ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುತ್ತಿರುವುದು ಗೌರವ ಮತ್ತು ಸಮಾನತೆ ಮಾತ್ರ: ಡ್ವೇನ್‌ ಬ್ರಾವೊ

ಜನಾಂಗೀಯ ತಾರತಮ್ಯ ಕುರಿತು ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ಡ್ವೇನ್‌ ಬ್ರಾವೊ: ಸೇಡು ಬಯಸಿಲ್ಲ
Last Updated 10 ಜೂನ್ 2020, 8:27 IST
ಅಕ್ಷರ ಗಾತ್ರ

ಕಿಂಗ್‌ಸ್ಟನ್‌: ‘ನಾವು ಸಾಕಷ್ಟು ಸಹಿಸಿಯಾಗಿದೆ...ನಾವೇನು ಸೇಡು ತೀರಿಸಿಕೊಳ್ಳಬೇಕೆಂದು ಬಯಸಿಲ್ಲ. ಹಲವು ವರ್ಷಗಳಿಂದ ವರ್ಣಭೇದದ ನೋವು ಅನುಭವಿಸುತ್ತಿರುವ ಕಪ್ಪು ಜನಾಂಗಕ್ಕೆ ಗೌರವ ಮತ್ತು ಸಮಾನತೆ ಕೊಡಿ......’

ಹೀಗೆ ಹೇಳಿದ್ದು ವೆಸ್ಟ್‌ ಇಂಡೀಸ್‌ ಹಿರಿಯ ಕ್ರಿಕೆಟಿಗ ಡ್ವೇನ್‌ ಬ್ರಾವೊ. ಈ ಮೂಲಕ ಅವರು ಜನಾಂಗೀಯ ತಾರತಮ್ಯದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ. ಅಮೆರಿಕದಲ್ಲಿ ಮೇ 25ರಂದು ಪೊಲೀಸ್‌ ದೌರ್ಜನ್ಯಕ್ಕೆ ಆಫ್ರೊ–ಅಮೆರಿಕನ್‌ ಜಾರ್ಜ್‌ ಫ್ಲಾಯ್ಡ್‌ ಮೃತಪಟ್ಟ ಬಳಿಕ ವಿಶ್ವದಾದ್ಯಂತ ಜನಾಂಗೀಯ ತಾರತಮ್ಯದ ಕುರಿತು ಆಕ್ರೋಶದ ಮಾತುಗಳು ಹೊರಹೊಮ್ಮುತ್ತಿವೆ.

ಬ್ರಾವೊ ಅವರಿಗಿಂತ ಮೊದಲು ವೆಸ್ಟ್ ಇಂಡೀಸ್‌ನ ಇನ್ನಿಬ್ಬರು ಹಿರಿಯ ಕ್ರಿಕೆಟಿಗರಾದ ಕ್ರಿಸ್‌ ಗೇಲ್‌ ಹಾಗೂ ಡರೆನ್‌ ಸಾಮಿ ಕೂಡ ಈ ಬಗ್ಗೆ ಮಾತನಾಡಿದರು.

‘ಈಗ ಜಗತ್ತಿನೆಲ್ಲೆಡೆ ಏನು ನಡೆಯುತ್ತಿದೆ ಎಂಬುದನ್ನು ನೋಡಿದಾಗ ಸಂಕಟವಾಗುತ್ತಿದೆ. ಕಪ್ಪು ಜನಾಂಗದವನಾಗಿ, ನಮ್ಮವರು ಪಟ್ಟ ಪಾಡುಗಳನ್ನು ತಿಳಿದುಕೊಂಡಿದ್ದೇನೆ. ನಾವು ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಬಯಸಿಲ್ಲ. ನಾವು ಕೇಳುತ್ತಿರುವುದು ಸಮಾನತೆ ಮತ್ತು ಗೌರವ ಅಷ್ಟೇ’ ಎಂದು ಮಂಗಳವಾರ ಜಿಂಬಾಬ್ವೆಯ ಹಿರಿಯ ಕ್ರಿಕೆಟಿಗ ಪೊಮ್ಮಿ ಬಾಂಗ್ವಾ ಜೊತೆ ನಡೆಸಿದ ಇನ್ಸ್ಟಾಗ್ರಾಂ ಸಂವಾದದಲ್ಲಿ ಬ್ರಾವೊ ಹೇಳಿದ್ದಾರೆ.

‘ನಾವು ಬೇರೆಯವರನ್ನು ಗೌರವಿಸುತ್ತೇವೆ. ನಾವೇಕೆ ಪದೇ ಪದೇ ಇಂಥ ತಾರತಮ್ಯದ ಧೋರಣೆ ಎದುರಿಸಬೇಕು? ಸಾಕಷ್ಟು ತಾಳ್ಮೆ ವಹಿಸಿಯಾಗಿದೆ. ನಮಗೆ ಯುದ್ಧ ಅಥವಾ ಸೇಡು ತೀರಿಸಬೇಕೆಂಬ ಬಯಕೆಯಿಲ್ಲ’ ಎಂದು ಅವರು ನೋವು ತೋಡಿಕೊಂಡಿದ್ದಾರೆ.

36 ವರ್ಷದ ಬ್ರಾವೊ 40 ಟೆಸ್ಟ್‌ ಹಾಗೂ 164 ಏಕದಿನ ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. 71 ಟ್ವೆಂಟಿ–20 ಪಂದ್ಯಗಳನ್ನೂ ಆಡಿದ್ದಾರೆ.

‘ನಾವು ಸುಂದರರು ಹಾಗೂ ಬಲಿಷ್ಠರು ಎಂದು ಜಗತ್ತಿಗೆ ತಿಳಿಸಬಯಸುತ್ತೇನೆ. ವಿಶ್ವದ ಮಹಾಪುರುಷರ ಕಡೆ ಕಣ್ಣಾಡಿಸಿ. ನೆಲ್ಸನ್‌ ಮಂಡೇಲಾ, ಮುಹಮ್ಮದ್‌ ಅಲಿ (ಬಾಕ್ಸರ್‌), ಮೈಕೆಲ್‌ ಜೋರ್ಡಾನ್‌ (ಬ್ಯಾಸ್ಕೆಟ್‌ಬಾಲ್‌ ಆಟಗಾರ) ಅಂಥ ಮಹಾನ್‌ ವ್ಯಕ್ತಿಗಳೇ ನಮಗೆ ಪ್ರೇರಣೆಯಾದವರು’ ಎಂದು ಬ್ರಾವೊ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT