ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ ಹಣಾಹಣಿಯಲ್ಲಿ ಚೆನ್ನೈ–ಮುಂಬೈ: ದಾಖಲೆ ಪ್ರಶಸ್ತಿ ಕನಸಿನ ಬೆನ್ನೇರಿ

ಐಪಿಎಲ್‌ 2019
Last Updated 11 ಮೇ 2019, 19:48 IST
ಅಕ್ಷರ ಗಾತ್ರ

ಹೈದರಾಬಾದ್‌: ಎರಡೂ ತಂಡಗಳಿಗೆ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕ. ಚೆನ್ನೈ ಸೂಪರ್ ಕಿಂಗ್ಸ್‌ ಸತತ ಎರಡನೇ ಬಾರಿ ಟ್ರೋಫಿಗೆ ಮುತ್ತಿಡುವ ಕನಸು ಹೊತ್ತಿದ್ದರೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ರಾಜನಾಗಿ ಮೆರೆಯುವ ನಿರೀಕ್ಷೆ.

ಈ ಎರಡು ತಂಡಗಳ ನಡುವಿನ ಫೈನಲ್ ಕದನಕ್ಕೆ ಇಲ್ಲಿನ ರಾಜೀವಗಾಂಧಿ ಕ್ರೀಡಾಂಗಣ ಸಜ್ಜಾಗಿದ್ದು ಭಾನುವಾರ ನಡೆಯುವ ಪ್ರಶಸ್ತಿ ಹಂತದ ಹೋರಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಪ್ರಿಯರೂ ತುದಿಗಾಲಲ್ಲಿ ನಿಂತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ ಮೂರು ಬಾ‌ರಿ ಪ್ರಶಸ್ತಿ ಗೆದ್ದಿವೆ. ಈ ಬಾರಿ ಯಾರು ಗೆದ್ದರೂ ಅದು ಹೊಸ ದಾಖಲೆಯಾಗಿದೆ. ಯಾಕೆಂದರೆ ಐಪಿಎಲ್‌ನ ಹಿಂದಿನ 11 ಆವೃತ್ತಿಗಳಲ್ಲಿ ಯಾವ ತಂಡವೂ ನಾಲ್ಕು ಬಾರಿ ಚಾಂಪಿಯನ್ ಆಗಲಿಲ್ಲ. ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಉಮೇದಿನೊಂದಿಗೆ ಮಹೇಂದ್ರ ಸಿಂಗ್ ಧೋನಿ ಪಡೆ ಕಣಕ್ಕೆ ಇಳಿಯಲಿದೆ.

ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಫೈನಲ್‌ನಲ್ಲಿ ಗೆಲುವು ಯಾರಿಗೆ ಎಂದು ಭವಿಷ್ಯ ನುಡಿಯಲು ಕ್ರಿಕೆಟ್ ತಜ್ಞರು ಕೂಡ ಪರದಾಡುತ್ತಿದ್ದಾರೆ. ಅಭಿಮಾನಿಗಳಂತೂ ತಾವು ಬೆಂಬಲಿಸುವ ತಂಡವೇ ಗೆದ್ದು ಬೀಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಸೂಪರ್‌ ಕಿಂಗ್ಸ್ ತಂಡವನ್ನು ಲೀಗ್ ಹಂತದಲ್ಲೂ ಕ್ವಾಲಿಫೈಯರ್‌ ಪಂದ್ಯದಲ್ಲೂ ಸೋಲಿಸಿರುವುದರಿಂದ ಮುಂಬೈ ಇಂಡಿಯನ್ಸ್‌ನ ಆತ್ಮವಿಶ್ವಾಸ ಹೆಚ್ಚಿದೆ. ಆದರೆ ಯಾವುದೇ ತಂಡವನ್ನು ಹಣಿಯುವ ತಂತ್ರಗಾರಿಕೆ ಹೆಣೆಯಲು ಸಾಧ್ಯವಿರುವ ಮಹೇಂದ್ರ ಸಿಂಗ್‌ ಧೋನಿ ಮುಂಬೈ ವಿರುದ್ಧದ ಸೇಡು ತೀರಿಸಿಕೊಂಡು ಪಂದ್ಯ ಗೆಲ್ಲುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

ಅಂಕಿ ಅಂಶಗಳ ಕಡೆಗೆ ನೋಟ ಹರಿಸಿದರೆ ಸಿಎಸ್‌ಕೆಗಿಂತ ಮುಂಬೈ ಒಂದು ಹೆಜ್ಜೆ ಮುಂದೆ ಇದೆ. ನಾಲ್ಕು ಬಾರಿ ಫೈನಲ್ ಪ್ರವೇಶಿಸಿರುವ ಮುಂಬೈ ತಂಡ ಮೂರರಲ್ಲಿ ಯಶಸ್ಸು ಸಾಧಿಸಿದೆ. ಎರಡು ಬಾರಿ (2013, 2015) ಸೂಪರ್ ಕಿಂಗ್ಸ್ ತಂಡವನ್ನೇ ಮಣಿಸಿತ್ತು.

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದ ಸೂಪರ್ ಕಿಂಗ್ಸ್‌ ಕಳೆದ ವರ್ಷ ಮತ್ತೆ ಅಂಗಣಕ್ಕೆ ಇಳಿದಿತ್ತು. ಪ್ರಶಸ್ತಿಯನ್ನೂ ಗೆದ್ದಿತ್ತು. ಈಗ ಸತತ ಎಂಟನೇ ಬಾರಿ ಫೈನಲ್ ಪ್ರವೇಶಿಸಿ ದಾಖಲೆ ನಿರ್ಮಿಸಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಪ್ರಶಸ್ತಿ ಕೈಚೆಲ್ಲಲು ತಂಡ ಸಿದ್ಧವಿಲ್ಲ.

ಸ್ಪಿನ್‌ಗೆ ಮದ್ದು ಅರೆಯುವುದೇ ಮುಂಬೈ ಪಡೆ?: ಲೀಗ್‌ನಲ್ಲಿ ಎರಡು ಬಾರಿ ಮತ್ತು ಕ್ವಾಲಿಫೈಯರ್‌ನಲ್ಲಿ ಸೂಪರ್ ಕಿಂಗ್ಸ್‌ನ ಪ್ರಮುಖ ಅಸ್ತ್ರವಾದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮುಂಬೈ ಇಂಡಿಯನ್ಸ್‌ ಫೈನಲ್‌ನಲ್ಲೂ ಸ್ಪಿನ್‌ಗೆ ಮದ್ದು ಅರೆಯುವುದೇ ಎಂಬುದನ್ನು ಕಾದುನೋಡಬೇಕು.

ಇಮ್ರಾನ್ ತಾಹೀರ್‌, ಹರಭಜನ್ ಸಿಂಗ್ ಮತ್ತು ರವೀಂದ್ರ ಜಡೇಜ ಚೆನ್ನೈ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಿದೆ. ಇವರು ಮೂವರನ್ನು ಎದುರಿಸಲು ಸಾಧ್ಯವಾದರೆ ರೋಹಿತ್ ಶರ್ಮಾ, ಕ್ವಿಂಟ್ ಡಿ ಕಾಕ್, ಸೂರ್ಯಕುಮಾರ್ ಯಾದವ್ ಮತ್ತು ಪಾಂಡ್ಯ ಸಹೋದರರು ಮುಂಬೈಗೆ ದೊಡ್ಡ ಮೊತ್ತ ಗಳಿಸಿಕೊಡಲು ಯಶಸ್ವಿಯಾಗಲಿದ್ದಾರೆ.

ಶೇನ್ ವಾಟ್ಸನ್‌, ಫಾಫ್ ಡು ಪ್ಲೆಸಿ, ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ಅಂಬಟಿ ರಾಯುಡು ಅವರನ್ನು ಒಳಗೊಂಡ ಚೆನ್ನೈ ಬ್ಯಾಟಿಂಗ್ ಬಳಗವನ್ನು ಕಟ್ಟಿ ಹಾಕುವ ಜವಾಬ್ದಾರಿ ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ರಾಹುಲ್ ಚಾಹರ್, ಕೃಣಾಲ್ ಪಾಂಡ್ಯ ಮುಂತಾದವ ಮೇಲಿದೆ.

ಪ್ರಮುಖ ಅಂಶಗಳು
* ಚೆನ್ನೈ ಸೂಪರ್ ಕಿಂಗ್ಸ್‌ ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್‌ ಎದುರು 6 ವಿಕೆಟ್‌ಗಳಿಂದ ಸೋತಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದಿತ್ತು.
* ಮುಂಬೈ ಇಂಡಿಯನ್ಸ್‌ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದು ನೇರವಾಗಿ ಫೈನಲ್‌ ಪ್ರವೇಶಿಸಿತ್ತು. ಲೀಗ್ ಹಂತದ 14 ಪಂದ್ಯಗಳಲ್ಲಿ ಒಂಬತ್ತನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿತ್ತು.
* ಚೆನ್ನೈ ಸೂಪರ್ ಕಿಂಗ್ಸ್ ಕೂಡ ಲೀಗ್ ಹಂತದ 14 ಪಂದ್ಯಗಳಲ್ಲಿ ಒಂಬತ್ತರಲ್ಲಿ ಗೆದ್ದಿತ್ತು. ಆದರೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು.
* ಚೆನ್ನೈ ಸೂಪರ್ ಕಿಂಗ್ಸ್‌, ಐಪಿಎಲ್‌ನಲ್ಲಿ ಸತತವಾಗಿ ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡವಾಗಿದೆ. 2010 ಮತ್ತು 2011ರಲ್ಲಿ ಪ್ರಶಸ್ತಿ ಈ ತಂಡದ ಪಾಲಾಗಿತ್ತು. ಈ ಬಾರಿಯೂ ಗೆದ್ದರೆ ಎರಡು ಬಾರಿ ಈ ಸಾಧನೆ ಮಾಡಿದ ತಂಡ ಎನಿಸಿಕೊಳ್ಳಲಿದೆ.
* ಒಂದೇ ವರ್ಷದಲ್ಲಿ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್‌ ಟ್ವೆಂಟಿ–20 ಪ್ರಶಸ್ತಿ ಗೆದ್ದ ಮೊದಲ ತಂಡ ಮುಂಬೈ. ಈ ತಂಡ 2013ರಲ್ಲಿ ಇಂಥ ಅಪರೂಪದ ಸಾಧನೆ ಮಾಡಿದೆ.

ತಂಡಗಳು ಇಂತಿವೆ
ಚೆನ್ನೈ ಸೂಪರ್ ಕಿಂಗ್ಸ್‌: ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್‌), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವಾಟ್ಸನ್‌, ಫಾಫ್ ಡು ಪ್ಲೆಸಿ, ಮುರಳಿ ವಿಜಯ್‌, ರವೀಂದ್ರ ಜಡೇಜ, ಧ್ರುವ ಶೋರೆ, ಚೈತನ್ಯ ಬಿಷ್ಣೋಯ್‌, ಋತುರಾಜ್ ಗಾಯಕವಾಡ್‌, ಡ್ವೇನ್ ಬ್ರಾವೊ, ಕರಣ್ ಶರ್ಮಾ, ಇಮ್ರಾನ್ ತಾಹೀರ್, ಹರಭಜನ್ ಸಿಂಗ್‌, ಮಿಷೆಲ್ ಸ್ಯಾಂಟನರ್‌, ಶಾರ್ದೂಲ್‌ ಠಾಕೂರ್, ಮೋಹಿತ್ ಶರ್ಮಾ, ಕೆ.ಎಂ.ಆಸಿಫ್‌, ದೀಪಕ್ ಚಾಹರ್‌, ಎನ್‌.ಜಗದೀಶನ್‌, ಸ್ಕಾಟ್‌ ಕುಗೆಲಿನ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್‌), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಮಿಷೆಲ್‌ ಮೆಕ್‌ಲೆನಾಗನ್‌, ಮಯಂಕ್ ಮಾರ್ಕಂಡೆ, ರಾಹುಲ್ ಚಾಹರ್‌, ಜಸ್‌ಪ್ರೀತ್ ಬೂಮ್ರಾ, ಅನ್ಮೋಲ್ ಪ್ರೀತ್‌ ಸಿಂಗ್‌, ಸಿದ್ದೇಶ್ ಲಾಡ್‌, ಅನುಕೂಲ್ ರಾಯ್‌, ಎವಿನ್ ಲ್ಯೂವಿಸ್‌, ಜೈಸ್ವಾಲ್, ಬೆನ್ ಕಟಿಂಗ್, ಇಶಾನ್ ಕಿಶನ್, ಆದಿತ್ಯ ತಾರೆ, ರಸಿಕ್ ಸಲಾಮ್, ಬರಿಂದರ್ ಸ್ರಾನ್, ಜಯಂತ್ ಯಾದವ್, ಬ್ಯೂರನ್ ಹೆನ್ರಿಕ್ಸ್, ಲಸಿತ್ ಮಾಲಿಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT