ಮಂಗಳವಾರ, ಮೇ 24, 2022
28 °C

ಎರಡನೇ ಟೆಸ್ಟ್‌ ಟಿಕೆಟ್‌ಗಳಿಗೆ ನೂಕುನುಗ್ಗಲು; ಅಂತರ ಮಾಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ (ಪಿಟಿಐ): ಚೆಪಾಕ್ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭವಾಗಲಿರುವ ಭಾರತ –ಇಂಗ್ಲೆಂಡ್ ಟೆಸ್ಟ್  ಪಂದ್ಯದ ಟಿಕೆಟ್‌ಗಳಿಗಾಗಿ ಗುರುವಾರ ಕ್ರಿಕೆಟ್‌ಪ್ರೇಮಿಗಳು ಮುಗಿಬಿದ್ದರು.

ಕೊರೊನಾ ಕಾಲಘಟ್ಟದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಎರಡನೇ ಪಂದ್ಯಕ್ಕೆ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಪ್ರವೇಶಾವಕಾಶ ನೀಡಲಾಗುತ್ತಿದೆ. ಅದಕ್ಕಾಗಿ ಆನ್‌ಲೈನ್ ಮೂಲಕ ಟಿಕೆಟ್‌ಗಳನ್ನು ಮುಂಗಡವಾಗಿ ಕಾದಿರಿಸುವ ಅವಕಾಶ ಇತ್ತು.

ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್‌ಗಳ ಮುದ್ರಿತ ಪ್ರತಿಯನ್ನು ಪಡೆಯಲು ಗುರುವಾರ ಎಂ.ಎ. ಚಿದಂಬರಂ ಕ್ರೀಡಾಂಗಣಕ್ಕೆ ಜನರ ದಂಡು ಧಾವಿಸಿತ್ತು. ಈ ಸಂದರ್ಭದಲ್ಲಿ ಪರಸ್ಪರ ಅಂತರ ಮಾಯವಾಗಿತ್ತು!

ಕ್ರೀಡಾಂಗಣದ ಹೊರಗೆ ಜನರು ಮೈಲುದ್ದ ಸಾಲುಗಟ್ಟಿದ್ದರು. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಹಲವು ಮಂದಿ  ಕೌಂಟರ್‌ಗಳಲ್ಲಿ ಟಿಕೆಟ್‌ ಮಾರಾಟ ನಡೆಯುತ್ತಿದೆ ಎಂದುಕೊಂಡು ಸರದಿ ಸಾಲಿನಲ್ಲಿ ಸೇರಿಕೊಂಡರು. ಇದರಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

’ಆನ್‌ಲೈನ್‌ನಲ್ಲಿಯೇ ಎಲ್ಲ ಟಿಕೆಟ್‌ಗಳನ್ನೂ ಮಾರಾಟ ಮಾಡಲಾಗುತ್ತಿದೆ. ಆದರೆ, ಜನರು ತಪ್ಪು ತಿಳಿವಳಿಕೆಯಿಂದ ಇಲ್ಲಿಗೆ ಬಂದಿದ್ದಾರೆ. ಅವರ ಗೊಂದಲವನ್ನು ನಿವಾರಿಸಿದ್ದೇವೆ‘ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

’ಶುಕ್ರವಾರದಂದು ಟಿಕೆಟ್‌ಗಳ ಮುದ್ರಿತ ಪ್ರತಿಗಳನ್ನು ಖರೀದಿದಾರರಿಗೆ ವಿತರಿಸಲಾಗುವುದು. ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ‘ ಎಂದೂ ಅವರು ತಿಳಿಸಿದರು.

ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟ ಆರಂಭವಾದ ಕೆಲವೇ ಗಂಟೆಗಳಲ್ಲಿ ಎಲ್ಲ ಟಿಕೆಟ್‌ಗಳೂ ಖಾಲಿಯಾಗಿವೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು