ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಶಿಯಲ್ ಮಿಡಿಯಾದಲ್ಲಿ ಬ್ಯಾಟಿಂಗ್ ಮಾಡಲಾಗದು: ಟೀಕಾಕಾರರಿಗೆ ಟಾಂಗ್ ಕೊಟ್ಟ ಪೂಜಾರ

‘ಸಿಕ್ಸರ್ ಬಾರಿಸುವ ಇತರ ಬ್ಯಾಟ್ಸ್‌ಮನ್‌ಗಳಂತಲ್ಲ ನಾನು; ಮನರಂಜನೆ ನೀಡುವುದಷ್ಟೇ ನನ್ನ ಗುರಿಯಲ್ಲ’
Last Updated 17 ಮಾರ್ಚ್ 2020, 6:31 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ:ಭಾರತ ಕ್ರಿಕೆಟ್‌ ತಂಡದ ಟೆಸ್ಟ್‌ ಪರಿಣತಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಅವರು, ತಮ್ಮ ಆಟದ ಶೈಲಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸುವವರಿಗೆ ಟಾಂಗ್‌ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು,‘ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಅಲ್ಲಿ ಟೀಕಿಸುವ ಬಹುತೇಕರು ನನ್ನ ಆಟವನ್ನು ಮತ್ತು ಟೆಸ್ಟ್‌ ಕ್ರಿಕೆಟ್‌ ಅನ್ನು ಅರ್ಥಮಾಡಿಕೊಂಡಿಲ್ಲ. ಏಕೆಂದರೆ, ಅವರು ಕೇವಲ ನಿಗದಿತ ಓವರ್‌ಗಳ (ಏಕದಿನ, ಟಿ20) ಕ್ರಿಕೆಟ್‌ ಅನ್ನು ಮಾತ್ರವೇ ನೋಡಿರುತ್ತಾರೆ. ಇವನ ಆಟ ತಲೆ ಚಿಟ್ಟುಹಿಡಿಸುತ್ತದೆ. ಇನ್ನೂ ಎಷ್ಟು ಎಸೆತಗಳು ಬೇಕು ಇವನಿಗೆ ಎನ್ನುತ್ತಾರೆ’ ಎಂದಿದ್ದಾರೆ.

‘ದಯವಿಟ್ಟು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ. ಮನರಂಜನೆ ನೀಡುವುದು ನನ್ನ ಗುರಿಯಲ್ಲ. ಸೌರಾಷ್ಟ್ರ ಅಥವಾ ಭಾರತ ತಂಡವೇ ಆಗಲಿ, ಗೆಲ್ಲುವುದಷ್ಟೇ ನನ್ನ ಉದ್ದೇಶ. ಕೆಲವು ದಿನ ನಾನು ವೇಗವಾಗಿ ಬ್ಯಾಟಿಂಗ್ ಮಾಡುತ್ತೇನೆ.ಕೆಲವು ದಿನ ನಿಧಾನಗತಿಯಲ್ಲಿ ಆಡುತ್ತೇನೆ. ಆಟವನ್ನು, ಕ್ರಿಕೆಟ್‌ ಪ್ರೇಮಿಗಳನ್ನು ನಾನು ಗೌರವಿಸುತ್ತೇನೆ. ಸಿಕ್ಸರ್‌ ಭಾರಿಸುವ ಬೇರೆ ಬ್ಯಾಟ್ಸ್‌ಮನ್‌ಗಳಂತಲ್ಲ ನಾನು. ಮನರಂಜನೆ ನೀಡುವುದಕ್ಕಾಗಿ ಬ್ಯಾಟಿಂಗ್ ಮಾಡಲಾರೆ’ ಎಂದು ತಿಳಿಸಿದ್ದಾರೆ.

ಪೂಜಾರ ಬ್ಯಾಟಿಂಗ್ ವೈಖರಿ

2018ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಪೂಜಾರ ಅತ್ಯುತ್ತಮ ಸಾಮರ್ಥ್ಯ ತೋರಿದ್ದರು.4 ಪಂದ್ಯಗಳ 7 ಇನಿಂಗ್ಸ್‌ಗಳಿಂದ ಮೂರು ಶತಕ ಸಹಿತ 521‬ ರನ್ ಗಳಿಸಿದ್ದ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದರು.ಅವರ ಶ್ರೇಷ್ಠ ಆಟದಿಂದಾಗಿ 2–1 ಅಂತರದಿಂದ ಸರಣಿ ಗೆದ್ದ ಭಾರತ ತಂಡ, ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಸಲ ಟೆಸ್ಟ್‌ ಸರಣಿ ಜಯಿಸಿದ ದಾಖಲೆ ಬರೆದಿತ್ತು. ಆ ಸರಣಿಯು ಪೂಜಾರ ಬ್ಯಾಟಿಂಗ್ ಮೌಲ್ಯವನ್ನು ಸಾರಿತ್ತು.

ಆ ಬಗ್ಗೆಯೂ ಮಾತನಾಡಿರುವ ಪೂಜಾರ, ‘ಆಸ್ಟ್ರೇಲಿಯಾ ಸರಣಿ ಬಳಿಕ ಹಲವು ವಿಚಾರಗಳು, ಅಭಿಪ್ರಾಯಗಳು ಬದಲಾದವು. ಆ ಸರಣಿಬಳಿಕ ಮುಂಬೈನ ಹೋಟೆಲ್‌ ಒಂದರಲ್ಲಿ ರಾತ್ರಿ ಊಟಕ್ಕೆ ಹೋಗಿದ್ದಾಗ, ವೃದ್ಧ ದಂಪತಿ ನನ್ನೊಂದಿಗೆ ಮಾತನಾಡಿದ್ದರು. ಅವರು, ಸುನಿಲ್‌ ಗಾವಸ್ಕರ್‌ ಮತ್ತು ಗುಂಡಪ್ಪ ವಿಶ್ವನಾಥ್‌ ಅವರ ಬಳಿಕ ನಿಮ್ಮ ಬ್ಯಾಟಿಂಗ್ ನೋಡುವ ಸಲುವಾಗಿಯೇಟೆಸ್ಟ್‌ ಪಂದ್ಯಗಳನ್ನು ನೋಡುತ್ತಿರುವುದಾಗಿ ಹೇಳಿದ್ದರು’ ಎಂದಿದ್ದಾರೆ.

‘ಇದರರ್ಥ ನಾನು ನನ್ನ ಆಟದ ಶೈಲಿಯನ್ನು ಬದಲಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಲ್ಲ. ಸೀಮಿತ ಓವರ್‌ಗಳ ಪಂದ್ಯವನ್ನೂ ಆಡಬಲ್ಲೆ. ನಾನು ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಬ್ಯಾಟಿಂಗ್‌ ಮಾಡುವುದನ್ನು ಹೆಚ್ಚಿನವರು ಟಿವಿಯಲ್ಲಿ ನೋಡಿಲ್ಲ. ಆಟಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ ಎಂಬುದು ನನಗೂ ಗೊತ್ತು. ಆದರೆ, ಆ ರೀತಿ ಆಡುವುದೇನಾನು ಮತ್ತಷ್ಟು ಬೆಳೆಯಲು ಸಾಧ್ಯ ಎಂದು ಭಾವಿಸುತ್ತೇನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT