ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಕು ಕಾರ್ಯಾಚರಣೆ ಪ್ರಕರಣ: ಆಯ್ಕೆ ಸಮಿತಿಗೆ ಚೇತನ್ ಶರ್ಮಾ ರಾಜೀನಾಮೆ

ಶಿವಸುಂದರ್ ದಾಸ್ ಹಂಗಾಮಿ ಮುಖ್ಯಸ್ಥ
Last Updated 17 ಫೆಬ್ರುವರಿ 2023, 11:40 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆಯ ಗೋಪ್ಯ ಮಾಹಿತಿಗಳನ್ನು ಟಿವಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಳಿಸಿದ್ದ ಚೇತನ್ ಶರ್ಮಾ, ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅವರ ಸ್ಥಾನಕ್ಕೆ ಹಂಗಾಮಿಯಾಗಿ ಮಾಜಿ ಆಟಗಾರ ಶಿವಸುಂದರ್ ದಾಸ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ.

‘ಚೇತನ್ ರಾಜೀನಾಮೆಪತ್ರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಸಲ್ಲಿಸಿದ್ದಾರೆ. ಅದು ಸ್ವೀಕೃತವೂ ಆಗಿದೆ. ಸ್ವಯಂ ನಿರ್ಧಾರದಿಂದಲೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಯಾರೂ ಅವರಿಗೆ ಕೇಳಿರಲಿಲ್ಲ’ ಎಂದು ಬಿಸಿಸಿಐ ಮೂಲಗಳು ಶನಿವಾರ ತಿಳಿಸಿವೆ.

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಫೈನಲ್‌ ಪಂದ್ಯ ನಡೆಯುತ್ತಿರುವ ಕೋಲ್ಕತ್ತದಲ್ಲಿ ಶರ್ಮಾ ಹಾಗೂ ಉಳಿದ ಸದಸ್ಯರು ಇದ್ದರು. ಇರಾನಿ ಟ್ರೋಫಿ ಟೂರ್ನಿಗಾಗಿ ತಂಡವನ್ನು ಆಯ್ಕೆ ಮಾಡುವ ಸಲುವಾಗಿ ಸಮಿತಿಯು ಅಲ್ಲಿದೆ. ರಾಜೀನಾಮೆ ಸ್ವೀಕೃತವಾದ ಕೂಡಲೇ ಶರ್ಮಾ ಕ್ರೀಡಾಂಗಣ ತೊರೆದರು. ನವದೆಹಲಿಗೆ ಮರಳಿದರು. ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸದ ಶರ್ಮಾ ಮನೆಗೆ ತೆರಳಿದರು.

ಝೀ ನ್ಯೂಸ್ ವಾಹಿನಿಯು ಮಾಡಿರುವ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಹಲವು ವಿವಾದಾತ್ಮಕ ವಿಷಯಗಳ ಕುರಿತು ಮಾತನಾಡಿದ್ದಾರೆ.

ಬಹಳಷ್ಟು ಆಟಗಾರರು ತಾವು ಶೇ. 80ರಷ್ಟು ಫಿಟ್ ಇದ್ದರೂ ಸಾಮರ್ಥ್ಯವೃದ್ಧಿಗಾಗಿ ಇಂಜೆಕ್ಷನ್ ಪಡೆದು ಬರುತ್ತಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ತಂಡಕ್ಕೆ ಮರಳಿದ್ದಾಗ ತಂಡದ ವ್ಯವಸ್ಥಾಪಕ ಸಮಿತಿ ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ, ವೇಗಿ ಉಮೇಶ್ ಯಾದವ್ ಹಾಗೂ ಆಲ್‌ರೌಂಡರ್ ದೀಪಕ್ ಹೂಡಾ ಅವರು ಹಲವು ಬಾರಿ ತಮ್ಮ ಮನೆಗೂ ಭೇಟಿ ನೀಡಿದ್ದರು ಎಂದೂ ಹೇಳಿರುವುದು ವಿಡಿಯೊದಲ್ಲಿದೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಂಟಿನ ಕುರಿತೂ ಚೇತನ್ ಮಾತನಾಡಿದ್ದಾರೆ. ಬಿಸಿಸಿಐನ ಆಗಿ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ವಿರಾಟ್ ಜೊತೆಗೆ ಭಿನ್ನಾಭಿಪ್ರಾಯವಿತ್ತು. ಆದ್ದರಿಂದಲೇ ರೋಹಿತ್ ಅವರಿಗೆ ನಾಯಕತ್ವ ನೀಡಿದರು ಎಂದೂ ಚೇತನ್ ಹೇಳಿಕೆ ನೀಡಿದ್ದಾರೆ.

ಚೇತನ್ ನೀಡಿರುವ ಹೇಳಿಕೆಗಳಿಂದಾಗಿ ಬಿಸಿಸಿಐ ಉನ್ನತಾಧಿಕಾರಿಗಳು ಆಕ್ರೋಶಗೊಂಡಿದ್ದರೆನ್ನಲಾಗಿದೆ.

‘ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ನಾಯಕರಾದ ರೋಹಿತ್ ಹಾಗೂ ಹಾರ್ದಿಕ್ ಅವರಿಗೆ ಚೇತನ್ ಶರ್ಮಾ ಮೇಲೆ ನಂಬಿಕೆ ಉಳಿದಿರಲಿಲ್ಲ. ಗೌರವವನ್ನೂ ಕಳೆದುಕೊಂಡಿದ್ದರು. ಅಲ್ಲದೇ ತಮ್ಮ ನಾಲಿಗೆಯ ಮೇಲೆ ನಿಯಂತ್ರಣರಿಲಿಲ್ಲ. ಅದಕ್ಕಾಗಿ ಈ ದಂಡ ತೆತ್ತಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT