ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತೀಕ್‌ ದಾಳಿಗೆ ಹಳಿ ತಪ್ಪಿದ ರೈಲ್ವೇಸ್‌

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿ: ಅಭಿಮನ್ಯು ಮಿಥುನ್‌ಗೆ ಎರಡು ವಿಕೆಟ್‌
Last Updated 27 ಜನವರಿ 2020, 19:53 IST
ಅಕ್ಷರ ಗಾತ್ರ

ನವದೆಹಲಿ: ಬೌಲರ್‌ಗಳಿಗೆ ಅನುಕೂಲಕರವಾಗಿದ್ದ ಪಿಚ್‌ ಮತ್ತು ವಾತಾವರಣದಲ್ಲಿ ಎಡಗೈ ವೇಗಿ ಪ್ರತೀಕ್‌ ಜೈನ್‌ ಪರಿಣಾಮಕಾರಿಯಾದಂತೆ ಕಂಡರು. ಸೋಮವಾರ ಆರಂಭವಾದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಪ್ರವಾಸಿ ಕರ್ನಾಟಕದ ದಾಳಿಯನ್ನು ಸರಿಯಾಗಿ ಅಂದಾಜಿಸದ ರೈಲ್ವೆ ತಂಡ ದಿನದಾಟದಲ್ಲಿ ಬೆಲೆ ತೆರುವಂತಾಯಿತು.

ಕರ್ನೇಲ್‌ ಸಿಂಗ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಬ್ಯಾಟ್‌ ಮಾಡಬೇಕಾಗಿ ಬಂದ ರೈಲ್ವೇಸ್‌ ತಂಡ ದಿನದಾಟ ಮುಗಿದಾಗ 49 ಓವರುಗಳಲ್ಲಿ 6 ವಿಕೆಟ್‌ಗೆ 98 ರನ್‌ ಗಳಿಸಿದೆ. ಹನಿಯುತ್ತಿದ್ದ ಮಳೆಯ ಜೊತೆಗೆ ದಟ್ಟ ಮಂಜು ಕವಿದಿದ್ದ ಕಾರಣ ಲಂಚ್‌ ವಿರಾಮಕ್ಕೆ ಮೊದಲು ಆಟ ಸಾಧ್ಯವಾಗಲಿಲ್ಲ.

ಕರುಣ್‌ ನಾಯರ್‌ ವೇಗದ ಬೌಲರ್‌ಗಳಿಗೆ ಅವಕಾಶ ಕೊಟ್ಟರು. ಅವರು ನಿರಾಶೆಗೊಳಿಸಲಿಲ್ಲ. ಪ್ರತೀಕ್‌ ಜೈನ್‌ ನಾಲ್ಕು ವಿಕೆಟ್‌ (13–7–14–4) ಪಡೆದರೆ, ಅನುಭವಿ ಅಭಿಮನ್ಯು ಮಿಥುನ್‌ ಎರಡು ವಿಕೆಟ್‌ ಪಡೆದರು. ವಿಕೆಟ್‌ ಪಡೆಯದಿದ್ದರೂ ರೋನಿತ್‌ ಮೋರೆ ಕರಾರುವಾಕ್‌ ಆಗಿ ಬೌಲ್‌ ಮಾಡಿ ಎದುರಾಳಿ ಆಟಗಾರರನ್ನು ಕಟ್ಟಿಹಾಕಿದರು. ಒಟ್ಟಾರೆ ಮೂವರು ವೇಗಿಗಳು ಬಿಟ್ಟುಕೊಟ್ಟಿದ್ದು ಕೇವಲ ನಾಲ್ಕು ಬೌಂಡರಿಗಳನ್ನು ಮಾತ್ರ!

ಸ್ಪಿನ್ನರ್‌ಗಳಾದ ಶ್ರೇಯಸ್‌ ಗೋಪಾಲ್‌ ಮತ್ತು ಕೆ.ಗೌತಮ್‌ ಅವರು ದಾಳಿಗಿಳಿದ ಮೇಲೆ ಸ್ವಲ್ಪ ಹೆಚ್ಚು ರನ್‌ಗಳು ಬಂದವು. ನಾಲ್ಕು ಪಂದ್ಯಗಳ ನಂತರ ತಂಡಕ್ಕೆ ಮರಳಿದ್ದ ಗೌತಮ್‌ ದಾಳಿಯಲ್ಲಿ ಎಂದಿನ ಮೊನಚು ಇರಲಿಲ್ಲ.

ಆರಂಭ ಆಟಗಾರ ಆಶಿಶ್‌ ಸೆಹ್ರಾವತ್‌, ಮಿಥುನ್‌ ಬೌಲಿಂಗ್‌ನಲ್ಲಿ ‘ಕಟ್‌’ ಮಾಡುವ ಯತ್ನದಲ್ಲಿ ವಿಕೆಟ್‌ ಕೀಪರ್‌ ಬಿ.ಆರ್‌.ಶರತ್‌ಗೆ ಕ್ಯಾಚಿತ್ತರು. ನಂತರ ಪ್ರತೀಕ್‌ ಜೈನ್‌ ಒಂದರ ಮೇಲೆ ಒಂದರಂತೆ ಪೆಟ್ಟು ನೀಡಿದರು. ಮೃಣಾಲ್‌ ದೇವಧರ್‌ ಅವರನ್ನು ಎಲ್‌ಬಿಡಬ್ಲ್ಯು ಆಗಿ ಪಡೆದ ನಂತರ ಅವರು, ಸೌರಭ್‌ ಸಿಂಗ್‌, ಮಹೇಶ್‌ ರಾವತ್‌ ಮತ್ತು ವಿಕೆಟ್‌ ಕೀಪರ್‌ ದಿನೇಶ್‌ ಮೊರ್‌ ಅವರನ್ನು ಬಲಿ ಪಡೆದರು. ಇವರಲ್ಲಿ ಸೌರಭ್‌ ಮತ್ತು ರಾವತ್‌ ಒಂದೇ ಓವರ್‌ನಲ್ಲಿ ನಿರ್ಗಮಿಸಿದ್ದರು.

ಪ್ರತೀಕ್‌ ಕೊನೆಯ ಮೂರು ವಿಕೆಟ್‌ ಪಡೆದ ಸಂದರ್ಭದಲ್ಲಿ ಎಸೆತಗಳು ಒಳನುಗ್ಗಿ ಸ್ಟಂಪ್‌ಗೆ ಬಡಿ
ದಿದ್ದವು. ಒಂದು ಹಂತದಲ್ಲಿ ರೈಲ್ವೇಸ್‌ ತಂಡ 45 ರನ್‌ಗಳಾಗುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ನಾಯಕ ಅರಿಂದಮ್‌ ಘೋಷ್‌ (ಬ್ಯಾಟಿಂಗ್ 32, 88 ಎಸೆತ, 4 ಬೌಂಡರಿ) ಮತ್ತು ಅವಿನಾಶ್‌ ಯಾದವ್‌ (ಬ್ಯಾಟಿಂಗ್‌ 29, 92 ಎಸೆತ, 5 ಬೌಂಡರಿ) ನಿಧಾನವಾಗಿ
ಬೇರೂರಿದರು.

ಮುರಿಯದ ಏಳನೇ ವಿಕೆಟ್‌ಗೆ 53 ರನ್ ಸೇರಿಸಿದ್ದರಿಂದ ತಂಡ ಮುಖಭಂಗದಿಂದ ಪಾರಾಯಿತು.

ಸರ್ಫರಾಜ್‌ ಅಜೇಯ ದ್ವಿಶತಕ
ಧರ್ಮಶಾಲಾ (ಪಿಟಿಐ): ಅಮೋಘ ಫಾರ್ಮ್‌ನಲ್ಲಿರುವ ಸರ್ಫರಾಜ್‌ ಖಾನ್‌ ಅಜೇಯ ದ್ವಿಶತಕ (ಬ್ಯಾಟಿಂಗ್‌ 226) ಬಾರಿಸಿ ಮುಂಬೈ ತಂಡದ ನೆರವಿಗೆ ಬಂದರು. ಸೋಮವಾರ ಧರ್ಮಶಾಲಾದಲ್ಲಿ ಆರಂಭವಾದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡ ಆರಂಭದ ಕುಸಿತದಿಂದ ಅಮೋಘವಾಗಿ ಚೇತರಿಸಿಕೊಂಡು 5 ವಿಕೆಟ್‌ಗೆ 372 ರನ್‌ಗಳೊಡನೆ ದಿನದಾಟ ಪೂರೈಸಿತು.

22 ವರ್ಷದ ಸರ್ಫರಾಜ್‌, ಉತ್ತರ ಪ್ರದೇಶದ ವಿರುದ್ಧ ಇದಕ್ಕೆ ಮೊದಲಿನ ಪಂದ್ಯದಲ್ಲಿ ಅಜೇಯ ತ್ರಿಶತಕ (ಔಟಾಗದೇ 301) ಬಾರಿಸಿದ್ದರು. ಮತ್ತೊಮ್ಮೆ ಆಪತ್ಬಾಂಧವರಾದ ಅವರು ಹಿಮಾಚಲ ಪ್ರದೇಶದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿ 32 ಬೌಂಡರಿ, ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ಸತತ ಎರಡನೇ ತ್ರಿಶತಕದ ಕಡೆ ಕಣ್ಣಿಟ್ಟಿದ್ದಾರೆ.

ಒಂದು ಹಂತದಲ್ಲಿ 16 ರನ್ನಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಮುಂಬೈಗೆ ಸರ್ಫರಾಜ್‌ ಜೊತೆಗೆ ನಾಯಕ ಆದಿತ್ಯ ತಾರೆ (62) ಕೂಡ ಉಪಯುಕ್ತ ಕೊಡುಗೆ ನೀಡಿದರು. ಐದನೇ ವಿಕೆಟ್‌ಗೆ ಇವರಿಬ್ಬರು 143 ರನ್‌ ಸೇರಿಸಿದ್ದರು.

ಸ್ಕೋರುಗಳು

ಧರ್ಮಶಾಲಾ: ಮುಂಬೈ: 5 ವಿಕೆಟ್‌ಗೆ 372 (ಸರ್ಫರಾಜ್‌ ಖಾನ್‌ ಬ್ಯಾಟಿಂಗ್‌ 226, ಆದಿತ್ಯ ತಾರೆ 62, ಶುಭಂ ಪರಾಂಜಪೆ ಬ್ಯಾಟಿಂಗ್ 44; ವೈಭವ್‌ ಆರೋರಾ 28ಕ್ಕೆ2, ರಾಘವ ಧವನ್‌ 81ಕ್ಕೆ2) ವಿರುದ್ಧ ಹಿಮಾಚಲ ಪ್ರದೇಶ.

ವಡೋದರ: ಬರೋಡಾ: 43.2 ಓವರುಗಳಲ್ಲಿ 154 (ಕೇದಾರ ದೇವಧರ್‌ 52, ಯೂಸುಫ್‌ ಪಠಾಣ್‌ 34; ಜಯದೇವ್ ಉನದ್ಕತ್‌ 34ಕ್ಕೆ6, ಪ್ರೇರಕ್‌ ಮಂಕಡ್‌ 17ಕ್ಕೆ3); ಸೌರಾಷ್ಟ್ರ: 35 ಓವರುಗಳಲ್ಲಿ 6 ವಿಕೆಟ್‌ಗೆ 114 (ಹರ್ವಿಕ್‌ ದೇಸಾಯಿ 31, ಅವಿ ಬಾರೋಟ್‌ 26; ಎಲ್‌.ಮೆರಿವಾಲಾ 54ಕ್ಕೆ4, ಅತಿತ್‌ ಸೇಠ್‌ 21ಕ್ಕೆ2).

ಇಂದೋರ್‌: ಮಧ್ಯಪ್ರದೇಶ: 73 ಓವರುಗಳಲ್ಲಿ 230 (ಯಶ್‌ ದುಬೆ 70, ಅಜಯ್‌ ರೊಹೆರಾ 42; ಸೌರಬ್‌ ಕುಮಾರ್‌ 59ಕ್ಕೆ3, ಅಂಕಿತ್‌ ರಜಪೂತ್‌ 74ಕ್ಕೆ3); ಉತ್ತರ ಪ್ರದೇಶ: 8 ಓವರುಗಳಲ್ಲಿ 3 ವಿಕೆಟ್‌ಗೆ 22 (ರವಿ ಯಾದವ್‌ 2ಕ್ಕೆ3).

ಮಿಂಚಿದ ವಿನಯ್‌

ಚಂಡಿಗಡದಲ್ಲಿ ನಡೆಯುತ್ತಿರುವ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಪುದುಚೇರಿ ಪರ ಆಡುತ್ತಿರುವ ಕನ್ನಡಿಗ ಆರ್‌.ವಿನಯಕುಮಾರ್‌ 32 ರನ್ನಿಗೆ 6 ವಿಕೆಟ್‌ ಉರುಳಿಸಿ ಗಮನಸೆಳೆದರು. ಅವರ ದಾಳಿಗೆ ಚಂಡಿಗಢ ತಂಡ ಮೊದಲ ದಿನ 134 ರನ್ನಿಗೆ ಕುಸಿಯಿತು. ಆದರೆ ಆತಿಥೇಯರು ತಿರುಗೇಟು ನೀಡಿದ್ದು ಪುದುಚೇರಿ 37 ರನ್‌ ಮಾಡುವಷ್ಟರಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸ್ಕೋರುಗಳು: ಚಂಡಿಗಡ: 37.3 ಓವರುಗಳಲ್ಲಿ 134 (ಅರ್ಸ್ಲಾನ್‌ ಖಾನ್‌ 42, ಆರ್‌.ಬಿಷ್ಣೋಯಿ 41; ವಿನಯಕುಮಾರ್‌ 32ಕ್ಕೆ6, ಎಸ್‌.ಆರ್‌.ಉದೇಶಿ 41ಕ್ಕೆ3); ಪುದುಚೇರಿ 14.5 ಓವರುಗಳಲ್ಲಿ 4 ವಿಕೆಟ್‌ಗೆ 37 (ಎಸ್‌.ನಿರ್ಮೋಹಿ 17ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT