ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿ: ವಿದಿತ್‌, ಗುಕೇಶ್‌ಗೆ ಗೆಲುವು

ಪ್ರಜ್ಞಾನಂದ್‌ಗೆ ನಿರಾಸೆ
Published 6 ಏಪ್ರಿಲ್ 2024, 13:35 IST
Last Updated 6 ಏಪ್ರಿಲ್ 2024, 13:35 IST
ಅಕ್ಷರ ಗಾತ್ರ

ಟೊರಾಂಟೊ: ಅಮೆರಿಕದ ಹಿಕಾರು ನಕಾಮುರಾ ಅವರ ರಕ್ಷಣಾ ಕೋಟೆಯನ್ನು ಛಿದ್ರಗೊಳಿಸಿದ  ಭಾರತದ ವಿದಿತ್‌ ಗುಜರಾತಿ, ಶುಕ್ರವಾರ ನಡೆದ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಜಯಗಳಿಸಿದರು. ಆದರೆ ಆರ್‌.ಪ್ರಜ್ಞಾನಂದ ಅವರ ಸ್ವದೇಶದ ಡಿ.ಗುಕೇಶ್ ಕೈಲಿ ಸೋಲನುಭವಿಸಿದರು.

ಓಪನ್ ವಿಭಾಗದ ಮೊದಲ ಸುತ್ತಿನ ನಾಲ್ಕೂ ಪಂದ್ಯಗಳು ಡ್ರಾ ಆಗಿದ್ದವು. ಆದರೆ ಎರಡನೇ ಸುತ್ತಿನಲ್ಲಿ ಎಲ್ಲ ನಾಲ್ಕೂ ಬೋರ್ಡ್‌ಗಳಲ್ಲಿ ನಿರ್ಣಾಯಕ ಫಲಿತಾಂಶಗಳು ಹೊರಹೊಮ್ಮಿದವು.

ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನ ಅವರು ಸ್ಫೂರ್ತಿಯುತವಾಗಿ ಆಡಿ ಅಜರ್‌ಬೈಜಾನ್‌ನ ನಿಜತ್ ಅಬಸೋವ್ ಅವರನ್ನು ಮಣಿಸಿದರೆ, ಫಿಡೆ ಧ್ವಜದಡಿ ಆಡುತ್ತಿರುವ ರಷ್ಯಾದ ಇಯಾನ್ ನೆಪೊಮ್‌ನಿಯಾಚಿ ಅವರು ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರನ್ನು ಪರಾಭವಗೊಳಿಸಿದರು.

ವಿದಿತ್‌ ಗುಜರಾತಿ ಅವರು ಕರುವಾನಾ, ನೆಪೊಮ್‌ನಿಯಾಚಿ ಮತ್ತು ಗುಕೇಶ್ ಜೊತೆ ತಲಾ 1.5 ಅಂಕ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಮಹಿಳಾ ವಿಭಾಗದಲ್ಲಿ ಆರ್‌.ವೈಶಾಲಿ, ಚೀನಾದ ಝೊಂಗ್‌ವಿ ಅವರಿಗೆ ಮಣಿದರೆ, ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಅವರು ಉಕ್ರೇನಿನ ಅನ್ನಾ ಮುಝಿಚುಕ್ ಎದುರು ಸುಲಭ ಜಯಗಳಿಸಿದರು.

ಕೋನೇರು ಹಂಪಿ, ರಷ್ಯಾದ ಕ್ಯಾಥರಿನಾ ಲಾಗ್ನೊ ಎದುರು ಡ್ರಾ ಮಾಡಿಕೊಂಡರೆ, ಸಲಿಮೋವಾ ಮತ್ತು ಚೀನಾ ಟಿಂಗ್‌ಜಿ ಲೀ ಕೂಡ ‘ಡ್ರಾ’ ಒಪ್ಪಂದಕ್ಕೆ ಸಹಿ ಹಾಕಿದರು.

ಮಹಿಳಾ ವಿಭಾಗದಲ್ಲಿ ಝೊಂಗ್‌ವಿ ತಾನ್ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಎರಡು ಪಾಯಿಂಟ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಫಿಡೆ ಪ್ರತಿನಿಧಿಸುತ್ತಿರುವ (ರಷ್ಯಾದ) ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (1.5) ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನೂ 12 ಸುತ್ತಿನ ಪಂದ್ಯಗಳು ಆಡಲು ಇವೆ.

ಎರಡನೆ ಬಾರಿಯೂ ಕಪ್ಪುಕಾಯಿಗಳೊಂದಿಗೆ ಆಡಿದ ವಿದಿತ್‌ 11ನೇ ನಡೆಯಲ್ಲಿ ‘ಬಿಷಪ್‌’ ಬಲಿಗೊಡಲು ಮುಂದಾದರು. ಆದರೆ ಅದನ್ನು ಪಡೆಯಲು ನಕಾಮುರಾ ಆಸಕ್ತಿ ತೋರಲಿಲ್ಲ. ಕೆಲಹೊತ್ತಿನಲ್ಲೇ ಅಮೆರಿಕದ ಆಟಗಾರ ನಿಧಾನವಾಗಿ ಹಿಡಿತ ಕಳೆದುಕೊಂಡು 29 ನಡೆಗಳಲ್ಲಿ ಪಂದ್ಯ ಸೋತರು. ‘ಒಳ್ಳೆಯ ಆಟವಾಡಿದೆ’ ಎಂದು ನಕಾಮುರಾ ಎದುರಾಳಿಗೆ ಮೆಚ್ಚುಗೆ ಸೂಚಿಸಿದರು.

‘ಸಿದ್ಧತೆ ನೆರವಿಗೆ ಬಂತು. ಅವರು ತಪ್ಪು ಮಾಡಿದ್ದರಿಂದ ದಾಳಿ ಸಂಘಟಿಸಲು ಅವಕಾಶವಾಯಿತು. ಇದಕ್ಕಿಂತ ಹೆಚ್ಚಿಗೆ ಹೇಳಲೇನೂ ಇಲ್ಲ’ ಎಂದು ಗುಕೇಶ್ ಪ್ರತಿಕ್ರಿಯಿಸಿದರು.

ಕೆಟಲಾನ್‌ ಓಪನಿಂಗ್ ಮಾಡಿದ ಪ್ರಜ್ಞಾನಂದ ಅವರು ಗುಕೇಶ್ ವಿರುದ್ಧ ಪಂದ್ಯ ಸಂಕೀರ್ಣ ಸ್ಥಿತಿಯಲ್ಲಿದ್ದಾಗ ತಪ್ಪು ಮಾಡಿದರು. ಗುಕೇಶ್ 33 ನಡೆಗಳಲ್ಲಿ ಗೆದ್ದರು.

ಎರಡನೇ ಸುತ್ತಿನ ಫಲಿತಾಂಶ

ಓಪನ್‌ ವಿಭಾಗ: ಇಯಾನ್‌ ನೆಪೊಮ್‌ನಿಯಾಚಿ (ಫಿಡೆ, 1.5) ಅವರಿಗೆ ಅಲಿರೇಝಾ ಫೀರೋಜ್  (ಫ್ರಾನ್ಸ್‌, 0.5) ವಿರುದ್ಧ ಗೆಲುವು; ಆರ್‌.ಪ್ರಜ್ಞಾನಂದ (0.5) ಅವರಿಗೆ ಗುಕೇಶ್ (1.5) ಎದುರು ಸೋಲು; ನಕಾಮುರಾ (ಅಮೆರಿಕ, 0.5) ಅವರಿಗೆ ವಿದಿತ್‌ ಗುಜರಾತಿ (1.5) ಎದುರು ಸೋಲು; ಫ್ಯಾಬಿಯಾನೊ ಕರುವಾನ (ಅಮೆರಿಕ, 1.5) ಅವರಿಗೆ ನಿಜತ್‌ ಅಬಸೋವ್ (ಅಜರ್‌ಬೈಜಾನ್, 0.5) ಎದುರು ಜಯ.

ಮಹಿಳಾ ವಿಭಾಗ: ಝೊಂಗ್‌ವಿ ತಾನ್ (ಚೀನಾ, 2) ಅವರಿಗೆ ಆರ್‌.ವೈಶಾಲಿ (0.5) ವಿರುದ್ಧ ಜಯ; ಕ್ಯಾತರಿನಾ ಲಾಗ್ನೊ (ಉಕ್ರೇನ್‌, 1) ಮತ್ತು ಕೆ.ಹಂಪಿ (1) ನಡುವಣ ಪಂದ್ಯ ಡ್ರಾ. ನರ್ಗ್ಯುಲ್ ಸಲಿಮೋವಾ (ಬಲ್ಗೇರಿಯಾ, 1) ಮತ್ತು ಟಿಂಗ್‌ಜಿ ಲೀ (ಚೀನಾ, 0.5) ನಡುವಣ ಪಂದ್ಯ ಡ್ರಾ; ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (ಫಿಡೆ, 1.5) ಅವರಿಗೆ ಅನ್ನಾ ಮುಝಿಚುಕ್ (ಉಕ್ರೇನ್, 0.5) ವಿರುದ್ಧ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT