿಸಲು ಭಾನುವಾರ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅ‍‍ಪೆಕ್ಸ್ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಗ್ಗೆ ನಿರ್ಧಾರ ಕೈಗೊಳ್ಳಲು ಸಭೆ ವಿಫಲವಾಯಿತು.

ಕೋವಿಡ್‌–19ರ ಕಾರಣದಿಂದಾಗಿ ದೇಶಿ ಕ್ರಿಕೆಟ್ ಟೂರ್ನಿಗಳ ಆರಂಭಕ್ಕೆ ತಿಂಗಳುಗಳ ಕಾಲ ಅಡ್ಡಿಯಾಗಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಮೂಲಕ ದೇಶಿ ಕ್ರಿಕೆಟ್ ಋತು ಈಗ ಆರಂಭಗೊಂಡಿದೆ. ಹೀಗಾಗಿ ರಣಜಿ ಟೂರ್ನಿ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇತ್ತು. ಆದರೆ ಅಧ್ಯಕ್ಷ ಸೌರವ್ ಗಂಗೂಲಿ ಹೊರತುಪಡಿಸಿದರೆ ಉಳಿದ ಯಾರಿಂದಲೂ ಟೂರ್ನಿ ಆರಂಭಿಸಲು ಪೂರಕವಾದ ಅಭಿಪ್ರಾಯ ಬರಲಿಲ್ಲ.

'ರಣಜಿ ಟೂರ್ನಿ ಆಯೋಜಿಸುವುದು ಉತ್ತಮ ಎಂಬುದು ಅಧ್ಯಕ್ಷರ ಅಭಿಪ್ರಾಯವಾಗಿತ್ತು. ಆದರೆ ಇತರ ಕೆಲ ಸದಸ್ಯರು ವಿಜಯ್ ಹಜಾರೆ ಟೂರ್ನಿ ಆಯೋಜಿಸುವತ್ತ ಒಲವು ತೋರಿದರು. ಸದ್ಯದ ಪರಿಸ್ಥಿತಿಯಲ್ಲಿ ರಣಜಿ ಟ್ರೋಫಿ ಟೂರ್ನಿ ಆಯೋಜಿಸಿದರೆ ಆಟಗಾರರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕರೆದೊಯ್ಯುವುದು ಕಠಣ ಸವಾಲಾಗಲಿರುವುದೇ ಇದಕ್ಕೆ ಕಾರಣ. ರಣಜಿ ಅಥವಾ ವಿಜಯ್ ಹಜಾರೆ ಟೂರ್ನಿಯ ಪೈಕಿ ಒಂದನ್ನು ಈ ವಾರಾಂತ್ಯದೊಳಗೆ ಅಂತಿಮಗೊಳಿಸಲಾಗುವುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಐಪಿಎಲ್‌ ಟೂರ್ನಿ ನಡೆಯುವ ಸಾಧ್ಯತೆ ಇರುವುದರಿಂದ ದೇಶಿ ಟೂರ್ನಿಗೆ ಸಮಯ ಕಂಡುಕೊಳ್ಳುವುದು ಮಂಡಳಿಗೆ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT