ಶನಿವಾರ, ಡಿಸೆಂಬರ್ 5, 2020
19 °C
ನ್ಯೂಜಿಲೆಂಡ್ ಎದುರಿನ ಸರಣಿಗಳಿಗೆ ತಂಡಗಳು ಪ್ರಕಟ; ಟಿ20 ತಂಡದ ಉಪನಾಯಕ ಪಟ್ಟ ಉಳಿಸಿಕೊಂಡ ನಿಕೋಲಸ್‌ ಪೂರನ್‌

ವೆಸ್ಟ್ ಇಂಡೀಸ್ ಟೆಸ್ಟ್ ತಂಡಕ್ಕೆ ಚೇಸ್‌ ಉಪನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೇಂಟ್ ಜಾನ್ಸ್: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡಗಳನ್ನು ಪ್ರಕಟಿಸಲಾಗಿದ್ದು ಆಲ್‌ರೌಂಡರ್ ರಾಸ್ಟನ್ ಚೇಸ್‌ ಅವರಿಗೆ ಟೆಸ್ಟ್ ತಂಡದ ಉಪನಾಯಕತ್ವ ನೀಡಲಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಟಿ20 ತಂಡದ ಉಪನಾಯಕನಾಗಿಯೇ ಮುಂದುವರಿಯಲಿದ್ದಾರೆ. ಸರಣಿ ಇದೇ 27ರಂದು ಆರಂಭವಾಗಲಿದೆ. 

ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಸರಣಿಯಲ್ಲಿ ಜೇಸನ್ ಹೋಲ್ಡರ್‌ ನಾಯಕತ್ವದ ತಂಡದಲ್ಲಿ ಕ್ರೇಗ್ ಬ್ರಾಥ್‌ವೇಟ್ ಉಪನಾಯಕರಾಗಿದ್ದರು. 25 ವರ್ಷದ ಪೂರನ್ 2019ರಿಂದ ಉಪನಾಯಕರಾಗಿದ್ದಾರೆ. 35 ಟೆಸ್ಟ್ ಪಂದ್ಯಗಳನ್ನು ಆಡಿರುವ ಚೇಸ್ ಐದು ಶತಕಗಳನ್ನು ಸಿಡಿಸಿದ್ದು ಮೂರು ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದ್ದಾರೆ.

‘ಚೇಸ್‌ ಅತ್ಯುತ್ತಮ ಆಟಗಾರ. ಪಂದ್ಯಗಳಲ್ಲಿ ಸಂದರ್ಭಕ್ಕನುಗುಣವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಅವರಿಗಿದೆ’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಆಯ್ಕೆ ಸಮಿತಿ ಮುಖ್ಯಸ್ಥ ರೋಜರ್ ಹಾರ್ಪರ್ ಅಭಿಪ್ರಾಯಪಟ್ಟರು.

ಚೇಸ್ ಈಗಾಗಲೇ ನ್ಯೂಜಿಲೆಂಡ್‌ಗೆ ತೆರಳಿದ್ದು ಐಪಿಎಲ್‌ನಲ್ಲಿ ವಿವಿಧ ತಂಡಗಳಲ್ಲಿದ್ದ ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್‌, ಹೋಲ್ಡರ್‌, ಫ್ಯಾಬಿಯನ್ ಅಲನ್, ಶಿಮ್ರಾನ್ ಹೆಟ್ಮೆಯರ್‌, ಕೀಮೊ ಪಾಲ್‌ ಮತ್ತು ಒಷೇನ್ ಥಾಮಸ್ ಮುಂತಾದವರು ಇನ್ನಷ್ಟೇ ತೆರಳಬೇಕಾಗಿದೆ. ನವೆಂಬರ್ 27ರಂದು ಆಕ್ಲೆಂಡ್‌ನಲ್ಲಿ ಟಿ20 ಸರಣಿ ಆರಂಭಗೊಳ್ಳಲಿದ್ದು 29 ಮತ್ತು 30ರಂದು ಮೌಂಟ್ ಮಾಂಗನೂಯಿಯಲ್ಲಿ ಉಳಿದೆರಡು ಪಂದ್ಯಗಳು ಇರುತ್ತವೆ. 

ಟೆಸ್ಟ್ ಸರಣಿಯ ಮೊದಲ ಪಂದ್ಯ ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ಡಿಸೆಂಬರ್ ಮೂರರಂದು ಆರಂಭವಾಗಲಿದೆ. ಎರಡನೇ ‍ಪಂದ್ಯ ವೆಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ 11ರಿಂದ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು