ಭಾನುವಾರ, ಜನವರಿ 19, 2020
28 °C
ವಿವಾದಗಳಿಗೆ ತೆರೆ ಎಳೆಯಲು ಬಿಸಿಸಿಐ ಚಿತ್ತ

ಎನ್‌ಸಿಎಗೆ ವೈದ್ಯಕೀಯ ತಂಡ ನೇಮಕಕ್ಕೆ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವೈದ್ಯಕೀಯ ತಂಡ ಮತ್ತು ಸಾಮಾಜಿಕ ಮಾಧ್ಯಮಗಳ ಪರಿಣತರನ್ನು ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ಭಾರತ ತಂಡದ ಪ್ರಮುಖ ಆಟಗಾರರ ಗಾಯದ ಸಮಸ್ಯೆಯ ಆರೈಕೆ ಮತ್ತು ಪುನಶ್ಚೇತನದ ವಿಷಯದಲ್ಲಿ ಈಚೆಗೆ ಎನ್‌ಸಿಎ ವಿವಾದಕ್ಕೀಡಾಗಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್‌ ಅವರು ಮುಂಬೈನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೊಂದಿಗೂ ಚರ್ಚಿಸಿದ್ದರು.

‘ಪರಿಣತ ವೈದ್ಯರ ತಂಡದ ನೇಮಕಕ್ಕೆ ಲಂಡನ್‌ನಲ್ಲಿರುವ ಫೋರ್ಟಿ ಯಸ್ ಕ್ಲಿನಿಕ್‌ನ ಪರಿಣತರಿಂದ ಬಿಸಿಸಿಐ ಸಲಹೆ ಪಡೆಯಲಿದೆ’ ಎಂದು ಮಂಡಳಿಯ ಉನ್ನತ ಮೂಲಗಳು ತಿಳಿಸಿವೆ. ವೇಗದ ಬೌಲಿಂಗ್ ವಿಭಾಗದ ಮುಖ್ಯಸ್ಥರ ಹುದ್ದೆಯು ಬಹಳ ದಿನಗಳಿಂದ ಖಾಲಿಯಾಗಿದೆ. ಇದನ್ನು ಕೂಡ ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು. ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥರ ನೇಮಕವನ್ನೂ ಮಾಡಲಾಗುತ್ತಿದೆ.

ಈಚೆಗೆ ಮಧ್ಯಮವೇಗಿ ಭುವ ನೇಶ್ವರ್ ಕುಮಾರ್ ಅವರಿಗೆ ಆಗಿದ್ದ ಸ್ಪೋರ್ಟ್ಸ್‌ ಹರ್ನಿಯಾ ಸಮಸ್ಯೆಯನ್ನು ಪತ್ತೆ ಮಾಡುವಲ್ಲಿ ಎನ್‌ಸಿಎ ವಿಫಲವಾಗಿತ್ತು.

ಅಕಾಡೆಮಿಯಲ್ಲಿ ನಡೆಯುವ ಕಾರ್ಯಗಳನ್ನು ಜನರಿಗೆ ತಿಳಿಸಲು ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರನ್ನು ನೇಮಕ ಮಾಡಲಾಗುವುದು. ಇದರಿಂದ ಎನ್‌ಸಿಎ ವರ್ಚಸ್ಸನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಈಚೆಗೆ ಕೆಲವು ಊಹಾಪೋಹಗಳು ಮತ್ತು ವದಂತಿಗಳಿಂದಾಗಿ ಎನ್‌ಸಿಎಗೆ ಮುಜುಗರ ಅನುಭವಿಸಿತ್ತು.

ಇದನ್ನು ತಪ್ಪಿಸಲು ಈ ಹೆಜ್ಜೆ ಇಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆಟಗಾರರ ಫಿಟ್‌ನೆಸ್‌ ಮತ್ತು ವೈದ್ಯಕೀಯ ಮಾಹಿತಿಗಳನ್ನು ನಿಖರವಾಗಿ ನೀಡುವತ್ತ ಕಟ್ಟುನಿಟ್ಟಾದ ಮಾರ್ಗಸೂಚಿ ಅನುಸರಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಎನ್‌ಸಿಎನಲ್ಲಿ ಲೆವಲ್ –2 ಮತ್ತು ಲೆವಲ್‌ –3 ಕೋಚಿಂಗ್ ಕೋರ್ಸ್‌ಗಳನ್ನು ಆರಂಭಿಸಲಿದೆ. ಇದರಿಂದ ರಾಜ್ಯ ಸಂಸ್ಥೆಗಳಲ್ಲಿ ಕೋಚ್‌ಗಳನ್ನು ತರೇತುಗೊಳಿಸಲು ಅನುಕೂಲವಾಗಲಿದೆ. ಅದಕ್ಕಾಗಿ ಕೋಚ್‌ಗಳಿಗೆ ತರಬೇತಿ ಸಲಹೆಗಾರರನ್ನು ನೇಮಿಸುವ ಯೋಜನೆಯೂ ಇದೆ .

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು