ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾರ ದ್ವಿಶತಕ; ಶೆಲ್ಡನ್ ಶತಕ

ರಾಜ್‌ಕೋಟ್‌ನಲ್ಲಿ ರಣಜಿ ಪಂದ್ಯ: ಆತಿಥೇಯರ ಆಟಕ್ಕೆ ಕರ್ನಾಟಕದ ಪರದಾಟ
Last Updated 12 ಜನವರಿ 2020, 20:00 IST
ಅಕ್ಷರ ಗಾತ್ರ

ರಾಜ್‌ಕೋಟ್: ಕರ್ನಾಟಕದ ದುರ್ಬಲ ಬೌಲಿಂಗ್ ದಾಳಿಯನ್ನು ಚೇತೇಶ್ವರ್ ಪೂಜಾರ ಮತ್ತು ಶೆಲ್ಡನ್ ಜಾಕ್ಸನ್ ಜೋಡಿ ಭಾನುವಾರವೂ ಪುಡಿಗಟ್ಟಿತು.

ಇದರಿಂದಾಗಿ ಪೂಜಾರ (248; 390ಎಸೆತ, 24ಬೌಂಡರಿ, 1ಸಿಕ್ಸರ್) ದ್ವಿಶತಕ ಮತ್ತು ಶೆಲ್ಡನ್ (161; 299ಎ, 7ಬೌಂ, 6ಸಿ) ಶತಕ ಬಾರಿಸಿದರು. ಸೌರಾಷ್ಟ್ರ ತಂಡವು 166 ಓವರ್‌ಗಳಲ್ಲಿ 7ಕ್ಕೆ581 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ‌ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರಾಗೆ ಇದು 13ನೇ ದ್ವಿಶತಕ.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿ ಸಿರುವ ಕರ್ನಾಟಕ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಮೊದಲ ಓವರ್‌ನಲ್ಲಿಯೇ ದೇವದತ್ತ ಪಡಿಕ್ಕಲ್ ವಿಕೆಟ್ ಗಳಿಸಿದ ನಾಯಕ ಜಯದೇವ್ ಉನದ್ಕತ್ ಸಂಭ್ರಮಿಸಿದರು. ದಿನ ದಾಟದ ಅಂತ್ಯಕ್ಕೆ ಕರ್ನಾಟಕ ತಂಡವು 8 ಓವರ್‌ಗಳಲ್ಲಿ 1 ವಿಕೆಟ್‌ಗೆ 13 ರನ್ ಗಳಿಸಿತು. ಆರ್. ಸಮರ್ಥ್ (ಬ್ಯಾಟಿಂಗ್ 6) ಮತ್ತು ರೋಹನ್ ಕದಂ (ಬ್ಯಾಟಿಂಗ್ 7) ಕ್ರೀಸ್‌ನಲ್ಲಿದ್ದಾರೆ.

ಪೂಜಾರ–ಶೆಲ್ಡನ್ ಜೊತೆಯಾಟ: ಒಟ್ಟು 108 ಓವರ್‌ಗಳನ್ನು ಎದುರಿಸಿದ ಪೂಜಾರ ಶೆಲ್ಡನ್ ಜೋಡಿಯು ಮೂರನೇ ವಿಕೆಟ್‌ಗೆ 394 ರನ್‌ಗಳನ್ನು ಪೇರಿಸಿತು. ಶನಿವಾರ ಸೌರಾಷ್ಟ್ರವು 33 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದು ಕೊಂಡಾಗ ಜೊತೆಗೂಡಿದ್ದರು. ಶತಕ ದಾಖಲಿಸಿದ್ದ ಪೂಜಾರ ಮತ್ತು 99 ರನ್ ಗಳಿಸಿದ್ದ ಶೆಲ್ಡನ್ ಎರಡನೇ ಆಟ ಮುಂದುವರಿಸಿ ಇಬ್ಬರೂ ಕರ್ನಾಟಕದ ಬೌಲರ್‌ಗಳನ್ನು ಕಾಡಿದರು.

ನಾಯಕ ಶ್ರೇಯಸ್ ಸೇರಿದಂತೆ ಮೂವರು ಪರಿಣತ ಸ್ಪಿನ್ನರ್‌ಗಳಿಗೆ ಈ ಜೊತೆ ಯಾಟವನ್ನು ಮುರಿಯಲು ಸಾಧ್ಯವಾಗಲಿಲ್ಲ. ಅಲ್ಲದೇ ಇವರು ದುಬಾರಿಯೂ ಆದರು. ದಿನದಾಟದಲ್ಲಿ ತಾವೆದುರಿಸಿದ ಏಳನೇ ಎಸೆತದಲ್ಲಿ ಶತಕದ ಗಡಿ ದಾಟಿದ ಶೆಲ್ಡನ್ ಬಿರುಸಿನ ಆಟ ಆರಂಭಿಸಿದರು. ಇದರಿಂದಾಗಿ ರನ್‌ ಗಳಿಕೆಯು ಚುರುಕಾಯಿತು.

ಇನ್ನೊಂದೆಡೆ ಪೂಜಾರ ದ್ವಿಶತಕದ (314 ಎಸೆತ) ಗಡಿ ತಲುಪಿದರು. ಅವರು ಮೊದಲ ದಿನದಾಟದಲ್ಲಿ 158 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅದ ರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕದ ಸಾಧನೆ ಮಾಡಿ ದ್ದರು. ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸಿಕೊಂಡರು. ಆತಿಥೇಯ ತಂಡವು ಊಟದ ವೇಳೆಗೆ 411 ರನ್‌ ಗಳಿಸಿತ್ತು.

ವಿರಾಮದ ನಂತರದ ಐದನೇ ಓವರ್‌ನಲ್ಲಿ ಸಾಂದರ್ಭಿಕ ಸ್ಪಿನ್ನರ್ ಪವನ್ ದೇಶಪಾಂಡೆ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ಪವನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಶೆಲ್ಡನ್‌ಗೆ ಅದೃಷ್ಟ ಕೈಕೊಟ್ಟಿತು. ಕ್ಯಾಚ್ ಮಾಡುವ ಅವಕಾಶವನ್ನು ರೋನಿತ್ ಮೋರೆ ಕೈಚೆಲ್ಲಲಿಲ್ಲ. ತ್ರಿಶತಕದತ್ತ ಹೆಜ್ಜೆ ಹಾಕಿದ್ದ ಪೂಜಾರ ಅವರ ವಿಕೆಟ್‌ ಗಳಿಸುವಲ್ಲಿ ರೋನಿತ್ ಯಶಸ್ವಿಯಾದರು. ಆದರೂ ಕರ್ನಾಟಕದ ಸಂಕಷ್ಟ ಕಳೆಯಲಿಲ್ಲ.

ಅರ್ಪಿತ್ ವಸವದಾ (35; 75ಎ) ಮತ್ತು ಪ್ರೇರಕ್ ಮಂಕಡ್ (ಔಟಾ ಗದೆ 86; 86ಎ, 5ಬೌಂ, 3ಸಿ) ಮೊತ್ತ ವನ್ನು ಹೆಚ್ಚಿಸಿದರು.ಅವರು ಪ್ರೇರಕ್ ಅವರೊಂದಿಗೆ ಐದನೇ ವಿಕೆಟ್‌ಗೆ 66 ರನ್‌ ಗಳಿಸಿದರು. ಹೀಗಾಗಿ ತಂಡ 500ರ ಗಡಿ ದಾಟಿತು ಪವನ್ ದೇಶಪಾಂಡೆ ಬಿಸಿದ ಎಲ್‌ಬಿಡಬ್ಲ್ಯು ಬಲೆಗೆ ಅರ್ಪಿತ್ ಬಿದ್ದರು. ರಣಜಿ ಪದಾರ್ಪಣೆ ಮಾಡಿರುವ ಪ್ರವೀಣ ದುಬೆ ಎರಡು ವಿಕೆಟ್ ಗಳಿಸುವಲ್ಲಿ ಯಶಸ್ವಿ ಯಾದರು. ಚಿರಾಗ್ ಜಾನಿ ಮತ್ತು ಧರ್ಮೇಂದ್ರಸಿಂಹ ಜಡೇಜ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಅನುಭವಿ ಸ್ಪಿನ್ನರ್ ಶ್ರೇಯಸ್ ಮತ್ತು ಮಧ್ಯಮವೇಗಿ ಪ್ರತೀಕ್ ಜೈನ್ ಅವರಿಗೆ ಒಂದೂ ವಿಕೆಟ್ ಲಭಿಸಲಿಲ್ಲ. ಉಳಿದಿರುವ ಎರಡು ದಿನಗಳಲ್ಲಿ ಕರ್ನಾಟಕದ ಆಟಗಾರರು ಎಚ್ಚರಿಕೆಯಿಂದ ಆಡುವ ಸವಾಲು ಇದೆ. ಇಲ್ಲಿ ಮೂರು ಮತ್ತು ನಾಲ್ಕನೇ ದಿನದಾಟದಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಿ ಆಡುವುದು ಬ್ಯಾಟ್ಸ್‌ಮನ್‌ಗಳಿಗೆ ಕಷ್ಟ.

‘ಟೆಸ್ಟ್ ಮಾದರಿ ಯಥಾಸ್ಥಿತಿಯಲ್ಲಿರಲಿ’

ಸೀಮಿತ ಓವರ್‌ಗಳ ಕ್ರಿಕೆಟ್ ಬಹಳ ಜನಪ್ರಿಯವಾಗುತ್ತಿದೆ. ಆದರೆ ಟೆಸ್ಟ್ ಮಾದರಿಗೆ ತನ್ನದೇ ಆದ ಘನತೆ ಮತ್ತು ಅಸ್ಮಿತೆ ಇಂದಿಗೂ ಇದೆ. ಆದ್ದರಿಂದ ಈಗಿರುವ ಮಾದರಿಯನ್ನೇ ಮುಂದುವರಿಸಬೇಕು ಎಂದು ಸೌರಾಷ್ಟ್ರದ ಆಟಗಾರ ಚೇತೇಶ್ವರ್ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

2023ರಿಂದ ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಿಗೆ ನಾಲ್ಕು ದಿನಕ್ಕೆ ಸೀಮಿತಗೊಳಿಸುವ ಕುರಿತು ಐಸಿಸಿ ಚಿಂತನೆ ನಡೆಸಿದೆ. ಆದರೆ ಹಲವಾರು ದಿಗ್ಗಜ ಆಟಗಾರರು ಈ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಭಾನುವಾರ ಕರ್ನಾಟಕ ಎದುರಿನ ರಣಜಿ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಪೂಜಾರ ಕೂಡ ಈಗ ಐದು ದಿನಗಳ ಟೆಸ್ಟ್ ಇರಲಿ ಎಂದಿದ್ದಾರೆ.

‘ಇದೇ ತಿಂಗಳು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿದ್ದೇವೆ. ಅದರ ಸಿದ್ಧತೆಗಾಗಿ ಈ ರಣಜಿ ಪಂದ್ಯವು ಅನುಕೂಲವಾಯಿತು. ಇಲ್ಲಿ ಮಾಡಿದ ಸಾಧನೆಯು ಖುಷಿ ಕೊಟ್ಟಿದೆ. ಆತ್ಮವಿಶ್ವಾಸದ ಮುಟ್ಟ ಹೆಚ್ಚಿದೆ’ ಎಂದರು.

ಸ್ಕೋರ್ ಕಾರ್ಡ್

ಸೌರಾಷ್ಟ್ರ

7ಕ್ಕೆ581 ಡಿಕ್ಲೆರ್ಡ್ (166 ಓವರ್‌ಗಳಲ್ಲಿ)

ಚೇತೇಶ್ವರ್ ಪೂಜಾರ ಸಿ ದೇವದತ್ತ ಪಡಿಕ್ಕಲ್ ಬಿ ರೋನಿತ್ ಮೋರೆ 248

ಶೆಲ್ಡನ್ ಜಾಕ್ಸನ್ ಸಿ ರೋನಿತ್ ಮೋರೆ ಬಿ ಪವನ್ ದೇಶಪಾಂಡೆ 161

ಅರ್ಪಿತ್ ವಸವದಾ ಎಲ್‌ಬಿಡಬ್ಲ್ಯು ಬಿ ಪವನ್ ದೇಶಪಾಂಡೆ 35

ಪ್ರೇರಕ್ ಮಂಕಡ್ ಔಟಾಗದೆ 86

ಚಿರಾಗ್ ಜಾನಿ ಬಿ ಪ್ರವೀಣ ದುಬೆ 7

ಧರ್ಮೇಂದ್ರಸಿಂಹ ಜಡೇಜ ಬಿ ಪ್ರವೀಣ ದುಬೆ 1

ಜಯದೇವ್ ಉನದ್ಕತ್ ಔಟಾಗದೆ 3

ಇತರೆ: 11 (ನೋಬಾಲ್ 1, ವೈಡ್ 1, ಬೈ 1, ಲೆಗ್‌ಬೈ 8)

ವಿಕೆಟ್ ಪತನ: 3–427 (ಶೆಲ್ಡನ್; 128.4), 4–452 (ಪೂಜಾರ;135.3), 5–518 (ಅರ್ಪಿತ್; 154.3), 6–545 (ಚಿರಾಗ್;161.5), 7–553 (ಜಡೇಜ;163.4)

ಬೌಲಿಂಗ್

ರೋನಿತ್ ಮೋರೆ 29–4–86–1, ಪ್ರತೀಕ್ ಜೈನ್ 27–10–53–0, ಜೆ. ಸುಚಿತ್ 41–4–129–2, ಶ್ರೇಯಸ್ ಗೋಪಾಲ್ 26–2–126–0, ಪವನ್ ದೇಶಪಾಂಡೆ 27–1–98–2, ಪ್ರವೀಣ ದುಬೆ 16–0–80–2

ಕರ್ನಾಟಕ

1 ವಿಕೆಟ್‌ಗೆ 13 (8 ಓವರ್‌ಗಳಲ್ಲಿ)

ಆರ್. ಸಮರ್ಥ್ ಬ್ಯಾಟಿಂಗ್ 6

ದೇವದತ್ತ ಪಡಿಕ್ಕಲ್ ಸಿ ಸ್ನೆಲ್ ಪಟೇಲ್ ಬಿ ಜಯದೇವ್ ಉನದ್ಕತ್ 0

ರೋಹನ್ ಕದಂ ಬ್ಯಾಟಿಂಗ್ 7

ವಿಕೆಟ್ ಪತನ: 1–1 (ದೇವದತ್ತ;0.4)

ಬೌಲಿಂಗ್

ಜಯದೇವ್ ಉನದ್ಕತ್ 4–0–8–1, ಚಿರಾಗ್ ಜಾನಿ 2–1–4–0, ಧರ್ಮೇಂದ್ರಸಿಂಹ ಜಡೇಜ 2–1–1–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT