ಸೋಮವಾರ, ಆಗಸ್ಟ್ 2, 2021
26 °C
ಬಿಸಿಸಿಐ ನೀತಿ ಅಧಿಕಾರಿಗೆ ದೂರು ನೀಡಿದ ಸಂಜೀವ್‌‌ ಗುಪ್ತಾ

ಕೊಹ್ಲಿ ವಿರುದ್ಧ ಹಿತಾಸಕ್ತಿ ಸಂಘರ್ಷ ಆರೋಪ : ಬಿಸಿಸಿಐ ನೀತಿ ಅಧಿಕಾರಿಗೆ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಆಜೀವ ಸದಸ್ಯ ಸಂಜೀವ್‌‌ ಗುಪ್ತಾ ಆರೋಪಿಸಿದ್ದಾರೆ.

ಈ ಸಂಬಂಧ ಅವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೀತಿ ಅಧಿಕಾರಿ ಡಿ.ಕೆ.ಜೈನ್‌ ಅವರಿಗೆ ದೂರು ನೀಡಿದ್ದಾರೆ.

‘ಭಾರತ ತಂಡದ ನಾಯಕರಾಗಿರುವ ಕೊಹ್ಲಿ ಅವರು ಕಾರ್ನರ್‌ಸ್ಟೋನ್‌ ವೆಂಚರ್‌ ಪಾರ್ಟ್ನರ್ಸ್‌‌ ಎಲ್‌ಎಲ್‌ಪಿ ಹಾಗೂ ವಿರಾಟ್‌ ಕೊಹ್ಲಿ ಸ್ಪೋರ್ಟ್ಸ್‌ ಎಲ್‌ಎಲ್‌ಪಿ ಕಂಪನಿಗಳ ನಿರ್ದೇಶಕರೂ ಆಗಿದ್ದಾರೆ. ಒಂದೇ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಲಾಭದಾಯಕ ಹುದ್ದೆಗಳನ್ನು ಅಲಂಕರಿಸುವ ಮೂಲಕ ಬಿಸಿಸಿಐ ನಿಯಮವನ್ನು ಗಾಳಿಗೆ ತೂರಿದ್ದಾರೆ’ ಎಂದು ಗುಪ್ತಾ ಹೇಳಿದ್ದಾರೆ.

‘ಕೊಹ್ಲಿ ಅವರು ನಿರ್ದೇಶಕರಾಗಿರುವ ಎರಡೂ ಕಂಪನಿಗಳಲ್ಲಿ ಅಮಿತ್‌ ಅರುಣ್‌ ಸಜ್ದೆ ಹಾಗೂ ಬಿನೊಯ್‌ ಭರತ್‌ ಖಿಮ್ಜಿ ಅವರು ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕಾರ್ನರ್‌ಸ್ಟೋನ್‌ ಸ್ಪೋರ್ಟ್ಸ್‌ ಆ್ಯಂಡ್‌ ಎಂಟರ್‌ಟೇನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲೂ ಪ್ರಮುಖ ಹುದ್ದೆ ನಿಭಾಯಿಸುತ್ತಿದ್ದಾರೆ. ಈ ಕಂಪನಿಯು ಭಾರತದ ಕ್ರಿಕೆಟಿಗರಾದ ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ರವೀಂದ್ರ ಜಡೇಜ, ಉಮೇಶ್‌ ಯಾದವ್‌ ಮತ್ತು ಕುಲದೀಪ್‌ ಯಾದವ್‌ ಅವರ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಕೊಹ್ಲಿ ಅವರು ಬಿಸಿಸಿಐನ ನಿಯಮ 38 (4) ಅನ್ನು ಉಲ್ಲಂಘಿಸಿದ್ದಾರೆ. ಅವರು ಕೂಡಲೇ ನಿರ್ದೇಶಕ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು’ ಎಂದು ಗುಪ್ತಾ ಒತ್ತಾಯಿಸಿದ್ದಾರೆ.

‘ಕೊಹ್ಲಿ ಅವರ ವಿರುದ್ಧ ಗುಪ್ತಾ ನೀಡಿರುವ ದೂರು ನನ್ನ ಕೈಸೇರಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತೇನೆ. ಈ ಸಂಬಂಧ ಪ್ರತಿಕ್ರಿಯೆ ನೀಡಲು ಕೊಹ್ಲಿ ಅವರಿಗೂ ಅವಕಾಶ ಕೊಡುತ್ತೇನೆ’ ಎಂದು ಬಿಸಿಸಿಐ ಒಂಬುಡ್ಸ್‌ಮನ್‌ ಕೂಡ ಆಗಿರುವ ಜೈನ್‌ ಅವರು ಭಾನುವಾರ ಹೇಳಿದ್ದಾರೆ.

ಜೈನ್‌ ಅವರನ್ನು ಒಂಬುಡ್ಸ್‌ಮನ್‌ ಹಾಗೂ ನೀತಿ ಅಧಿಕಾರಿ ಹುದ್ದೆಗಳಲ್ಲಿ ಇನ್ನೊಂದು ವರ್ಷ ಮುಂದುವರಿಸುವ ತೀರ್ಮಾನವನ್ನು ಬಿಸಿಸಿಐ ಇತ್ತೀಚೆಗೆ ತೆಗೆದುಕೊಂಡಿತ್ತು.

ಗುಪ್ತಾ ಅವರು ಈ ಹಿಂದೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಹಿರಿಯ ಕ್ರಿಕೆಟಿಗರಾದ ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌ ಹಾಗೂ ಕಪಿಲ್‌ ದೇವ್‌ ಅವರ ವಿರುದ್ಧವೂ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪ ಮಾಡಿದ್ದರು. ಈ ಸಂಬಂಧ ಸಮಗ್ರ ವಿಚಾರಣೆ ನಡೆಸಿದ್ದ ಜೈನ್‌ ಅವರು ಎಲ್ಲರಿಗೂ ‘ಕ್ಲೀನ್‌ ಚಿಟ್‌’ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು