ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ರೋಹಿತ್ ಶರ್ಮಾ ತಂತ್ರಗಳೇ ಯಶಸ್ಸಿನ ಮಂತ್ರ ಎಂದ ರಾಹುಲ್ ಚಾಹರ್

Last Updated 14 ಏಪ್ರಿಲ್ 2021, 12:16 IST
ಅಕ್ಷರ ಗಾತ್ರ

ಚೆನ್ನೈ: ರೋಹಿತ್ ಶರ್ಮಾ ಅವರು ಹೆಣೆದ ತಂತ್ರಗಳೇ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಗೆಲುವಿಗೆ ಕಾರಣ ಎಂದು ಮುಂಬೈ ಇಂಡಿಯನ್ಸ್ ತಂಡದ ಲೆಗ್‌ ಸ್ಪಿನ್ನರ್ ರಾಹುಲ್ ಚಾಹರ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಸುಲಭ ಜಯದತ್ತ ಹೆಜ್ಜೆ ಹಾಕಿದ್ದ ಕೋಲ್ಕತ್ತ ಕೊನೆಯ ಓವರ್‌ಗಳಲ್ಲಿ ಮುಗ್ಗರಿಸಿ 10 ರನ್‌ಗಳಿಂದ ಸೋತಿತ್ತು. ಆರಂಭಿಕ ಜೋಡಿ ಸೇರಿದಂತೆ ಅಗ್ರ ಕ್ರಮಾಂಕದ ನಾಲ್ವರ ವಿಕೆಟ್ ಉರುಳಿಸಿದ ಚಾಹರ್ ಗೆಲುವಿನ ರೂವಾರಿ ಎನಿಸಿದ್ದರು.

153 ರನ್‌ಗಳ ಜಯದ ಗುರಿ ಬೆನ್ನತ್ತಿದ ಕೋಲ್ಕತ್ತ ಮೊದಲ ವಿಕೆಟ್‌ಗೆ 8.5 ಓವರ್‌ಗಳಲ್ಲಿ 72 ರನ್‌ಗಳನ್ನು ಸೇರಿಸಿತ್ತು. ಕೊನೆಯ ಹತ್ತು ಓವರ್‌ಗಳಲ್ಲಿ ಗೆಲುವಿಗೆ 72 ರನ್‌ ಬೇಕಾಗಿತ್ತು. ಕೊನೆಯ ಎರಡು ಓವರ್‌ಗಳಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೂಡ ರನ್ ಗಳಿಸಲು ಪರದಾಡಿದ್ದರು.

ಪಂದ್ಯದ ನಂತರ ಮಾತನಾಡಿದ ರಾಹುಲ್ ‘ಒಬ್ಬ ಸ್ಪಿನ್ನರ್‌ ಬಯಸಿದರೆ ಪಂದ್ಯದ ಗತಿ ಬದಲಿಸಬಹುದು ಎಂದುಕೊಂಡಿದ್ದೆ. ಆದರೆ ಕೋಲ್ಕತ್ತ ಎದುರಿನ ಪಂದ್ಯದ ಗೆಲ್ಲಲು ರೋಹಿತ್ ಅವರ ನಾಯಕತ್ವವೇ ಕಾರಣವಾಗಿತ್ತು’ ಎಂದರು.

‘ನೆಟ್ಸ್‌ನಲ್ಲಿ ನಿನ್ನ ಎಸೆತಗಳನ್ನು ಎದುರಿಸಲು ನನಗೇ ಕಷ್ಟವಾಗುತ್ತಿತ್ತು. ಆದ್ದರಿಂದ ಎದೆಗುಂದದೆ ಬೌಲಿಂಗ್ ಮಾಡು. ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ಗೆಲ್ಲುವ ಭರವಸೆಯಲ್ಲಿದ್ದಾರೆ. ಅವರ ಮನಸ್ಸನ್ನು ವಿಚಲಿತಗೊಳಿಸಬೇಕು. ಗುಡ್‌ ಲೆಂಗ್ತ್‌ನಲ್ಲಿ ಬೌಲ್ ಮಾಡು, ತಿರುವು ಪಡೆಯುವುದಕ್ಕೂ ಪ್ರಯತ್ನಿಸು ಎಂದು ರೋಹಿತ್ ಹೇಳಿದ್ದರು. ನೆಟ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಆವರಂಥ ದಿಗ್ಗಜರಿಗೆ ಬೌಲಿಂಗ್ ಮಾಡಿದ್ದೆ. ಹೀಗಾಗಿ ಭರವಸೆ ಮೂಡಿತ್ತು. ರೋಹಿತ್ ಮಾತು ಕೇಳಿದ ನಂತರ ಇನ್ನಷ್ಟು ಆತ್ಮಸ್ಥೈರ್ಯ ಬಂತು. ಇದುವೇ ಯಶಸ್ಸಿಗೆ ಕಾರಣ’ ಎಂದು ಅವರು ನುಡಿದರು.

ಪಿಚ್‌ ಪೂರಕವಾಗಿರಲಿಲ್ಲ: ರಸೆಲ್‌

‍ಪಿಚ್‌ನ ಗುಣಮಟ್ಟ ಕಳಪೆಯಾಗಿದ್ದುದೇ ಸೋಲಿಗೆ ಕಾರಣ ಎಂದು ಕೋಲ್ಕತ್ತ ನೈಟ್‌ ರೈಡರ್ಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಅಭಿಪ್ರಾಯಪಟ್ಟರು.

ಆರಂಭಿಕ ಜೋಡಿ ನಿತೀಶ್ ರಾಣಾ (57; 47 ಎಸೆತ, 6 ಬೌಂಡರಿ, 2 ಸಿಕ್ಸರ್‌) ಮತ್ತು ಶುಭಮನ್ ಗಿಲ್ (33; 24 ಎ, 5 ಬೌಂ, 1 ಸಿ) ಅವರ ಉತ್ತಮ ಜೊತೆಯಾಟದ ಬಲದಿಂದ ಏಯಾನ್ ಮಾರ್ಗನ್ ನಾಯಕತ್ವದ ತಂಡ ಸುಲಭ ಜಯ ಗಳಿಸುವ ನಿರೀಕ್ಷೆ ಮೂಡಿಸಿತ್ತು. ಕೊನೆಯ 27 ಎಸೆತಗಳಲ್ಲಿ 30 ರನ್ ಬೇಕಾಗಿದ್ದಾಗ ರಸೆಲ್ ಮತ್ತು ದಿನೇಶ್ ಕಾರ್ತಿಕ್ ಮೇಲೆ ಭರವಸೆ ಇತ್ತು.

‘ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿರಲಿಲ್ಲ. ಹೊಸ ಬ್ಯಾಟ್ಸ್‌ಮನ್‌ಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಿತ್ತು. ಕೊನೆಯ ಓವರ್‌ಗಳು ಸವಾಲಿನಿಂದ ಕೂಡಿದ್ದವು’ ಎಂದು 15 ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿದ ರಸೆಲ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT