ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಕಾಲಿನ್ಸ್‌–ಬಾರ್ಟಿ ಫೈನಲ್ ಹಣಾಹಣಿ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಮಹಿಳಾ ವಿಭಾಗದ ಸೆಮಿಫೈನಲ್‌ನಲ್ಲಿ ಸ್ವಾಟೆಕ್‌, ಕೀಸ್‌ಗೆ ನಿರಾಸೆ
Last Updated 27 ಜನವರಿ 2022, 14:32 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಫೈನಲ್ ಪ್ರವೇಶಿಸಿರುವ ಅಮೆರಿಕದ ಡ್ಯಾನಿಯಲ್ ಕಾಲಿನ್ಸ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಪ್ರಶಸ್ತಿಗಾಗಿ ಸ್ಥಳೀಯ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಎದುರು ಸೆಣಸುವರು.

ಗುರುವಾರ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಕಾಲಿನ್ಸ್ 6-4, 6-1ರಲ್ಲಿ ಪೋಲೆಂಡ್‌ನ ಇಗಾ ಸ್ವಾಟೆಕ್ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಆ್ಯಶ್ಲಿ ಬಾರ್ಟಿ ಅಮೆರಿಕದ ಮ್ಯಾಡಿಸನ್ ಕೀ ಎದುರು 6–1, 6–3ರ‌ಲ್ಲಿ ಜಯಭೇರಿ ಮೊಳಗಿಸಿದರು. ಫೈನಲ್‌ ಪಂದ್ಯ ಶನಿವಾರ ನಡೆಯಲಿದೆ.

ಫ್ರೆಂಚ್ ಓಪನ್ ಟೂರ್ನಿಯ ಮಾಜಿ ಚಾಂಪಿಯನ್ ಸ್ವಾಟೆಕ್ ಎದುರು ವಿಶ್ವ ಕ್ರಮಾಂಕದಲ್ಲಿ 30ನೇ ಸ್ಥಾನದಲ್ಲಿರುವ ಕಾಲಿನ್ಸ್ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದರು. ಆ್ಯಶ್ಲಿ ಬಾರ್ಟಿ ಕೂಡ ಏಕಪಕ್ಷೀಯವಾಗಿ ಪಂದ್ಯ ಗೆದ್ದುಕೊಂಡರು. ಹೀಗಾಗಿ ಇವರಿಬ್ಬರ ನಡುವಿನ ಫೈನಲ್‌, ಕುತೂಹಲ ಕೆರಳಿಸಿದೆ. ಬಾರ್ಟಿ ಪ್ರಶಸ್ತಿ ಗೆದ್ದುಕೊಂಡರೆ ನಾಲ್ಕು ದಶಕಗಳ ನಂತರ ಆಸ್ಟ್ರೇಲಿಯನ್ ಓಪನ್ ಗೆದ್ದ ಆಸ್ಟ್ರೇಲಿಯಾದ ಮೊದಲ ಆಟಗಾರ್ತಿ ಎನಿಸಿಕೊಳ್ಳಲಿದ್ದಾರೆ.1978ರಲ್ಲಿ ಕ್ರಿಸ್ಟಿನ್ ಒನೀಲ್ ಕೊನೆಯದಾಗಿ ಚಾಂಪಿಯನ್ ಆಗಿದ್ದರು.

ರಾಡ್ ಲೇವರ್ ಅರೆನಾದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ 28 ವರ್ಷದ ಕಾಲಿನ್ಸ್‌ ಬಲಶಾಲಿ ಹೊಡೆತ ಮತ್ತು ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ನಿರುತ್ತರರಾಗುವಂತೆ ಮಾಡಿದರು. ಮೊದಲ ಸೆಟ್‌ನ ಆರಂಭದಲ್ಲಿ 4–0ಯಿಂದ ಮುನ್ನಡೆದರು. ಏಳನೇ ಶ್ರೇಯಾಂಕದ ಸ್ವಾಟೆಕ್ ತಿರುಗೇಟು ನೀಡಲು ಪ್ರಯತ್ನಿಸಿದರು. ಇದರಲ್ಲಿ ಸ್ವಲ್ಪ ಯಶಸ್ಸನ್ನೂ ಕಂಡರು. ಆದರೆ ಕಾಲಿನ್ಸ್‌ ಅವರ ಛಲದ ಮುಂದೆ ಅವರು ಮಣಿಯಲೇಬೇಕಾಯಿತು.

ಎರಡನೇ ಸೆಟ್‌ ಮೊದಲ ಸೆಟ್‌ನ ಪುನರಾವರ್ತನೆಯಂತಿತ್ತು. ಈ ಸೆಟ್‌ನಲ್ಲೂ ಆರಂಭದಲ್ಲಿ ಕಾಲಿನ್ಸ್ 4–0ಯಿಂದ ಮುನ್ನುಗ್ಗಿದರು. ಸ್ವಾಟೆಕ್ ಅವರಿಗೆ ಚೇತರಿಸಿಕೊಳ್ಳಲು ಆಗಲಿಲ್ಲ. ಒಂದು ಗೇಮ್‌ ಮಾತ್ರ ಗೆದ್ದು ಅವರು ಸೆಟ್‌ ಹಾಗೂ ಪಂದ್ಯವನ್ನು ಕಳೆದುಕೊಂಡರು.

ವಿಶ್ವ ಕ್ರಮಾಂಕದ ಅಗ್ರಸ್ಥಾನದಲ್ಲಿರುವ ಬಾರ್ಟಿ ಎದುರು ಶ್ರೇಯಾಂಕರಹಿತ ಆಟಗಾರ್ತಿ ಮ್ಯಾಡಿಸನ್ ಕೀ ಸಂಪೂರ್ಣ ಕಳೆಗುಂದಿದರು. ಕ್ವಾರ್ಟರ್‌ ಫೈನಲ್‌ ವರೆಗಿನ ಪಂದ್ಯಗಳಲ್ಲಿ ಕೇವಲ 17 ಗೇಮ್‌ಗಳನ್ನು ಬಿಟ್ಟುಕೊಟ್ಟಿದ್ದ ಬಾರ್ಟಿ ಸೆಮಿಫೈನಲ್‌ನಲ್ಲೂ ಆಧಿಪತ್ಯ ಮುಂದುವರಿಸಿದರು.

ನಡಾಲ್‌–ಬೆರೆಟಿನಿ; ಮೆಡ್ವೆಡೆವ್‌–ಸಿಟ್ಸಿಪಾಸ್ ಮುಖಾಮುಖಿ

ಶುಕ್ರವಾರ ನಡೆಯಲಿರುವ ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಮತ್ತು ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಕಣಕ್ಕೆ ಇಳಿಯುವರು. ನಡಾಲ್‌ ಇಟಲಿಯ ಮಟಿಯೊ ಬೆರೆಟಿನಿ ಎದುರು ಸೆಣಸುವರು. ಮೆಡ್ವೆಡೆವ್‌ಗೆ ಗ್ರೀಸ್‌ನ ಸ್ಟೆಫನೋಸ್‌ ಸಿಟ್ಸಿಪಾಸ್ ಎದುರಾಳಿ.

ಅತಿಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಳ್ಳಲು ನಡಾಲ್ ಅವರಿಗೆ ಇನ್ನು ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಶುಕ್ರವಾರ ಗೆದ್ದು ಫೈನಲ್‌ಗೇರಿ ಭಾನುವಾರ ಪ್ರಶಸ್ತಿ ಗಳಿಸಿದರೆ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಚ್ ಅವರನ್ನು ಹಿಂದಿಕ್ಕಿ 21 ಬಾರಿ ಚಾಂಪಿಯನ್ ಆದ ದಾಖಲೆ ಬರೆಯಲಿದ್ದಾರೆ.

ಆರನೇ ಶ್ರೇಯಾಂಕದ ನಡಾಲ್ 25 ವರ್ಷದ ಏಳನೇ ಶ್ರೇಯಾಂಕಿತ ಆಟಗಾರ ಬೆರೆಟಿನಿ ಅವರ ಸವಾಲು ಮೀರುವರೇ ಎಂಬುದು ಸದ್ಯದ ಕುತೂಹಲ.

ಮೆಡ್ವೆಡೆವ್ ಹಿಂದಿನ ಎರಡು ಪಂದ್ಯಗಳಲ್ಲಿ ಪ್ರಯಾಸದ ಜಯ ಗಳಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಫೆಲಿಕ್ಸ್‌ ಆಗರ್ ಅಲಿಯಾಸಿಮ್ ಎದುರಿನ ಪಂದ್ಯ 4 ತಾಸು 42 ನಿಮಿಷ ನಡೆದಿತ್ತು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಮ್ಯಾಕ್ಸಿಮ್ ಕ್ರೆಸಿ ಎದುರಿನ ಪಂದ್ಯ ಗೆಲ್ಲಲು ಮೂರೂವರೆ ತಾಸು ತೆಗೆದುಕೊಂಡಿದ್ದರು. ಹೀಗಾಗಿ ಸಿಟ್ಸಿಪಾಸ್ ಎದುರು ಸೆಣಸಲು ಎಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ ಎಂಬ ಕುತೂಹಲ ಟೆನಿಸ್ ಪ್ರಿಯರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT