ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವೊಮ್ಮೆ ರನ್‌ ಗಳಿಕೆಗಿಂತ ಕ್ರೀಸ್‌ನಲ್ಲಿ ‘ಲಂಗರು’ ಹಾಕುವುದೂ ಮುಖ್ಯ: ಪೂಜಾರ

ಟೆಸ್ಟ್ ಕ್ರಿಕೆಟ್ ಬಗ್ಗೆ ಪೂಜಾರ ಅಭಿಪ್ರಾಯ
Last Updated 31 ಜನವರಿ 2021, 11:42 IST
ಅಕ್ಷರ ಗಾತ್ರ

ನವದೆಹಲಿ: ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ನಲ್ಲಿ ಚೆಂಡನ್ನು ಬಡಿದಟ್ಟಿ ರನ್ ಗಳಿಸಿದ್ದಕ್ಕಿಂತ ಕ್ರೀಸ್‌ನಲ್ಲಿ ತಳವೂರಿ ಎದುರಿಸಿದ ಎಸೆತಗಳೂ ಮುಖ್ಯವಾಗುತ್ತವೆ. ಹೀಗಾಗಿ ಸ್ಟ್ರೈಕ್ ರೇಟ್ ಬಗ್ಗೆ ಮಾತ್ರ ಮಾತನಾಡುವುದು ಎಲ್ಲ ಸಂದರ್ಭಕ್ಕೆ ಒಗ್ಗುವುದಿಲ್ಲ ಎಂದು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಪೂಜಾರ ಅತ್ಯುತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಿದ್ದರು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 2–1ರ ಜಯ ಗಳಿಸಿತ್ತು. ಮೆಲ್ಬರ್ನ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಸವಾಲಿನ ಗುರಿ ಬೆನ್ನತ್ತಿ ತಂಡಕ್ಕೆ ಜಯ ತಂದುಕೊಡುವಲ್ಲಿ ಪೂಜಾರ ಪ್ರಮುಖ ಪಾತ್ರ ವಹಿಸಿದ್ದರು. ಅನೇಕ ಬಾರಿ ಬೌನ್ಸರ್‌ಗಳು ಅವರ ದೇಹಕ್ಕೆ ಅಪ್ಪಳಿಸಿದ್ದರೂ ಎದೆಗುಂದದೆ ಕ್ರೀಸ್‌ನಲ್ಲಿ ತಳವೂರಿದ್ದರು.

‘ಈಚೆಗೆ ನಡೆದ ಸರಣಿ ಮತ್ತು ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ನಡೆದ ಸರಣಿಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಲು ಸಾಧ್ಯವಾಗಿದೆ. ಆದರೆ ಎರಡೂ ಸಂದರ್ಭಗಳಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಈ ಬಾರಿ ಕೋವಿಡ್‌–19 ಪಿಡುಗಿನಿಂದಾಗಿ ಎಂಟು ತಿಂಗಳ ನಂತರ ಕಣಕ್ಕೆ ಇಳಿದಿದ್ದೆ. ಪ್ರಥಮ ದರ್ಜೆ ಪಂದ್ಯಗಳ ಬಲ ಇಲ್ಲದೇ ಆಸ್ಟ್ರೇಲಿಯಾಗೆ ತಂಡ ಪ್ರವಾಸ ಕೈಗೊಂಡಿತ್ತು. ಹೀಗಾಗಿ ಅಲ್ಲಿ ಸವಾಲು ಹೆಚ್ಚು ಇತ್ತು’ ಎಂದು ತವರಿನಲ್ಲಿ ಇಂಗ್ಲೆಂಡ್ ಎದುರು ನಡೆಯಲಿರುವ ಟೆಸ್ಟ್ ಸರಣಿಗಾಗಿ ಬಯೊ ಬಬಲ್ ಪ್ರವೇಶಿಸುವುದಕ್ಕೂ ಮೊದಲು ಪೂಜಾರ ಹೇಳಿದರು.

‘ಆಸ್ಟ್ರೇಲಿಯಾ ತಂಡ ನಮ್ಮಲ್ಲಿ ಪ್ರತಿಯೊಬ್ಬರನ್ನೂ ಎದುರಿಸಲು ಪ್ರತ್ಯೇಕ ರಣತಂತ್ರವನ್ನು ಹೂಡಿಕೊಂಡೇ ಕಣಕ್ಕೆ ಇಳಿದಿತ್ತು. ಹೀಗಾಗಿ ಅಲ್ಲಿ ಪಂದ್ಯಗಳನ್ನು ಗೆಲ್ಲುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೂ ಕೊನೆಗೆ ಎಲ್ಲವೂ ನಾವಂದುಕೊಂಡಂತೆಯೇ ಆಯಿತು. ಗಳಿಸಿದ ರನ್‌ಗಳ ಮೇಲೆ ಕಣ್ಣಾಡಿಸಿದರೆ ಆ ಸರಣಿಯಲ್ಲಿ ನನ್ನ ಸಾಧನೆ ತೃಪ್ತಿಕರವೇನೂ ಅಲ್ಲ. ಆದರೆ ಪಂದ್ಯಗಳು ನಡೆದ ಪಿಚ್‌ಗಳನ್ನು ಗಮನಿಸಿದರೆ ಬ್ಯಾಟಿಂಗ್ ಮಾಡುವುದು ಎಷ್ಟು ಕಠಿಣವಾಗಿತ್ತು ಎಂಬುದು ಮನವರಿಕೆಯಾಗುತ್ತದೆ’ ಎಂದು ಪೂಜಾರ ನುಡಿದರು.

‘ಎಲ್ಲ ಸಂದರ್ಭದಲ್ಲೂ ರನ್‌ರೇಟ್‌ ಮುಖ್ಯವಾಗುವುದಿಲ್ಲ. ತಂಡದ ಆಡಳಿತಕ್ಕೆ ಅದು ತಿಳಿದೇ ಇದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೋಚ್ ರವಿಶಾಸ್ತ್ರಿ, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮತ್ತು ನಾಯಕ ಅಜಿಂಕ್ಯ ರಹಾನೆ ಅವರು ಕ್ರೀಸ್‌ನಲ್ಲಿ ಉಳಿಯುವಂತೆ ನನಗೆ ಹೇಳಿದ್ದರು. ವೇಗಿಗಳನ್ನು ಎದುರಿಸಿ ಬ್ಯಾಟಿಂಗ್ ಮಾಡುವ ಸವಾಲು ಇಲ್ಲಿ ಇತ್ತು. ಆದ್ದರಿಂದ ನಾನು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ ಎಂದು ಹೇಳುವಂತಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT