ಗುರುವಾರ , ಜನವರಿ 27, 2022
20 °C
ಡೆವೊನ್ ಕಾನ್ವೆ ಸುಂದರ ಬ್ಯಾಟಿಂಗ್; ಮೊದಲ ದಿನವೇ ದೊಡ್ಡ ಮೊತ್ತ ಪೇರಿಸಿದ ಕಿವೀಸ್

ಬಾಂಗ್ಲಾದೇಶ ವಿರುದ್ಧದ ನ್ಯೂಜಿಲೆಂಡ್ ಎರಡನೇ ಟೆಸ್ಟ್‌: ದ್ವಿಶತಕದತ್ತ ಟಾಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರೈಸ್ಟ್‌ಚರ್ಚ್ (ಎಪಿ): ದ್ವಿಶತಕದತ್ತ ಹೆಜ್ಜೆಯಿಟ್ಟಿರುವ ನಾಯಕ ಟಾಮ್ ಲಥಾಮ್ ಮತ್ತು ಶತಕದತ್ತ ಸಾಗಿರುವ ಡೆವೊನ್ ಕಾನ್ವೆ ಅವರ ಆಟದ ಬಲದಿಂದ  ನ್ಯೂಜಿಲೆಂಡ್ ತಂಡವು ಭಾನುವಾರ ಆರಂಭವಾದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನವೇ ದೊಡ್ಡ ಮೊತ್ತ ಪೇರಿಸಿತು.

ಹೆಗ್ಲಿ ಓವಲ್ ಕ್ರೀಡಾಂಗಣದ ಪಿಚ್‌ನಲ್ಲಿ ಬಾಂಗ್ಲಾದೇಶದ ಬೌಲರ್‌ಗಳ ಆಟ ನಡೆಯಲಿಲ್ಲ.  ಟಾಸ್ ಗೆದ್ದ ಫೀಲ್ಡಿಂಗ್ ಮಾಡುವ ಬಾಂಗ್ಲಾ ತಂಡದ ಯೋಜನೆ ತಲೆಕೆಳಗಾಯಿತು. ಮೊದಲ ಟೆಸ್ಟ್‌ನಲ್ಲಿ ಸೋಲನುಭವಿಸಿದ ಹತಾಶೆಯಲ್ಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಪಡೆ ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿತು.  ಅದರ ಪರಿಣಾಮವಾಗಿ ತಂಡವು 90 ಓವರ್‌ಗಳಲ್ಲಿ 1 ವಿಕೆಟ್‌ಗೆ 349 ರನ್‌ ಗಳಿಸಿತು.

ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿರುವ ಟಾಮ್ (ಬ್ಯಾಟಿಂಗ್ 186, 278ಎ, 4X28) ಮತ್ತು ವಿಲ್ ಯಂಗ್ (54; 114ಎ, 4X5) ಜೋಡಿಯು ಅಮೋಘ ಆರಂಭ ನೀಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 148 ರನ್‌ಗಳನ್ನು ಸೇರಿಸಿ, ಗಟ್ಟಿ ಅಡಿಪಾಯ ಹಾಕಿದರು.

38 ಓವರ್‌ಗಳ ಈ ಪಾಲುದಾರಿಕೆ ಆಟದಲ್ಲಿ ಟಾಮ್ ಅವರದ್ದೇ ವಿಜೃಂಭಣೆ. ಯಂಗ್ ಔಟಾದ ನಂತರ ಕ್ರೀಸ್‌ಗೆ ಬಂದ ಡೆವೊನ್ ಕಾನ್ವೆ ಅವರ ಅಬ್ಬರ ಶುರುವಾಯಿತು. ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 201 ರನ್ ಗಳಿಸಿದ್ದಾರೆ.

ಈ ಎರಡೂ ಪಾಲುದಾರಿಕೆ ಆಟಗಳಲ್ಲಿ ಮೆರೆದರು. 29 ವರ್ಷದ ಎಡಗೈ ಬ್ಯಾಟರ್ ಟಾಮ್  65 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟು 133 ಎಸೆತಗಳಲ್ಲಿ ಶತಕ ಹೊಡೆದರು. 199ನೇ ಎಸೆತದಲ್ಲಿ ಶತಕೋತ್ತರ ಅರ್ಧಶತಕದ ಗಡಿ ಮುಟ್ಟಿದರು.

 ಊಟಕ್ಕೂ ಮುನ್ನವೇ ಎರಡು ಸಲ ಟಾಮ್ ಅವರಿಗೆ ಯುಡಿಆರ್‌ಎಸ್‌ನಲ್ಲಿ ‘ಜೀವದಾನ’ ಲಭಿಸಿತ್ತು.  ಮೊದಲ ಪಂದ್ಯದಲ್ಲಿ ಬಾಂಗ್ಲಾ ಗೆಲುವಿನ ರೂವಾರಿಯಾಗಿದ್ದ ಬೌಲರ್ ಇಬಾದತ್ ಹುಸೇನ್  ಇನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿಯೇ ಬೌಲಿಂಗ್ ಆರಂಭಿಸಿದ್ದರು. ಆದರೆ ಇಲ್ಲಿ ಅವರಿಗೆ ಅದೃಷ್ಟ ಒಲಿಯಲಿಲ್ಲ. 21 ಓವರ್‌ಗಳಲ್ಲಿ 114 ರನ್‌ಗಳನ್ನು ಕೊಟ್ಟು ದುಬಾರಿಯಾದರು.

ಸ್ಕೋರು

ನ್ಯೂಜಿಲೆಂಡ್

1 ವಿಕೆಟ್‌ಗೆ 349 (90 ಓವರ್‌ಗಳಲ್ಲಿ)

ಟಾಮ್ ಬ್ಯಾಟಿಂಗ್ 186 (278ಎ, 4X28), ಯಂಗ್ ಸಿ ನೈಮ್ ಬಿ ಇಸ್ಲಾಂ 54 (114ಎ, 4X5), ಕಾನ್ವೆ ಬ್ಯಾಟಿಂಗ್ 99 (148ಎ, 4X10, 6X1)

ಇತರೆ: 10 (ಲೆಗ್‌ಬೈ 7,ವೈಡ್ 3)

ವಿಕೆಟ್ ಪತನ: 1–148 (ವಿಲ್ ಯಂಗ್; 37.6)

ಬೌಲಿಂಗ್

ತಸ್ಕಿನ್ ಅಹಮದ್ 22–5–68–0, ಶರೀಫುಲ್ ಇಸ್ಲಾಮ್ 18–6–50–1, ಇಬಾದತ್ ಹುಸೇನ್ 21–1–114–0, ಮೆಹದಿ ಹಸನ್ 25–1–95–0, ನಜ್ಮುಲ್ ಹುಸೇನ್ ಶಾಂತೊ 4–0–15–0.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು