ಮಂಗಳವಾರ, ನವೆಂಬರ್ 12, 2019
26 °C
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಕರುಣ್–ಹನುಮ ಹಣಾಹಣಿ

ಗೆಲುವಿನತ್ತ ಕರ್ನಾಟಕ ತಂಡದ ಚಿತ್ತ

Published:
Updated:
Prajavani

ವಿಶಾಖಪಟ್ಟಣ: ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ಛಲದಲ್ಲಿರುವ ಕರ್ನಾಟಕದ ಕರುಣ್ ನಾಯರ್ ಮತ್ತು ಆಂಧ್ರದ ಹನುಮ ವಿಹಾರಿ ಸೋಮವಾರ ಇಲ್ಲಿ ನಡೆಯುವ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದಾರೆ.

ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕವು ಆಂಧ್ರವನ್ನು ಎದುರಿಸಲಿದೆ.

ಹೋದ ವರ್ಷದ ಟೂರ್ನಿಯಲ್ಲಿ 14 ಪಂದ್ಯಗಳನ್ನು ಗೆದ್ದಿದ್ದ ಕರ್ನಾಟಕ ಈ ಬಾರಿಯೂ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿತ್ತು.  ಅಲ್ಲದೇ ಟೂರ್ನಿಯ ಇತಿಹಾಸದಲ್ಲಿಯೇ ಸತತ 15 ಪಂದ್ಯಗಳನ್ನು ಗೆದ್ದ ದಾಖಲೆಯನ್ನೂ ಸ್ಥಾಪಿಸಿತ್ತು. ಆದರೆ, ಶನಿವಾರ ಬರೋಡಾ ಎದುರು ಸೋಲುವುದರೊಂದಿಗೆ ಆಜೇಯ ಓಟಕ್ಕೆ ತೆರೆಬಿದ್ದಿತ್ತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಕರ್ನಾಟಕ ತಂಡಕ್ಕೆ ಬೌಲರ್‌ಗಳು ಆರಂಭಿಕ ಯಶಸ್ಸು ತಂದುಕೊಡಲಿಲ್ಲ. ದೊಡ್ಡ ಗುರಿಯನ್ನು ಬೆನ್ನತ್ತಿದಾಗ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ರೋಹನ್ ಕದಂ ಸತತ ಎರಡೂ ಪಂದ್ಯಗಳಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ್ದ ಸಮರ್ಥ್ ವಿಫಲರಾಗಿದ್ದರು. ಅಧ್ದರಿಂದ ಎರಡನೇ ಪಂದ್ಯದಲ್ಲಿ ಅವರ ಬದಲಿಗೆ ಕಣಕ್ಕಿಳಿದ ಲವನೀತ್ ಸಿಸೋಡಿಯಾ ಭರವಸೆ ಮೂಡಿಸಿದ್ದಾರೆ. ಆದ್ದರಿಂದ ರೋಹನ್, ಸಿಸೋಡಿಯಾ ಇಲ್ಲಿಯೂ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ.

‍‍ಮೂರು ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡಿದ್ದ ನಾಯಕ ನಾಯರ್ ಲಯಕ್ಕೆ ಮರಳಿರುವುದು ಸಮಾಧಾನದ ವಿಷಯ. ಅವರೊಂದಿಗೆ ಪವನ್ ದೇಶಪಾಂಡೆ ಮತ್ತು ದೇವದತ್ತ ಪಡಿಕ್ಕಲ್ ತಮ್ಮ ಆಟಕ್ಕೆ ಮರಳಿದರೆ ಬ್ಯಾಟಿಂಗ್‌ ಬಲಾಢ್ಯವಾಗುತ್ತದೆ.

ಬೌಲಿಂಗ್‌ನಲ್ಲಿ ಕೃಷ್ಣಪ್ಪ ಗೌತಮ್ ಒಬ್ಬರೇ ಸ್ಥಿರವಾಗಿ ಉತ್ತಮ ಆಟವಾಡುತ್ತಿದ್ದಾರೆ. ಹೋದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಮಧ್ಯಮವೇಗಿ ಪ್ರತೀಕ್ ಜೈನ್ ಇನ್ನೊಂದು ಅವಕಾಶ ಪಡೆಯಬಹುದು. ವಿ.ಕೌಶಿಕ್, ಮಿಥುನ್ ಜೊತೆಗೆ ಕಣಕ್ಕಿಳಿಯಬಹುದು. ಶ್ರೇಯಸ್ ಗೋಪಾಲ್ ಬದಲಿಗೆ ಪ್ರವೀಣ್ ದುಬೆ ಸ್ಥಾನ ಪಡೆದರೆ ಅಚ್ಚರಿಯಿಲ್ಲ.

ಆಂಧ್ರ ತಂಡವು ಈ ಟೂರ್ನಿಯಲ್ಲಿ ಒಂದೇ ಪಂದ್ಯ ಆಡಿದೆ. ಬಿಹಾರ ವಿರುದ್ಧ 10 ವಿಕೆಟ್‌ಗಳಿಂದ ಗೆದ್ದಿದೆ.

ಬ್ಯಾಟಿಂಗ್‌ನಲ್ಲಿ ನಾಯಕ ಹನುಮ ವಿಹಾರಿ, ಅಶ್ವಿನ್ ಹೆಬ್ಬಾರ್, ಶ್ರೀಕರ್ ಭರತ್, ನರೇನ್ ರೆಡ್ಡಿ ಪ್ರಮುಖರು.

ಬೌಲಿಂಗ್‌ನಲ್ಲಿ ಕೆ.ವಿ. ಶಶಿಕಾಂತ್ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಬಲ್ಲ ಚತುರ ಆಟಗಾರ. ಗಿರಿನಾಥ್ ರೆಡ್ಡಿ ಕೂಡ ಅನುಭವಿ ಆಟಗಾರರಾಗಿದ್ದಾರೆ.

ಸೋಲಿನಿಂದ ಎಚ್ಚೆತ್ತು ಕಣಕ್ಕಿಳಿಯುತ್ತಿರುವ ಕರ್ನಾಟಕ ತಂಡಕ್ಕೆ ಇವರು ಸವಾಲೊಡ್ಡುವ ಸಮರ್ಥರಾಗಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 1.

ಪ್ರತಿಕ್ರಿಯಿಸಿ (+)