ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಜಯದ ಆರಂಭ

ರೋಹನ್ ಕದಂ, ದೇವದತ್ತ ಅರ್ಧಶತಕ
Last Updated 8 ನವೆಂಬರ್ 2019, 19:37 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಚಾಂಪಿಯನ್ನರಿಗೆ ತಕ್ಕ ಆಟವಾಡಿದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಶುಕ್ರವಾರ ಇಲ್ಲಿ ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಕರುಣ್ ನಾಯಕತ್ವದ ಕರ್ನಾಟಕ ತಂಡವು 9 ವಿಕೆಟ್‌ಗಳಿಂದ ಉತ್ತರಾಖಂಡ ವಿರುದ್ಧ ಜಯಿಸಿತು. ವೈ.ಎಸ್. ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತರಾಖಂಡ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 132 ರನ್ ಗಳಿಸಿತು.

ಅನುಭವಿ ಮಧ್ಯಮವೇಗಿ ಅಭಿಮನ್ಯು ಮಿಥುನ್ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಆರಂಭಿಕ ಕರ್ಣವೀರ್ ಕೌಶಲ್ ಮತ್ತು ನಾಲ್ಕನೇ ಓವರ್‌ನಲ್ಲಿ ಆರ್ಯ ಸೇಥಿ ಅವರ ವಿಕೆಟ್ ಗಳಿಸಿದರು. ಇದರಿಂದಾಗಿ ಉತ್ತರಾಖಂಡಕ್ಕೆ ಆರಂಭದಲ್ಲಿಯೇ ಬಲವಾದ ಪೆಟ್ಟು ಬಿತ್ತು.

ಈ ಹಂತದಲ್ಲಿ ನಾಯಕ ತನ್ಮಯ್ ಶ್ರೀವಾಸ್ತವ್ (39; 40ಎಸೆತ, 1ಬೌಂಡರಿ, 3 ಸಿಕ್ಸರ್) ಮತ್ತು ಸೌರಭ್ ರಾವತ್ (26; 22ಎ, 1ಸಿ) ಮೂರನೇ ವಿಕೆಟ್‌ಗೆ 66 ರನ್‌ ಸೇರಿಸಿದರು. ಇದರಿಂದಾಗಿ ಇನಿಂಗ್ಸ್‌ ತುಸು ಚೇತರಿಸಿಕೊಂಡಿತು.

ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ 13ನೇ ಓವರ್‌ನಲ್ಲಿ ತನ್ಮಯ್ ಶ್ರೀವಾಸ್ತವ ಅವರ ವಿಕೆಟ್ ಗಳಿಸಿ ಜೊತೆಯಾಟವನ್ನು ಮುರಿದರು. ಎಡಗೈ ಸ್ಪಿನ್ನರ್ ಸುಚಿತ್ ಅವರು ಅವನೀಶ್ ಸುಧಾ ವಿಕೆಟ್ ಪಡೆದರು. ಸೌರಭ್‌ ರಾವತ್ ಅವರನ್ನು ವಿಕೆಟ್‌ಕೀಪರ್ ಲವನೀತ್ ಸಿಸೊಡಿಯಾ ರನ್‌ಔಟ್ ಮಾಡಿದರು. ಇದರಿಂದಾಗಿ ಉತ್ತರಾಖಂಡ ಸಾಧಾರಣ ಮೊತ್ತದ ಗುರಿಯನ್ನು
ಕರ್ನಾಟಕಕ್ಕೆ ಒಡ್ಡಿತು.

ರೋಹನ್–ದೇವದತ್ತ ಜೊತೆಯಾಟ: ಕೆ.ಎಲ್. ರಾಹುಲ್ ಬದಲು ಇನಿಂಗ್ಸ್‌ ಆರಂಭಿಸಿದ ರೋಹನ್ ಕದಂ (ಔಟಾಗದೆ 67; 55ಎಸೆತ, 6ಬೌಂಡರಿ, 3ಸಿಕ್ಸರ್) ಅಬ್ಬರಿಸಿದರು. ಆದರೆ ಅವರೊಂದಿಗೆ ಕ್ರೀಸ್‌ಗೆ ಬಂದ ಅನುಭವಿ ಆರ್. ಸಮರ್ಥ್ (7 ರನ್) ಎಡವಿದರು. ಪ್ರದೀಪ್ ಚಮೋಳಿ ಅವರ ಎಸೆತದ ವೇಗವನ್ನು ಅಂದಾಜಿಸುವಲ್ಲಿ ಎಡವಿ ಬೌಲ್ಡ್‌ ಆದರು.

ರೋಹನ್ ಜೊತೆಗೂಡಿದ ದೇವದತ್ತ ಪಡಿಕ್ಕಲ್ (ಔಟಾಗದೆ 53; 33ಎ, 4ಬೌಂ, 3ಸಿ) ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 98 ರನ್ ಸೇರಿಸಿದರು.

ಹೋದ ವರ್ಷದ ಟೂರ್ನಿಯಲ್ಲಿ ಅಮೋಘವಾಗಿ ಆಡಿದ್ದ ರೋಹನ್ ಈ ಸಲವೂ ಉತ್ತಮ ಲಯದಲ್ಲಿದ್ದಾರೆ.

ಈಚೆಗೆ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಆರನೂರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದರು. ಇಲ್ಲಿ ಅವರು ಸಿಡಿಸಿದ ಮೂರು ಸಿಕ್ಸರ್‌ಗಳು ಚಿತ್ತಾಪಹಾರಿಯಾಗಿದ್ದವು. ಶನಿವಾರ ಎರಡನೇ ಕರ್ನಾಟಕವು ಆಡಲಿರುವ ಎರಡನೇ ಪಂದ್ಯದಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ.

ಉಳಿದ ಗುಂಪುಗಳ ಪಂದ್ಯಗಳ ಸಂಕ್ಷಿಪ್ತ ಸ್ಕೋರುಗಳು

ಬಿ ಗುಂ‍ಪು (ತಿರುವನಂತಪುರ)
ತ್ರಿಪುರ:
20 ಓವರ್‌ಗಳಲ್ಲಿ 8ಕ್ಕೆ102 (ಸಮರ್ಥ ಸಿಂಗ್ 16, ತನ್ಮಯ್ ಮಿಶ್ರಾ 13, ಹರ್ಮಿತ್ ಸಿಂಗ್ 15, ಸೌರಭ್ ದಾಸ್ ಔಟಾಗದೆ 30, ರಾಣಾ ದತ್ತ 18, ದರ್ಶನ್ ನಾಯ್ಕಂಡೆ 25ಕ್ಕೆ3)
ವಿದರ್ಭ: 12.3 ಓವರ್‌ಗಳಲ್ಲಿ 1 ವಿಕೆಟ್‌ಗೆ 103 (ಫೈಜ್ ಫಜಲ್ 54, ಅಕ್ಷಯ್ ಕೊಲ್ಹಾರ್ ಔಟಾಗದೆ 45)
ಫಲಿತಾಂಶ: ವಿದರ್ಭ ತಂಡಕ್ಕೆ 9 ವಿಕೆಟ್‌ಗಳ ಜಯ.

ತಮಿಳುನಾಡು: 20 ಓವರ್‌ಗಳಲ್ಲಿ 5ಕ್ಕೆ 174 (ಬಾಬಾ ಅಪರಾಜಿತ್ 35, ದಿನೇಶ್ ಕಾರ್ತಿಕ್ 33, ವಿಜಯಶಂಕರ್ 25, ಶಾರೂಕ್ ಖಾನ್ 28, ಎಂ.ಮೊಹಮ್ಮದ್ ಔಟಾಗದೆ 34, ಬಾಸಿಲ್ ಥಂಪಿ 49ಕ್ಕೆ3).
ಕೇರಳ: 20 ಓವರ್‌ಗಳಲ್ಲಿ 8ಕ್ಕೆ 137 (ವಿಷ್ಣು ವಿನೋದ್ 24, ರೋಹನ್ ಕುನ್ನುಮಳ್ 34, ಸಚಿನ್ ಬೇಬಿ 32, ಟಿ. ನಟರಾಜನ್ 25ಕ್ಕೆ3)
ಫಲಿತಾಂಶ: ತಮಿಳುನಾಡು ತಂಡಕ್ಕೆ 37 ರನ್ ಜಯ.

ಸಿ ಗುಂಪು(ಚಂಡೀಗಡ)
ಅರುಣಾಚಲಪ್ರದೇಶ:
6 ಓವರ್‌ಗಳಲ್ಲಿ 4ಕ್ಕೆ47 (ರಾಹುಲ್ ದಲಾಲ್ ಔಟಾಗದೆ 19)
ಛತ್ತೀಸಗಡ: 4.5 ಓವರ್‌ಗಳಲ್ಲಿ 1ಕ್ಕೆ 52 (ಶಶಾಂಕ್ ಚಂದ್ರಕರ್ ಔಟಾಗದೆ 32, ಹರಪ್ರೀತ್ ಸಿಂಗ್ ಔಟಾಗದೆ 13)
ಫಲಿತಾಂಶ: ಛತ್ತೀಸಗಡ ತಂಡಕ್ಕೆ 9 ವಿಕೆಟ್‌ಗಳ ಜಯ (ವಿಜೆಡಿ ನಿಯಮ).

ಮಹಾರಾಷ್ಟ್ರ: 15 ಓವರ್‌ಗಳಲ್ಲಿ 6ಕ್ಕೆ104 (ಕೇದಾರ್ ಜಾಧವ್ 27, ಅಜೀಂ ಖಾಜಿ 44, ನಿಖಿಲ್ ನಾಯ್ಕ ಔಟಾಗದೆ 20, ಕೃಷ್ಣಕಾಂತ್ ಉಪಾಧ್ಯಾಯ 12ಕ್ಕೆ3)
ರೈಲ್ವೆಸ್: 15 ಓವರ್‌ಗಳಲ್ಲಿ 8ಕ್ಕೆ96 (ಹರ್ಷ ತ್ಯಾಗಿ ಔಟಾಗದೆ 28, ಟಿ ಪ್ರದೀಪ್ 27, ಸಮದ್ ಫಲ್ಹಾ 20ಕ್ಕೆ2, ಮುಖೇಶ್ ಚೌಧರಿ 10ಕ್ಕೆ2, ರಾಹುಲ್ ತ್ರಿಪಾಠಿ 12ಕ್ಕೆ2, ಸತ್ಯಜೀತ್ ಬಚ್ಚಾವ್ 23ಕ್ಕೆ2)
ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 8 ರನ್ ಜಯ.

ಡಿ ಗುಂಪು
ಮಿಜೋರಾಂ
: 19.3 ಓವರ್‌ಗಳಲ್ಲಿ 77 (ತರುವರ್ ಕೊಹ್ಲಿ 26, ಕೆ.ಬಿ. ಪವನ್ 11, ಲಾಲ್‌ಮಂಗೈ 16, ತುಷಾರ್ ದೇಶಪಾಂಡೆ 8ಕ್ಕೆ2)
ಮುಂಬೈ: 8.1 ಓವರ್‌ಗಳಲ್ಲಿ 78 (ಜೈ ಗೋಕುಲ್ ಬಿಷ್ಠ್ ಔಟಾಗದೆ 54, ಆದಿತ್ಯ ತಾರೆ ಔಟಾಗದೆ 22) ಫಲಿತಾಂಶ: ಮುಂಬೈ ತಂಡಕ್ಕೆ 10 ವಿಕೆಟ್‌ಗಳಿಂದ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT