ಬೆಂಗಳೂರು: ಆರ್. ಸ್ಮರಣ್ ನಾಯಕತ್ವದ ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಗೆದ್ದುಕೊಂಡಿತು. ಇದೇ ಮೊದಲ ಬಾರಿ ರಾಜ್ಯದ 23 ವರ್ಷದೊಳಗಿನವರ ತಂಡವು ಈ ಸಾಧನೆ ಮಾಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯವು ಬುಧವಾರ ಡ್ರಾ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿದ್ದ ಕರ್ನಾಟಕ ತಂಡವು ಟ್ರೋಫಿಗೆ ಮುತ್ತಿಕ್ಕಿತು.
ಪಂದ್ಯದ ಕೊನೆಯ ದಿನದಾಟದಲ್ಲಿ ಕರ್ನಾಟಕವು ಅನೀಶ್ ಕೆ.ವಿ. (214; 273ಎ) ದ್ವಿಶತಕ ಮತ್ತು ಕೃತಿಕ್ ಕೃಷ್ಣ (86; 121ಎ) ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ 161.6 ಓವರ್‌ಗಳಲ್ಲಿ 585 ರನ್ ಗಳಿಸಿತು. ಇದರಿಂದಾಗಿ 804 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಈಚೆಗೆ ಕರ್ನಾಟಕ ರಣಜಿ ತಂಡದಲ್ಲಿಯೂ ಆಡಿ ಬಂದಿರುವ ಅನೀಶ್ 18 ಬೌಂಡರಿ ಮತ್ತು ಆರು ಸಿಕ್ಸರ್ ಸಿಡಿಸಿದರು.
ಮಧ್ಯಾಹ್ನ ಬ್ಯಾಟಿಂಗ್ ಆರಂಭಿಸಿದ ಉತ್ತರಪ್ರದೇಶ ತಂಡಕ್ಕೆ ಕರ್ನಾಟಕದ ಮಧ್ಯಮವೇಗಿ ಎಲ್. ಮನ್ವಂತ್ ಕುಮಾರ್ (36ಕ್ಕೆ5) ಸೋಲಿನ ಭೀತಿ ಮೂಡಿಸಿದ್ದರು. ಆದರೆ ಉತ್ತಪ್ರದೇಶ ತಂಡವು 31 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 174 ರನ್ ಗಳಿಸಿದ್ದಾಗ ಉಭಯ ನಾಯಕರೂ ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.
‘ಪಂದ್ಯದಲ್ಲಿ ಜಯಿಸಲು ಅವಕಾಶವಿತ್ತು. ಆದರೆ ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ ಮುನ್ನಡೆ ಗಳಿಸಿದ್ದೆವು. ಎರಡನೇ ಇನಿಂಗ್ಸ್‌ನಲ್ಲಿ ಬೇಗನೆ ಡಿಕ್ಲೇರ್ ಮಾಡಿ ಗೆಲುವಿಗೆ ಪ್ರಯತ್ನಿಸಲೂ ಬಹುದಿತ್ತು. ಆದರೆ ಅವಕಾಶ ಬಿಟ್ಟುಕೊಡುವುದಕ್ಕಿಂತ ನಾವೇ ಇನಿಂಗ್ಸ್ ಮೇಲೆ ಪಾರಮ್ಯ ಸಾಧಿಸುವುದು ಸೂಕ್ತವೆಂದು ನಿರ್ಧರಿಸಿ ಬೃಹತ್ ಮುನ್ನಡೆ ಗಳಿಸುವ ತಂತ್ರ ಅನುಸರಿಸಿದೆವು’ ಎಂದು ಪಂದ್ಯದ ನಂತರ ಕರ್ನಾಟಕದ ಮುಖ್ಯ ಕೋಚ್ ಯರೇಗೌಡ ಸುದ್ದಿಗಾರರಿಗೆ ಹೇಳಿದರು.
ಮಂಗಳವಾರ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು 663 ರನ್‌ಗಳ ಮುನ್ನಡೆ ಸಾಧಿಸಿತ್ತು. 171 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಅನೀಶ್ ಅವರು ಕೊನೆಯ ದಿನದಾಟದಲ್ಲಿ ದ್ವಿಶತಕದ ಗಡಿ ಮುಟ್ಟಿದ ನಂತರ ತಂಡವು ಡಿಕ್ಲೇರ್ ಮಾಡಿಕೊಂಡು, ಉತ್ತರಪ್ರದೇಶವನ್ನು ಆಲೌಟ್ ಮಾಡಿ ಗೆಲ್ಲುವ ನಿರೀಕ್ಷೆ ಮೂಡಿತ್ತು. ಅನೀಶ್ ಊಟದ ವಿರಾಮಕ್ಕೆ ಇನ್ನೂ ಬಹಳಷ್ಟು ಸಮಯವಿದ್ದಾಗಲೇ ದ್ವಿಶತಕ ಸಾಧನೆ ಮಾಡಿದರು. ಆದರೆ ಡಿಕ್ಲೇರ್ ಮಾಡದ ಕರ್ನಾಟಕ ಆಲೌಟ್ ಆಗುವವರೆಗೂ ಆಡಿತು. ಉತ್ತರಪ್ರದೇಶ ತಂಡದ ಕುನಾಲ್ ತ್ಯಾಗಿ ನಾಲ್ಕು ವಿಕೆಟ್ ಗಳಿಸಿದರು.
ಚಹಾ ವಿರಾಮದ ನಂತರ ಡ್ರಾ ಘೋಷಣೆಗೆ ಎರಡೂ ತಂಡಗಳು ಸಮ್ಮತಿಸಿದವು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ – 99.5 ಓವರ್‌ಗಳಲ್ಲಿ 358. ಉತ್ತರಪ್ರದೇಶ: 46.2 ಓವರ್‌ಗಳಲ್ಲಿ 139. ಎರಡನೇ ಇನಿಂಗ್ಸ್: ಕರ್ನಾಟಕ: 151.5 ಓವರ್‌ಗಳಲ್ಲಿ 585 (ಕೆ.ವಿ. ಅನೀಶ್ 214, ಕೃತಿಕ್ ಕೃಷ್ಣ 86, ವಿಪ್ರಾಜ್ ನಿಗಮ್ 193ಕ್ಕೆ2, ಕುನಾಲ್ ತ್ಯಾಗಿ 90ಕ್ಕೆ4) ಉತ್ತರಪ್ರದೇಶ: 31 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 174 (ಸ್ವಸ್ತಿಕ್ 67, ವಿಪ್ರಾಜ್ ನಿಗಮ್ 73, ಎಲ್. ಮನ್ವಂತ್ ಕುಮಾರ್ 36ಕ್ಕೆ5) ಫಲಿತಾಂಶ: ಪಂದ್ಯ ಡ್ರಾ. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ಚಾಂಪಿಯನ್.
ಮೂರು ತಿಂಗಳಲ್ಲಿ ಎರಡು ಟ್ರೋಫಿ
ಕರ್ನಾಟಕದ ಯುವ ತಂಡಗಳು ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಎರಡು ರಾಷ್ಟ್ರೀಯ ಟ್ರೋಫಿಗಳನ್ನು ಗೆದ್ದಿವೆ. 19 ವರ್ಷದೊಳಗಿನವರ ತಂಡವು ಈಚೆಗೆ ಕೂಚ್ ಬಿಹಾರ್ ಟ್ರೋಫಿ ಜಯಿಸಿತ್ತು. ಇದೀಗ 23 ವರ್ಷದೊಳಗಿನವರ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಜಯಿಸಿದೆ. ‘ರಾಜ್ಯದ ಯುವ ಆಟಗಾರರ ಈ ಸಾಧನೆಯು ಅಮೋಘವಾದದ್ದು. ವಯೋಮಿತಿ ಟೂರ್ನಿಗಳಲ್ಲಿ ಪ್ರತಿಭಾನ್ವಿತ ಆಟಗಾರರ ದಂಡು ಇದೆ. ಇದು ಕರ್ನಾಟಕದ ಭವಿಷ್ಯದ ಕ್ರಿಕೆಟ್‌ಗೆ ಶುಭಸೂಚಕವಾಗಿದೆ’ ಎಂದು ಕರ್ನಾಟಕ ಕೋಚ್ ಯರೇಗೌಡ ಸಂತಸ ವ್ಯಕ್ತಪಡಿಸಿದರು. ‘ಕಳೆದ ಮೂರು ತಿಂಗಳುಗಳಿಂದ ತಂಡದಲ್ಲಿ ಎಲ್ಲರೂ ಕೂಡಿ ಇದ್ದೆವು. ಪರಸ್ಪರ ಸ್ನೇಹ ವಿಶ್ವಾಸದಿಂದ ತಂಡವಾಗಿ ಆಡಿದ್ದು ಯಶಸ್ಸಿಗೆ ಕಾರಣ‘ ಎಂದು ನಾಯಕ ಆರ್. ಸ್ಮರಣ್ ಹೇಳಿದರು. ಕೂಚ್ ಬಿಹಾರ್ ಟ್ರೋಫಿ ಜಯಿಸಿದ್ದ ತಂಡದಲ್ಲಿದ್ದ ಪ್ರಖರ್ ಚತುರ್ವೇದಿ ಧೀರಜ್ ಗೌಡ ಅವರೂ ಈ ತಂಡದಲ್ಲಿದ್ದರು. ನೀರಾಟವಾಡಿ ಸಂಭ್ರಮ ಕರ್ನಾಟಕದ ಆಟಗಾರರು ಟ್ರೋಫಿ ಗೆದ್ದ ನಂತರ ಪರಸ್ಪರ ಮಿನರಲ್ ವಾಟರ್ ಸುರಿದುಕೊಂಡು ವಿಜಯೋತ್ಸವ ಆಚರಿಸಿದರು. ಕುಡಿಯಲು ಇಟ್ಟಿದ್ದ ಬಾಟಲಿಗಳಿಂದ ತಲೆಯ ಮೇಲೆ ನೀರು ಸುರಿದು ಸಂತಸ ವ್ಯಕ್ತಪಡಿಸಿದರು. ನಂತರ ಆಟಗಾರರು ತಮ್ಮ ಪಾಲಕರೊಂದಿಗೆ ಚಿತ್ರ ಕೂಡ ತೆಗೆಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.