ಶನಿವಾರ, ಜನವರಿ 25, 2020
22 °C

ಪಾಕ್ ತಂಡವನ್ನು ಆಹ್ವಾನಿಸುವುದು ಬೇಡ ಎಂದಾಗ ಕೆಲವರು ಆಕ್ಷೇಪಿಸಿದ್ದರು: ಚಾಪೆಲ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು 2–0 ಅಂತರದಲ್ಲಿ ಸೋತ ಪಾಕಿಸ್ತಾನ ವಿರುದ್ಧ ಆಸಿಸ್‌ ತಂಡದ ಮಾಜಿ ನಾಯಕ ಇಯಾನ್‌ ಚಾಪೆಲ್‌ ತೀಕ್ಷ್ಣವಾಗಿ ಟೀಕೆ ಮಾಡಿದ್ದಾರೆ.

ವೈಡ್‌ ವರ್ಲ್ಡ್‌ ಸ್ಪೋರ್ಟ್‌ ವೆಬ್‌ಸೈಟ್‌ನೊಂದಿಗೆ ಮಾತನಾಡಿರುವ ಚಾಪೆಲ್‌, ‘ಈ ಫಲಿತಾಂಶ ನಿಜವಾಗಿಯೂ ಭಯಂಕರ ದಾಖಲೆ’ ಎಂದಿದ್ದಾರೆ. ಮುಂದುವರಿದು, ‘ಕಳೆದ ಬಾರಿ ಸರಣಿಯಲ್ಲೂ ಸೋಲು ಕಂಡಿದ್ದ ಪಾಕಿಸ್ತಾನ ತಂಡವನ್ನು, ಇನ್ನು ಮುಂದೆ ಆಸ್ಟ್ರೇಲಿಯಾಕ್ಕೆ ಆಹ್ವಾನಿಸುವುದನ್ನು ನಿಲ್ಲಿಸಿ ಎಂದಿದ್ದೆ. ಅದಕ್ಕೆ ಆಕ್ಷೇಪಿಸಿದ್ದ ಕೆಲವರು ನನ್ನ ವಿರುದ್ಧ ಮುಗಿಬಿದ್ದಿದ್ದರು. ಈಗಿನ ಫಲಿತಾಂಶವು ಅವರೆಲ್ಲ ತಾವಾಗಿಯೇ ಮೇಲೇಳಲು ನೆರವಾಗಬಲ್ಲುದು’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಸತತ 14ನೇ ಟೆಸ್ಟ್‌ ಸೋಲು ಕಂಡ ಪಾಕಿಸ್ತಾನ

‘ಪ್ರತಿಭೆಯ ಆಧಾರದಲ್ಲಿ ನೋಡುವುದಾದರೆ ಅವರು ಸತತ 14 ಸೋಲು ಕಾಣುವಂತಿಲ್ಲ. ಆದರೂ, ಈ ಬಾರಿ ಅವರು ಹೀನಾಯವಾಗಿ ಸೋತಿದ್ದಾರೆ. ಬಹುಶಃ ಇದು ಅವರ ಅತ್ಯಂತ ಕೆಟ್ಟ ಪ್ರದರ್ಶನ’ ಎಂದು ಕಿಡಿಕಾರಿದ್ದಾರೆ.

ಟೆಸ್ಟ್‌ ಸರಣಿಯ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಇನಿಂಗ್ಸ್‌ ಸೋಲು ಕಂಡಿತ್ತು. ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಇನಿಂಗ್ಸ್‌ ಹಾಗೂ 5 ರನ್‌ ನಿಂದ ಸೋತರೆ, ಅಡಿಲೇಡ್‌ನಲ್ಲಿ ನಡೆದ ಇನ್ನೊಂದು ಪಂದ್ಯವನ್ನೂ ಇನಿಂಗ್ಸ್‌ ಹಾಗೂ 48 ರನ್‌ ನಿಂದ ಕಳೆದುಕೊಂಡಿತ್ತು. ಆ ಮೂಲಕ ಆ ತಂಡವು 1999ರಿಂದ ಈಚೆಗೆ ಆಸ್ಟ್ರೇಲಿಯಾದಲ್ಲಿ ಆಡಿದ ಸತತ 14 ಪಂದ್ಯಗಳಲ್ಲಿಯೂ ಸೋಲು ಕಂಡಿಂತಾಗಿತ್ತು. ಈ ಹಿಂದೆ ಭಾರತ (1948–77) ಹಾಗೂ ವೆಸ್ಟ್‌ ಇಂಡೀಸ್‌ (2000–2009) ತಂಡಗಳು ಆಸ್ಟ್ರೇಲಿಯಾದಲ್ಲಿ ತಲಾ 9 ಸತತ ಸೋಲುಗಳನ್ನು ಕಂಡಿದ್ದವು.

ಇದನ್ನೂ ಓದಿ: ಗೆಲುವಿನತ್ತ ಆಸ್ಟ್ರೇಲಿಯಾ ದಾಪುಗಾಲು

ಈ ಕಳಪೆ ಪ್ರದರ್ಶನದ ಕುರಿತು ಇಯಾನ್‌ ಚಾಪೆಲ್‌ ಮಾತ್ರವಲ್ಲ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೂ ಕಿಡಿಕಾರಿದ್ದಾರೆ. ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ವಿಕೆಟ್‌ ತೆಗೆಯುವುದು ಹೇಗೆ ಎಂಬುದರ ಬಗ್ಗೆ ಪಾಕ್‌ ವೇಗಿಗಳಿಗೆ ಜ್ಞಾನವೇ ಇದ್ದಂತಿಲ್ಲ ಎಂದು ಶೊಯಬ್‌ ಅಕ್ತರ್ ದೂರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು