ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಟೂರ್ನಿ: ‘ಪ್ರಸಿದ್ಧ’ ಬಿರುಗಾಳಿಗೆ ಕುಸಿದ ಆಂಧ್ರ

ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ; ರಿಕಿ ಭುಯ್ ದ್ವಿಶತಕ
Last Updated 28 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಆಲೂರು ಕ್ರೀಡಾಂಗಣದಲ್ಲಿ ಭಾನುವಾರ ಬೀಸುತ್ತಿದ್ದ ತಂಗಾಳಿಯ ಲಯದೊಂದಿಗೆ ಚೆಂಡನ್ನು ತೇಲಿಬಿಟ್ಟ ಪ್ರಸಿದ್ಧ ಕೃಷ್ಣ ಆಂಧ್ರ ತಂಡಕ್ಕೆ ಸಿಂಹಸ್ವಪ್ನರಾದರು.

ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ಆಂಧ್ರ ತಂಡ ಬ್ಯಾಟಿಂಗ್ ಮಾಡಿತು. ರಿಕಿ ಭುಯ್ (ಔಟಾಗದೆ 204; 268ಎಸೆತ, 17 ಬೌಂಡರಿ, 14ಸಿಕ್ಸರ್) ಅವರ ದ್ವಿಶತಕದ ಹೊರತಾಗಿಯೂ ಆಂಧ್ರವು ಮೊದಲ ಇನಿಂಗ್ಸ್‌ನಲ್ಲಿ 293 ರನ್‌ ಗಳಿಸಿ ಕುಸಿ ಯಿತು. ಇದಕ್ಕೆ ಕಾರಣವಾಗಿದ್ದು ಪ್ರಸಿದ್ಧ ಕೃಷ್ಣ (16–4–68–5) ಅವರ ದಾಳಿ.

ಮೊದಲ ಇನಿಂಗ್ಸ್‌ ಆರಂಭಿಸಿರುವ ಕೆಎಸ್‌ಸಿಎ ಇಲೆವನ್ ತಂಡವು ದಿನದಾಟ ಅಂತ್ಯಕ್ಕೆ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 11 ರನ್ ಗಳಿಸಿದೆ.‌

ಇನಿಂಗ್ಸ್‌ನ ಮೊದಲ ಓವರ್‌ನ ಎರಡನೇ ಎಸೆತದಲ್ಲಿಯೇ ಕೃಷ್ಣ ಆಂಧ್ರ ತಂಡಕ್ಕೆ ಪೆಟ್ಟುಕೊಟ್ಟರು. ಸಿ.ಆರ್. ಗಣೇಶ್ವರ್ ಅವರ ವಿಕೆಟ್ ಗಳಿಸಿದರು. ಮೂರನೇ ಓವರ್‌ನಲ್ಲಿ ಡಿ.ಬಿ. ಪ್ರಶಾಂತ್‌ ಕುಮಾರ್ ಮತ್ತು ಐದನೇ ಓವರ್‌ನಲ್ಲಿ ಜ್ಯೋತಿ ಸಾಯಿಕೃಷ್ಣ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ಆಂಧ್ರ ತಂಡವು ಕೇವಲ ಏಳು ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಕಿ ಭುಯ್ ಮಾತ್ರ ಅಂಜದೇ ಅಳುಕದೇ ಬ್ಯಾಟ್ ಬೀಸಿದರು. ಇನ್ನೊಂದು ಬದಿಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದರೂ ದಿಟ್ಟವಾಗಿ ನಿಂತು ವೇಗವಾಗಿ ರನ್ ಗಳಿಸಿದರು. ಜಿ. ಮನೀಶ್ ( 21 ರನ್) ಮತ್ತು ಕಾರ್ತಿಕ್ ರಾಮನ್ (37 ರನ್) ಅವರಿಬ್ಬರನ್ನು ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ದಾಟಲಿಲ್ಲ. ಈ ಪರಿಸ್ಥಿತಿಯಲ್ಲಿಯೂ ಆಕರ್ಷಕ ಬ್ಯಾಟಿಂಗ್ ಮಾಡಿದ ರಿಕಿ ದ್ವಿಶತಕ ಹೊಡೆದರು. 16 ಸಿಕ್ಸರ್‌ಗಳನ್ನು ಸಿಡಿಸಿದ ಅವರು ಬೌಲರ್‌ಗಳಿಗೆ ಮಣಿಯಲಿಲ್ಲ.

ಇನ್ನೊಂದು ಕಡೆ ತಮ್ಮ ಮೊನಚು ದಾಳಿಯನ್ನು ಮುಂದುವರಿಸಿದ ಪ್ರಸಿದ್ಧಕೃಷ್ಣ ಆಂಧ್ರದ ಮಧ್ಯಮ ಕ್ರಮಾಂಕವನ್ನೂ ಕಾಡಿದರು. ಅವರಿಗೆ ಉತ್ತಮ ಜೊತೆ ನೀಡಿದ ಮಧ್ಯಮವೇಗಿ ಡೇವಿಡ್ ಮಥಾಯಿಸ್ (48ಕ್ಕೆ2), ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ (72ಕ್ಕೆ2) ಮತ್ತು ಎಡಗೈ ಸ್ಪಿನ್ನರ್ ಜೆ. ಸುಚಿತ್ (55ಕ್ಕೆ1) ಆಂಧ್ರ ತಂಡವು ಮುನ್ನೂರರ ಮೊತ್ತವನ್ನು ತಲುಪದಂತೆ ನೋಡಿಕೊಂಡರು.

ಉತ್ತಮ ಸ್ಥಿತಿಯಲ್ಲಿ ಬಾಂಗ್ಲಾ: ಜಹುರುಲ್ ಇಸ್ಲಾಂ (60 ರನ್) ಮತ್ತು ಸೈಫ್ ಹಸನ್ (92 ರನ್) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ ಗಳಿಸಿದ 156 ರನ್‌ಗಳ ಅಡಿಪಾಯದ ಮೇಲೆ ದೊಡ್ಡ ಮೊತ್ತ ಕಲೆಹಾಕುವತ್ತ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಂಡವು ಹೆಜ್ಜೆ ಇಟ್ಟಿದೆ.

ಸಂಕ್ಷಿಪ್ತ ಸ್ಕೋರು: ಆಲೂರು ಕ್ರೀಡಾಂಗಣ (2): ಆಂಧ್ರ ಕ್ರಿಕೆಟ್ ಸಂಸ್ಥೆ: 81 ಓವರ್‌ಗಳಲ್ಲಿ 293 (ರಿಕಿ ಭುಯ್ ಔಟಾಗದೆ 204, ಜಿ. ಮನೀಷ್ 21, ಕಾರ್ತಿಕ್ ರಾಮನ್ 37, ಪ್ರಸಿದ್ಧ ಎಂ ಕೃಷ್ಣ 68ಕ್ಕೆ 5, ಡೇವಿಡ್ ಮಥಾಯಿಸ್ 48ಕ್ಕೆ2, ಶ್ರೇಯಸ್ ಗೋಪಾಲ್ 72ಕ್ಕೆ2), ಕೆಎಸ್‌ಸಿಎ ಇಲೆವನ್: 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 11.

ಆಲೂರು ಕ್ರೀಡಾಂಗಣ (1): ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇಲೆವನ್: 85.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 254 (ಜಹುರುಲ್ ಇಸ್ಲಾಂ 60, ಸೈಫ್ ಹಸನ್ 92, ಮೊನಿಮಲ್ ಹಕ್ 49, ಯಾಸೀರ್ ಅಲಿ ಚೌಧರಿ ಬ್ಯಾಟಿಂಗ್ 50) –ಛತ್ತೀಸಗಡ ರಾಜ್ಯ ಕ್ರಿಕೆಟ್ ಸಂಘದ ವಿರುದ್ಧದ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT