ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತು, ಸ್ಪಷ್ಟ ನಿಲುವಿನ ಬೇಡಿ ಸರ್: ಸುನಿಲ್ ಜೋಶಿ ನುಡಿನಮನ

ಸ್ಪಿನ್ ದಿಗ್ಗಜನನಿಗೆ ಕನ್ನಡಿಗ ಸುನಿಲ್ ಜೋಶಿ ನುಡಿನಮನ
Published 24 ಅಕ್ಟೋಬರ್ 2023, 23:30 IST
Last Updated 24 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಸೋಮವಾರ ಬೆಳಿಗ್ಗೆ ಬಿಷನ್ ಸಿಂಗ್ ಬೇಡಿ ಸರ್ ನಿಧನ ಸುದ್ದಿ ಕೇಳಿದಾಗಿನಿಂದಲೂ ದೇಹ ಮಾತ್ರ ಇಲ್ಲಿದೆ. ಮನಸ್ಸಿನ ತುಂಬ ಅವರದ್ದೇ ಬಿಂಬಗಳು. ಅವರ ಒಡನಾಟದಲ್ಲಿ ಕಲಿತದ್ದು, ಇನ್ನೂ ಕಲಿಯದೇ ಉಳಿದಿದ್ದು ಎಲ್ಲವೂ ಸಾಗರದ ಅಲೆಗಳಂತೆ ಅಪ್ಪಳಿಸುತ್ತಿವೆ.

ಅವರಲ್ಲಿ ಒಬ್ಬ ಅದ್ಭುತ ಕ್ರಿಕೆಟಿಗ ಇದ್ದ. ಅದಕ್ಕೂ ಮಿಗಿಲಾಗಿ ಅತ್ಯುತ್ತಮ ವ್ಯಕ್ತಿತ್ವ ಅವರದ್ದಾಗಿತ್ತು. ನೇರ ನಿಷ್ಠುರ, ಸ್ನೇಹಪರ, ಬದ್ಧತೆ, ಕೆಚ್ಚೆದೆಯ ಹೋರಾಟಗಾರ ಮತ್ತು ಶಿಸ್ತಿನ ವ್ಯಕ್ತಿ ಅವರಾಗಿದ್ದರು. ಹೊಗಳಿಕೆ ಇರಲಿ, ಟೀಕೆ ಇರಲಿ ಯಾರಿಗೆ ಹೇಳಬೇಕೋ ಅವರಿಗೇ ಹೇಳುವ ಗಟ್ಟಿತನ ಇತ್ತು. ತೀರ್ಮಾನ ಕೈಗೊಳ್ಳುವಲ್ಲಿ ಸ್ಪಷ್ಟತೆ ಇತ್ತು. ಅದೇ ಅವರನ್ನು ಮಹಾನ್ ವ್ಯಕ್ತಿಯನ್ನಾಗಿಸಿತು.

ಅವರ ನನ್ನ ಒಡನಾಟ ಸುಮಾರು ಮೂರು ದಶಕಗಳಷ್ಟು ಹಳೆಯದು. ಸ್ನೇಹಿತ ಅನಿಲ್ (ಕುಂಬ್ಳೆ) ಮೂಲಕ ಬೇಡಿ ಸರ್ ಪರಿಚಯವಾಗಿತ್ತು. ಎಡಗೈ ಸ್ಪಿನ್ನರ್ ಆಗಿರುವ ನಾನು ಬಾಲ್ಯದಿಂದಲೂ ಅವರ ಆಟದ ಬಗ್ಗೆ ಓದುತ್ತ, ಚಿತ್ರ, ವಿಡಿಯೊಗಳಲ್ಲಿ ನೋಡುತ್ತ ಪ್ರೇರಣೆಗೊಂಡವನು. ನನ್ನ ವೃತ್ತಿಜೀವನಕ್ಕೆ ತಿರುವು ಸಿಗಲು ಅವರ ಮಾರ್ಗದರ್ಶನ ಕಾರಣವಾಗಿದೆ.

24 ವರ್ಷಗಳ ಹಿಂದೆ ನೈರೋಬಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ (10–6–6–5)  ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದೆ. ಆ ಟೂರ್ನಿಗೆ ತೆರಳುವ ಮುನ್ನ ಅವರೊಂದಿಗೆ ನಡೆಸಿದ ಮಾತುಕತೆ, ಪಡೆದ ಮಾರ್ಗದರ್ಶನಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿತ್ತು.

ಇದಾದ ನಂತರ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ತಾವು ಬರೆಯುತ್ತಿದ್ದ ಅಂಕಣದಲ್ಲಿ ನನ್ನ ಬಗ್ಗೆ ಸವಿಸ್ತಾರವಾಗಿ ಉಲ್ಲೇಖಿಸಿದ್ದರು. ತಮ್ಮ ಮಗನಿಂದ ಸಿಗದ ಸಂಭ್ರಮ ನನ್ನಿಂದ ಸಿಕ್ಕಿತು ಎಂದೂ ಹೇಳಿದ್ದರು. ಅದಕ್ಕಿಂತ ದೊಡ್ಡ ಗೌರವ ನನಗೆ ಇನ್ನೊಂದಿಲ್ಲ.

ನಾನು ಆಟಗಾರನಾಗಿ ಅವರೊಂದಿಗೆ ಬಹಳಷ್ಟು ಪ್ರವಾಸ ಮಾಡಿದ್ದೆ. ಕಡುಶಿಸ್ತಿನ ವ್ಯಕ್ತಿತ್ವ ಅವರದ್ದು. ಸಮಯ ಪರಿಪಾಲನೆಯಲ್ಲಿ ಒಂದೂ ಸೆಕೆಂಡು ಆಚೆ ಇಚೆ ಇಲ್ಲ. ಸಿಖ್ ಧರ್ಮದಲ್ಲಿ  ‘ನಿನ್ನ ಪಾಲಿನಲ್ಲಿ ಏನಿದೆಯೋ ಅದನ್ನು ನಿಷ್ಠೆಯಿಂದ ಮಾಡಿ. ಪರರಿಂದ ಏನೂ ಬಯಸಬೇಡಿ’ ಎಂಬ ಹಿತನುಡಿ ರೂಢಿಯಲ್ಲಿದೆ. ಅವರು ಆ ನುಡಿಯಂತೆ ಬಾಳಿದರು. ನಮಗೂ ಅದನ್ನೇ ಕಲಿಸಿಕೊಟ್ಟರು. ಅವರಿಂದ ಕಲಿತ ಶಿಸ್ತು, ಸ್ನೇಹಪರತೆ, ಬದ್ದತೆಗಳು ಇವತ್ತಿಗೂ ನನಗೆ ದಾರಿದೀಪ.

ಎಷ್ಟೇ ಖಡಕ್ ವ್ಯಕ್ತಿತ್ವ ಇದ್ದರೂ ಅದು ಕ್ರಿಕೆಟ್ ಅಂಗಳದಲ್ಲಿ ಮಾತ್ರ. ಬೌಂಡರಿಗೆರೆಯಾಚೆ ಬಂದರೆ ಹಿರಿಯ, ಕಿರಿಯರೆಲ್ಲರಿಗೂ ಆಪ್ತವಾಗಿರುತ್ತಿದ್ದರು. ಇಂಗ್ಲೆಂಡ್‌ ಪ್ರವಾಸದಲ್ಲಿ ಅವರು ನಮ್ಮೊಂದಿಗೆ ಇದ್ದರು. ತಮ್ಮ ಕೋಣೆಯಲ್ಲಿಯೇ ರುಚಿಕಟ್ಟಾದ ಅಡುಗೆ ಮಾಡಿ ಬಡಿಸುತ್ತಿದ್ದರು. ವಿದೇಶದಲ್ಲಿಯೂ ಭಾರತೀಯ ಊಟದ ಕೊರಗು ಕಾಡದಂತೆ ಮುತುವರ್ಜಿ ವಹಿಸಿದ್ದರು.

ಆಟ ಅಥವಾ ಆಟಗಾರರ ಹಿತಾಸಕ್ತಿಯ ಮಾತು ಬಂದಾಗ ಬೇಡಿ ಸರ್ ಯಾರೊಂದಿಗೆ ಬೇಕಾದರೂ ಹೋರಾಟ ಮಾಡುತ್ತಿದ್ದರು. ಎಷ್ಟೇ ದೊಡ್ಡ ವ್ಯಕ್ತಿ ಇರಲಿ, ಆಡಳಿತಾಧಿಕಾರಿಗಳಿರಲಿ ನಿಷ್ಠುರವಾದಿಯಾಗಿದ್ದರು. ಕ್ರಿಕೆಟ್ ಮತ್ತು ಕ್ರಿಕೆಟಿಗರಿಗೆ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಅವರ ಪಾತ್ರ ದೊಡ್ಡದು. ಅಪ್ಪಟ ನಾಯಕತ್ವದ ಗುಣ ಅವರದ್ದು. ಯಾರೊಂದಿಗೂ ರಾಜಿ ಆಗದ ಸ್ವಭಾವ ಅವರದ್ದು.

ಪ್ರತಿದಿನ 8–10 ಇಂಗ್ಲಿಷ್ ಪತ್ರಿಕೆಗಳನ್ನು ಓದುವ ಹವ್ಯಾಸ ಅವರಿಗೆ ಇತ್ತು. ಆಟಗಾರರು ಆಟಕ್ಕಷ್ಟೆ ಅಲ್ಲ, ವಿಶ್ವದ ಆಗುಹೋಗುಗಳ ಅರಿವು ಕೂಡ ಇಟ್ಟುಕೊಂಡಿರಬೇಕು. ಜ್ಞಾನಾರ್ಜನೆ ಮುಖ್ಯ ಎಂಬುದು ಅವರ ಸಿದ್ಧಾಂತವಾಗಿತ್ತು. ತಮ್ಮ ಸಹ ಕ್ರಿಕೆಟಿಗರು ಮತ್ತು ಜೂನಿಯರ್ ಆಟಗಾರರಿಗೂ ಪತ್ರಿಕೆಗಳನ್ನು ಪ್ರತಿದಿನ ಓದುವಂತೆ ಸೂಚಿಸುತ್ತಿದ್ದರು. 

ನಾನು ಆಟದಿಂದ ನಿವೃತ್ತಿ ಪಡೆದ ನಂತರವೂ ದೂರವಾಣಿಯಲ್ಲಿ ಸಂಪರ್ಕದಲ್ಲಿರುವುದು ರೂಢಿಯಾಗಿತ್ತು. ದೆಹಲಿಗೆ ಹೋದರೆ ಅವರ ಮನೆಯಲ್ಲಿ 5–6 ಗಂಟೆ ಕಳೆಯುತ್ತಿದ್ದೆ. ಹರಟೆ, ನಗು ಮತ್ತು ಕ್ರಿಕೆಟ್ ಕುರಿತ ಮಾತುಗಳು ನಮ್ಮ ನಡುವೆ ನಡೆಯುತ್ತಿದ್ದವು. ನನ್ನ ಕೆಲಸವನ್ನು ಉತ್ಕೃಷ್ಟಗೊಳಿಸುವ ಸಲಹೆಗಳನ್ನು ನೀಡುತ್ತಿದ್ದರು. ಅವರ ಮೊದಲ ಭೇಟಿಯಿಂದ ತೀರಾ ಇತ್ತೀಚೆಗೆ ತೀವ್ರ ಆನಾರೋಗ್ಯಕ್ಕೆ ಒಳಗಾಗುವವರೆಗೂ ನಿಕಟ ಸಂಪರ್ಕ ಇತ್ತು. ಆದರೆ ಬೇಡವಾಗಿದ್ದ ಸುದ್ದಿ ಬಂದೇ ಬಿಟ್ಟಿತು. ಸರ್ ನಮ್ಮನ್ನು ಅಗಲಿದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಶೂನ್ಯ ಆವರಿಸಿದೆ.

(ಸುನಿಲ್ ಜೋಶಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬೇಡಿ ಅವರ ಬಳಿ ಕೆಲಕಾಲ ತರಬೇತಿ ಪಡೆದಿದ್ದರು)

ನಿರೂಪಣೆ: ಗಿರೀಶ ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT