ಶನಿವಾರ, ಸೆಪ್ಟೆಂಬರ್ 26, 2020
27 °C

ಮುಂದಿನ ಎರಡು ಐಪಿಎಲ್‌ಗೂ ಧೋನಿ ಬೇಕು: ಕಾಶಿ ವಿಶ್ವನಾಥನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಒಂದು ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ ಆಡಲು ಅವಕಾಶ ಸಿಗದೇ ಇದ್ದರೂ ಮಹೇಂದ್ರ ಸಿಂಗ್ ಧೋನಿಯನ್ನು ನಾವು ಕೈಬಿಡುವುದಿಲ್ಲ. 2021 ಮತ್ತು 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗಳಲ್ಲೂ ಅವರು ತಂಡದಲ್ಲಿ ಇರಬೇಕು ಎಂಬುದು ನಮ್ಮ ಆಸೆ’ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಕಾಶಿ ವಿಶ್ವನಾಥನ್ ಹೇಳಿದ್ದಾರೆ.

ಕಳೆದ ವರ್ಷದ ವಿಶ್ವಕಪ್ ಸೆಮಿಫೈನಲ್ ಪಂದ್ಯದ ನಂತರ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸ್ಪರ್ಧಾ ಕಣಕ್ಕೆ ಇಳಿಯಲು ಆಗಲಿಲ್ಲ. ಮುಂದಿನ ತಿಂಗಳ 19ರಿಂದ ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿ ಅವರ ಪಾಲಿಗೆ ಮಹತ್ವದ್ದಾಗಿದ್ದು ಪುನರಾಗಮನಕ್ಕೆ ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಕಾಶಿ ವಿಶ್ವನಾಥನ್ ‘ಈ ವರ್ಷ ಧೋನಿ ನಮ್ಮೊಂದಿಗೆ ಇದ್ದಾರೆ. ಮುಂದಿನ ಎರಡು ಆವೃತ್ತಿಗಳಲ್ಲೂ ಇರುವರು ಎಂಬ ವಿಶ್ವಾಸವಿದೆ’ ಎಂದರು.

‘ಜಾರ್ಖಂಡ್‌ನ ಒಳಾಂಗಣ ನೆಟ್ಸ್‌ನಲ್ಲಿ ಧೋನಿ ಅಭ್ಯಾಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಂದ ತಿಳಿಯಿತು. ಅಭ್ಯಾಸ ಮಾಡಲಿ, ಮಾಡದೇ ಇರಲಿ ಅವರ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ. ತಮ್ಮ ಜವಾಬ್ದಾರಿ ಏನೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಅವರ ಮತ್ತು ತಂಡದ ಕ್ಷೇಮವನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ವಿಶ್ವನಾಥನ್ ಹೇಳಿದರು.

ವಿಶ್ವಕಪ್ ನಂತರ ಧೋನಿ ಅವರ ಕೇಂದ್ರೀಯ ಗುತ್ತಿಗೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನವೀಕರಿಸಿರಲಿಲ್ಲ. ಹೀಗಾಗಿ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಧೋನಿ ತಮ್ಮಷ್ಟಕ್ಕೆ ಇದ್ದರು. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್‌ನ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎನ್‌.ಶ್ರೀನಿವಾಸನ್ ಅವರು ಮುಂದಿನ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಧೋನಿ ಅವರನ್ನು ತಂಡದಲ್ಲೇ ಉಳಿಸಲಾಗುವುದು ಎಂದಿದ್ದರು.

ಕೊರೊನಾ ಹಾವಳಿಯಿಂದಾಗಿ ಐಪಿಎಲ್ ಟೂರ್ನಿಯನ್ನು ಮುಂದೂಡುವುದಕ್ಕೂ ಸ್ವಲ್ಪ ದಿನಗಳ ಹಿಂದೆ ಸಿಎಸ್‌ಕೆ ಆಟಗಾರರು ಚೆನ್ನೈನಲ್ಲಿ ಅಭ್ಯಾಸ ಮಾಡಿದ್ದರು. ‘ನಾನು ಇನ್ನೂ ಆಟ ಮುಗಿಸಿಲ್ಲ’ ಎಂದು ಆ ಸಂದರ್ಭದಲ್ಲಿ ಧೋನಿ ಹೇಳಿದ್ದರು. ಇತ್ತೀಚೆಗೆ ಅವರು ರಾಂಚಿಯ, ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದರು. ಆಗಸ್ಟ್ 16ರಿಂದ 20ರ ವರೆಗೆ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಲು ಸಿಎಸ್‌ಕೆ ಯೋಜನೆ ಹಾಕಿಕೊಂಡಿದೆ. ಆಗಸ್ಟ್ 21ರಂದು ಯುಎಇಗೆ ಪಯಣ ಬೆಳೆಸಲು ತಂಡ ಚಿಂತನೆ ನಡೆಸಿದ್ದು ಆಗಸ್ಟ್ 14ರಂದು ಎಲ್ಲ ಆಟಗಾರರು ಚೆನ್ನೈನಲ್ಲಿ ಸೇರಬೇಕು ಎಂದು ಕಾಶಿ ವಿಶ್ವನಾಥನ್ ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು