ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾವೊ ‘ಸೂಪರ್’ ಶೋ

ಶಿಖರ್‌ ಧವನ್‌ ಅರ್ಧಶತಕ ವ್ಯರ್ಥ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಾಡಿದ ನಿರಾಸೆ: ಧೋನಿ ಪಡೆಗೆ ಜಯ
Last Updated 26 ಮಾರ್ಚ್ 2019, 19:56 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಡ್ಯಾನ್ಸ್‌ ಮತ್ತು ಹಾಡುಗಳಿಂದ ಪ್ರೇಕ್ಷಕರ ಮನ ಗೆಲ್ಲುವ ಡ್ವೆನ್ ಬ್ರಾವೊ ಮಂಗಳವಾರ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಹೊನಲು ಬೆಳಕು ಚೆಲ್ಲಿದ ಅಂಗಳ ದಲ್ಲಿ ತಣ್ಣನೇ ಗಾಳಿಯೊಂದಿಗೆ ತೇಲಿ ಬರುತ್ತಿದ್ದ ಬ್ರಾವೊ ಎಸೆತಗಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರಮುಖ
ಬ್ಯಾಟ್ಸ್‌ಮನ್‌ಗಳು ಶರಣಾದರು.

ವಿಂಡೀಸ್‌ ಆಲ್‌ರೌಂಡರ್ ಬ್ರಾವೊ (4–0–33–3) ದಾಳಿಯ ಮುಂದೆ ಆತಿಥೇಯ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 147 ರನ್‌ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ಸೂಪರ್ ಕಿಂಗ್ಸ್‌ 6 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿತು.

ಚೆನ್ನೈ ಗೆಲುವಿಗೆ ಇನಿಂಗ್ಸ್‌ನ ಕೊನೆಯ ಮೂರು ಎಸೆತಗಳಲ್ಲಿ ಎರಡು ರನ್‌ಗಳ ಅವಶ್ಯಕತೆ ಇದ್ದಾಗ ಬ್ರಾವೊ ಬೌಂಡರಿ ಗಳಿಸಿ ‘ಫಿನಿಷರ್’ ಕೂಡ ಆದರು.

ಇನ್ನೊಂದು ಬದಿಯಲ್ಲಿ ನಾಯಕ ಮಹೇಂದ್ರಸಿಂಗ್ ಧೋನಿ (ಅಜೇಯ 32; 35ಎಸೆತ, 2ಬೌಂಡರಿ, 1ಸಿಕ್ಸರ್) ಮಹತ್ವದ ಕಾಣಿಕೆ ನೀಡಿದರು.

ಆನುಭವಿ ಬ್ಯಾಟ್ಸ್‌ಮನ್‌ಗಳಾದ ಶೇನ್ ವಾಟ್ಸನ್ (44; 26ಎಸೆತ, 4ಬೌಂಡರಿ, 3ಸಿಕ್ಸರ್) ಅವರು ಉತ್ತಮ ಆರಂಭ ನೀಡಿದರು. ಆದರೆ, ಅಂಬಟಿ ರಾಯುಡು ಮತ್ತೊಮ್ಮೆ ವಿಫಲರಾದರು. ಸುರೇಶ್ ರೈನಾ (30ರನ್) ಮತ್ತು ಕೇದಾರ್ ಜಾಧವ್ (27 ರನ್) ತಮ್ಮ ಕಾಣಿಕೆ ಸಲ್ಲಿಸಿದರು.

ಡ್ವೆನ್ ಮಿಂಚು: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮತ್ತು ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಬ್ಬರದ ಆರಂಭ ನೀಡಿದರು. ಆದರೆ, ಐದನೇ ಓವರ್‌ನಲ್ಲಿ ದೀಪಕ್ ಚಾಹರ್ ಎಸೆತವನ್ನು ಬೌಂಡರಿಗೆ ಎತ್ತುವ ಪ್ರಯತ್ನದಲ್ಲಿ ಪೃಥ್ವಿ ಎಡವಿದರು. ಶೇನ್ ವಾಟ್ಸನ್‌ ಪಡೆದ ಕ್ಯಾಚ್‌ಗೆ ಪೃಥ್ವಿ ಡಗ್‌ಔಟ್ ಹಾದಿ ಹಿಡಿದರು. ಆದರೆ, ಶಿಖರ್ ಗಟ್ಟಿಯಾಗಿ ನಿಂತರು. ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನವನ್ನು ಮುಂದುವರಿಸಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ ಒಂದಿಷ್ಟು ರನ್‌ ಗಳಿಸುವ ಪ್ರಯತ್ನ ಮಾಡಿದರು. ಆದರೆ, ಸ್ಪಿನ್ನರ್ ಇಮ್ರಾನ್ ತಾಹೀರ್ ಅವರ ಎಸೆತದ ತಿರುವನ್ನು ಗುರುತಿಸುವಲ್ಲಿ ವಿಫಲರಾದರು. ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಕ್ರೀಸ್‌ಗೆ ಬಂದ ರಿಷಭ್ ಪಂತ್ ಅವರು ಶಿಖರ್ ಜೊತೆಗೂಡಿ ಮೂರನೇ ವಿಕೆಟ್‌ಗೆ 41 ರನ್‌ ಸೇರಿಸಿದರು. ಈ ನಡುವೆ ಶಿಖರ್ ಅರ್ಧಶತಕ ಪೂರೈಸಿದರು.

16ನೇ ಓವರ್‌ನಲ್ಲಿ ಬ್ರಾವೊ ಆಟ ಕಳೆಗಟ್ಟಿತು. ರಿಷಭ್ ಅವರ ವಿಕೆಟ್ ಕಬಳಿಸುವ ಮೂಲಕ ಬೇಟೆ ಆರಂಭಿಸಿದರು. ಅದೇ ಓವರ್‌ನಲ್ಲಿ ಕಾಲಿನ್ ಇನ್‌ಗ್ರಾಂ ಮತ್ತು ತಮ್ಮ ಇನ್ನೊಂದು ಓವರ್‌ನಲ್ಲಿ (18) ಶಿಖರ್ ವಿಕೆಟ್ ಕಬಳಿಸಿ ಸಂಭ್ರಮಿಸಿದರು. ಇದರಿಂದಾಗಿ ಡೆಲ್ಲಿ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT